ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಅನುವಾದಕ್ಕೆ ಯೋಜನೆ ರೂಪಿಸಿ

l ಕನ್ನಡ ನುಡಿ ಜಾತ್ರೆಯಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಅನಂತರಾಮು ಸಲಹೆ l ಭಾಷಣ ಆಲಿಸಿದ ರೈತಾಪಿ ವರ್ಗ, ಶಾಲಾ–ಕಾಲೇಜು ವಿದ್ಯಾರ್ಥಿಗಳು
Last Updated 18 ಫೆಬ್ರುವರಿ 2017, 9:16 IST
ಅಕ್ಷರ ಗಾತ್ರ
ಮೈಸೂರು: ‘ದೇಶದ ವಿವಿಧ ಭಾಷೆಗಳು ಗೊತ್ತಿರುವ ಕನ್ನಡ ವಿದ್ವಾಂಸರ ತಂಡವನ್ನು ಕಟ್ಟಬೇಕು. ಅವರೆಲ್ಲಾ ತಾವು ಕಲಿತ ಪರಭಾಷೆಯ ಅತ್ಯುತ್ತಮವಾದ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸ ಬೇಕು. ಹಾಗೆಯೇ, ಕನ್ನಡದಲ್ಲಿರುವ ಅತ್ಯುತ್ತಮ ಸಾಹಿತ್ಯವನ್ನು ಅನ್ಯಭಾಷೆಗೆ ಭಾಷಾಂತರಿಸಬೇಕು. ಅದಕ್ಕಾಗಿ ಸರ್ಕಾರ ಮಹಾಯೋಜನೆ ರೂಪಿಸಬೇಕು’.
 
–ಕನ್ನಡ ನುಡಿ ಜಾತ್ರೆಯಲ್ಲಿ ಇಂಥದೊಂದು ಮಹತ್ವದ ಸಲಹೆ ನೀಡಿದ್ದು ಸಮ್ಮೇಳನಾಧ್ಯಕ್ಷ ಹಾಗೂ ವಿದ್ವಾಂಸ ಪ್ರೊ.ಕೆ.ಅನಂತರಾಮು. ಭತ್ತದ ಕಣಜ ಕೆ.ಆರ್‌.ನಗರದಲ್ಲಿ ಶುಕ್ರವಾರ ಆರಂಭವಾದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾ ಟನಾ ಸಮಾರಂಭದಲ್ಲಿ ಅವರು  ಸಾಹಿತ್ಯ ಲೋಕದ ಹಲವು ವಿಚಾರಗಳನ್ನು ಸಾಹಿತ್ಯಾಭಿಮಾನಿಗಳಿಗೆ  ಉಣ ಬಡಿಸಿದರು.
 
‘ಈ ಸಲಹೆಯನ್ನು ಸರ್ಕಾರ ಕೈಗೆತ್ತಿ ಕೊಂಡು ಕಾರ್ಯರೂಪಕ್ಕೆ ತಂದರೆ ದೇಶದ ಸಾಹಿತ್ಯ ವಲಯದಲ್ಲೇ ಅಪೂರ್ವ ಯೋಜನೆ ಎನಿಸಲಿದೆ. ಅಷ್ಟುಮಾತ್ರವಲ್ಲದೆ; ಕನ್ನಡ ಸಾಹಿತ್ಯ ಮತ್ತಷ್ಟು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಆಗಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.
 
ಭಾಷಣ ಮಾಡಲು ಸಿದ್ಧಪಡಿಸಿ ಕೊಂಡು ಬಂದಿದ್ದ 24 ಪುಟಗಳ ಕಿರು ಹೊತ್ತಿಗೆಯನ್ನು ಮಡಿಚಿಟ್ಟ ಅವರು ರಾಜಕುಮಾರ್‌ ಬಾನಂಗಳ ಬಯಲು ರಂಗಮಂದಿರದ ವೇದಿಕೆಯಲ್ಲಿ ಕಾವ್ಯ ಗಳನ್ನು ವಾಚಿಸುತ್ತಾ ಸಾಹಿತ್ಯಾಸಕ್ತರನ್ನು ಸೆಳೆದುಕೊಂಡರು. ವಾಗ್ಮಯ ಪ್ರದರ್ಶಿಸಿ ಮನಸೂರೆಗೊಂಡರು.
 
ಜೆ.ಪಿ.ರಾಜರತ್ನಂ ವಿರಚಿತ ‘ಹೆಂಡ ಹೆಂಡ್ತಿ ಕನ್ನಡ ಪದಗಳ್ ಅಂದ್ರೆ ರತ್ನಂಗೆ ಪ್ರಾಣ....’, ‘ಪ್ರಪಂಚ ಇರೋತನ್ಕ ಮುಂದೆ ಕನ್ನಡ ಪದಗಳ್ ನುಗ್ಲಿ’ ಎಂಬ ಕಾವ್ಯ ವಾಚಿಸಿ ಜೋರು ಚಪ್ಪಾಳೆ ಗಿಟ್ಟಿಸಿಕೊಂಡರು. ಎದ್ದು ಹೊರಡಲು ಅನುವಾಗಿದ್ದ ಪ್ರೇಕ್ಷಕರು ನಿಶಬ್ದದಿಂದ ಮಾತು ಆಲಿಸಿದರು.
 
ವೇದಿಕೆಯಲ್ಲಿ ಭಾಷಣದ ಪುಸ್ತಕ ನೋಡದಿದ್ದರೂ ಅದರಲ್ಲಿನ ಎಲ್ಲಾ ಅಂಶಗಳನ್ನು ಸಾಹಿತಿಗಳಿಗೆ, ರೈತಾಪಿ ವರ್ಗದವರಿಗೆ ಹಾಗೂ ಶಾಲಾ–ಕಾಲೇಜು ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಮನಮುಟ್ಟಿಸಲು ಪ್ರಯತ್ನಿಸಿದರು.
 
‘ರಾಜಕಾರಣದಲ್ಲಿ ಸಾಹಿತ್ಯ ಇರ ಬಹುದು, ಆದರೆ, ಸಾಹಿತ್ಯದಲ್ಲಿ ರಾಜ ಕಾರಣ ಇರ ಬಾರದು ಎಂಬುದು ರಾಜಕಾರಣಿಗಳೇ ನೀಡಿದ ಸಲಹೆ. ಸಾಹಿತ್ಯದಲ್ಲಿ ರಾಜಕಾರಣ ನುಸುಳದಂತೆ ನೋಡಿಕೊಳ್ಳುವುದು ಸಾಹಿತಿ ಗಳಾದ ನಮ್ಮ ಕರ್ತವ್ಯ’ ಎಂದಾಗ ಸಭಾಂಗಣದಲ್ಲಿ ಜೋರು ಚಪ್ಪಾಳೆ.
 
‘ಎಲ್ಲೆಡೆ ಮೌಲ್ಯ ಕುಸಿಯುತ್ತಿದೆ. ನೀತಿ ಪಾಠ ಮರೆ ಯಾಗುತ್ತಿದೆ. ಮೂರನೇ ಪೀಳಿಗೆಯ ಮಕ್ಕಳು ಕುಳಿತಲ್ಲೇ ಜಗತ್ತನ್ನು ಹಾಳು ಮಾಡುವಷ್ಟು ಪ್ರಚಂಡರಾಗಿ ದ್ದಾರೆ. ಏಕೆಂದರೆ ಅವರಲ್ಲಿ ಮೌಲ್ಯಗಳಿಲ್ಲ. ಆದರೆ, ವಿಪರೀತ ಬುದ್ಧಿ ಇದೆ’ ಎಂದು ಮಕ್ಕಳ ಮೇಲೆ ಡಿಜಿಟಲ್‌ ತಂತ್ರಜ್ಞಾನ ಉಂಟು ಮಾಡಿರುವ ಪರಿಣಾಮವನ್ನು ಪರೋಕ್ಷ ವಾಗಿ ತೆರೆದಿಟ್ಟರು.
 
‘ಕನ್ನಡದ ಜೀವ ಹಾರಿ ಹೋಗುವ ಹಂತದಲ್ಲಿದೆ. ಹಳ್ಳಿಗಳಲ್ಲಿ ಸಾಯುವ ಹಂತದಲ್ಲಿರುವ ವ್ಯಕ್ತಿಯನ್ನು ಮನೆ ಯಿಂದ ಹೊರಾಂಡಕ್ಕೆ ತಂದಿಡುವಂತೆ ಕನ್ನಡವನ್ನು ಆಚೆಗೆ ದೂಕ ಲಾಗಿದೆ. ಅದನ್ನು ಮತ್ತೆ ಒಳಗೆ ಎಳೆದುಕೊಳ್ಳುವ ಅವಶ್ಯ ವಿದೆ. ಅಖಂಡ ಕನ್ನಡ ಪ್ರೇಮದ ಅಗತ್ಯ ವಿದೆ’ ಎಂದು ಕನ್ನಡಕ್ಕೆ ಬಂದೊ ದಗಿರುವ ದುಃಸ್ಥಿತಿ ಯನ್ನು ಬಿಚ್ಚಿಟ್ಟರು. 
 
‘ಎಲ್ಲರ ಕೈಗೆ ಪುಸ್ತಕ ತಲುಪಿಸುವ ಕೆಲಸ ಮಾಡ ಬೇಕು. ಗ್ರಾಮ ಗಳಿಗೆ, ಶಾಲಾ ಮಕ್ಕಳಿಗೆ ಸಾಹಿತ್ಯ ತಲುಪಿಸಲು ಸರ್ಕಾರ ಯೋಜನೆ ರೂಪಿಸ ಬೇಕು. ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಬೇಕು’ ಎಂದರು.
 
‘ಈಗ ಎರಡು ಪ್ರಕಾರದ ಪುಸ್ತಕಗಳು ಹೊರಬರುತ್ತಿವೆ. ಅವೆಂದರೆ ಮುಟ್ಟಿದ ಮೇಲೆ ಕೈತೊಳೆದುಕೊಳ್ಳುವ ಪುಸ್ತಕ ಹಾಗೂ ಕೈತೊಳೆದು ಮುಟ್ಟುವ ಪುಸ್ತಕ. ಮುಖಪುಟದಲ್ಲಿ ಬಣ್ಣಬಣ್ಣ ದಿಂದ ಕೂಡಿ ಅದ್ಧೂರಿಯಾಗಿ ಮೂಡಿಬರುತ್ತಿವೆ. ಆದರೆ, ಒಳಗೆ ಮುದ್ರಣ ದೋಷ’ ಎಂದು ಬೇಸರ ವ್ಯಕ್ತಪಡಿಸಿದರು. 
 
‘ಸಾಮಾಜಿಕ ಸಮಸ್ಯೆಗಳಿಗೆ ಕಾವ್ಯ ಸ್ಪಂದಿಸಬೇಕು ಎಂದು ಹೇಳುವ ಮಾತಿನಲ್ಲಿ ತಪ್ಪೇ ನಿಲ್ಲ. ಆದರೆ, ಅದನ್ನೂ ಮಾಡಲಿ, ಇದನ್ನೂ ಮಾಡಲಿ ಎಂದು ಕಾವ್ಯದ ಮೇಲೆ ಹೆಚ್ಚು ಒತ್ತಡ ಹೇರಬಾರದು. ಸಮಸ್ಯೆ ಮೂಲವನ್ನು ಶೋಧಿಸಿ ಸಂಕಷ್ಟಗಳಿಗೆ ಸಿಲುಕದಂತೆ ಮನುಷ್ಯನನ್ನು ಸಜ್ಜು ಗೊಳಿಸುವ ಕೆಲಸವನ್ನು ಸಾಹಿತ್ಯ ಮಾಡಬಹುದು’ ಎಂದು ನುಡಿದರು.
 
ಕಾವೇರಿಯ ಜಲವಿವಾದಕ್ಕೆ ಕೊನೆ ಇಲ್ಲದಾಗಿದೆ. ಅದು ಇಂದು ನಿನ್ನೆಯ ಸಮಸ್ಯೆ ಅಲ್ಲ. 13ನೇ ಶತಮಾನದ ವ್ಯಾಕರಣಕಾರ ಕೇಶಿರಾಜನ ಗ್ರಂಥದಲ್ಲಿ ‘ಕಾವೇರಿಯ ಆ ಕಾಲುವೆಯನ್ನು ತಮಿಳರು ನಮ್ಮಿಂದ ಸಾಲವಾಗಿ ಪಡೆದಿ ದ್ದಾರೋ ಅಥವಾ ಅವರೇ ನಮಗೆ ಸಾಲವಾಗಿ ಕೊಟ್ಟಿದ್ದಾರೋ’ ಎಂಬ ತಾತ್ಪರ್ಯವಿದೆ. ನಾವು ಜಾಣತನದಿಂದ ಹೆಜ್ಜೆ ಇಡಬೇಕಿದೆ ಎಂದರು.
 
ಕವಿಗಳ ಕಲರವ: ಸಮ್ಮೇಳನದ ವೇದಿಕೆಯ ಬಲಭಾಗದಲ್ಲಿ 12 ಪುಸ್ತಕ ಮಳಿಗೆ ನಿರ್ಮಿಸಲಾಗಿದೆ. ಪುಸ್ತಕ ಖರೀದಿಗೆ ಜನರು ಮುಗಿ ಬಿದ್ದಿದ್ದರು. ಒಂದು ಮಳಿಗೆಯಲ್ಲಿ 30ಕ್ಕೂ ಅಧಿಕ ಕವಿಗಳ ಕ್ಯಾರಿಕೇಚರ್‌ ಗಮನ ಸೆಳೆಯಿತು. ಕಲಾವಿದ ಮೋಹನ್‌ ಎಂಬು ವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಇತರ ಸಾಹಿತಿಗಳು ಹಾಗೂ ವರನಟ ರಾಜಕುಮಾರ್‌ ಅವರನ್ನು ಸೊಗಸಾಗಿ ಚಿತ್ರಿಸಿ ದ್ದಾರೆ. ಕಾಂಗ್ರೆಸ್‌ ಮುಖಂಡ ಎಚ್‌.ವಿಶ್ವನಾಥ್ ಅವರ ಪುಸ್ತಕಗಳಿಗಾಗಿಯೇ ಒಂದು ಮಳಿಗೆ ತೆರೆಯಲಾಗಿತ್ತು.
 
* ಹಲವು ವರ್ಷಗಳ ಹಿಂದೆಯೇ ತಾಲ್ಲೂಕಿನಲ್ಲಿ ಸಮ್ಮೇಳನ ನಡೆಯಬೇಕಿತ್ತು. ರಾಜಕೀಯ ಕಾರಣ ಗಳಿಂದ ಅದು ಸಾಧ್ಯವಾಗಿಲ್ಲ. ಸಾಹಿತ್ಯ ಲೋಕದಲ್ಲೂ ರಾಜಕೀಯ ನೆಲೆಸಿದೆ
ಸಾ.ರಾ.ಮಹೇಶ್‌, ಶಾಸಕ
 
* ಕನ್ನಡಕ್ಕಾಗಿ ಕೆಲಸ ಮಾಡುವವರ ತೇಜೋವಧೆ ಮಾಡುವ ಕೆಲಸಗಳು ನಡೆಯುತ್ತಿವೆ. ಸಾಹಿತ್ಯವು ನಮ್ಮ ನಡೆನುಡಿಯನ್ನು ಬದಲಾಯಿಸದಿದ್ದರೆ ಅದು ನಿಜವಾದ ಸಾಹಿತ್ಯ ಅಲ್ಲ
ವೈ.ಡಿ.ರಾಜಣ್ಣ, ಅಧ್ಯಕ್ಷ, ಕಸಾಪ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT