ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯಷ್ಟೇ ಶಾಶ್ವತ!

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕಳೆದ ಇಪ್ಪತ್ತಿಪ್ಪತ್ತೈದು ವರ್ಷಗಳಲ್ಲಿ ನಮ್ಮ ‘ನಾಗರಿಕ’ ಬದುಕಿನ ಶೈಲಿ ಸಾರಾಸಗಟು ಬದಲಾಗಿಹೋಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತಗೊಂಡಿದ್ದು ಇಪ್ಪತ್ತನೇ ಶತಮಾನವನ್ನು ಕಾಡಿದ ಕಾಳಜಿಯಾದರೆ, ಈ ಹದಿನೇಳನೇ ಇಸವಿಯದ್ದು – ವಿಘಟಿತ ಸಂಸಾರಗಳದ್ದು. ವಿಘಟಿತ ಅಂತಂದರೆ, ಗಂಡಹೆಂಡಿರ ನಡುವಿನ ವಿಚ್ಛೇದಿತ ಸಂಬಂಧವಂತೇನಲ್ಲ.

ಸಂಸಾರವೊಂದರಲ್ಲಿ ತೊಡಗಿಕೊಂಡಿರುವ ಎಲ್ಲರೂ ಮತ್ತು ಯಾರೂ, ಒಬ್ಬೊಬ್ಬರಿಗೂ ಒಂದೊಂದು ಕೈಫೋನಿರುವ ಹಾಗೆ – ತಂತಮ್ಮದೇ ಖಾಸಗೀ ಹೊತ್ತುಗೊತ್ತುಗಳಲ್ಲಿ ಅಡಕಗೊಂಡಿರುವುದೆಂದೂ ಇದಾಗಬಹುದು. ಈ ನಿಟ್ಟಿನಲ್ಲಿ, ಕುಟುಂಬವೊಂದರ ಪಡಿಯಚ್ಚಿನಂತಿರುವ ಮನೆಯೆಂಬ ಮನೆಯ ರಚನೆಯೇನು ಎಂಬುದು ನಾವು ಆರ್ಕಿಟೆಕ್ಟುಗಳನ್ನು ಸದಾ ಕಾಡುವ ವಿಷಯವೇ ಸರಿ!

ಒಂದಾನೊಂದು ಕಾಲಕ್ಕೆ, ಇಡೀ ಮನೆಯನ್ನು ಮನೆ ‘ಅಂತೊಂದಾಗಿ’ ಒಗ್ಗೂಡಿಸುತ್ತಿದ್ದುದು – ಅಡುಗೆಮನೆ. ಈಗ ಹಾಗಲ್ಲ. ಎಲ್ಲರೂ ಒಟ್ಟೇ ಒಂದೇ ಸಮಯಕ್ಕೆ ಒಂದಾಗಿ ಕುಳಿತು ತಿನ್ನುವ ರೂಢಿಯೇ ಕಾಣೆಯಾಗಿರುವ ಹಿನ್ನೆಲೆಯಲ್ಲಿ, ಅಡುಗೆಯೆಂಬ ಅಡುಗೆಯ ವಿಧಿವಿಧಾನಗಳೂ ಬದಲಾಗಿಹೋಗಿವೆ. ಹಾಗೇ ಕಿಚನ್ನೆಂಬುದರ ರಚನೆಯೂ ಬದಲಿಹೋಗಿದೆ.

ಯಾವಾಗಲೋ ಮಾಡಿ, ಫ್ರಿಜ್ಜೊಳಗೆ ಹೂಡಿಟ್ಟ ಅಡುಗೆಯನ್ನು ಬೇಕುಬೇಕಾದ ಹೊತ್ತಿನಲ್ಲಿ ‘ರೀಹೀಟ್’ ಮಾಡಿಕೊಂಡು ಉಣ್ಣುವ ಪ್ರತೀತಿಗಳು ಹತ್ತಾರು ಕಾಲದಿಂದ ಚಾಲ್ತಿಯಲ್ಲಿದೆ. ಫ್ರಿಜ್ಜು, ಅವನ್ನು, ಮೈಕ್ರೋವೇವುಗಳಿಲ್ಲದ ಅಡುಗೆಮನೆಯನ್ನು ಊಹಿಸಿಕೊಳ್ಳುವುದೂ ಅಸಿಂಧುವಾಗಿದೆ. ಒಲೆ ಬದಲಾಗಿದೆ. ಮೂರು ನಾಲ್ಕು ‘ಬರ್ನರು’ಗಳಿರುವ ಗ್ಯಾಸೊಲೆಯೊಟ್ಟಿಗೆ, ಅಲ್ಪಾವಧಿಯಲ್ಲಿ ಅಂದರೆ ಇಪ್ಪತ್ತೆಣಿಸುವಷ್ಟರಲ್ಲಿ ಕಾಫಿ ಕಾಯಿಸಿ, ಹಾಲು ಕುದಿಸಬಲ್ಲ – ಮಹಾ ಮಹಾ ಇನ್‌ಸ್ಟಂಟ್‌ ಅನ್ನಬಹುದಾದ ಇಂಡಕ್ಷನ್ ಸ್ಟೊವ್‌ಗಳು ಎಲ್ಲರ ಮನೆಯ ಅಡುಗೆಕಟ್ಟೆಗಳಲ್ಲಿವೆ.

‘ಹಾಬ್’ ಅಂತಂದರೆ ಗ್ಯಾಸೊಲೆಯ ಮೇಲೆ, ನಟ್ಟನಡುವೆ ಅಡುಗೆಯ ಹೊಗೆಯನ್ನೂ ಹಬೆಯನ್ನೂ ಒತ್ತಾಯ ವಹಿಸಿ ತನ್ನೊಳಕ್ಕೆಳೆದುಕೊಂಡು, ಹೊರಗೊಗೆಯಬಲ್ಲ ‘ಎಕ್ಸಾಸ್ಟ್’ ಚಿಮಣಿಗಳು ಬಂದಿವೆ. ಮಿಕ್ಸೀ, ಗ್ರೈಂಡರುಗಳು – ಒರಳು, ಒನಕೆ, ರುಬ್ಬುಗುಂಡು, ಬೀಸುವ ಕಲ್ಲನ್ನು ಎತ್ತಂಗಡಿ ಮಾಡಿದ ಕತೆ, ನಾವು ಸಂದುಕೊಂಡ ಇಪ್ಪತ್ತನೇ ಶತಮಾನದಷ್ಟೇ ಪ್ರಾಚೀನವಾಗಿದೆ. ಹಾಗೇ, ಅಡುಗೆಯ ಕಟ್ಟೆಗೇ ಕೊಳಾಯಿಯ ಮುಖೇನ ನೀರು ಹಾಯಿಸಿ, ಪಾತ್ರೆ ತೊಳೆದುಕೊಳ್ಳುವ ‘ಸಿಂಕ್’ ಪದ್ಧತಿಯೂ ಹಳತಾಗಿರುವಷ್ಟೇ ಅತ್ಯವಶ್ಯಕವೂ ಆಗಿಬಿಟ್ಟಿದೆ.

ನಳದಲ್ಲಿ ಬರುವ ‘ಕಾವೇರಿ’ಯನ್ನು ಕುಡಿಯಲಿಕ್ಕೆಂದು ಶುಚೀಕರಿಸಬಲ್ಲ ಮೆಷೀನೂ, ಪಾತ್ರೆ ತೊಳೆಯುವುದಕ್ಕೆ ಬಿಸಿನೀರಿನ ಅಗತ್ಯ ಬಿದ್ದಲ್ಲಿ ಒಂದೆರಡು ಲೀಟರಿನಷ್ಟೇ ನೀರನ್ನು ತ್ವರಿತವಾಗಿ ಕಾಯಿಸಿ ಹಾಯಿಸುವ ಇನ್‌ಸ್ಟಂಟ್‌ ಗೀಸರುಗಳೂ ಅಡುಗೆಮನೆಯಲ್ಲಿನ ಹೊಸ ಪದ್ಧತಿಯೇ ಆಗಿದೆ.

ಸಿಂಕಿನಲ್ಲಿ ತರಕಾರಿ ಸಿಪ್ಪೆ, ಮಾಂಸದ ತುಂಡಿತ್ಯಾದಿ ತ್ಯಾಜ್ಯಗಳು – ಕೊಳೆನೀರು ಸಾಗಿಸುವ ಪೈಪಿನಲ್ಲಿ ಕಟ್ಟಿ ಫಜೀತಿಯಾಗಬಹುದೆನ್ನುವ ಮೇರೆಗೆ, ಇವನ್ನೆಲ್ಲ ರುಬ್ಬಿ ದ್ರವವಾಗಿಸಿ ಹೊರಚೆಲ್ಲಬಲ್ಲ ‘ಕ್ರಶರ್’ಗಳೂ ಇವೊತ್ತಿನ ಕುಕಿಂಗ್ ಸಂಸ್ಕೃತಿಯಲ್ಲಿ ಅವಿಭಾಜ್ಯವೆಂಬಷ್ಟು ತೊಡಗಿಬಿಟ್ಟಿವೆ.

ಕಳೆದ ಹತ್ತಾರು ವರ್ಷಗಳಲ್ಲಿ, ಮಾಡ್ಯುಲರ್ ಕಿಚನ್ ಅಂತೆಂಬ ಹೊಸತೊಂದು ವ್ಯವಸ್ಥೆ ಚಾಲ್ತಿಯಲ್ಲಿದೆ. ಈ ಅಡುಗೆಮನೆಯನ್ನು ಮನೆ ಕಟ್ಟುವ ಹಾಗೆ, ಕಲ್ಲು ಮರಳು ಸಿಮೆಂಟು ಬಳಸಿ ಕಟ್ಟುವ ಅಗತ್ಯವಿಲ್ಲ. ಮನೆ ಕಟ್ಟಿ ಮುಗಿದ ಮೇಲೆ, ಒಂದು ರೌಂಡು ಶಾಪಿಂಗ್ ಹೋಗಿಬಂದರಾಯಿತು.

ಎಲ್ಲವನ್ನೂ ಬಿಡಿ ಬಿಡಿಯಾಗಿ ಕೊಂಡು, ನಿಗದಿತ ಜಾಗದಲ್ಲಿ ಅಳವಡಿಸಿಡುವ ವ್ಯವಸ್ಥೆಯಿದು! ಇಂತಹ ಅಳವಡಣೆಗೆ ಪೂರ್ವ ತಯಾರಿಯಿದ್ದರೆ ಸಾಕು, ಇಡೀ ಕಿಚನನ್ನು ಕಾರ್ಖಾನೆಯಲ್ಲಿ ತಯಾರುಗೈದು ತಂದು ಹೂಡಿಕೊಳ್ಳಬಹುದು. ಅಷ್ಟು ಸುಲಭಾತಿ ಸುಲಭದ ರಿವಾಜಿದು!

ಮಾಡ್ಯುಲ್ ಅಂತಂದರೇನೇ ಬಿಡಿಯೆನ್ನಬಹುದಾದ ನಿಗದಿತ ಅಳತೆಯಿರುವ ಒಂದು ಘಟಕ. ಈ ಪರಿಯ ಹತ್ತೆಂಟು ಘಟಕಗಳನ್ನು ನಿಮ್ಮ ನಿಯೋಜಿತ ಅಡುಗೆಕೋಣೆಯ ಸ್ಥಳಾವಕಾಶಕ್ಕನುಗುಣವಾಗಿ – ಮಾಡ್ಯುಲರ್ ಕಿಚನ್ನು ಮಾಡುವ ಮಂದಿ ತಯಾರಿಸಿ ಸರಬರಾಜು ಮಾಡುವುದಲ್ಲದೆ, ಅದನ್ನು ಸುಸಜ್ಜಿತವಾಗಿ ಹೂಡಿ ಬಳಕೆಗೆ ರೆಡಿಗೈದುಬಿಡುತ್ತಾರೆ.

ಈ ಮಾಡ್ಯುಲುಗಳ ಜೋಡಣೆಯ ಮೇಲೆ, ನುಣುಪು ಮೈಯುಳ್ಳ ಗ್ರಾನೈಟಿನ ಹಲಗೆಯೊಂದನ್ನು ಹರಡಿ – ಗ್ಯಾಸೊಲೆ ಮತ್ತು ಸಿಂಕು ಬರುವಲ್ಲಿ, ಆಯಾ ಅಳತೆಗನ್ವಯವಾಗುವಂತೆ ಕಿಂಡಿ ಕೊರೆದು, ಇವನ್ನು ಅಳವಡಿಸಲು ಅನುವುಗೊಳಿಸುತ್ತಾರೆ. ಇಷ್ಟಾಯಿತೆಂದರೆ, ಎಲ್ಲ ರೆಡಿ; ಇನ್ನೇನು ಅಡುಗೆ ಮಾಡುವುದೇ ಸೈಯಿ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT