ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪುಸ್ತಕೋದ್ಯಮದ ಕೊಲಂಬಸ್

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ರೇಸ್‌ಕೋರ್ಸ್ ಬಳಿಯ ಕ್ರೆಸೆಂಟ್ ರಸ್ತೆಯಲ್ಲಿರುವ ‘ನವಕರ್ನಾಟಕ’ ಸಂಸ್ಥೆ ಪುಸ್ತಕಪ್ರೇಮಿಗಳ ಮಿದುಳಿನ ನಕ್ಷೆಯಲ್ಲಿ ಒಂದು ಜಾಗ ಗಿಟ್ಟಿಸಿದೆ. ಇಲ್ಲಿಗೆ ಪ್ರವೇಶಿಸಿದ ಓದುಗ ವರ್ಗ ಸೀದಾ ಪುಸ್ತಕದ ಸಗಟು ಮಾರಾಟ ಕೇಂದ್ರಕ್ಕೆ ಹೋಗುವಾಗ ಪುಸ್ತಕಗಳ ಮಧ್ಯೆ ಜಾಗ ಮಾಡಿಕೊಂಡೇ ಹೋಗಬೇಕು.

ಬಹುಶಃ ಅಷ್ಟೇ ಮಂದಿ ಮಹಡಿ ಹತ್ತಿ ‘ನವಕರ್ನಾಟಕ’ದ  ರಾಜಾರಾಮ್ ಅವರನ್ನು ಕಾಣಲು ಅವರ ಚೇಂಬರ್‌ಗೆ ಹೋಗುವುದು ಸಾಮಾನ್ಯ ಸಂಗತಿ. ಬಂದ ಎಷ್ಟೋ ಮಂದಿ ಲೇಖಕರು ಹಸ್ತಪ್ರತಿ ಹಿಡಿದೇ ಬಂದಿರುತ್ತಾರೆ. ರಾಜಾರಾಮ್ ಅಭಿಪ್ರಾಯಕ್ಕಾಗಿ ಕಾಯುತ್ತಾರೆ. ಅದರ ಶೀರ್ಷಿಕೆ ಇವತ್ತಿನ ಸಮಾಜಕ್ಕೆ ಬೇಕೆನ್ನಿಸಿದರೂ ಒಡನೆಯೇ ಅವರು ಆಶ್ವಾಸನೆ ಕೊಡುವುದಿಲ್ಲ.

‘ನಮ್ಮಲ್ಲಿ ಸಂಪಾದಕ ಮಂಡಲಿ ಇದೆ, ಅವರು ಓದಬೇಕು’ ಎಂದು ನಯವಾಗಿಯೇ ಹೇಳುತ್ತಾರೆ. ಹಸ್ತಪ್ರತಿ ಒಪ್ಪಿಗೆಯಾದರೆ ಸಿದ್ಧವಾಗಿಯೇ ಇರುತ್ತದೆ ಕರಾರುಪತ್ರ, ಅದರಲ್ಲಿ ಎಲ್ಲವೂ ವಿದಿತ. ಲೇಖಕನಿಗೆ ಸಲ್ಲಬೇಕಾದ ರಾಯಲ್ಟಿ, ಮರುಮುದ್ರಣವಾದಾಗ ಅನ್ವಯವಾಗುವ ಶರತ್ತುಗಳೂ... ಏನೆಲ್ಲ.

ಪ್ರೂಫ್ ಡಿಟಿಪಿ ಆಯಿತೆಂದರೆ ‘ಇನ್ ಹೌಸ್ ಎಡಿಟಿಂಗ್’ ಕೈ ದಾಟಬೇಕು. ಅದರಲ್ಲಿ ಸೂಚಿಸಿದ ಬದಲಾವಣೆಗಳನ್ನು ಮಾಡಬೇಕು, ಅಂತಿಮವಾಗಿ ರಾಜಾರಾಮ್ ಟೇಬಲ್ ಮೇಲೆ ಬಂದು ಕೂಡುತ್ತದೆ. ರಕ್ಷಾಪುಟದಿಂದ ಹಿಡಿದು ಬೈಂಡಿಂಗ್‌ವರೆಗೆ ರಾಜಾರಾಮ್ ಅವರದೇ ಪರಿಕಲ್ಪನೆ, ಅವರು ಎಲ್ಲ ಪುಸ್ತಕಗಳನ್ನೂ ಪ್ರಕಟವಾಗುವ ಮುನ್ನ ಓದಿಯೇ ಇರುತ್ತಾರೆ.

ಕೆಲವು ಕಾಲ ಪ್ರತಿ ಶನಿವಾರ ರಾಜಾರಾಮ್ ಅವರ ಕ್ಯಾಬಿನ್‌ನಲ್ಲಿ ಆಯ್ದ ಲೇಖಕರು ಮತ್ತು ಸಂಸ್ಥೆಯವರೇ ಆದ ಹಿರಿಯ ಪತ್ರಕರ್ತ–ಲೇಖಕ ಸಿ.ಆರ್. ಕೃಷ್ಣರಾವ್, 200ಕ್ಕೂ ಹೆಚ್ಚು ಕೃತಿಗಳನ್ನು ಅನುವಾದ ಮಾಡಿಯೂ ‘ನನ್ನದೇನಿಲ್ಲಪ್ಪಾ’ ಎಂದು ಸಜ್ಜನಿಕೆಯಿಂದ ತೆಳುಸ್ತರದಲ್ಲಿ ಮಾತನಾಡುತ್ತಿದ್ದ ಕೆ.ಎಲ್. ಗೋಪಾಲಕೃಷ್ಣರಾಯರು ಕಾಯಂ ಇರುತ್ತಿದ್ದರು. ಇದನ್ನೇ ರಾಜಾರಾಮ್ ‘ಶನಿವಾರ ಸಂತೆ’ ಎಂದಿದ್ದರು. ಆ ಸಂತೆಯಲ್ಲಿ ನಾನೂ ಒಬ್ಬ.

ಅಲ್ಲಿ ರಾಜಾರಾಮ್ ಅವರ ಮಿದುಳೊಳಗಿದ್ದ ಯೋಜನೆಗಳೆಲ್ಲವೂ ಹೊರಬರುತ್ತಿದ್ದವು. ಹಾಗೆಯೇ ನವಕರ್ನಾಟಕದ ಪ್ರಕಟಣೆಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶಿಸಲು ಮತ್ತು ಮಾರಾಟಮಾಡಲು ಒಂದೊಂದು ತಂಡಗಳು ಬಿಜಿಯಾಗಿ ಓಡಾಡುತ್ತಿದ್ದವು. ಪುಸ್ತಕ ಮಾರಾಟ ಜಾಲದಲ್ಲಿ ಇಂಥ ವಿನೂತನ ಪ್ರಯೋಗ ಮಾಡಿದವರು ಇದೇ ರಾಜಾರಾಮ್.

ಪುಸ್ತಕ ಪ್ರಕಾಶನ ಸ್ಥಾವರವೂ ಹೌದು, ಜಂಗಮವೂ ಹೌದು ಎನ್ನುವ ತರ್ಕ ಅವರದು. ಇದೀಗ ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಮೈಸೂರು ಸೇರಿದಂತೆ ನವಕರ್ನಾಟಕದ ಐದು ಶಾಖೆಗಳಿವೆ. ಕಳೆದ ಅರ್ಧ ಶತಮಾನದಲ್ಲಿ ಮರುಮುದ್ರಣವೂ ಸೇರಿದಂತೆ ನವಕರ್ನಾಟಕ ಸಂಸ್ಥೆ ಪ್ರಕಟಿಸಿರುವ ಕೃತಿಗಳು ಬರೋಬ್ಬರಿ 4700.

‘ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬುದು ನವಕರ್ನಾಟಕದ ಘೋಷವಾಕ್ಯ. ಈ ಶಬ್ದಗಳನ್ನು ಉಚ್ಚರಿಸಿದ್ದು ರಾಜಾರಾಮ್ ಅವರೇ.
‘ನವಕರ್ನಾಟಕ’ದ ಜೊತೆ ನಿಕಟ ಸಂಪರ್ಕವಿದ್ದವರಿಗೂ ರಾಜಾರಾಮ್ ಅವರ ಪೂರ್ಣ ಹೆಸರು – ರಂಗಸ್ವಾಮಿ ಶ್ರೀರಾಮ್ ರಾಜಾರಾಮ್ – ಅಪರಿಚಿತವೆಂದೇ ಹೇಳಬೇಕು.

ಮೂಲ ಆಂಧ್ರಪ್ರದೇಶದ ನೆಲೆಯಿಂದ ಎಷ್ಟೋ ತಲೆಮಾರಿನ ಹಿಂದೆ ಕರ್ನಾಟಕದ ವಿವಿಧ ಭಾಗಗಳಿಗೆ ಬಂದು ನೆಲೆಸಿರುವವರ ಪೈಕಿ ಇವರ ತಂದೆ ಶ್ರೀರಾಮ್ ಅವರ ಕುಟುಂಬವೂ ಒಂದು. ಶ್ರೀರಾಮ್ ಅವರ ಪತ್ನಿ  ರಾಜಮ್ಮ; ಕೇರಳ ಮೂಲದವರು. ವರ್ಷದ ಮಗುವಿದ್ದಾಗಲೇ ತಾಯಿಯನ್ನು ಕಳೆದುಕೊಂಡರು ರಾಜಾರಾಮ್. ಬಹುಶಃ ಅಪ್ಪನಿಂದಲೇ ಶುರುವಾದದ್ದು ಸಂಪ್ರದಾಯದ ಉಲ್ಲಂಘನೆ.

ಆದರೆ ಶ್ರೀರಾಮ್ ಅವರಿಗೆ ತಾವು ನಡೆಸುತ್ತಿದ್ದ ಫ್ಯಾನ್ಸಿ ಸ್ಟೋರನ್ನು ರಾಜಾರಾಮ್ ನೋಡಿಕೊಳ್ಳಬೇಕೆಂಬ ಆಸೆ. ರಾಜಾರಾಮ್ ಒಪ್ಪಲಿಲ್ಲ. ಮಂಗಳೂರಿನಲ್ಲಿ ಓದು, ಅನಂತರ ಪುತ್ತೂರಿಗೆ ದೊಡ್ಡಪ್ಪನ ಮನೆಗೆ ವರ್ಗಾವಣೆ. ರಾಜಾರಾಮ್ ಹೈಸ್ಕೂಲು ಶಿಕ್ಷಣಕ್ಕೆ ವಿದಾಯ ಹೇಳಿದವರು. ಆಗ ಕಮ್ಯುನಿಸ್ಟ್ ನಾಯಕ ಬಿ.ವಿ. ಕಕ್ಕಿಲಾಯ ಅವರಿಗೆ ಈ ಹುಡುಗನ ಹುರುಪು ಕಂಡು ಬೆಂಗಳೂರಿನ ನವಕರ್ನಾಟಕ ಸಂಸ್ಥೆಗೆ ಕಳಿಸಿದ್ದರು.

ಈ ಹೊತ್ತಿಗೆ ನವಕರ್ನಾಟಕ ಹಲವು ಸಂಸ್ಥೆಗಳನ್ನು ತನ್ನ ಮಡಿಲೊಳಗೆ ಹಾಕಿಕೊಂಡಿತ್ತು. ಬೆಂಗಳೂರಿನ ‘ಸೆಂಚುರಿ ಬುಕ್ ಹೌಸ್’, ಮಂಗಳೂರಿನ ‘ಪ್ರಭಾತ್ ಬುಕ್ ಹೌಸ್’, ಬೆಂಗಳೂರಿನಲ್ಲಿ ಮುದ್ರಣಕ್ಕೆ ಹೆಸರಾಗಿದ್ದ ‘ಜನಶಕ್ತಿ ಪ್ರಿಂಟರ್ಸ್ ಮತ್ತು ಪ್ರಕಾಶನ’ (ಇದು ಎಂ.ಎಸ್. ಕೃಷ್ಣನ್ ಅವರು ನಡೆಸಿಕೊಂಡು ಬಂದದ್ದು). ‘ನವಕರ್ನಾಟಕ’ ಸಂಸ್ಥೆ ಶುರುವಾಗಿದ್ದು 1960ರಲ್ಲಿ. ಅದಕ್ಕೆ ಭದ್ರಬುನಾದಿ ಹಾಕಿದವರು ವಿದ್ವಾಂಸ ಎಸ್. ರಾಮಚಂದ್ರ ಭಟ್.

ಸಂಸ್ಕೃತವನ್ನು ಚೆನ್ನಾಗಿ ಓದಿಕೊಂಡಿದ್ದವರು. ಆಗ ಪ್ರಕಟಣೆ, ವಿತರಣೆ ಮೂಲತಃ ರಷ್ಯನ್ ಪುಸ್ತಕಗಳಾಗಿದ್ದವು. ಇದರ ಹೊರತು ಭಟ್ ಅವರಿಗೆ ಸಂಸ್ಥೆಯನ್ನು ವಿಸ್ತರಿಸುವ ಯೋಜನೆ ಇರಲಿಲ್ಲ. ಆ ಹಂತದಲ್ಲಿ ರಾಜಾರಾಮ್, ಭಟ್ ಅವರ ಬಳಿಗೆ ಬಂದರು. ಮುಖ್ಯವಾಗಿ ಪ್ರಿಂಟಿಂಗ್ ಕೆಲಸ ಜೊತೆಗೆ ಪುಸ್ತಕ ಮಾರಾಟದ ಕೆಲಸ.

ಬ್ರಿಗೇಡ್ ರಸ್ತೆಯ ಒಂದೆಡೆ ಪುಸ್ತಕಗಳ ರಾಶಿ ಹಾಕಿಕೊಂಡು ಒಂದು ಪುಸ್ತಕದ ಆಯ್ದ ಪ್ಯಾರಾವನ್ನು ಗಟ್ಟಿಯಾಗಿ ಓದಿ, ದಾರಿಹೋಕರನ್ನು ಆಕರ್ಷಿಸುವ ಹೊಸ ತಂತ್ರವೊಂದನ್ನು ರಾಜಾರಾಮ್ ರೂಢಿಸಿಕೊಂಡಿದ್ದರು. ಮತ್ತೆ ಬೆಂಗಳೂರಿನ ಜನಶಕ್ತಿ ಮುದ್ರಣಾಲಯದಲ್ಲಿ ಅಚ್ಚುಮೊಳೆಯಿಂದ ತೊಡಗಿ, ಪ್ರಕಟಿಸುವವರೆಗೆ ಅವರು ತೊಡಗಿಕೊಂಡದ್ದೇ ಮುಂದೆ ಅವರಿಗೆ ಪ್ರಕಾಶನದ ಎಲ್ಲ ಮಗ್ಗಲನ್ನೂ ತೋರಿಸಿದ್ದವು.

ನವಕರ್ನಾಟಕ ಸಂಸ್ಥೆಯನ್ನು ಸ್ವತಂತ್ರ ಪ್ರಕಾಶನ ಸಂಸ್ಥೆಯಾಗಿ ಬೆಳೆಸಲೇಬೇಕೆಂಬ ಹಟ ಮೊಳೆತದ್ದು ಆಗಲೇ. ಭಟ್ ಅವರು ಹುಬ್ಬೇರಿಸಿದ್ದೂ ಆಗಲೇ. ಆದರೆ ಅಂತಿಮವಾಗಿ ಹುಡುಗನ ಹಟಕ್ಕೆ ಮಣಿದರು. ಇದರ ಫಲವೇ ಕರ್ನಾಟಕದ ಯಾವ ಖಾಸಗೀ ಪ್ರಕಾಶನವೂ ಎಂದೂ ಯೋಚಿಸಿರದ ‘ವಿಶ್ವ ಕಥಾಕೋಶ’ ಪ್ರಕಟಣೆ.

‘ವಿಶ್ವ ಕಥಾಕೋಶ’ 87 ದೇಶಗಳ 317 ಕಥೆಗಳ ಸಂಗ್ರಹ. ಅವುಗಳನ್ನು ಅನುವಾದ ಮಾಡಿಸಲು ಲೇಖಕರ ಪಡೆಯನ್ನೇ ಕಟ್ಟಿಕೊಂಡಿದ್ದರು. ಅನೇಕ ಎಂಬೆಸಿಗಳಿಗೆ ಪತ್ರ ಬರೆದು ಒಪ್ಪಿಗೆ ಪಡೆದಿದ್ದರು. ಇದಕ್ಕೆ ನಿರಂಜನ ಅವರೇ ಸೂಕ್ತ ಸಂಪಾದಕ ಎಂದು ಗುರುತಿಸಿ ಒಪ್ಪಿಸಿಯೂ ಇದ್ದರು. 1980–82ರಲ್ಲಿ ಈ ಯೋಜನೆ ಮುಗಿಸಿದಾಗ ನವಕರ್ನಾಟಕಕ್ಕೆ ಹೆಸರು ಬಂತು. ಹಾಗೆಯೇ ರಾಜಾರಾಮ್ ಅವರ ಹೆಗಲಿಗೆ ದೊಡ್ಡ ಜವಾಬ್ದಾರಿಗಳೂ ಬರಲು ಪ್ರಾರಂಭವಾಯಿತು.

‘ರಾಜಾರಾಮ್ ಯಾವ ಗವಿಯನ್ನಾದರೂ ಬರಿಗೈಯಲ್ಲಿ ನಿರ್ಭಯವಾಗಿ ಪ್ರವೇಶಿಸಬಲ್ಲ ಬೇಟೆಗಾರ’ ಎಂದು ನಿರಂಜನ ಬೆನ್ನು ತಟ್ಟಿದರು. ಇನ್ನೂ ವಿಶೇಷವೆಂದರೆ ಆಗ 25 ಸಂಪುಟಗಳ ಒಟ್ಟು ಬೆಲೆ ರೂ. 250. ಓದುಗರಿಗೆ ಹೊರೆಯಾಗಬಾರದೆಂದು ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜ್‌ಮೆಂಟ್‌ಗೆ ಒಪ್ಪಿಸಿ ಆ ಮೊತ್ತವನ್ನು ಪುಸ್ತಕ ಕೊಳ್ಳಲು ಸಾಲವಾಗಿ ಕೊಡುವ ಏರ್ಪಾಡನ್ನೂ ಮಾಡಿದರು. ಇಡೀ ಪ್ರಕಟಣೆಯಲ್ಲಿ ಗಂಧ ತೇಯ್ದಂತೆ ತಮ್ಮನ್ನೇ ತೇಯ್ದುಕೊಂಡವರು ರಾಮಚಂದ್ರ ಭಟ್ ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ.

ನವಕರ್ನಾಟಕ ಸಂಸ್ಥೆಯ ಪ್ರಥಮಗಳು ಒಂದಲ್ಲ, ಹತ್ತಾರು ಎಲ್ಲವೂ ಇವರ ಪರಿಕಲ್ಪನೆಯ ಕೂಸುಗಳೇ. ಸಂಸ್ಥೆ ಹೊರತಂದಿರುವ ಮಾಲಿಕೆಗಳ ಹೆಸರುಗಳನ್ನು ಟೇಪಿನಿಂದ ಅಳೆಯಬೇಕು. ಅವುಗಳಲ್ಲಿ ಕೆಲವಂತೂ ಸರ್ವಕಾಲಕ್ಕೂ ಸಲ್ಲುವಂತಹದ್ದು. ಈ ಪೈಕಿ ‘ಕರ್ನಾಟಕದ ಏಕೀಕರಣ ಇತಿಹಾಸ’ (ಸಂ: ಡಾ. ಎಚ್.ಎಸ್. ಗೋಪಾಲರಾವ್) ಕಂಡು ವಿಶ್ವವಿದ್ಯಾಲಯಗಳೇ ಬೆರಗಾಗಿವೆ. ಅಷ್ಟೊಂದು ಪ್ರಮಾಣದ ವ್ಯಾಪಕ ಪ್ರವಾಸ, ಸಂದರ್ಶನ ಅದಕ್ಕಾಗಿ ನಡೆಯಿತು.

‘ಪ್ರಜಾವಾಣಿ’ಯ ಜನಪ್ರಿಯ ಅಂಕಣವಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ‘ಇಗೋ ಕನ್ನಡ’ ಗ್ರಂಥ ರೂಪವಾಗಿ ಬಂದದ್ದು ನವಕರ್ನಾಟಕದಿಂದಲೇ. ಪ್ರೊ. ಜಿ. ರಾಮಕೃಷ್ಣ ಅವರ ಸಂಪಾದಕತ್ವದಲ್ಲಿ ಹೊರಬಂದ ‘ಸ್ವಾತಂತ್ರ್ಯೋತ್ತರ ಭಾರತ ಅವಲೋಕನ’, ಹಾಮಾ ನಾಯಕ್ ಮತ್ತು ಅನಂತರ ಡಾ. ಪ್ರಧಾನ ಗುರುದತ್ ಅವರ ಸಂಪಾದಕತ್ವದಲ್ಲಿ ಹೊರಬಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರನ್ನು ಕುರಿತು ‘ನವಕರ್ನಾಟಕ ಸಾಹಿತ್ಯ ಸಂಪದ’ ಈಗಲೂ ಮುಂದುವರಿಯುತ್ತಿದೆ.

ಈ ಸಂಸ್ಥೆ ವಿಜ್ಞಾನ ಪ್ರಕಟಣೆಗೆ ಕೊಟ್ಟಷ್ಟು ಪ್ರಾಮುಖ್ಯವನ್ನು ಯಾವ ಖಾಸಗಿ ಪ್ರಕಾಶನ ಸಂಸ್ಥೆಗಳೂ ಕೊಟ್ಟಿಲ್ಲ ಎನ್ನುವುದು ದೂರುವ ಮಾತಲ್ಲ, ನವಕರ್ನಾಟಕದ ಆದ್ಯತೆಗೆ ಸಾಕ್ಷೀಭೂತವಾಗುವ ಸಂಗತಿ. ನಾಲ್ಕು ಸಂಪುಟಗಳಲ್ಲಿ ರಾಜಾರಾಮ್ ಅವರ ಪರಿಕಲ್ಪನೆ, ‘ಜ್ಞಾನ ವಿಜ್ಞಾನ ಕೋಶ’ ಹೊರಬಂದಿರುವುದಕ್ಕೆ ಒಂದು ಪುಟ್ಟ ಹಿನ್ನೆಲೆ ಇದೆ. ಕನ್ನಡದಲ್ಲಿ ಸಮಕಾಲೀನ ವಿಜ್ಞಾನವನ್ನು ಬಿಂಬಿಸುವ, ಆಕರ ಗ್ರಂಥವಾಗಿ ನೆಚ್ಚಬಹುದಾದ, ವಿದ್ಯಾರ್ಥಿ–ಅಧ್ಯಾಪಕರಿಗೆ ಮತ್ತೆ ಮತ್ತೆ ಒದಗಿಬರುವ ಪ್ರಕಟಣೆಯಾಗಿ ಬರಬೇಕೆಂಬುದು ರಾಜಾರಾಮ್ ಕನಸಾಗಿತ್ತು.

ವಿಶೇಷ ಆರ್ಟ್ ಪೇಪರ್ ಬಳಸಿ ನಾಲ್ಕು ಬಣ್ಣಗಳಲ್ಲಿ ನಾಲ್ಕು ಸಂಪುಟಗಳನ್ನು ತಂದಾಗ ಮೊದಲನೆಯ ಮೂರು ಸಾವಿರ ಪ್ರತಿಗಳು ಆ ಹೊತ್ತಿಗಾಗಲೇ ನೋಂದಾಯಿಸಿದ ಓದುಗರಿಗೆ ಕೊಡಬೇಕಾಗಿತ್ತು. ಎಂ.ಎಸ್. ಸೇತುರಾವ್ ಮತ್ತು ಕೆ.ಎಲ್. ಗೋಪಾಲಕೃಷ್ಣ ರಾವ್ ಸಂಪಾದಕರಾಗಿ ಶ್ರಮಿಸಿದ್ದರು.

ಗುಣಮಟ್ಟದಲ್ಲಿ ಎಂದೂ ರಾಜಿಮಾಡಿಕೊಳ್ಳಲು ಒಲ್ಲದ ರಾಜಾರಾಮ್ ಆಗ ಒಂದು ವಿಚಿತ್ರ ಪ್ರಯೋಗ ಮಾಡಿದರು. ಆಯ್ದ ಕೆಲವು ವಿದ್ಯಾರ್ಥಿಗಳನ್ನು ಸೇರಿಸಿ ಈ ಸಂಪುಟಗಳ ಕೆಲವು ಅಧ್ಯಾಯಗಳನ್ನು ಹೈಸ್ಕೂಲ್ ಮಕ್ಕಳಿಗೆ ಓದಿಸಿ, ಅವರ ಅಭಿಪ್ರಾಯ ಪಡೆದು ಕ್ಲಿಷ್ಟ ಎನಿಸಿದ ಕಡೆಗಳಲ್ಲಿ ಸರಳಗೊಳಿಸಿ ಅನಂತರವಷ್ಟೇ ಮುದ್ರಣ ಮಾಡಿದ್ದರು.

‘ನವಕರ್ನಾಟಕ ಕಲಾದರ್ಶನ’ (ಸಂ: ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ವಿಜಯಾ. ಸಿ.ಆರ್. ಕೃಷ್ಣರಾವ್) ರಾಜಾರಾಮ್ ಅವರ ಮತ್ತೊಂದು ಕನಸು. ಚಿತ್ರಕಲೆ, ಶಿಲ್ಪಕಲೆ, ಕರಕುಶಲ ಕಲೆ, ವಾಸ್ತುಶಿಲ್ಪ, ಛಾಯಾಚಿತ್ರ ಕಲೆ, ರಂಗಭೂಮಿ, ಸಂಗೀತ, ನೃತ್ಯ, ಚಲನಚಿತ್ರ ಕುರಿತ ಸಮಗ್ರ ಪರಿಚಯದ ಜೊತೆಗೆ 920 ಕಪ್ಪುಬಿಳುಪಿನ ಚಿತ್ರಗಳು ಕಲೆಯ ಸಂಯುಕ್‌ದರ್ಶನವನ್ನು ಮಾಡಿಸುತ್ತವೆ. ರಾಜಾರಾಮ್ ಅವರ ಕಲಾಭಿರುಚಿಗೆ ಈ ಪ್ರಕಟಣೆ ಸಾಕ್ಷಿ.

ತಮ್ಮ ಸಂಸ್ಥೆಗೆ ಒಂದು ಮುಖಪತ್ರಿಕೆ ಬೇಕೆಂದು ಬಯಸಿ ಅವರೇ ‘ನೆಮ್ಮದಿಯ ನಾಳೆ ನಮ್ಮದು’ ಎಂಬ ಘೋಷವಾಕ್ಯ ರೂಪಿಸಿ ‘ಹೊಸತು’ ಪತ್ರಿಕೆ ಸ್ಥಾಪಿಸಿದರು. ಹಿರಿಯ ವಿದ್ವಾಂಸರಾದ ಜಿ. ರಾಮಕೃಷ್ಣ ಅವರು ಸಂಪಾದಕತ್ವ ವಹಿಸಿದರು. ಇದೀಗ ಅದನ್ನು ಮುನ್ನಡೆಸುವ ಕೆಲಸ ಪ್ರಗತಿಪರ ಚಿಂತಕ ಸಿದ್ಧನಗೌಡ ಪಾಟೀಲ ಅವರದು.

ನವಕರ್ನಾಟಕ ಸಂಸ್ಥೆ 60 ಕುಟುಂಬಗಳನ್ನು ಸಾಕುತ್ತಿದೆ; ಅದು ಪ್ರಕಟಣೆಯ ಮೂಲಕವೇ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ರಾಜಾರಾಮ್ ಅವರೇ ಬೆಳೆಸಿದ ಈಗ ಅವರ ಸ್ಥಾನದಲ್ಲಿರುವ ಎ.ಆರ್. ಉಡುಪ. ಸಂಸ್ಥೆಯಲ್ಲಿ ಸಿಬ್ಬಂದಿಗೆ ಪ್ರತಿವರ್ಷವೂ ಇನ್‌ಕ್ರಿಮೆಂಟ್ ಮತ್ತು ಪಿ.ಎಫ್.ಗಳನ್ನು ಕಡ್ಡಾಯಗೊಳಿಸಿದ್ದು, ಕಾರ್ಮಿಕರ ಹಿತಾಸಕ್ತಿಯನ್ನು ಬಯಸುವ ಮಾರ್ಕ್ಸ್‌ವಾದದ ಅನುಷ್ಠಾನಕ್ಕೆ ಒಂದು ಕನ್ನಡಿ.

ರಾಜಾರಾಮ್ ಬೆಂಗಳೂರಿನ ಆಸ್ಟಿನ್ ಟೌನ್ ಬಡಾವಣೆಯಲ್ಲಿ ಮನೆ ಕೊಂಡಾಗ ಅಲ್ಲೊಂದು ಹೊಸ ಶಾಲೆಯನ್ನೇ ತೆರೆಯಲು ಕಾರಣರಾದರು. ಡೊನೇಷನ್ ಕೊಟ್ಟು ಕಂಗಾಲಾಗಿದ್ದ ಪೋಷಕರಿಗೆ ಇದು ಮರೆಯಲಾಗದ ಸಂಗತಿಯಾಯಿತು. ‘ಸುಧಾ’ ವಾರಪತ್ರಿಕೆ ಈ ಕುರಿತು ‘ಡೊನೇಷಲ್ ಒಲ್ಲದ ಮಾದರಿ ಶಾಲೆ’ ಎಂಬ ಲೇಖನವನ್ನೇ ಪ್ರಕಟಿಸಿತು.

ರಾಜಾರಾಮ್ ಅವರೀಗ ‘ನವಕರ್ನಾಟಕ’ದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ, ಅವರಿಗಿಂದು ಕೃತಜ್ಞತೆಯ ರೂಪದಲ್ಲಿ ‘ನವಕರ್ನಾಟಕದ ಅಭಿವಂದನೆ’ ಸಲ್ಲುತ್ತಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕ ರಾಜಾರಾಮ್ ಅವರನ್ನು ಅಭಿನಂದಿಸುವ ಸಂದರ್ಭವೂ ಹೌದು.

ಪುಸ್ತಕ ಗೌರವ
ಎಪ್ಪತ್ತಾರರ ಹರೆಯದ ರಾಜಾರಾಮ್ ಅವರಿಗೆ ಇಂದು (ಫೆ. 19) ಎರಡು ಪುಸ್ತಕಗಳ ಗೌರವ ಸಲ್ಲುತ್ತಿದೆ. ಒಂದು ಕಾಂತಾವರದ ಕನ್ನಡ ಸಂಘದಿಂದ – ಸಿ.ಆರ್. ಕೃಷ್ಣರಾವ್ ಬರೆದ ‘ನವಕರ್ನಾಟಕ ಪ್ರಕಾಶನದ ರೂವಾರಿ ಆರ್.ಎಸ್. ರಾಜಾರಾಮ್’ ಕೃತಿ. ಇದು ಕಾಂತಾವರದಲ್ಲಿ ಬಿಡುಗಡೆ ಆಗುತ್ತಿದೆ.

ಇನ್ನೊಂದು ಪುಸ್ತಕ – ಪರಂಜ್ಯೋತಿ ಸ್ವಾಮಿ ಅವರು ಬರೆದ ‘ಸೃಷ್ಟಿಯ ಸೆಲೆ ಆರ್. ಎಸ್. ರಾಜಾರಾಮ್ ಬದುಕು–ಸಾಧನೆ’ ಬೆಂಗಳೂರಿನಲ್ಲಿ ಬಿಡುಗಡೆ ಆಗುತ್ತಿದೆ. ಇದು ನವಕರ್ನಾಟಕದ ಒಂದು ಭಾಗವೇ ಆದ ‘ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ’ಯ ಪ್ರಕಟಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT