ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳವಡಿ ಮಲ್ಲಮ್ಮನ ಉತ್ಸವ 28ರಿಂದ

ಎರಡು ದಿನಗಳ ಆಚರಣೆ; ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸರ್ಕಾರದಿಂದ ₹ 30 ಲಕ್ಷ ಅನುದಾನ
Last Updated 18 ಫೆಬ್ರುವರಿ 2017, 10:42 IST
ಅಕ್ಷರ ಗಾತ್ರ
ಬೈಲಹೊಂಗಲ: ಇದೇ 28 ಮತ್ತು ಮಾರ್ಚ್ 1ರಂದು ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವವನ್ನು ಜಿಲ್ಲಾಡಳಿತದ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ.
 
ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಸ್ಮಾರಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಬೆಳವಡಿ ಮಲ್ಲಮ್ಮನ ಉತ್ಸವ ಕುರಿತು ಶುಕ್ರವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
ರಾಜ್ಯ ಸರ್ಕಾರದಿಂದ ₹ 30 ಲಕ್ಷ ಅನುದಾನದಲ್ಲಿ ಮಲ್ಲಮ್ಮನ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಿಳಿಸಿದರು.
‘ಎರಡು ದಿನದ ಉತ್ಸವದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ, ದೇಶಿಯ ಕ್ರೀಡೆಗಳ ಪ್ರದರ್ಶನ, ಮನರಂಜನೆ ನಡೆಯಲಿವೆ. ನಾಡಿನ ಜನರು ಶ್ರದ್ಧೆ, ಭಕ್ತಿ, ಶಿಸ್ತಿನಿಂದ ಪಾಲ್ಗೊಂಡು ಅರ್ಥಪೂರ್ಣವಾಗಿ ಉತ್ಸವ ನಡೆಯುವಂತೆ ನೋಡಿಕೊಳ್ಳಬೇಕು. ಉತ್ಸವ ಬರಿ ಸರ್ಕಾರಿ ಕಾರ್ಯಕ್ರಮ ಆಗದೆ ಜನರ ಸಹಭಾಗಿತ್ವದಲ್ಲಿ  ಯಶಸ್ವಿಗೊಳಿಸುವದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು. 
 
ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಜಗತ್ತಿನಲ್ಲಿಯೇ ಮೊದಲ ಮಹಿಳಾ ಸೈನ್ಯ ಸ್ಥಾಪಿಸಿ ವೈರಿಗಳೊಂದಿಗೆ ವೀರ ಹೋರಾಟ ನಡೆಸಿದ ಬೆಳವಡಿ ಸಂಸ್ಥಾನದ ರಾಣಿ ಮಲ್ಲಮ್ಮಳ ಸವಿನೆನಪಿಗಾಗಿ ನಡೆಯುವ ಉತ್ಸವದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಶೋಭೆ ತಂದು ಕೊಡಬೇಕು. ಉತ್‍ಸವ ನಡೆಸಲು ದಾನಿಗಳು ಕಾಯಂ ಜಾಗ ನೀಡಿದರೆ ಸರ್ಕಾರದಿಂದ ಅದನ್ನು ಖರೀದಿಸಿ, ಸ್ಮಾರಕ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
 
ಸಾಹಿತಿ ಯ.ರು. ಪಾಟೀಲ ಮಾತನಾಡಿ, ಮಲ್ಲಮ್ಮನ ಉತ್ಸವದಲ್ಲಿ ಯಾವುದೇ ಕಾರಣಕ್ಕೂ ವಿಚಾರಗೋಷ್ಠಿ ಕೈ ಬಿಡಬಾರದು. ವಿಚಾರ ಗೋಷ್ಠಿ ನಡೆಸುವ ಮೂಲಕ ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸುವ ಕೆಲಸ  ಮಾಡಬೇಕು. ಖ್ಯಾತ ವಿದ್ವಾಂಸರನ್ನು, ಸಾಹಿತಿಗಳನ್ನು, ಚಿಂತಕರನ್ನು ಉತ್ಸವಕ್ಕೆ ಮುಂಚಿತವಾಗಿ ಆಹ್ವಾನಿಸಿ ವಿಚಾರಗೋಷ್ಠಿ ನಡೆಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಸಲಹೆ ನೀಡಿದರು.
 
ಹಿರಿಯರಾದ ರಾಚಪ್ಪ ಕರೀಕಟ್ಟಿ, ಶಂಕರ ಕರೀಕಟ್ಟಿ, ಪ್ರಕಾಶ ಹುಂಬಿ, ವಿಠ್ಠಲ ಪಿಸೆ, ಮಹಾರುದ್ರಪ್ಪ ನೆಲ್ಲಿಗಣಿ ಮಾತನಾಡಿ, ಮಲ್ಲಮ್ಮನ ಉತ್ಸವವನ್ನು ಕಾಟಾಚಾರಕ್ಕೆ ಮಾಡಬಾರದು. ಸ್ಥಳೀಯರಿಗೆ ಆದ್ಯತೆ ನೀಡಬೇಕು. ಕ್ರೀಡಾಪಟುಗಳಿಗೆ ಯೋಗ್ಯ ಬಹುಮಾನ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
 
ಹಿರಿಯ ಸಾಹಿತಿ, ಚಿಂತಕರನ್ನು ಕರೆಯಿಸಿ ವಿಚಾರಗೋಷ್ಠಿ ನಡೆಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಸಬೇಕು. ಗ್ರಾಮದ ಸರ್ಕಾರಿ ವೈದ್ಯರಾದ ಡಾ.ಮಹೇಶ್ವರಿ ಹಿರೇಮಠ ಅವರಿಗೆ ಮಲ್ಲಮ್ಮನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒಕ್ಕೂರಲಿನಿಂದ ಆಗ್ರಹಿಸಿದರು. 
ರಾಜ್ಯ, ದೇಶಮಟ್ಟದಲ್ಲಿ ಮಲ್ಲಮ್ಮನ ಕುರಿತು ಪ್ರಚಾರ, ಮಲ್ಲಮ್ಮನ ಜ್ಯೋತಿಯಾತ್ರೆ ಸೇರಿದಂತೆ ಸಾಕಷ್ಟು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
 
ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ ಕರೀಕಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಉಪಾಧ್ಯಕ್ಷ ಬಸನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಈರವ್ವಾ ತಳವಾರ, ಉಪಾಧ್ಯಕ್ಷೆ ಕಸ್ತೂರೆವ್ವಾ ರೇಶ್ಮಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅಮೃತಾ ಕಕ್ಕಯ್ಯನವರ ವೇದಿಕೆಯಲ್ಲಿ ಇದ್ದರು.
 
ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಹಿರಿಯರಾದ ಎಂ.ಎಂ.ಕಾಡೇಶನವರ, ಮಡ್ಡೆಪ್ಪ ಹುಂಬಿ, ಬಾಳಪ್ಪ ಚವರದ, ಸಿದ್ದಪ್ಪ ಸಿದ್ದನ್ನವರ, ಗಂಗಪ್ಪ ತುರಾಯಿ, ಲಕ್ಷ್ಮಣ ಸಾಲಹಳ್ಳಿ, ರಫೀಖ ಹಜರತಿ, ಫಕೀರಗೌಡ ಪಾಟೀಲ ಇದ್ದರು. ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು. ಶಿಕ್ಷಕ ಎಂ.ಪಿ,ಉಪ್ಪಿನ ನಿರೂಪಿಸಿದರು. ತಹಶೀಲ್ದಾರ್ ಪ್ರಕಾಶ ಗಾಯಕವಾಡ ವಂದಿಸಿದರು. 
 
* ಉತ್ಸವದಲ್ಲಿ ವಿವಿಧ ವಿಷಯಗಳ ಕುರಿತು ಗೋಷ್ಠಿ ನಡೆಸಿ ಮುಂದಿನ ಪೀಳಿಗೆಗೆ ಇತಿಹಾಸದ ಪರಿಚಯ ಮಾಡಿಕೊಡುವ ಕೆಲಸ ಆಗಬೇಕಾಗಿದೆ
- ಯ.ರು. ಪಾಟೀಲ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT