ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಚ್ಚಹಳ್ಳಿ: ಒತ್ತುವರಿ ನಿವೇಶನ ತೆರವು

ಗ್ರಾಮದ ಒಳಿತಿನ ಕೆಲಸಕ್ಕೆ ಒಗ್ಗಟ್ಟಾದ ಗ್ರಾಮಸ್ಥರು, ಹಾಲಿನ ಡೇರಿಗೆ ತಾತ್ಕಾಲಿಕ ಶೆಡ್‌ ನಿರ್ಮಾಣ
Last Updated 18 ಫೆಬ್ರುವರಿ 2017, 7:46 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚ್ಚಹಳ್ಳಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ಒತ್ತುವರಿಗೆ ಒಳಗಾಗಿದ್ದ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಶುಕ್ರವಾರ ಪಂಚಾಯಿತಿ ಅಧಿಕಾರಿಗಳ ಸಮಕ್ಷಮದಲ್ಲಿ ಗ್ರಾಮಸ್ಥರು ಒತ್ತುವರಿ ತೆರವುಗೊಳಿಸಿ, ವಶಕ್ಕೆ ಪಡೆದು ಬೇಲಿ ಹಾಕಿದರು. 
 
ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡುವಂತೆ ಒತ್ತುವರಿದಾರರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಶಂಕರ್‌ ಮತ್ತು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಭಾರತಿ ಅವರು ಶುಕ್ರವಾರ ಬೆಳಿಗ್ಗೆ ಮನವೋಲಿಸಲು ಪ್ರಯತ್ನಿಸಿದರು. 
 
ಈ ವೇಳೆ ಒತ್ತುವರಿದಾರರು ಅದು ನಮಗೆ ಸೇರಿದ ಜಾಗ. ಅದರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ಹೀಗಾಗಿ ತೆರವು ಮಾಡಕೂಡದು ಎಂದು ಪಟ್ಟುಹಿಡಿದರು. ಮನವೊಲಿಸಲು ಮಾಡಿದ ಪ್ರಯತ್ನ ಕೈಗೂಡದಿದ್ದಾಗ ಅಧಿಕಾರಿಗಳು ಪೊಲೀಸರ ರಕ್ಷಣೆಯಲ್ಲಿ, ಸ್ಥಳೀಯರ ಸಹಕಾರದಿಂದ ಒತ್ತುವರಿ ತೆರವುಗೊಳಿಸಿದರು. 
 
ತೆರವುಗೊಳಿಸಿದ ಜಾಗವನ್ನು ಬಚ್ಚಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಲು ತೀರ್ಮಾನಿಸಲಾಯಿತು. ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಆ ನಿವೇಶನಕ್ಕೆ ಕಲ್ಲಿನ ಕಂಬ ನೆಟ್ಟು ಬೇಲಿ ಹಾಕಿ, ಹಾಲು ಉತ್ಪಾದಕರ ಸಹಕಾರ ಸಂಘದ ನಾಮಫಲಕ ನೇತು ಹಾಕಿದರು. ಇದೇ ಸಂದರ್ಭದಲ್ಲಿ ಕೆಲ ಮಹಿಳೆಯರು ಹಾಲಿನ ಕ್ಯಾನ್‌ಗಳನ್ನು ಹೊತ್ತು ತಂದು ಆ ನಿವೇಶನದಲ್ಲಿಟ್ಟು ಹರ್ಷ ವ್ಯಕ್ತಪಡಿಸಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಮುನೇಗೌಡ, ‘ಬಚ್ಚಹಳ್ಳಿಯ ಭಜನೆ ಮನೆಗಾಗಿ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಬಚ್ಚಹಳ್ಳಿ ಹೌಸ್‌ಲಿಸ್ಟ್‌ ನಂಬರ್‌ 24ರ ನಿವೇಶನವನ್ನು ಮೀಸಲಿಟ್ಟಿತ್ತು. ಆದರೆ ಪಕ್ಕದ ನಿವೇಶನದಲ್ಲಿರುವ ವೆಂಕಟೇಶ್‌ ಎಂಬುವರು ಸುಮಾರು 20 ವರ್ಷಗಳ ಹಿಂದೆ ಆ ನಿವೇಶನವನ್ನು ಒತ್ತುವರಿ ಮಾಡಿಕೊಂಡು ಬಳಸುತ್ತ ಬಂದಿದ್ದರು’ ಎಂದು ಹೇಳಿದರು. 
 
‘ಒತ್ತುವರಿಯನ್ನು ತೆರವುಗೊಳಿಸಲು ಗ್ರಾಮಸ್ಥರು ಅನೇಕ ಬಾರಿ ಪ್ರಯತ್ನಿಸಿದ್ದರೂ ವೆಂಕಟೇಶ್‌ ಕುಟುಂಬದವರ ತಕರಾರಿನಿಂದ ಅದು ಕೈಗೂಡಿರಲಿಲ್ಲ. ಊರಿನ ಹಾಲಿನ ಡೈರಿ ಕಟ್ಟಡ ಕಟ್ಟಲು ಸ್ಥಳವಿಲ್ಲ. ಒತ್ತುವರಿ ಮಾಡಿಕೊಂಡಿರುವ ಜಾಗ ಬಿಡಿಸಿ ಕೊಡಿ ಎಂದು ಗ್ರಾಮಸ್ಥರು ಪದೇ ಪದೇ ಮನವಿ ಮಾಡುತ್ತಿದ್ದರು. ಇವತ್ತು ಒತ್ತುವರಿದಾರರ ಮನವೊ ಲಿಸಲು ಬಂದರೆ ಅವರು ನಮ್ಮ ಮಾತಿಗೆ ಬೆಲೆ ನೀಡಲಿಲ್ಲ. ಬದಲು ಅದು ವಿವಾದಿತ ಜಾಗ, ಅದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಸುಳ್ಳು ಹೇಳಿದರು’ ಎಂದು ತಿಳಿಸಿದರು. 
 
‘ವಾಸ್ತವದಲ್ಲಿ ಹೌಸ್‌ಲಿಸ್ಟ್‌ ನಂಬರ್‌ 23ರ ನಿವೇಶನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ಒತ್ತುವರಿ ಮಾಡಿಕೊಂಡಿದ್ದು ಹೌಸ್‌ಲಿಸ್ಟ್‌ ನಂಬರ್‌ 24ರ ನಿವೇಶನ. ಹೀಗಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ತೆರವು ಮಾಡಲೇ ಬೇಕು ಎಂದರೂ ವೆಂಕಟೇಶ್‌ ಕುಟುಂಬದವರು ಒಪ್ಪಲಿಲ್ಲ. ಕೊನೆಗೆ ಗ್ರಾಮಸ್ಥರೆಲ್ಲ ಸೇರಿ ಒತ್ತುವರಿ ತೆರವುಗೊಳಿಸಿದರು’ ಎಂದರು. 
 
* ಹಾಲಿ ಡೇರಿಗೆ ಒತ್ತುವರಿ ಮಾಡಿಕೊಂಡಿರುವ ಜಮೀನು ಬಿಡಿಸಿಕೊಡಿ ಎಂದು ಅನೇಕ ವರ್ಷಗಳಿಂದ ಕಂಡ ಕಂಡವರಿಗೆ ಮನವಿ ಮಾಡಿಕೊಂಡಿದ್ದೆವು. ಆ ಬೇಡಿಕೆ ಇವತ್ತು ಈಡೇರಿದೆ.
-ರಾಜು, ಬಚ್ಚಹಳ್ಳಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT