ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಇಒ ಸೂಚನೆಗೆ ತಾತ್ಕಾಲಿಕ ತಡೆ’

ನಿಯಮಾವಳಿ ಉಲ್ಲಂಘಿಸಿದ 34 ಇಂಗ್ಲಿಷ್ ಶಾಲೆಗಳಿಗೆ ಪರವಾನಗಿ ರದ್ದು ಪ್ರಕರಣ
Last Updated 18 ಫೆಬ್ರುವರಿ 2017, 11:09 IST
ಅಕ್ಷರ ಗಾತ್ರ
ಬಾಗಲಕೋಟೆ: ‘ಸಿಇಒ ಶಿಫಾರಸು ಮಾಡಿದ್ದರೂ ಈ ಶೈಕ್ಷಣಿಕ ವರ್ಷ ಮುಗಿಯುವವರೆಗೂ 34 ಇಂಗ್ಲಿಷ್ ಮಾಧ್ಯಮ ಶಾಲೆಗಳ ಮಾನ್ಯತೆ ರದ್ದು ಮಾಡುವುದಿಲ್ಲ. ಬದಲಿಗೆ ಮೂಲ ಸೌಕರ್ಯ ಹೊಂದಲು ಕಾಲಾವಕಾಶ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. 
 
ನಿಯಮಾವಳಿ ಉಲ್ಲಂಘಿಸಿ ಪರವಾನಗಿ ನೀಡಿದ 34 ಶಾಲೆಗಳ ಮಾನ್ಯತೆ ರದ್ದು ಮಾಡುವಂತೆ ಡಿಡಿಪಿಐಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ ಬರೆದಿರುವ ಪತ್ರದ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ಅವರು ಉತ್ತರಿಸಿದರು.
 
ಈಗ ಶಾಲೆಗಳ ಮಾನ್ಯತೆ ರದ್ದು ಮಾಡಿದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ಕಾಲಾವಕಾಶ ನೀಡಿ ನೋಟಿಸ್‌ ನೀಡಲಾಗುವುದು ಅದು ಪಾಲನೆಯಾಗದಿದ್ದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಆ ಶಾಲೆಯ ಮಾನ್ಯತೆ ರದ್ದುಪಡಿಸಲಾಗುವುದು ಎಂದರು.
ರದ್ದು ಮಾಡಲು ತನಿಖಾ ಸಮಿತಿ ಶಿಫಾರಸು ಮಾಡಿರುವ ಎಲ್ಲಾ ಶಾಲೆಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ ಎಂದು ವೀಣಾ ಸಭೆಗೆ ತಿಳಿಸಿದರು. 
 
ಅವಕಾಶ ಮಾಡಿಕೊಡಿ: ಅನುಸರಣಾ ವರದಿಯ ಮೇಲಿನ ಚರ್ಚೆಯ ವೇಳೆ ಈ ವಿಚಾರ ಪ್ರಸ್ತಾಪಿಸಿದ ಸದಸ್ಯೆ ಶಶಿಕಲಾ ಯಡಹಳ್ಳಿ, ‘ಹುಟ್ಟಿದ ತಕ್ಷಣ ಯಾರೂ ನಡೆಯುವುದು ಕಲಿಯುವುದಿಲ್ಲ. ಹಾಗೆಯೇ ಶಾಲೆಗಳು ಈ ವರ್ಷವಷ್ಟೇ ಆರಂಭವಾಗಿದ್ದು. ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ಅವರಿಗೂ ಅವಕಾಶ ಮಾಡಿಕೊಡಿ’ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಆಗ್ರಹಿಸಿದರು.
 
‘ಶಾಲೆಗಳ ಮಾನ್ಯತೆ ರದ್ದು ಮಾಡುವಂತೆ ಸಿಇಒ ಬರೆದಿರುವ ಪತ್ರದಲ್ಲಿ ರಾಜಕೀಯ ಕೈವಾಡ ಇದೆಯೇ’ ಎಂದು ಪ್ರಶ್ನಿಸಿದ ಅವರು, ‘ಶಿಕ್ಷಣ ಇಲಾಖೆಯ ವಿಚಾರದಲ್ಲಿ ಆಗುತ್ತಿರುವ ಕಾನೂನು ಪಾಲನೆ ಬೇರೆ ಇಲಾಖೆಗಳಲ್ಲೂ ಆಗುತ್ತಿದೆಯೇ. ಕಾನೂನು ಉಲ್ಲಂಘನೆ ಆರೋಪದ ಮೇಲೆ ಕ್ರಮ ಜರುಗಿಸುವುದಾದರೆ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಿ ’ ಎಂದು ಒತ್ತಾಯಿಸಿದರು.
 
‘ಇಂಗ್ಲಿಷ್‌ ಶಾಲೆಗಳ ಮಾನ್ಯತೆ ರದ್ದು ಮಾಡುವಂತೆ ಸಿಇಒ ಅವರು ಡಿಡಿಪಿಐಗೆ ಪತ್ರ ಬರೆಯುವುದಕ್ಕೆ ಮುನ್ನ ಆ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಶಾಲೆ ರದ್ಧತಿ ಮಾಡುವುದು ಬೇಡ. ಶಾಲೆ ನಡೆಸುವುದು ಸೇವಾ ಕ್ಷೇತ್ರ. ಹಾಗಾಗಿ ಅವರಿಗೆ ತೊಂದರೆ ಮಾಡುವುದು ಬೇಡ’ ಎಂದು ರೈತ ಸಂಘದ ಸದಸ್ಯರೂ ಆದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಸಲಹೆ ನೀಡಿ ಅಚ್ಚರಿ ಮೂಡಿಸಿದರು.
 
ಬೆದರಿಕೆ ಆರೋಪ: ಈ ವೇಳೆ ಮಧ್ಯಪ್ರವೇಶಿಸಿದ ಹೂವಪ್ಪ ರಾಠೋಡ, ‘ರದ್ದು ಮಾಡುವುದಾದರೆ ಎಲ್ಲಾ 137 ಶಾಲೆಗಳನ್ನು ರದ್ದು ಮಾಡಿ. ಕೇವಲ 34 ಶಾಲೆಗಳು ಮಾತ್ರ ಏಕೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಅವುಗಳಿಗೆ ಅನುಮತಿ ಹೇಗೆ ಕೊಟ್ಟರು. ಡಿಡಿಪಿಐ ನನಗೆ ಸಂಬಂಧಿಯೂ ಅಲ್ಲ. ವಿರೋಧಿಯೂ ಅಲ್ಲ.
 
ಶಿಕ್ಷಣ ಇಲಾಖೆಯಲ್ಲಿ ಆದ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರೆ ನನ್ನನ್ನು ಒಂದು ಸಮಾಜದ ವಿರುದ್ಧ ಎಂದು ಬಿಂಬಿಸಲಾಗುತ್ತಿದೆ. ಮನೆಗೆ ಬಂದು ಕಲ್ಲು ಹೊಡೆಯುವುದಾಗಿ ಬೆದರಿಸುತ್ತಾರೆ. ನನ್ನ ಮನೆಗೆ ಬಂದು ಗಲಾಟೆ ಮಾಡಿದವರಿಗೆ ಏನು ಉತ್ತರ ಕೊಡಲಿ. ಆಗ ಅನುಮತಿ ಕೊಟ್ಟಿದ್ದೇಕೆ. ಈಗ ರದ್ದು ಮಾಡುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.
 
ಸಿಇಒ ವರ್ಗಾವಣೆ ಯತ್ನ ನಡೆದಿದೆಯೇ?
 
34 ಶಾಲೆಗಳ ಮಾನ್ಯತೆ ರದ್ದು ವಿಚಾರದ ಚರ್ಚೆಯ ವೇಳೆ ಮಧ್ಯ ಪ್ರವೇಶಿಸಿದ ಸಾವಳಗಿ ಕ್ಷೇತ್ರದ ಸದಸ್ಯ ಶಿವಾನಂದ ಪಾಟೀಲ, ಸಿಇಒ ವಿಕಾಸ್ ಸುರಳಕರ್ ಅವರ ವರ್ಗಾವಣೆಗೆ ಪ್ರಯತ್ನ ನಡೆಯುತ್ತಿದೆಯೇ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನು ಕೇಳಿದರು.

‘ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ವಿರುದ್ಧ ಕ್ರಮಕ್ಕೆ ಮುಂದಾಗುವ ಅಧಿಕಾರಿಗಳನ್ನು ಇಲ್ಲಿ ಉಳಿಸುವುದಿಲ್ಲ ಎಂಬ ಮಾತು ಇದೆ. ಅದು ಸತ್ಯವೇ. ಸಿಇಒ ಈಗ ದೀರ್ಘ ರಜೆ ಮೇಲೆ ತೆರಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಅವರನ್ನು ವರ್ಗಾವಣೆ ಮಾಡಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆಯೇ’ ಎಂದು ಪಾಟೀಲ ಪ್ರಶ್ನಿಸಿದರು.

‘ಸಿಇಒ ಇರಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷರಲ್ಲೂ ಮೊದಲಿನ ವೇಗ ಉಳಿದಿಲ್ಲ ಎಂದು ಕುಟುಕಿದ ಹೂವಪ್ಪ ರಾಠೋಡ, ರೈತ ಸಂಘದ ಹೋರಾಟದ ಹಿನ್ನೆಲೆಯಿಂದ ಬಂದಿರುವ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಅವರ ಶಬ್ದವೇ ಬಂದ್ ಆಗಿದೆ. ಗಾಡಿ ಈಗಲೇ ಸರ್ವಿಸ್‌ಗೆ ಬಂದಿದೆ’ ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ತಂದೆಗೆ ಬೈಪಾಸ್ ಸರ್ಜರಿಯ ಕಾರಣ ಸಿಇಒ ದೀರ್ಘ ರಜೆಯ ಮೇಲೆ ತೆರಳಿದ್ದಾರೆ ಎಂದು ಹೇಳಿದ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅಮರೇಶ ನಾಯಕ ಚರ್ಚೆಗೆ ತೆರೆ ಎಳೆದರು.
 
* ನಿಯಮಾವಳಿಯಂತೆ ತನಿಖಾ ಸಮಿತಿ ವರದಿ ಆಧರಿಸಿ ಸಿಇಒ ಶಾಲೆಗಳ ಮಾನ್ಯತೆ ರದ್ದು ಮಾಡಲು ಡಿಡಿಪಿಐಗೆ ನಿರ್ದೇಶನ ನೀಡಿದ್ದಾರೆ. ಸರ್ಕಾರಕ್ಕೂ ವರದಿ ಸಲ್ಲಿಸಿದ್ದಾರೆ
-ಅಮರೇಶ ನಾಯಕ, ಜಿ.ಪಂ ಉಪಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT