ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಯುದ್ದಕ್ಕೂ ಪ್ರಶ್ನೋತ್ತರ ಭರಾಟೆ!

ಮಹಾನಗರ ಪಾಲಿಕೆ ಸಾಮಾನ್ಯ ಸಭೆ; ಆಯುಕ್ತರ ಪರ–ವಿರೋಧ ಸದಸ್ಯರ ಭರ್ಜರಿ ಬ್ಯಾಟಿಂಗ್
Last Updated 18 ಫೆಬ್ರುವರಿ 2017, 9:50 IST
ಅಕ್ಷರ ಗಾತ್ರ
ವಿಜಯಪುರ: ಸದಸ್ಯರ ಖಡಕ್ ಪ್ರಶ್ನೆಗಳಿಗೆ ಆಯುಕ್ತರಿಂದ ಸಮಾಧಾನದ ಉತ್ತರ..! ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಊಟದ ವಿರಾಮದವರೆಗೂ ನಡೆದ ಘಟನೆ ಇದು.
 
ಸದಸ್ಯರು ಆಯುಕ್ತರು ಸೇರಿದಂತೆ ಪಾಲಿಕೆಯ ಆಡಳಿತ ವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರೂ, ಮೇಯರ್‌ ಅನೀಸ್‌ ಫಾತಿಮಾ ಬಕ್ಷಿ ಮೌನವಾಗಿದ್ದರು. ಉಪ ಮೇಯರ್‌ ಗೋಪಾಲ ಘಟಕಾಂಬ್ಳೆ ಆಗಾಗ್ಗೆ ಆಯುಕ್ತರ ನೆರವಿಗೆ ಧಾವಿಸಲು ಯತ್ನಿಸುತ್ತಿದ್ದಂತೆ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
 
‘ಸಚಿವರು ಸೂಚಿಸಿದರೂ ಪಾಲಿಕೆ ಸದಸ್ಯರನ್ನು ಆಯುಕ್ತರು ಪರಿಗಣಿ ಸುತ್ತಿಲ್ಲ. ವಾರ್ಡ್‌ಗಳಲ್ಲಿ ಸಂಚರಿಸಿದರೂ ಮಾಹಿತಿ ನೀಡಲ್ಲ. ನಾವು ಹೇಳಿದ ಸಮಸ್ಯೆಗೆ ಸ್ಪಂದಿಸಲ್ಲ. ತಮ್ಮನ್ನು ಭೇಟಿ ಯಾಗಿ ದೂರು ನೀಡುವ ಜನರಿಗೆ ಸ್ಪಂದಿಸುತ್ತಾರೆ. ನಾವೂ ಹೇಳೋದು ಜನರ ಸಮಸ್ಯೆಗಳನ್ನು. ಆಯುಕ್ತರ ಈ ವರ್ತನೆಯಿಂದ ಜನರಿಂದ ಮುಜುಗರ ಕ್ಕೀಡಾಗುವ ಸನ್ನಿವೇಶ ನಿರ್ಮಾಣ ಗೊಂಡಿದೆ’ ಎಂದು ಸದಸ್ಯ ರವೀಂದ್ರ ಲೋಣಿ ದೂರಿದರು.
 
‘ಗಚ್ಚಿನಕಟ್ಟಿ ಕಾಲೊನಿಯ ಪ್ರಮುಖ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಸಂದರ್ಭ ಸ್ಥಳೀಯ ಸದಸ್ಯನಾದ ನನಗೆ ಮಾಹಿತಿ ನೀಡಿಲ್ಲ. ಪ್ರಮುಖ ಬಿಎಲ್‌ಡಿಇ ರಸ್ತೆಯೇ 60, 50, 40 ಅಡಿಯಿದೆ. ಯಾವುದೇ ಕಾರಣಕ್ಕೂ ಗಚ್ಚಿನಕಟ್ಟಿ ರಸ್ತೆ 80 ಅಡಿ ಅಭಿವೃದ್ಧಿ ಬೇಡ. ಪ್ರಭಾವಿಗಳ ಬಡಾವಣೆಯಲ್ಲಿ 40 ಅಡಿ. ಬಡವರ ಬಡಾವಣೆಯಲ್ಲಿ 80 ಅಡಿ ಬೇಡವೇ ಬೇಡ’ ಎಂದರು.
 
ಕಾನೂನು ಎಲ್ಲದಕ್ಕಿಂತ ದೊಡ್ಡದು. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಮಂಡಳಿಯೇ ಸುಪ್ರೀಂ. ಈ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಲೋಣಿ ಆಕ್ಷೇಪಕ್ಕೆ ಉಳಿದ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ಆಯುಕ್ತರು ಸದಸ್ಯರ ಗಮನಕ್ಕೆ ತಂದು ಅಭಿವೃದ್ಧಿ ಕಾಮಗಾರಿ ನಡೆಸಲು ಅಭ್ಯಂತರವಿಲ್ಲ ಎಂದು ಹೇಳಿದರು.
 
ಈ ಮಾತಿಗೆ ಉತ್ತರಿಸಿದ ಆಯುಕ್ತ ಹರ್ಷಶೆಟ್ಟಿ, ‘ಎರಡೂವರೆ ವರ್ಷದ ಹಿಂದೆ ಸಚಿವರು ನಗರ ಸಂಚಾರ ನಡೆಸಿದ ಸಂದರ್ಭ ಮೂರು ಪ್ರಮುಖ ರಸ್ತೆಗಳ ಬಳಿಕ ಗಚ್ಚಿನಕಟ್ಟಿ ಕಾಲೊನಿ ರಸ್ತೆ ಅಭಿವೃದ್ಧಿಪಡಿಸುವಂತೆ ಸೂಚಿಸಿದ್ದರು. ಟೌನ್‌ ಪ್ಲಾನಿಂಗ್ ಅಥಾರಿಟಿಯಿದ್ದ ಸಂದರ್ಭ ನಿರ್ಮಾಣಗೊಂಡಿರುವ ಬಡಾವಣೆಯ ಯಾವ ನಿವಾಸ ತೆರವು ಗೊಳಿಸಲ್ಲ. ಇಲ್ಲಿ ದೊಡ್ಡವರೇ 10–20 ಅಡಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಅವರನ್ನು ಮಾತ್ರ ತೆರವುಗೊಳಿಸುವುದು’ ಎಂದು ಉತ್ತರಿಸಿದ್ದಕ್ಕೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.
 
ಈ ಸಂದರ್ಭ ವಿಜಯಕುಮಾರ ಮಂಗಳವೇಡೆ, ‘ಇಂತಹ ಸೂಕ್ಷ್ಮ ಸಂದರ್ಭದಲ್ಲಿ ವಾರ್ಡ್‌ ಸದಸ್ಯನನ್ನು ಪರಿಗಣಿಸದಿರುವುದು ನಿಮ್ಮ ಲೋಪ’ ಎಂದು ಆಕ್ಷೇಪಿಸಿದರು. ಉಪ ಮೇಯರ್‌ ಗೋಪಾಲ ಘಟಕಾಂಬ್ಳೆ ಇನ್ಮುಂದೆ ಎಲ್ಲ ಸದಸ್ಯರನ್ನು ಪರಿಗಣಿಸಿ ಎಂದು ಆಯುಕ್ತರಿಗೆ ಸೂಚಿಸಿದರು.
 
‘ಪಾಲಿಕೆಯ ಸ್ಥಿರ ಆದಾಯದಿಂದ ಬಂದ ₹ 13 ಕೋಟಿ ಮೊತ್ತ ಏನಾಯ್ತು? ಲೆಕ್ಕ ತೋರಿಸಿ. ಇದು ಆದಾಯ ವೃದ್ಧಿಗೆ ಬಳಸಬೇಕಿದ್ದ ಹಣ. ಕಾಮಗಾರಿ ಹೆಸರಿನಲ್ಲಿ ನಗರದ ಜನರಿಗೆ ಮೋಸ ಮಾಡಿ, ಹಗಲು ವೇಳೆಯಲ್ಲೇ ದರೋಡೆ ಎಸಗಲಾಗುತ್ತಿದೆ’ ಎಂದು ಸದಸ್ಯ ವಿಜಯಕುಮಾರ ಮಂಗಳವೇಡೆ ಹೇಳು ತ್ತಿದ್ದಂತೆ,  ಸದಸ್ಯ ಮೈನು ‘ಎಂಎಲ್‌ಎ ಪಿಎ ಕಾಮಗಾರಿ ಮಾಡಬಾರದು ಎಂಬ ರೂಲ್ಸ್‌ ಇದೆಯಾ’ ಎಂದು ಮರು ಪ್ರಶ್ನಿಸಿದರು.
 
ಇದಕ್ಕೆ ಉತ್ತರಿಸಿದ ಆಯುಕ್ತ ಹರ್ಷಶೆಟ್ಟಿ, ‘ಸರ್ಕಾರದ ಸುತ್ತೋಲೆ ಪ್ರಕಾರ ಬೃಹತ್ ಕಾಮಗಾರಿಗೆ ಮೊತ್ತ ಬಳಸಲಾಗಿದೆ. ₹ 11 ಕೋಟಿ ಮೊತ್ತ ₹ 2 ಕೋಟಿ ಬಡ್ಡಿ ಸೇರಿ ₹ 13 ಕೋಟಿಯಷ್ಟಾಗಿತ್ತು. ತಲಾ ₹ 3.5 ಕೋಟಿಯಂತೆ ಎರಡು ಬಾರಿ ಬೃಹತ್ ಕಾಮಗಾರಿಗೆ ₹ 7 ಕೋಟಿ ಬಳಸಲಾಗಿದೆ. ಇದೀಗ ₹ 2 ಕೋಟಿ ಪೂರ್ಣಗೊಂಡ ಕಾಮಗಾರಿಗೆ ಪಾವತಿಸಬೇಕು. ಉಳಿದ ₹ 4 ಕೋಟಿ ಮೊತ್ತವನ್ನು ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಗೆ ಬಳಸಲು ಸಾಮಾನ್ಯ ಸಭೆ ಅನುಮತಿ ನೀಡಬೇಕು’ ಎಂದು ಹೇಳಿದರು.
 
‘ಇದು ಹಿಂದಿನ ಸಭೆಯಲ್ಲೇ ನಿರ್ಧಾರವಾಗಿತ್ತು. ನೀವು ಮರೆತಿರಬಹುದು’ ಎಂದು ಹರ್ಷಶೆಟ್ಟಿ ಉತ್ತರಿಸಿದ್ದಕ್ಕೆ, ಮಂಗಳವೇಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ನನಗೆ ಎಲ್ಲ ನೆನಪಿದೆ. ನಾನು ಹಿಂದಿನ ಸಭೆಯಲ್ಲಿ ಇದೇ ಲೆಕ್ಕಾಚಾರ ಹೇಳಿದ್ದೇ. ನಾನು ಹೇಳಿದ್ದೇ ಖರೆ ಎನ್ನಿ. ನಾನು ಸಮ್ಮುನಾಗುವೆ’ ಎಂದು ಕುಳಿತರು.
 
* ಗಚ್ಚಿನಕಟ್ಟಿ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವಿಷಯವನ್ನು  ಪಾಲಿಕೆಯ ಯಾವೊಬ್ಬ ಅಧಿಕಾರಿ ನನ್ನ ಗಮನಕ್ಕೆ ತಂದಿಲ್ಲ
ರವೀಂದ್ರ ಲೋಣಿ, ಪಕ್ಷೇತರ ಸದಸ್ಯ
 
* ಸದಸ್ಯರ ಆಕ್ಷೇಪಗಳು ಮುಗಿದ ಬಳಿಕ ಎಲ್ಲವಕ್ಕೂ ನಾನು ಉತ್ತರಿಸುವೆ. ಹತ್ತಲ್ಲ ಹನ್ನೊಂದು ಬಾರಿ ಹೇಳುವೆ
ಹರ್ಷಶೆಟ್ಟಿ, ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT