ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಅರಸಿ ಹುಬ್ಬಳ್ಳಿಯತ್ತ ಹಳ್ಳಿ ಜನ

ಖಾತರಿಯಾಗದ ಉದ್ಯೋಗ; ಬರದಿಂದ ಬಿಗಡಾಯಿಸಿದ ಕೂಲಿಕಾರ್ಮಿಕರ ಜೀವನಸ್ಥಿತಿ
Last Updated 18 ಫೆಬ್ರುವರಿ 2017, 9:56 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಹುಬ್ಬಳ್ಳಿಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡತೊಡಗಿದ್ದಾರೆ.
 
‘ಹೊಲದಲ್ಲಿ ಕೆಲಸವೂ ಇಲ್ಲ. ಉದ್ಯೋಗ ಖಾತರಿ ಕೆಲಸವೂ ಸರಿಯಾಗಿ ಸಿಗುತ್ತಿಲ್ಲ. ದುಡಿಮೆ ಇಲ್ಲದೇ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಮನೆಯಲ್ಲಿ ಸುಮ್ಮನೆ ಕೂರಲು ಆಗದೇ ಕೂಲಿ ಕೆಲಸ ಹುಡುಕಿಕೊಂಡು ಹುಬ್ಬಳ್ಳಿಗೆ ಹೋಗುತ್ತೇವೆ’ ಎಂದು ಕಲಘಟಗಿ ತಾಲ್ಲೂಕಿನ ಉಗ್ನಕೇರಿ ಗ್ರಾಮದ ಬಸವರಾಜ ಪೊರವರ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಹುಬ್ಬಳ್ಳಿಯಲ್ಲಿ ಗೌಂಡಿ ಕೆಲಸ ಸಿಗುತ್ತಿದೆ. ಆದರೆ, ನೋಟು ರದ್ದುಗೊಂಡ ಬಳಿಕ ವಾರ ಪೂರ್ತಿ ಕೆಲಸ ಸಿಗುತ್ತಿಲ್ಲ. ಒಂದೆರಡು ದಿನ ಕೆಲಸ ಸಿಗುತ್ತಿದೆ. ಪ್ರತಿ ದಿನ ಬೆಳಿಗ್ಗೆ ಮನೆಯಿಂದ ಬುತ್ತಿಕಟ್ಟಿಕೊಂಡು ಹುಬ್ಬಳ್ಳಿಗೆ ಹೋಗುತ್ತೇವೆ. ಕೆಲಸ ಸಿಗದಿದ್ದರೆ ನಿರಾಸೆಯಿಂದ ಬರಿಗೈಯಲ್ಲಿ ಮನೆಗೆ ಮರಳುತ್ತೇವೆ’ ಎಂದು ಹೇಳಿದರು.
 
ಕೃಷಿಕೂಲಿ ಕಾರ್ಮಿಕರು ಹುಬ್ಬಳ್ಳಿಯಲ್ಲಿ ಗೌಂಡಿ ಮತ್ತಿತರರ ಕೆಲಸವನ್ನು ಹುಡುಕಿಕೊಂಡು ಒಂದಷ್ಟು ನಿರಾಳವಾಗುತ್ತಿದ್ದಾರೆ. ಆದರೆ, ಹೊಲವಿರುವ ಕೃಷಿಕರ ಪರಿಸ್ಥಿತಿ ಇದೀಗ ಬಿಗಡಾಯಿಸಿದೆ. ತಮ್ಮ ಹೊಲದಲ್ಲೂ ಕೆಲಸವಿಲ್ಲ. ಬೇರೆ ರೈತರ ಹೊಲದಲ್ಲೂ ಕೆಲಸವಿಲ್ಲ. ಕೆಲಸವರಸಿ ಹುಬ್ಬಳ್ಳಿಗೆ ಹೋಗುವ ಮನಸ್ಥಿತಿ ಇಲ್ಲದೇ ಕಂಗೆಟ್ಟಿದ್ದಾರೆ.
 
ಹುಬ್ಬಳ್ಳಿ ನಗರ ಮಾತ್ರವಲ್ಲದೇ  ಗೋವಾ, ಮಂಗಳೂರು, ಉಡುಪಿಯತ್ತಲೂ ಕೂಲಿ ಅರಸಿ ಗುಳೆಹೋಗುವವರ ಸಂಖ್ಯೆ 2 ವರ್ಷಗಳಿಂದ ಹೆಚ್ಚಾಗಿದೆ.
ಕಾರ್ಮಿಕರ ದಟ್ಟಣೆ: ಸುತ್ತಲಿನ ಹಳ್ಳಿಗಳ ಕೂಲಿಕಾರ್ಮಿಕರು ಕೆಲಸ ಅರಸಿ ಹುಬ್ಬಳ್ಳಿಗೆ ಬರುವುದು ಸಾಮಾನ್ಯವಾಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಇವರ ಸಂಖ್ಯೆ ದುಪ್ಪಟ್ಟಾಗಿದೆ. 
 
ಕುಂದಗೋಳ, ಅಣ್ಣಿಗೇರಿ, ನವಲಗುಂದ, ಕಲಘಟಗಿ ಸೇರಿದಂತೆ ಆಸುಪಾಸು ಜಿಲ್ಲೆಗಳಿಂದಲೂ ಕೂಲಿ ಕೆಲಸ ಅರಸಿ ಹುಬ್ಬಳ್ಳಿಗೆ ಬರುವ ಕೂಲಿಕಾರ್ಮಿಕರು ಇಲ್ಲಿನ ರೈಲು ನಿಲ್ದಾಣದ ಮುಂಭಾಗ ಬೆಳಿಗ್ಗೆ 7ರಿಂದ 10 ರವರೆಗೆ ಕೂಲಿಕೆಲಸಕ್ಕಾಗಿ ಕಾದುಕುಳಿತಿರುವ ದೃಶ್ಯ ನಿತ್ಯ ಕಂಡುಬರುತ್ತದೆ.  ಕಟ್ಟಡ ನಿರ್ಮಾಣ ಮತ್ತಿತರರ ಕೂಲಿ ಕೆಲಸಗಳಿಗೆ ಕಾರ್ಮಿಕರನ್ನು ಗುತ್ತಿಗೆದಾರರು ಇಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಆದರೆ, ಎರಡು ತಿಂಗಳಿಂದ ಈಚೆಗೆ ಕೂಲಿ ಕೆಲಸ ಅರಸಿ ಬರುವವರ ಸಂಖ್ಯೆ ಅಧಿಕವಾಗಿರುವುದರಿಂದ ಅರ್ಧಕ್ಕೂ ಅಧಿಕ ಜನರು ಕೆಲಸ ಸಿಗದೇ ಬರಿಗೈಯಲ್ಲಿ ಮನೆಗೆ ಮರಳುವ ಸ್ಥಿತಿ ನಿರ್ಮಾಣವಾಗಿದೆ.
 
ವಾರದಲ್ಲಿ ಮೂರರಿಂದ ನಾಲ್ಕು ದಿನ ಕೆಲಸ ಸಿಗುವುದು ದುಸ್ತರವಾಗಿದೆ ಎನ್ನುತ್ತಾರೆ ಕುಂದಗೋಳದ ಕೂಲಿಕಾರ್ಮಿಕ ಸಂಗಪ್ಪ ಕಲಹಾಳ. ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ಗುತ್ತಿಗೆದಾರರು ಕೆಲಸ ಮುಗಿದ ಮೇಲೆ ಕಡಿಮೆ ಕೂಲಿ ಕೊಡುತ್ತಾರೆ. ಇವರನ್ನು ಪ್ರಶ್ನಿಸಲು ನಮ್ಮಿಂದ ಆಗುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
- ಬಸವರಾಜ್ ಸಂಪಳ್ಳಿ
 
ಎನ್‌ಆರ್‌ಇಜಿಗೆ ಇಲ್ಲ ಬೇಡಿಕೆ!: ಜಿಲ್ಲೆಯಲ್ಲಿ 1,26,806 ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ ಕಾರ್ಡ್‌ ವಿತರಣೆ ಮಾಡಲಾಗಿದೆ. ಇದರಲ್ಲಿ 47,970 ಕೂಲಿಕಾರ್ಮಿಕರಿಂದ ಉದ್ಯೋಗಕ್ಕೆ ಬೇಡಿಕೆ ಇದ್ದು, 35,600 ಜನರಿಗೆ ಕೆಲಸ ನೀಡಲಾಗಿದೆ. 
 
ಸದ್ಯ 24,416 ಎನ್‌ಆರ್‌ಇಜಿ ಕಾಮಗಾರಿಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಗೆ ಅಷ್ಟೊಂದು ಬೇಡಿಕೆ ಇಲ್ಲ ಎಂದು ಜಿಲ್ಲೆಗೆ ಈಚೆಗೆ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲಾಡಳಿತ ವರದಿ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT