ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತದಲ್ಲಿ ಕನ್ನಡ ಕಡ್ಡಾಯ

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 18 ಫೆಬ್ರುವರಿ 2017, 10:36 IST
ಅಕ್ಷರ ಗಾತ್ರ
ಬೆಳಗಾವಿ: ಸರ್ಕಾರಿ ಕಚೇರಿಯ ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್. ಜಯರಾಮ್ ಸೂಚನೆ ನೀಡಿದ್ದಾರೆ.
 
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
ಜಿಲ್ಲೆಯ ನಿಪ್ಪಾಣಿ, ಖಾನಾಪುರ ಹಾಗೂ ಚಿಕ್ಕೋಡಿ ಸುತ್ತಮುತ್ತಲ ಕೆಲ ಪ್ರದೇಶಗಳಲ್ಲಿ ಬಹುತೇಕ ಅಂಗಡಿಗಳ ನಾಮಫಲಕಗಳು ಕನ್ನಡದಲ್ಲಿ ಇಲ್ಲದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಕನ್ನಡದಲ್ಲಿ ಫಲಕಗಳನ್ನು ಹಾಕಿಸುವಂತೆ ಜನರ ಮನವೊಲಿಸಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
 
ಮೊದಲು ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು. ನಂತರ ಸ್ಥಳೀಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೂ ಫಲಕಗಳನ್ನು ಬರೆಸಬಹುದು ಎಂದು ತಿಳಿಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಕಲಾಗುವ ಜಾಹೀರಾತು ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಅನ್ಯ ಭಾಷಿಕರ ಹಿತರಕ್ಷಣೆ: ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಪ್ರತಿಯೊಂದು ವ್ಯವಹಾರವು ಕನ್ನಡದಲ್ಲಿಯೇ ನಡೆಯತಕ್ಕದ್ದು. ಆದರೆ ಸ್ಥಳೀಯವಾಗಿರುವ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ ದೃಷ್ಟಿಯಿಂದ ಅವರವರ ಭಾಷೆಯಲ್ಲೂ ಅವರಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಜಯರಾಮ್ ತಿಳಿಸಿದರು.
 
ಕೇಂದ್ರ ಸರ್ಕಾರದ ಜತೆಗಿನ ಪತ್ರ ವ್ಯವಹಾರ ಹಾಗೂ ಕೆಲ ಇಲಾಖೆಗಳಲ್ಲಿ ತಾಂತ್ರಿಕ ಕಾರಣಕ್ಕೆ ಇಂಗ್ಲಿಷ್ ಬಳಸುತ್ತಿರುವುದನ್ನು ಹೊರತುಪಡಿಸಿದರೆ ಇತರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡವನ್ನು ಬಳಸಬೇಕು ಎಂದು ಸ್ಪಷ್ಟಪಡಿಸಿದರು.
 
ಕನ್ನಡ ಜಾಗೃತ ಸಮಿತಿಯ ಅಧಿಕಾರೇತರ ಸದಸ್ಯರಾದ ರಾಜೀವ ಟೋಪಣ್ಣವರ  ಮಾತನಾಡಿ, ಸರ್ಕಾರದ ಎಲ್ಲ ಕಚೇರಿಗಳಲ್ಲೂ ಗಣಕೀಕೃತ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಏಕರೂಪದ ಫಾಂಟ್ (ಅಕ್ಷರ ಮಾದರಿ) ಜಾರಿಗೆ ತರುವುದು ಸೂಕ್ತ ಎಂದು ಸಲಹೆ ನೀಡಿದರು.
ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಲು ನಾಡ-ನುಡಿಯ ಹಿರಿಮೆ ಸಾರುವಂತಹ ಉತ್ಸವಗಳನ್ನು ಪ್ರತಿವರ್ಷ ಆಯೋಜಿಸುವಂತಾಗಬೇಕು ಎಂದರು.
 
ಸಮಿತಿಯ ಇನ್ನೋರ್ವ ಸದಸ್ಯ ಹಾಗೂ ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ಮಾತನಾಡಿ, ಕನ್ನಡ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಇನ್ನಷ್ಟು ಕಾಳಜಿ ವಹಿಸಬೇಕು ಎಂದರು.
 
ಬೆಳಗಾವಿಯಲ್ಲಿ ಮತ್ತೊಮ್ಮೆ ವಿಶ್ವಕನ್ನಡ ಸಮ್ಮೇಳನ ಆಯೋಜಿಸಬೇಕು,  ಹೆದ್ದಾರಿಯ ಟೋಲ್‌ಗೇಟ್‌ಗಳಲ್ಲಿ ನೀಡುವ ರಸೀದಿಯನ್ನು ಕನ್ನಡದಲ್ಲಿ ಮುದ್ರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 
ಇದಕ್ಕೆ ಸಕಾರತ್ಮಕವಾಗಿ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ಸಮಿತಿಯ ಸದಸ್ಯರ ಸಲಹೆ ಹಾಗೂ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
 
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಉಪ ವಿಭಾಗಾಧಿಕಾರಿ ರಾಜಶ್ರೀ ಜೈನಾಪುರೆ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ವೈ.ಹಳಿಂಗಳಿ, ಕೃಷಿ ಇಲಾಖೆಯ ಉಪನಿರ್ದೇಶಕ ಎಚ್.ಡಿ.ಕೋಳೆಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT