ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ಬರ: ನಿರ್ಲಕ್ಷ್ಯ ವಹಿಸಿದರೆ ಕ್ರಮ

ನಿರ್ವಣಹಾ ಸಭೆ; ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಎಚ್ಚರಿಕೆ
Last Updated 18 ಫೆಬ್ರುವರಿ 2017, 11:23 IST
ಅಕ್ಷರ ಗಾತ್ರ
ಹೊಸಪೇಟೆ: ‘ಜಿಲ್ಲೆಯಲ್ಲಿ ಅನೇಕ ವರ್ಷ­ಗಳ ಬಳಿಕ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಅಧಿ­ಕಾರಿ­ಗಳ ಕರ್ತವ್ಯ. ಯಾರಾದರೂ ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ತಿಳಿಸಿದರು.
 
ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯ ವಿದ್ಯಾರಣ್ಯ ಸಭಾಂಗಣದಲ್ಲಿ ಶುಕ್ರವಾರ ಬರ ನಿರ್ವಹಣೆಗೆ ಸಂಬಂಧಿ­ಸಿದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
ಬರದಿಂದ ಜನ, ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆ ಆಗ­ಬಾ­ರದು. ಎಲ್ಲೇ ಕುಡಿಯುವ ನೀರು, ಮೇವಿನ ಸಮಸ್ಯೆ ಕಂಡು ಬಂದರೆ ತಕ್ಷಣವೇ ಸ್ಪಂದಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಎಲ್ಲಿಗೂ ತೆರಳ­ಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
 
ಅಧಿಕಾರಿಗಳು ತಾಲ್ಲೂಕಿನ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಅಲ್ಲಿನ ಸಮಸ್ಯೆಯನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ಬೇಸಿಗೆ ಮುಗಿಯುವವರೆಗೆ ಪ್ರತಿ ಶನಿವಾರ ಅಧಿಕಾರಿಗಳ ಸಭೆ ಕರೆ­ಯ­­­ಲಾಗುವುದು. ಸಭೆಗೆ ಗೈರಾದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸ­ಲಾಗುವುದು ಎಂದು ಎಚ್ಚರಿಕೆ ನೀಡಿದರು.
 
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖಾಸಗಿ ಕೊಳವೆ ಬಾವಿಗಳ ಮಾಲೀಕರ ಮನವೊಲಿಸಿ ನೀರು ಪೂರೈಸಬೇಕು. ಅದಕ್ಕೆ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಖಾಸಗಿ ಮಾಲೀ­ಕರು ನೀರು ನೀಡಲು ನಿರಾಕರಿಸಿದರೆ ಕಾನೂನು ಪ್ರಕಾರ, ಅವರಿಂದ ನೀರು ಪಡೆಯಲು ಅವಕಾಶ ಇದೆ. ವಾಟರ್‌ಮೆನ್‌ಗಳಿಗೆ ನೀರು ಮಿತವಾಗಿ ಹರಿಸಲು ನಿರ್ದೇಶನ ನೀಡಬೇಕೆಂದು ಸೂಚಿಸಿದರು.
 
ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ನಾಗಲಾಪುರ ತಾಂಡಾಕ್ಕೆ ಹೊಲಗಳಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಸಬೇಕು ಎಂದು ನೈರ್ಮಲ್ಯ ಅಧಿಕಾರಿ ಬಸವನಗೌಡ ಅವರಿಗೆ ನಿರ್ದೇಶನ ನೀಡಿದರು.
 
ತಾಲ್ಲೂಕಿನ ಕಂಪ್ಲಿಯಲ್ಲಿ ನೀರಿನ ಸಮಸ್ಯೆಯಿದೆ. ಹೀಗಿದ್ದರೂ ಅಲ್ಲಿನ ಪುರಸಭೆ ಮುಖ್ಯಾಧಿಕಾರಿ ಸಭೆಗೆ ಗೈರು ಆಗಿದ್ದಾರೆ. ಇದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿ. ಹಾಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ತಹಶೀಲ್ದಾರ್‌ಗೆ ಉಪ­ವಿಭಾಗಾಧಿಕಾರಿ ಸೂಚನೆ ನೀಡಿದರು.
ತಹಶೀಲ್ದಾರ್‌ ಎಚ್‌.ವಿಶ್ವನಾಥ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಭಾಸ್ಕರ್‌ ಸಭೆಯಲ್ಲಿ ಉಪಸ್ಥಿತರಿದ್ದರು.
 
* ಬರದ ವಿಷಯದಲ್ಲಿ ಯಾರೂ ನಿಷ್ಕಾಳಜಿ ತೋರಬಾರದು. ನಿರ್ಲಕ್ಷ್ಯ ತೋರುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು
-ಪ್ರಶಾಂತ್‌ ಕುಮಾರ್‌ ಮಿಶ್ರಾ,  ಉಪವಿಭಾಗಾಧಿಕಾರಿ ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT