ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿವು, ಅರಿವಿನಿಂದ ಮಾನವ ವಿಕಾಸ’

ಹಾನಗಲ್‌ ಕುಮಾರ ಶಿವಯೋಗಿಗಳ 87ನೇ ಪುಣ್ಯಸ್ಮರಣೋತ್ಸವ: ವಿವಿಧ ಮಠಾಧೀಶರು ಭಾಗಿ
Last Updated 18 ಫೆಬ್ರುವರಿ 2017, 10:27 IST
ಅಕ್ಷರ ಗಾತ್ರ
ಹಾನಗಲ್: ‘ಸಮಾಜ ತಿದ್ದುವುದಲ್ಲದೆ, ಸಮಾಜವನ್ನು ತಿದ್ದುವ ಧರ್ಮಗುರುಗಳನ್ನು ರೂಪಿಸುವ ಶಿವಯೋಗ ಮಂದಿರ ಸ್ಥಾಪಿಸಿದ ಹಾನಗಲ್‌ ಕುಮಾರ ಶಿವಯೋಗಿಗಳು ಸಮಾಜಮುಖಿ ಚಿಂತಕರಾಗಿದ್ದರು’ ಎಂದು ಮುಂಡರಗಿ ಸಂಸ್ಥಾನಮಠದ ಅನ್ನದಾನೀಶ್ವರ ಸ್ವಾಮೀಜಿ ಬಣ್ಣಿಸಿದರು.
 
ಇಲ್ಲಿನ ವಿರಕ್ತಮಠದಲ್ಲಿ ನಡೆಯುತ್ತಿರುವ ಹಾನಗಲ್‌ ಕುಮಾರ ಶಿವಯೋಗಿಗಳ 87ನೇ ಪುಣ್ಯಸ್ಮರಣೋತ್ಸವದ ಮೊದಲ ದಿನವಾದ ಗುರುವಾರ ಸಂಜೆ ನಡೆದ ಧಾರ್ಮಿಕ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
 
‘ಕುಮಾರ ಶಿವಯೋಗಿಗಳ ನಿರಾಡಂಬರ ಜೀವನವೇ ಅಪರೂಪದ ಆದರ್ಶಗಳ ಕಣಜ. ಎಲ್ಲ ರಂಗಗಳಲ್ಲಿಯೂ ಸಮಾಜಮುಖಿ ಸೇವೆ ಕೈಗೊಂಡ ಅವರು ಚಿಕಿತ್ಸಕ ಬುದ್ಧಿಯವರಾಗಿದ್ದರು’ ಎಂದರು.
 
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಹಸಿವು, ಅರಿವು ಮತ್ತು ಮರೆವು ಮನುಷ್ಯನಲ್ಲಿರುವ ಕಾರಣ ವಿಕಾಸದತ್ತ ಮುನ್ನಡೆಯಲು ಸಾಧ್ಯವಾ ಗುತ್ತಿದೆ. ವ್ಯಕ್ತಿಯಲ್ಲಿನ ಅಂತರ್ಗತ ಶಕ್ತಿಯೇ ಜಗತ್ತಿನಲ್ಲಿ ಘಟಿಸುವ ಬದಲಾವಣೆಗಳಿಗೆ ಮುಖ್ಯ ಕಾರಣ. ಅನುಭವವನ್ನು ಅನುಭಾವಿ ಯಾಗಿ ಸಮಾಜಕ್ಕೆ ಸಮರ್ಪಿಸಿಕೊಳ್ಳುವುದೇ ನಿಜವಾದ ಸಾಧನೆ’ ಎಂದರು.
 
ಸಹಕಾರ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಸಿ.ಸೋಮಶೇಖರ ಮಾತ ನಾಡಿ, ‘ಅಹಂಕಾರ ಬದಿಗಿಟ್ಟು ಸಮಾಜ ಸೇವೆಯಲ್ಲಿ ಸಂತೃಪ್ತಿ ಕಂಡ ಹಾನಗಲ್‌ ಕುಮಾರ ಶಿವಯೋಗಿಗಳು ಪುಣ್ಯದ ಕಾರ್ಯಕ್ಕಾಗಿ ಅವತರಿಸಿದ್ದ ಮಹಾತ್ಮ’ ಎಂದರು.
 
ಸಾಹಿತಿ ಭಾವನಾ ಮಾತನಾಡಿ, ‘ನಮ್ಮ ಹೆಸರಿನಲ್ಲಿ ಅಕ್ಷರಗಳಿದ್ದರೆ ಸಾಲದು, ಹೆಸರಿನಲ್ಲಿ ಇತಿಹಾಸ ರೂಪಗೊಳ್ಳಬೇಕು’ ಎಂದರು.ಪುಣ್ಯ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಸಿ.ಎಂ.ಉದಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಕೂಡಲ ಗುರುನಂಜೇಶ್ವರ ಮಠದ ಗುರು ಮಹೇಶ್ವರ ಸ್ವಾಮೀಜಿ ವೇದಿಕೆಯಲ್ಲಿದ್ದರು.
 
ಹನುಮನಹಳ್ಳಿ ಸಾವಯವ ಕೃಷಿಕ ಯಲ್ಲಪ್ಪ ರಾಮಜೀ ಮತ್ತು ವಿರೇಶ್ವರ ಪುಣ್ಯಾಶ್ರಮದ ವೀರಯ್ಯ ಹಿರೇಮಠ ಅವರಿಗೆ ದತ್ತಿ ಸನ್ಮಾನ ಮಾಡಲಾಯಿತು. 
ವೀರೇಶ್ವರ ಪುಣ್ಯಾಶ್ರಮದ ಶಿವ ಬಸಯ್ಯ ಗಡ್ಡದಮಠ ಮತ್ತು ಸಂಗಡಿಗರು ಸಂಗೀತ ಸೇವೆ ನಡೆಸಿಕೊಟ್ಟರು.
 
* ಶರಣರ ಪುಣ್ಯ ಸ್ಮರಣೋತ್ಸವಗಳು ಭಕ್ತರಿಗೆ ಪುಣ್ಯ ಪ್ರಾಪ್ತಿಯ ಉತ್ಸವಗಳಾಗಬೇಕು
-ಬಸವರಾಜ ಬೊಮ್ಮಾಯಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT