ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯದಿಂದ ನೀರು ಹರಿಸಿದ್ದಕ್ಕೆ ವಿರೋಧ

ನದಿಗೆ ಇಳಿದು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು
Last Updated 18 ಫೆಬ್ರುವರಿ 2017, 8:46 IST
ಅಕ್ಷರ ಗಾತ್ರ
ಬೇಲೂರು: ಯಗಚಿ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ಶೆಟ್ಟಿ ಬಣದ ಕಾರ್ಯಕರ್ತರು ನಾಲೆಗೆ ಇಳಿದು ಪ್ರತಿಭಟನೆ ನಡೆಸಿದರೆ, ನಾರಾಯಣಗೌಡ ಬಣದ ಕಾರ್ಯಕರ್ತರು ಯಗಚಿ ನದಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
 
ಶುಕ್ರವಾರ ಬೆಳಿಗ್ಗೆಯಿಂದ ಯಗಚಿ ಎಡದಂಡೆ ನಾಲೆಯ ಮೂಲಕ ನದಿಗೆ ಸುಮಾರು 20 ಕ್ಯೂಸೆಕ್‌ ನೀರನ್ನು ಬಿಡಲಾಗುತ್ತಿತ್ತು. ಮಧ್ಯಾಹ್ನದ ವೇಳೆಗೆ ಯಗಚಿ ನದಿಯಲ್ಲಿ ಹೆಚ್ಚು ನೀರು ಹರಿಯುತ್ತಿರುವುದನ್ನು ಕಂಡ ಕರವೇ ಎರಡೂ ಬಣಗಳ ಕಾರ್ಯಕರ್ತರು ದಿಢೀರನೆ ಪ್ರತಿಭಟನೆ ನಡೆಸಿ ನೀರು ನಿಲುಗಡೆ ಆಗ್ರಹಿಸಿದರು.
 
ನಾರಾಯಣಗೌಡ ಬಣದ ಕಾರ್ಯಕರ್ತರು ಯಗಚಿ ನದಿಯಲ್ಲಿಳಿದು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರಲ್ಲದೆ, ಯಗಚಿ ಯೋಜನೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್‌ ‘ಯಗಚಿ ಅಣೆಕಟ್ಟೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ಬೇಲೂರು ಮತ್ತು ಚಿಕ್ಕಮಗಳೂರು ಪಟ್ಟಣಗಳ ಜನರಿಗೆ ಕುಡಿಯಲು ನೀರಿಲ್ಲದಂತಾಗಿದೆ. ಆದರೂ ಯಗಚಿ ಅಧಿಕಾರಿಗಳು ನದಿಗೆ ನೀರು ಬಿಟ್ಟಿರುವುದು ಖಂಡನೀಯ. ತಕ್ಷಣ ನೀರು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
 
ಪ್ರತಿಭಟನೆಯಲ್ಲಿ ನಾರಾಯಣಗೌಡ ಬಣದ ಖಾದರ್‌, ಪ್ರವೀಣ್‌ ಶೆಟ್ಟಿ ಬಣದ ಜಯಪ್ರಕಾಶ್‌, ದೀಪು, ಡಾ.ರಾಜ್‌ಕುಮಾರ್‌ ಅಭಿಮಾನಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್‌.ತೀರ್ಥಂಕರ್‌ ಇದ್ದರು.
 
ಕುಡಿಯಲು ನೀರು: ‘ಹಾಸನ ನಗರಸಭೆ ಆಯುಕ್ತರ ಪತ್ರದ ಹಿನ್ನೆಲೆಯಲ್ಲಿ ಹಾಸನ ನಗರದ ಜನತೆಗೆ ಮಾನವೀಯ ನೆಲೆಯಲ್ಲಿ ನದಿಗೆ ನೀರು ಬಿಟ್ಟಿದ್ದೆವು. ಹೇಮಾವತಿ ಯೋಜನೆಯ ಮುಖ್ಯ ಎಂಜಿನಿಯರ್‌ ಮತ್ತು ಅಧೀಕ್ಷಕ ಎಂಜಿನಿಯರ್‌ ಸೂಚನೆಯಂತೆ ನೀರು ಬಿಡಲಾಗಿತ್ತು. ಸಂಘಟನೆಗಳ ಪ್ರತಿಭಟನೆಯ ಕಾರಣ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಯಗಚಿ ಜಲಾಶಯ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT