ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ

ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಎಚ್‌ಡಿಕೆ ಘೋಷಣೆ
Last Updated 18 ಫೆಬ್ರುವರಿ 2017, 9:29 IST
ಅಕ್ಷರ ಗಾತ್ರ
ಗುಂಡ್ಲುಪೇಟೆ: ‘ಒಂದು ಬಾರಿ ನನಗೆ ಮತದಾರರು ಸರ್ಕಾರ ನಡೆಸುವ ಅಧಿಕಾರ ನೀಡಿದರೆ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಎಲ್ಲ ವಿಧ ವಾದ ಸಾಲವನ್ನು ಮನ್ನಾ ಮಾಡುತ್ತೇನೆ’ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.
 
ಪಟ್ಟಣದ ವೆಂಕಟೇಶ್ವರ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಇಂದು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ರೈತರ ಪರವಾಗಿಲ್ಲ. ಇಲ್ಲಿನ ಮತದಾರರು ಜಾತಿ ರಾಜಕಾರಣಕ್ಕೆ ಕಟ್ಟು ಬಿದ್ದಿದ್ದಾರೆ. ಆದರೆ ಈ ಸರ್ಕಾರದ ವತಿಯಿಂದ ಏನಾದರೂ ಪ್ರಯೋಜನ ವಿದೆಯೇ ಎಂದು ಪ್ರಶ್ನಿಸಿದರು.
 
ರಾಜ್ಯದಲ್ಲಿ ಬರದಿಂದ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರವೇ ನೀಡಿದ ವರದಿಯ ಪ್ರಕಾರ ಬೆಳೆಯ ನಷ್ಟ ಸುಮಾರು ₹ 55 ರಿಂದ 60 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. 2016-17 ನೇ ಸಾಲಿನಲ್ಲಿ ಸುಮಾರು ₹ 25 ರಿಂದ 27 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಈ ಬೆಳೆ ಪರಿಹಾರವನ್ನು ರೈತರಿಗೆ ನೀಡಲು ಕೇಂದ್ರ ಸರ್ಕಾರವನ್ನು ಸುಮಾರು ₹ 6000 ಕೋಟಿ ಪರಿಹಾರ ಕೋರಿದ್ದಾರೆ.
 
ಆದರೆ ಕೇಂದ್ರ ₹ 1700 ಕೋಟಿ ಹಣವನ್ನು ಕೊಡುತ್ತೇವೆಂದು ಘೋಷಣೆ ಮಾಡಿ ಎರಡು ತಿಂಗಳು ಕಳೆದಿದೆ. ಕಳೆದ ವಾರ ಕೇವಲ ₹  450 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು. ಹಲವು ಕಡೆ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಯಾವ ಸಂದರ್ಭದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಪರಿಜ್ಞಾನ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.
 
ರೈತರ ಸಾಲವನ್ನು ಮನ್ನಾ ಮಾಡಲು ಮೀನ–ಮೇಷ ಎಣಿಸುತ್ತಿದೆ. ಮೊದಲು ಕೇಂದ್ರ ಸಾಲವನ್ನು ಮಾಡಲಿ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಅದರ ಬದಲು ರಾಜ್ಯ ಸರ್ಕಾರವೇ ಮೊದಲು ರೈತರ ಸಾಲವನ್ನು ಮನ್ನ ಮಾಡಿ ನಂತರ ಕೇಂದ್ರದ ಮೇಲೆ ಏಕೆ ಒತ್ತಡ ತರುತ್ತಿಲ್ಲ. ಇವೆರಡು ರೈತರ ಪರವಾದ ಸರ್ಕಾರವಲ್ಲ ಎಂದರು. ರೈತರ ಸಾಲವನ್ನು ಮನ್ನ ಮಾಡಲು ಇವರ ಬಳಿ ಹಣವಿಲ್ಲ, ಆದರೆ ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಕೇಂದ್ರದ ನಾಯಕರಿಗೆ ನೀಡಲು ಹಣ ವಿದೆ ಎಂದು ಆರೋಪ ಮಾಡಿದರು. 
 
‘ಈ ಹಿಂದೆ ನಾನು ಮಂತ್ರಿಯಾಗಿ ದ್ದಾಗ ರೈತರ ಕಷ್ಟ ನೋಡಿ ಅಂದಿನ ಬಜೆಟ್‌ನಲ್ಲಿ ₹ 2800 ಕೋಟಿ ಸಾಲ ಮನ್ನಾ ಮಾಡಿದ್ದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 2008ರಿಂದ ರಾಜ್ಯವನ್ನು ಆಳುತ್ತಿವೆ. ಎರಡೂ ಪಕ್ಷಗಳು ರೈತರ ಪರವಾದ ಯಾವುದೇ ಕಾರ್ಯ ಗಳನ್ನು ಮಾಡದೇ ₹ 1.80 ಸಾವಿರ  ಕೋಟಿ ಸಾಲ ಮಾಡಿದೆ. ಈ ಸಾಲವನ್ನು ಈ ರಾಜ್ಯದ ಜನ ತೀರಿಸಬೇಕಿದೆ ಎಂದರು.
 
ಇವತ್ತಿನ ಬಜೆಟ್ ₹ 1.70 ಸಾವಿರ ಕೋಟಿ, ಹಿಂದಿನ ಬಜೆಟ್‌ಗೆ ಹೋಲಿಕೆ ಮಾಡಿದರೆ ಇಂದು ₹ 13 ರಿಂದ 14 ಸಾವಿರ ಕೋಟಿ ಸಾಲವನ್ನು ಮಾಡ ಬಹುದಿತ್ತು. ಅ ಕಾರ್ಯವನ್ನು ಮಾಡದೇ ಜನರ ಹಣವನ್ನು ಲೂಟಿ ಮಾಡುತ್ತಿದೆ ಎಂದರು.
 
ಕಾರ್ಯಕ್ರಮದಲ್ಲಿ ಶಾಸಕರಾದ ಸಾ.ರಾ.ಮಹೇಶ್, ಚಿಕ್ಕಮಾದು, ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಶಿವಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಕುಮಾರ್ ಮೊದಲಾದವರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT