ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಭಿವೃದ್ಧಿಗೆ ರಾಜರ ಕೊಡುಗೆ ಅಪಾರ

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಡೇವಿಡ್ ವಾಷ್‌ಬ್ರೂಕ್ ಅಭಿಮತ
Last Updated 18 ಫೆಬ್ರುವರಿ 2017, 9:03 IST
ಅಕ್ಷರ ಗಾತ್ರ
ಮೈಸೂರು: ಮೈಸೂರು ಸೇರಿದಂತೆ ಭಾರತದ ಕೆಲವು ರಾಜ ಪ್ರಭುತ್ವಗಳು ದೇಶದ ಸಾಮಾಜಿಕ, ಶೈಕ್ಷಣಿಕ, ಕೈಗಾರಿಕೆ ಹಾಗೂ ವಾಣಿಜ್ಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿವೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಕಾಲೇಜಿನ ಫೆಲೋ ಡೇವಿಡ್ ವಾಷ್‌ಬ್ರೂಕ್ ಹೇಳಿದರು.
 
ಮೈಸೂರು ವಿಶ್ವವಿದ್ಯಾ ನಿಲಯದ ಇತಿಹಾಸ ವಿಭಾಗದಿಂದ ಪ್ರೊ.ಅಚ್ಯುತರಾವ್ ಜನ್ಮ ಶತಮಾನೋ ತ್ಸವ ಅಂಗವಾಗಿ ಶುಕ್ರವಾರ ಆಯೋ ಜಿಸಿದ್ದ ‘ದಕ್ಷಿಣ ಭಾರತದಲ್ಲಿ ರಾಜ ಮನೆತನಗಳ ಅಧಿಕಾರ, ಪ್ರತಿರೋಧ ಮತ್ತು ಸಾರ್ವಭೌಮತ್ವ’ ಕುರಿತು ಪ್ರೊ. ಅಚ್ಯುತರಾವ್ ಸ್ಮರಣಾರ್ಥ ಅಂತರ ರಾಷ್ಟ್ರೀಯ ಸಮಾವೇಶ’ದಲ್ಲಿ ‘ರಾಜ ಮನೆತನಗಳು ಮತ್ತು ಆಧುನಿಕ ಭಾರತ ನಿರ್ಮಾಣ’ ಕುರಿತು ಅವರು ಮಾತನಾಡಿದರು.
 
ಮೈಸೂರು ಸೇರಿದಂತೆ ಟ್ರಾವಂಕೂರು, ಬರೋಡಾ ಹಾಗೂ ಹೈದರಾಬಾದ್ ರಾಜಮನೆತನಗಳು ಸಾರ್ವಜನಿಕ ಆರೋಗ್ಯ, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಸಾಮಾಜಿಕ ಅಭಿವೃದ್ಧಿಯತ್ತ ದೇಶವನ್ನು ಕೊಂಡೊಯ್ದಿವೆ. ಆದರೆ, ಕೆಲವು ರಾಜಮನೆತನಗಳ ಆಳ್ವಿಕೆ ಇದ್ದ ರಾಜ್ಯದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಆಗಲಿಲ್ಲ. ರಾಜರ ನಗರಗಳಾದ ಬೆಂಗಳೂರು ಮತ್ತು ವಡೋದರಾ ವಿಜ್ಞಾನ ಮತ್ತು ಕೈಗಾರಿಕೆ ಅಭಿವೃದ್ಧಿ ಯಲ್ಲಿ ಇಂದು ಮುಂಚೂಣಿಯಲ್ಲಿ ಇರ ಬೇಕಿತ್ತು. ಈ ನಿಟ್ಟಿನಲ್ಲಿ ಅವು ಅಭಿವೃದ್ಧಿ ಕಂಡಿಲ್ಲ. ಆದರೆ, ಇವುಗಳಿಗಿಂತ ತಿರುವನಂತಪುರ ಹೆಚ್ಚು ಅಭಿವೃದ್ಧಿ ಹೊಂದಿದೆ. ಭಾರತದ ವೈದ್ಯಕೀಯ ಕ್ಷೇತ್ರ ದಲ್ಲಿ ಛಾಪು ಮೂಡಿಸಿದೆ ಎಂದು ಹೇಳಿದರು.
 
ಭಾರತದಲ್ಲಿ 30 ವರ್ಷಗಳಿಂದೀಚೆಗೆ ಗಮನಾರ್ಹ ಬದಲಾವಣೆ ಆಗಿದೆ. ಮೈಸೂರು ರಾಜರ ಆಳ್ವಿಕೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಶಿಕ್ಷಣ ದೊರೆಯುವಂತಾ ಯಿತು. ಮೈಸೂರಿನ ರಾಜರು ಸ್ಥಳೀಯವಾಗಿ ಹಲವು ಕೈಗಾರಿಕೆ, ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿ ಜನರಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡಿದರು. ಇಂದು ಮೈಸೂರು ದೇಶ– ವಿದೇಶದಲ್ಲಿ ಗುರುತಿಸಿಕೊಂಡಿದೆ. ನಿಜಾಮರ ಆಳ್ವಿಕೆಯಲ್ಲಿ ಹೈದರಾಬಾದ್ ಸಾಕಷ್ಟು ಅಭಿವೃದ್ಧಿ ಕಂಡಿತು ಎಂದು ತಿಳಿಸಿದರು.
 
1857ರ ನಂತರ ವಸಾಹತುಶಾಹಿ ವಿರುದ್ಧ ರಾಜರು ರಾಜಕೀಯವಾಗಿ ಪರಿಣಾಮಕಾರಿ ಪಾತ್ರ ವಹಿಸಲಿಲ್ಲ ಎಂಬ ವಾದ ಇದೆ. ಆದರೆ, ಇದು ಸತ್ಯ ಅಲ್ಲ. 1930ರವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಮನೆತನಗಳನ್ನು ಕಡೆಗಣಿ ಸಿತ್ತು. ಬಳಿಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯ ತೊಡೆದು ಹಾಕಿ ರಾಜಮನೆತನಗಳು ಮತ್ತು ಕಾಂಗ್ರೆಸ್ ಒಂದಾದವು. ದೇಶ ವಿಭಜನೆ ಮತ್ತು ವಿಲೀನದ ನಂತರ ಸ್ವಾತಂತ್ರೋ ತ್ತರ ಭಾರತದಲ್ಲಿ ರಾಜಮನೆತನಗಳ ಸವಲತ್ತು ಮತ್ತು ಅಧಿಕಾರ ಅಷ್ಟಾಗಿ ಉಳಿಯಲಿಲ್ಲ ಎಂದರು.
 
ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಯಶವಂತ ಡೋಂಗ್ರೆ, ಕುಲಸಚಿವ ಪ್ರೊ.ಆರ್. ರಾಜಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಸದಾಶಿವ, ಪ್ರೊ.ಡಿ.ಎಸ್. ಅಚ್ಯುತ ರಾವ್ ಜನ್ಮಶತಮಾನೋತ್ಸವ ಸಲಹಾ ಸಮಿತಿ ಸಂಚಾಲಕ ಡಿ.ಎ.ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT