ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಹೆದ್ದಾರಿ ತಡೆದು ಪ್ರತಿಭಟನೆ

ರೈತರು, ಕೃಷಿ ಕೂಲಿಕಾರರ ವಿವಿಧ ಬೇಡಿಕೆ ಈಡೇರಿಕೆಗೆ ಪ್ರಾಂತ ರೈತ ಸಂಘದ ಕಾರ್ಯಕರ್ತರ ಆಗ್ರಹ
Last Updated 18 ಫೆಬ್ರುವರಿ 2017, 8:30 IST
ಅಕ್ಷರ ಗಾತ್ರ
ಮದ್ದೂರು: ರೈತ ಹಾಗೂ ಕೃಷಿ ಕೂಲಿಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸಮೀಪದ ಹೆಮ್ಮನಹಳ್ಳಿ ಅಡ್ಡರಸ್ತೆ ಬಳಿ ಶುಕ್ರವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. 
 
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದರು. ಸತತ 2 ಗಂಟೆ ಕಾಲ ಹೆದ್ದಾರಿ ತಡೆ ಮಾಡಿದ್ದರಿಂದ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಸಂಪೂ ರ್ಣ ಅಸ್ತವ್ಯಸ್ತಗೊಂಡಿತು. ನೂರಾರು ವಾಹನಗಳು ಸಾಲುಗಟ್ಟಿ ನಿಂತವು. 
 
ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತಾನಾಡಿ, ಸತತ ಬರಗಾಲದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿವೆ. ಕೂಡಲೇ ಎಲ್ಲ ಬಗೆಯ ಸಾಲ ವಸೂಲಾತಿ ನಿಲ್ಲಿಸಬೇಕು. ರೈತ, ಕೂಲಿಕಾರರ, ಸ್ತ್ರೀ ಶಕ್ತಿ ಸಂಘಗಳ ಎಲ್ಲ ಬಗೆಯ ಸಾಲಮನ್ನಾ ಆಗಬೇಕು. ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲೂ ಮೇವು ಕೇಂದ್ರ ತೆರೆಯಬೇಕು.
 
ಪ್ರತಿ ರೈತ ಕೂಲಿಕಾರರ ಕುಟುಂಬಕ್ಕೆ ಮಾಸಿಕ 35 ಕೆ.ಜಿ. ಪಡಿತರ ಧಾನ್ಯ  ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ಕನಿಷ್ಠ ₹ 600 ಏರಿಸಬೇಕು. ವಾರ್ಷಿಕ 200 ದಿನ ಕೆಲಸ ನೀಡಲೇ ಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಪಿಎಸ್‌ಐಗಳಾದ ಕುಮಾರ್, ರವಿ, ಮಂಜೇಗೌಡ ಅವರು,  ಪ್ರತಿಭಟನಾಕಾರರ ಮನವೊಲಿಸಿ ಹೆದ್ದಾರಿ ತೆರವಿಗೆ ಮುಂದಾದರು. ಆದರೆ,   ಪ್ರತಿಭನಾಕಾರರು, ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು, ಪ್ರತಿಭಟನೆಯನ್ನು ಮುಂದುವರಿಸಿದರು.  
 
ಅಷ್ಟರಲ್ಲಿ ಸ್ಥಳಕ್ಕೆ ಬಂದ ಸಿಪಿಐ ಕೆ.ಆರ್.ಪ್ರಸಾದ್ ಉದ್ರಿಕ್ತ ರೈತ ಕಾರ್ಯಕರ್ತರನ್ನು ಸಮಾಧಾನ ಗೊಳಿಸಿದರು. ಫೆ. 22ರಂದು ತಹಶೀ ಲ್ದಾರ್ ನೇತೃತ್ವದಲ್ಲಿ ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಕುರಿತು ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. 
ಸಂಘದ ತಾಲ್ಲೂಕು ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಮುಖಂಡರಾದ ಆನಂದ್, ರಾಮಕೃಷ್ಣ, ರವಿ, ರಾಜಣ್ಣ, ಜಯರಾಮು, ಪದ್ಮಮ್ಮ, ಕಮಲಮ್ಮ, ಲಕ್ಷ್ಮಮ್ಮ, ಸುಧಾ, ಭವಾನಿ, ಮಂಜುಳಾ, ಪುಟ್ಟತಾಯಮ್ಮ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು. 
 
ಆರ್‌ಟಿಇ: ಅರ್ಜಿ ಸ್ವೀಕರಿಸಲು ಆಗ್ರಹ
ಶ್ರೀರಂಗಪಟ್ಟಣ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಲು ಸರ್ಕಾರ ಅರ್ಜಿ ಸ್ವೀಕರಿಸುವುದಾಗಿ ದಿನಾಂಕ ಪ್ರಕಟಿಸಿದರೂ ಅರ್ಜಿ ಪಡೆಯುತ್ತಿಲ್ಲ ಎಂಬ ಕಾರಣದಿಂದ ಪೋಷಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
 
ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕಿನ ಕೆಆರ್‌ಎಸ್‌, ಕೊಡಿಯಾಲ, ಬಲ್ಲೇನಹಳ್ಳಿ ಗ್ರಾಮಗಳ ಪೋಷಕರು ಪ್ರತಿಭಟಿಸಿದರು. 
 
ಫೆ.15ರಿಂದ ಆರ್‌ಟಿಇ ಅಧಿನಿಯಮದ ಅಡಿ ಶಾಲೆಗೆ ಸೇರುವ ಮಕ್ಕಳಿಂದ ಅರ್ಜಿ ಪಡೆಯಲಾಗುವುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿತ್ತು. ತಾಂತ್ರಿಕ ಕಾರಣ ನೀಡಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಲಾಗುತ್ತಿದೆ. ಪೋಷಕರನ್ನು ಸತಾಯಿಸದೆ 2017–18ನೇ ಸಾಲಿಗೆ ಅರ್ಜಿ ಸ್ವೀಕರಿಸಿ ಪ್ರವೇಶ ನೀಡಬೇಕು. ಆಯಾ ವಾರ್ಡ್‌ ಅಥವಾ ಗ್ರಾಮ ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ನಿಯಮವನ್ನು ಸಡಿಲಿಸಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದರು.
 
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ಹೊನ್ನ ರಾಜು, ಆರ್‌ಟಿಇ ಅಡಿಯಲ್ಲಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಅರ್ಜಿ ಸಲ್ಲಿಸುವ, ಪರಿಶೀಲಿಸುವ ಮತ್ತು ಆಯ್ಕೆ ಮಾಡುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ನಡೆಯುತ್ತದೆ. ಫೆ.15ರಿಂದ ಅರ್ಜಿ ಸ್ವೀಕರಿಸುವುದಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, ಅರ್ಜಿ ಸಲ್ಲಿಸಲು ಬೇಕಾದ ತಂತ್ರಾಂಶ ತೆರೆದುಕೊಳ್ಳುತ್ತಿಲ್ಲ. ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. 
ಪೋಷಕರಾದ ಕೆಆರ್‌ಎಸ್‌ ನಿಂಗಪ್ಪ, ಪ್ರಸನ್ನಕುಮಾರ್‌, ಸಂಧ್ಯಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT