ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ತ್ ಡೇ ಪಾರ್ಟಿ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾಲ್ಕು ವರ್ಷದ ಹಿಂದೆ ವೆಂಕಟರಾಯನ ಕುಟುಂಬ ಕೋಲಾರಕ್ಕೆ ಬರುವುದಕ್ಕೆ ಮೊದಲು ಬಹಳ ಕಾಲ ಇಲ್ಲಿಗೆ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಮಾಲೂರಿನಲ್ಲೆ ಇದ್ದದ್ದು. ವೆಂಕಟರಾಯ ರೆವೆನ್ಯೂ ದಿಪಾರ್ಟ್‌ಮೆಂಟಿನಲ್ಲಿ ಕ್ಲಾರ್ಕ್ ಕೆಲಸದಲ್ಲಿ ಇದ್ದಿದ್ದು. ಅವನು ಕೆಲಸಕ್ಕೆ ಸೇರಿದ್ದು ಅಲ್ಲೇ.

ತುಂಬ ದಿನ ಅವರಲ್ಲಿ ಇದ್ದಿದ್ದರಿಂದ ಮತ್ತೆ ಬಹಳ ಜನ ತಾಲೂಕಾಫೀಸಿಗೆ ಆ ಈ ಕೆಲಸಕ್ಕಂತ ಹೋಗಲೇಬೇಕಾಗಿ ಹೋಗುತ್ತಿದ್ದುದರಿಂದ ಸುಮಾರು ಜನ ಆತ್ಮೀಯರೂ ಆಗಿದ್ದರು. ಈ ಸ್ನೇಹ, ಆತ್ಮೀಯತೆಯ ವ್ಯೂಹದಲ್ಲಿ ಅವನಿಗಿಂತ ಹಿರಿಯರು, ಕಿರಿಯರು ಇದ್ದರು. ಕೆಲವರ ಮಾತಿಗಂತೂ ದೂಸರಾ ಮಾತಾಡಲು ವೆಂಕಟರಾಯನಿಗೆ ಅವಕಾಶವಿರದಷ್ಟು ಆತ್ಮೀಯತೆಯಿತ್ತು.

ಈಗ ಪ್ರೊಮೋಷನ್ ದೊರೆತು ವರ್ಗವಾಗಿ ಕೋಲಾರಕ್ಕೆ ಸಂಸಾರ ಸಾಗಿಸಿದ ವೆಂಕಟರಾವ್. ಅಲ್ಲಿ ಸೈಟುಕೊಂಡು ಮನೆ ಕಟ್ಟಿಸಿದ್ದ ವೆಂಕಟರಾವ್ ಅಲ್ಲಿಗೆ ವರ್ಗ ಮಾಡಿಸಿಕೊಂಡದ್ದಕ್ಕೆ ಕಾರಣ ಎಲ್ಲಕ್ಕೂ ಮನೆಗೆ ವಕ್ಕರಿಸುವ ಮಾಸ್ತಿ ಗಡ್ಡೆಯ ತನ್ನ ಊರವರಿಂದ ದೂರವಿರುವ ಉದ್ದೇಶ.

ಮಾಲೂರಿನಲ್ಲಿದ್ದ ಸಮಯದಲ್ಲಿ ಬಹಳ ಜನ ಅವನಿಗೆ ಪರಿಚಯಸ್ಥರಾದರು. ಅವರಲ್ಲಿ ಕೆಲವರು ಎಂಥಾ ಗೆಳೆಯರಾದರೆಂದರೆ ಅವರ ಮಾತಿಗೆ ದೂಸರಾ ಮಾತಾಡಲು ವೆಂಕಟರಾಯನಿಗೆ ಅವಕಾಶವಿರದಷ್ಟು. ಹಾಗೆ ಆತ್ಮೀಯರಾದವರ ಪೈಕಿಯಲ್ಲಿ ಸಜ್ಜನರಾವ್ ಎಂಬ ಮರಾಠಿಯವರೂ ಇದ್ದರು. ಅವರು ಕಾಲೇಜಿನಲ್ಲಿ ವೆಂಕಟರಾವ್ ಸಹಪಾಠಿ. ವೆಂಕಟರಾವ್‌ಗೆ ಕದ್ದು ಮಟನ್ ಚಿಕನ್ ತಿನ್ನುವುದು ಕಲಿಸಿದ್ದು ಅವರೇ.

ಅದು ಹೊರತು ಅವನೆಂದೂ ಸಾರ್ವಜನಿಕವಾಗಿ ಅಂಥ ಆಹಾರ ಉಂಡವನಲ್ಲ. ಆದ್ದರಿಂದ ಆ ವಿಚಾರ ಅವರಿಗೆ ಮಾತ್ರ ಗೊತ್ತು. ಅಲ್ಲದೆ ಅವರು ಅದನ್ನು ಯಾರೊಂದಿಗೂ ಹೇಳಿಕೊಳ್ಳುವವರಲ್ಲ. ಆ ಕಾರಣ ಹಾಗೂ ಅವರ ಮನೆಯವರ ವಿಶೇಷ ಕೈ ಅಡುಗೆಗೆ ವೆಂಕಟರಾಯ ಮನಸೋತು ಹೋಗಿದ್ದ ಕಾರಣ, ಆಗೀಗ ಸಜ್ಜನರಾವ್‌ಗೆ ಫೋನ್ ಮಾಡಿ ವೆಂಕಟರಾವ್ ಕೇಳುವನು, ‘ಸಜ್ಜನ್‌ರಾವ್ ಬಾಯೆಲ್ಲ ಸಪ್ಪೆ ಸಪ್ಪೆ ಮಾರಾಯರೇ’ ಅಂತ. ಸರಿ ಸಂಜೆಗೇ ತಪ್ಪಿದರೆ ಮರುದಿನ ಮಧ್ಯಾಹ್ನ ಊಟಕ್ಕೆ ಕುರ್ಮಾ, ಚಾಪೀಸ್ ತಯಾರ್.

ಈಗ ಮಾಲೂರಿಂದ ಕೋಲಾರಕ್ಕೆ ವಾಸ ಬದಲಿಸಿದ ಮೇಲೆ ವೆಂಕಟರಾವ್‌ಗೂ ಸಜ್ಜನರಾವ್ ಮನೆ ಊಟದ ಅಭ್ಯಾಸ ತಪ್ಪಿಹೋಯಿತು. ಅವನೂ ಸುತ್ತ ಸರೀಕರು ಇದ್ದಾರೆಂದು ಮಾಂಸ ತಿನ್ನುವುದನ್ನು ನಿಲ್ಲಿಸಿದ್ದನೆಂದು ಗೊತ್ತಾಯಿತು. ಸಜ್ಜನ್ ರಾವ್ ಹಾಗೆಲ್ಲ ಬಲವಂತ ಮಾಡುವವರಲ್ಲ. ಅದೆಲ್ಲ ಸಜ್ಜನರಾವ್ ತಂದೆ ಮನ್ನೋಜಿರಾವ್‌ಗೆ ಆಗಲೀ ತಾಯಿ ತುಳಜಾ ಬಾಯಿಗೆ ಆಗಲೀ ಹಿಡಿಸುವುದೂ ಇಲ್ಲ.

ಅಲ್ಲಿ ಕೆಲಸ ಮಾಡುವಾಗ ಸಜ್ಜನರಾವ್ ಮನೆಗೆ ಬರುತ್ತಾ ಹೋಗುತ್ತಾ ಆತ್ಮೀಯತೆಗೆ ತಿರುಗಿದ್ದ ಸಜ್ಜನರಾವ್ ನೆರೆಯ ವಾಚಾಳಿ ರಾಮಯ್ಯರ್‌ರ ಮನೆಯಲ್ಲಿ ಭರ್ಜರಿ ಬರ್ತ್‌ಡೇ ಪಾರ್ಟಿಗೆ ಆಹ್ವಾನವಿತ್ತು. ಅದೆಂದು ವಿಲಕ್ಷಣ ಬರ್ತ್ ಡೇ. ಅದನ್ನು ಆಚರಿಸಿಕೊಳ್ಳುತ್ತಿರುವ ರಾಮಯ್ಯರ್‌ರವರಿಗೆ ಈಗ ಸುಮಾರು ಅರವತ್ತೈದು–ಎಪ್ಪತ್ತು ವರ್ಷ ವಯಸ್ಸು. ಗಟ್ಟಿಮುಟ್ಟಾಗಿದ್ದವರು.

ಅವರಿಗೆ ಈ ವರ್ಷದವರೆಗೂ ಅವರ ನಿಜವಾದ ಬರ್ತ್ ಡೇಟೇ ಗೊತ್ತಿರಲಿಲ್ಲ. ಶಾಲೆಯಲ್ಲಿ ಅಡ್ಮಿಶನ್ನಿಗೆ ಅಂದಾಜಿನ ಮೇಲೆ ಬರೆಸಿದ ದಿನವಷ್ಟೇ ಗೊತ್ತಿದ್ದದ್ದು. ಅದೆಲ್ಲಿಂದ ಅವರಿಗೆ ತಮ್ಮ ನಿಜವಾದ ಜನ್ಮದಿನದ ಮಾಹಿತಿ ದೊರಕಿತೋ ವೆಂಕಟರಾಯನಿಗೆ ಅಂತೂ ತಿಳಿಯದು. ಹಾಗೇ ಸಜ್ಜನರಾವ್‌ಗೂ ತಿಳಿಯದು.

ಕಾರಣಗಳನ್ನು ವಿವೇಚಿಸಿದಾಗ ವೆಂಕಟರಾಯನಿಗೆ ತೋರಿಬಂದಿದ್ದು ಇದು. ಪುರಸಭೆಯ ಅಧ್ಯಕ್ಷರಾಗಿ ಅವರು ಜನತಾ ಪಾರ್ಟಿಯಿಂದ ಈಚೆಗೆ ಅವಿರೋಧ ಆಯ್ಕೆಯಾಗಿದ್ದರು. ವೆಂಕಟರಾವ್‌ಗೆ ಅನಿಸಿದಂತೆ ಬಹುಶಃ ಹಾಗೆ ಜನಾನುರಾಗದಿಂದ  ಆಯ್ಕೆಗೊಂಡದ್ದರಿಂದಲೋ ಏನೋ, ಈ ವರ್ಷ ಅವರ ಹಿತೈಷಿಗಳಲ್ಲಿ ಪ್ರಮುಖರಾದ ರಾಮೇಗೌಡರು ಆಮಂತ್ರಣ ಪತ್ರಿಕೆಗಳನ್ನು ಅಚ್ಚುಹಾಕಿಸಿ ಅವರ ತೋಟದ ಮನೆಯಲ್ಲಿ ಬಲು ದೊಡ್ಡ ಔತಣಕೂಟವನ್ನು ಏರ್ಪಡಿಸಿದ್ದಾರೆ ಎಂದು. ವೆಜ್–ನಾನ್‌ವೆಜ್ ಎರಡೂ ಇವೆ.

ಬೇರೆ ಬೇರೆಯಾಗಿ. ಮಧ್ಯಾಹ್ನ ಲೈಟಾಗಿ ಗುಂಡು ಹಾಕುವವರಿಗೆ ಸೂಕ್ತ ವ್ಯವಸ್ಥೆಯೂ ಕೊಂಚ ದೂರದಲ್ಲಿನ ಪಂಪ್ ಹೌಸಿನಲ್ಲಿ ಅರೇಂಜು ಮಾಡಿದ್ದರು. ರಾಮೇಗೌಡರು ಹಾಗೆ ಅರೇಂಜು ಮಾಡಿರುವುದಾಗಿಯೂ ವೆಂಕಟರಾವ್ ಮರುಮಾತಿಲ್ಲದೆ ಬರಬೇಕೆಂದೂ ರಾಮಯ್ಯರ್ ಫೋನ್ ಕೂಡಾ ಮಾಡಿದ್ದರು. ಈಗಾಗಲೇ ಐಯರ್ ಡಮ್ಮೀ ಎಂದೂ, ರಾಮೇಗೌಡರು ಆಡಳಿತ ನಡೆಸುವರೆಂದೂ ಗುಸು ಗುಸು ಪಿಸುಪಿಸು ಮಾತುಗಳು ಕೇಳಿಬಂದಿದ್ದವು.

ಸಜ್ಜನರಾವ್ ಫೋನ್ ಮಾಡಿ ಅಲ್ಲಿಗೆ ಹೋದ ಶಾಸ್ತ್ರ ಮಾಡಿ ತನ್ನ ಮನೆಗೇ ಊಟಕ್ಕೆ ಬರಬೇಕೆಂದು ಒಳ್ಳೆ ಮಾಂಸ ತರಿಸಿ ಬಿರಿಯಾನಿ ಮಾಡಿಸುವೆನೆಂದು ಹೇಳಿದ. ತುಂಬಾ ದಿನದ ಬಳಿಕ ಅಲ್ಲಿನ ಊಟ ಎಂದುಕೊಂಡು ‘ಆಯಿತು’ ಅಂದಿದ್ದ ವೆಂಕಟರಾವ್.

ರಾಮಯ್ಯರ್ ಮತ್ತು ರಾಮೇಗೌಡರ ಅಭಿಮಾನಿ ಎಂಬ ಹಿಂಬಾಲಕನೊಬ್ಬ ಪತ್ರಿಕೆಗಳಲ್ಲಿ ಅವನದು, ಅವರದು ಎರಡೂ ಫೋಟೋಗಳನ್ನು ಉದ್ದುದ್ದವಾಗಿ ಛಾಪಿಸಿ ಜಾಹೀರಾತು ನೀಡಿದ್ದ. ಕೋಲಾರದಲ್ಲಿ ಕೂಡ ಮುಖ್ಯ ಬೀದಿ ಕೂಡುವೆಡೆಗಳಲ್ಲಿ ಅವರ ಫ್ಲೆಕ್ಸ್–ಕಟೌಟುಗಳನ್ನೂ ಹಾಕಿಸಿದ್ದರು. ಇನ್ನು ಮಾಲೂರಿನಲ್ಲಿ ಪ್ರಚಾರ ಹೇಗಿರಬೇಡ? ಆ ಅದ್ದೂರಿ ವ್ಯವಸ್ಥೆಯ ಮಾಹಿತಿಯೂ ವೆಂಕಟರಾಯನಿಗೆ ದೊರಕಿತ್ತು. ಆದ ಮೇಲೆ ಅದು ಸಾಕಷ್ಟು ಜೋರಾಗಿಯೇ ಇರಬೇಕು. 

ಭಾನುವಾರ – ನಿಧಾನವಾಗಿ ಎದ್ದು ಅದು ಇದು ಓದಿ, ಬಸ್ಸಿಗೆ ಹೊರಡಲು ರೆಡಿಯಾಗುವಾಗಲೇ ವೆಂಕಟರಾಯನಿಗೆ ಒಂದು ಕಾಲ್ ಬಂತು. ಮಾಲೂರಿನಲ್ಲಿ ವೆಂಕಟರಾಯನಿದ್ದ ಮನೆಯ ಹಿಂದಿನ ರಸ್ತೆಯಲ್ಲಿದ್ದ ಬೇಕಾದವರೊಬ್ಬರು ಬೈಕ್ ಆಕಸ್ಮಿಕದಲ್ಲಿ ತೀರಿಕೊಂಡಿದ್ದರು. ಅವರ ಮನೆಗೆ ಭೇಟಿಕೊಡುವ ಅನಿವಾರ್ಯತೆಯೂ ವೆಂಕಟರಾಯನಿಗೆ ಹೀಗೆ ಸೃಷ್ಟಿಯಾಯಿತು.

ಅಲ್ಲದೆ ಕೋಲಾರದಲ್ಲಿನ ತನ್ನ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ, ಹೆಂಡತಿಯ ಜೊತೆಗೂ ತುಂಬಾ ಸಲುಗೆ ಇರುವ ಗೆಳೆಯರೊಬ್ಬರು ಫೋನ್ ಮಾಡಿ ಅದೇ ವಿಷಯ ತಿಳಿಸಿ ತಾವೂ ಬರುವುದಾಗಿ ಹೇಳಿದರು. ವೆಂಕಟರಾಯನ ಹೆಂಡತಿಯೂ ಔತಣಕೂಟಕ್ಕೆ ಬಾರೆನೆಂದು, ತೀರಾ ಬೇಕಾದವರು ಆಗಿದ್ದರಿಂದ ಸಾವು ಬಂದ ಮನೆಗೆ ಬರುವೆನೆಂದು ಹೇಳಿದಳು. ಅದಕ್ಕೇ ವೆಂಕಟರಾಯ ಟ್ಯಾಕ್ಸಿ ಕರೆಸಿದ. ಮತ್ತೆ ಹೆಂಡತಿ ಜೊತೆಯಿರುವುದರಿಂದ ಅಲ್ಲಿಗೆ ಊಟಕ್ಕೆ ಬರಲಾರೆನೆಂದು ಸಜ್ಜನರಾವ್‌ಗೆ ತಿಳಿಸಿದ. ‘ಹೋಗಲಿ, ಮನೆಗಾದರೂ ಬಂದು ಹೋಗಿ’ ಅಂದರು ಸಜ್ಜನರಾವ್.

ಇನ್ನೇನು ಹೊರಡುವ ಕಾಲ ಬಂದಾಗ ಬರುವೆನೆಂದ ಆ ಗೆಳೆಯ ಬಾರೆನೆಂದುಬಿಟ್ಟ. ಅವನ ನೆಂಟರೊಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಹೋಗಿಬಿಟ್ಟರೆಂದು, ಅಲ್ಲಿಗೆ ಹೋಗಬೇಕಿದೆಯೆಂದೂ ಅವನು ಸುದ್ದಿ ಮುಟ್ಟಿಸಿದ. ವೆಂಕಟರಾಯನ ಹೆಂಡತಿಯೂ ‘ನೀವು ಎರಡೆರಡು ಕಡೆ ಓಡಾಟ ಮಾಡಿದರೆ ನಾನೇನು ಮಾಡಲಿ? ನಾನೆಲ್ಲಿಗೂ ಬರುವುದಿಲ್ಲ. ನೀವೇ ಹೋಗಿ ಬನ್ನಿ.

ಅವರಿಗೆ ನನ್ನ ಸಂತಾಪ ತಿಳಿಸಿ’ ಎಂದುಬಿಟ್ಟಳು. ‘ನಾನು ಪಲ್ಲವಿಯ ಮನೆಗೆ ಹೋಗಿರ್ತೀನೆ. ಬೇಗ ಬಂದರೆ ಫೋನ್ ಮಾಡಿ’ ಅಂತ ಸೇರಿಸಿದಳು. ಪಲ್ಲವಿ ಅವಳ ದೂರದ ನೆಂಟಳು. ಅವಳು ಮನೆಯಲ್ಲೆ ಸೀರೆ, ಟಪ್ಪರ್‌ವೇರ್ ಇತ್ಯಾದಿ ಮಾರುತ್ತಾಳೆ. ಇವಳು ಅತ್ತ ಹೋದರೆ ಸಾವಿರ ರೂಪಾಯಿನ ಮಾಲನ್ನಾದರೂ ಕಂತುಗಳ ಮೇಲೆ ತರುವವಳೇ ಅಂದುಕೊಂಡ ವೆಂಕಟರಾವ್, ‘ಹೋಗು. ಆದರೆ ಏನೂ ಕೊಳ್ಳಬೇಡ. ಹೋದ ತಿಂಗಳೇ ನಿನ್ನ ಕಂತು ತೀರಿದೆ’ ಅಂದ.

ಟ್ಯಾಕ್ಸಿ ಕರೆಸಿ ಆಗಿತ್ತಾಗಿ ವೆಂಕಟರಾಯ ಒಬ್ಬನೇ ಹೊರಟ. ಟ್ಯಾಕ್ಸಿಯವರೊಂದಿಗೆ ಸುಖ ದುಃಖ ಹೇಳಬಾರದು. ಅದು ಪ್ರಯೋಜನವಿಲ್ಲದ ಕೆಲಸ. ಆದರೂ ಎರಡು ಮಾತು ಪ್ರಯಾಣದ ಬಗ್ಗೆ ಹೇಳಿದ. ಆ ಊರು, ಏರಿಯಾಗಳೆಲ್ಲ ತನಗೆ ಗೊತ್ತೆಂದು, ಕೆಲವು ದಿನ ಅಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡಿದ್ದಾಗಿಯೂ ಅವನು ರೋಡಿನಿಂದ ದೃಷ್ಟಿ ಸಡಿಲಿಸದೆ ವೆಂಕಟರಾಯನಿಗೆ ಹೇಳಿದ.

ಆ ಚಾಲಕ ಬಹಳ ಮಾತುಗಾರ. ವೆಂಕಟರಾಯನತ್ತ ತಿರುಗದೆಯೇ, ಕನ್ನಡಿಯಲ್ಲಿ ಸಹ ನೋಡದೆ ಮಾತಾಡುತ್ತಿದ್ದ. ಹೇಗೆ ತಾನು ಮದುವೆ ಮನೆಗೆ ಹೊರಟವನು ಮಸಣಕ್ಕೆ ಹೋಗಬೇಕಾಗಿ ಬಂತು. ಹೇಗೆ ಅದೊಮ್ಮೆ ಅವನನ್ನು ಸಾವು ಕೋಣದ ರೂಪದಲ್ಲಿ ಎದುರು ಬಂದು ಹಿಂದಿದ್ದ ಲಾರಿಯ ರೂಪದಲ್ಲಿ ಸವರಿಕೊಂಡು ಹೋಯಿತು – ಮುಂತಾಗಿ ವೃತ್ತಾಂತಗಳನ್ನು ಹೇಳುತ್ತಿದ್ದ.

ಬರೀ ಸಾವಿನ ಬಗ್ಗೆ ಮಾತಾಡುತ್ತಿದ್ದ ಅವನ ಬಗ್ಗೆ ವೆಂಕಟರಾಯನಿಗೆ ಚೂರು ಚೂರೇ ಬೇಸರ ಬಂದು ನಂತರ ಅವನ ಮಾತಿನಿಂದ ಚೂರು ಚೂರೇ ಭಯವಾದಂತೆ ಅನ್ನಿಸಿತು. ಮಾತು ಅವನು ವಾಹನ ಚಲಾಯಿಸುತ್ತಿದ್ದ ಹಾಗೆಯೇ ವೇಗವಾಗಿತ್ತು. ಸಾಮಾನ್ಯವಾಗಿ ಟ್ಯಾಕ್ಸಿ ಚಾಲಕರು ಮೈಲೇಜ್ ಬರುವುದಿಲ್ಲ ಎಂದು ಗಂಟೆಗೆ 60-70 ಕಿಲೋಮೀಟರಿಗಿಂತ ವೇಗವಾಗಿ ಗಾಡಿ ಓಡಿಸುವುದಿಲ್ಲ. ಆದರೆ ಇವನು ಹೋಗಬೇಕಿರುವುದು ಮೂವತ್ತು ಕಿಲೋಮೀಟರೇ ಆದರೂ ಹೈವೇ ತಲುಪಿದ ಕೂಡಲೇ ಗಂಟೆಗೆ 140 ಕಿಲೋಮೀಟರ್ ವೇಗಕ್ಕೆ ಆಕ್ಸಿಲರೇಟರ್ ಹಿಡಿದಿದ್ದ.

ಎದುರು ಬರುವ ವಾಹನಗಳು ಸುಂಯ್ ಎಂದು ಓಡಿದರೆ, ಮುಂದಿದ್ದ ವಾಹನವನ್ನು ಚಾಲಕ ಕ್ಷಣಾರ್ಧದಲ್ಲಿ ಹಿಂದಿಕ್ಕುತ್ತಿದ್ದ. ಅವನಿಗೆ ನಿಧಾನವಾಗಿ ಹೋಗು ಎನ್ನಲೂ ವೆಂಕಟರಾಯನಿಗೆ ಅಂಜಿಕೆಯಾಯಿತು. ಅಂಜಿಕೆ ಮಾತಲ್ಲಿ ಬರುವ ಮೊದಲೇ ಅವನು ವೆಂಕಟರಾಯ ತಲುಪಬೇಕಿದ್ದ ಮಾಲೂರು ತಲುಪಿ ಆಗಿತ್ತು.

ಅವನನ್ನು ವೆಂಕಟರಾಯ ‘ನಿನ್ನದು ಯಾವ ಊರು’ ಎಂದು ಕೇಳಿದ್ದ. ಅವನದಕ್ಕೆ ಉತ್ತರಿಸದೆ ‘ಬಿಡಿ ಸಾರ್, ಎಲ್ಲಿದ್ದರೇನು ಮಾಡೋ ಕೆಲಸ ಡ್ರೈವಿಂಗು’ ಅಂದಿದ್ದ. ವೆಂಕಟರಾಯ ಮಾತು ಬೆಳೆಸಲಿಲ್ಲ. ಆದರೂ ಆ ಚಾಲಕನನ್ನ ಹಿಂದೆ ಕಂಡಿದ್ದೇನೆ ಮತ್ತು ಅವನ ಧ್ವನಿಯನ್ನು ಕೇಳಿದ್ದೇನೆ ಎಂಬ ಭಾವವೇ ವೆಂಕಟರಾಯನ ಮನಸಿನಲ್ಲಿ. ಕಾರು ವೆಂಕಟರಾಯ ಹೇಳಿದ ಬರ್ತ್‌ಡೇ ಪಾರ್ಟಿಯ ಮನೆ ಹತ್ತಿರ ನಿಂತಿತು.

ಆದರೆ ಅಲ್ಲಿ ಸಂಭ್ರಮದ ಬದಲಿಗೆ ಮನೆಯ ಮುಂದೆ ಬೆರಣಿ ಹೊಗೆಯೆಬ್ಬಿಸುತ್ತಿತ್ತು. ವೆಂಕಟರಾಯ ಇವನಿಗೆ ಬರ್ತ್‌ಡೇ ಪಾರ್ಟಿಯ ಮನೆ ವಿಳಾಸವನ್ನು ಮಾತ್ರವೇ ಕೊಟ್ಟಿದ್ದ. ಅದವನ ನೆನಪಿನಲ್ಲಿತ್ತು. ಆದರೆ ಈಗ ಅದನ್ನು ಹೇಳುವುದರಲ್ಲಿ ಏನೋ ಎಡವಟ್ಟಾಗಿ ಹೋಗಿದೆ ಎನ್ನಿಸಿತು.

ನನಗೆ ದೊರೆತ ವರ್ತಮಾನವೇ ಹೆಚ್ಚು ಕಡಿಮೆಯಾ? ಎಂಬ ಸಂಶಯ ಬೇರೆ ಶುರುವಾಗಿ ಕಾರಿನಿಂದಿಳಿದು ಮನೆಯ ಆಸುಪಾಸು ಅಜಮಾಯಿಷಿ ಮಾಡಿ ನೋಡಿದ. ಎಲ್ಲ ಸರಿಯಾಗಿಯೇ ಇತ್ತು. ಹಾದಿಹೋಕನನ್ನ ‘ರಾಮಯ್ಯರ್ ಮನೆ ಇದೇನಾ’ ಅಂತ ಕೇಳಿದರೆ ‘ಯಾವ ರಾಮಯ್ಯರ್’ ಅಂತ ಕೆಟ್ಟದಾಗಿ ನೋಡಿ ಹೊರಟುಹೋದ. ಹೆಂಡತಿಯ ನಂಬರಿಗೆ ಫೋನು ಮಾಡಿ ವಿಚಾರಿಸಿದ.

ಲ್ಯಾಂಡ್ ಮಾರ್ಕು ವಿಚಾರಿಸಿಕೊಂಡು, ‘ಅದೇ ಬರ್ತ್‌ಡೇ ಪಾರ್ಟಿಯ ಮನೆ. ಯಾಕೆರೀ ಕನ್ಫ್ಯೂಷನ್ನು’ ಎಂದಳು, ಅವನ ಹೆಂಡತಿ. ಅದೇನೋ ಸುಂಟರಗಾಳಿಯಲ್ಲಿ ಮಾತಾಡಿದಂತೆ ಇತ್ತು ಅತ್ತಲಿನ ಮಾತು. ಇಲ್ಲ, ಅವಳಿಗೂ ಸರಿಯಾದ ಮಾಹಿತಿ ಇರುವಂತಿಲ್ಲ ಎನ್ನಿಸಿ ಕಾರಲ್ಲಿ ಕೂತು ಬರ್ತ್‌ಡೇ ಪಾರ್ಟಿಯ ರಾಮಯ್ಯರ್ ಮಗನಿಗೆ ಫೋನ್ ಮಾಡಿದ. ‘ನಿನ್ನ ಮನೆಯ ಮುಂದೆಯೇ ಇದ್ದೇನೆ’ ಎಂದು ಹೇಳಿದ.

ಹೊಗೆ ಸೀಳಿಕೊಂಡು ಹೊರಬಂದ ವ್ಯಕ್ತಿ ರಾಮಯ್ಯರ್ ಮಗ. ವೆಂಕಟರಾಯನಿಗೆ ಅವನ ಗುರುತಾಯಿತು. ಅವನು ಬರ್ತ್‌ಡೇ ಪಾರ್ಟಿಯ ಯಾವ ಅವಸ್ಥೆಯಲ್ಲೂ ಇರಲಿಲ್ಲ. ಕಿವಿಗೆ ಮೊಬೈಲು ಹಿಡಿದ ಅವನು ಸುತ್ತ ನೋಡುತ್ತಾ ಮಾತಾಡುತ್ತಾ ಕರೆಮಾಡಿದವನನ್ನ ಹುಡುಕುತ್ತಿದ್ದ. ವೆಂಕಟರಾಯ ಅವನಿಗೆ ‘ನನ್ನ ಕಾರು ಕಾಣುತ್ತಾ’ ಎಂದರೆ ‘ಯಾವ ಕಾರು, ಯಾವ ಕಾರು? ಯಾವುದೂ ಇಲ್ಲವಲ್ಲ’ ಎಂದು ನೋಡಿ ನೋಡಿ ಕುತ್ತಿಗೆ ನೋವಾದವನಂತೆ ಒಳಕ್ಕೆ ಹೋಗಿಬಿಟ್ಟ. 

ಗಾಡಿ ನಿಲ್ಲಿಸಿದ ಡ್ರೈವರ್ ಎಲ್ಲಿಯೋ ಇಳಿದು ಹೋಗಿದ್ದ. ವೆಂಕಟರಾಯನಿಗೆ ಆ ಇನ್ನೊಂದು ಮನೆಗೆ ಹೋಗಿ ಬಂದುಬಿಡುವ ಇರಾದೆಯಾಯಿತು. ಅವರು ಫೋನಿನಲ್ಲಿ ಪೋಸ್ಟ್‌ಮಾರ್ಟಂ ಆದ ಹೆಣವನ್ನು ತುಂಬಾ ಹೊತ್ತು ಇಡಲು ಸಾಧ್ಯವಿಲ್ಲವೆಂದು, ಹನ್ನೆರಡಕ್ಕೂ ಮೊದಲು ತೋಟದಲ್ಲಿಯೇ ಮಣ್ಣುಮಾಡಿಬಿಡುವುದೆಂದು ಹೇಳಿದ್ದರು. ಆ ತೋಟ ವೆಂಕಟರಾಯ ನೋಡಿದ್ದ; ಅದು ಇದರ ವಿರುದ್ಧ ದಿಕ್ಕಿನಲ್ಲಿ ಎರಡು ಕಿಲೋಮೀಟರ್ ದೂರದಲ್ಲಿತ್ತು.

ಯಾಕೋ ಮೈ ಬೆವರಿದಂತಾಯಿತು. ಕಾರಿನಲ್ಲಿರುವುದರಿಂದ ಇದ್ದೀತು. ಕೆಳಗಿಳಿದು ಡ್ರೈವರನ್ನು ಹುಡುಕಿದ. ಸುತ್ತಮುತ್ತ ಎಲ್ಲಿಯೂ ಕಾಣಲಿಲ್ಲ. ತೀರದ ಅಸಹನೆಯುಂಟಾಯಿತು. ಸಾಮಾನ್ಯವಾಗಿ ಇಂತಹ ಸಮಯ ಎದುರಾದಾಗ ಇರಲಿ ಎಂದು ವೆಂಕಟರಾಯ ಡ್ರೈವರ್ ಮೊಬೈಲ್ ನಂಬರ್ ತೆಗೆದುಕೊಂಡಿರುತ್ತಾನೆ. ಅವನ ನಂಬರ್ ಎಂಗೇಜಿತ್ತು.

ಮುಖ ಒರೆಸಿಕೊಳ್ಳಲು ಕರ್ಚೀಫು ತೆಗೆದು ಕಾರಿನ ರಿಯರ್‌ವ್ಯೂ ಮಿರರ್‌ನಲ್ಲಿ ಇಣುಕಿದ. ಆ ಡ್ರೈವರನ ಮುಖ ತೇಲಿಬಂತು. ಹಿಂದೆ ತಿರುಗಿ ನೋಡಿದ. ಅಲ್ಲಿ ಯಾರೂ ಇರಲಿಲ್ಲ. ಕಾರಿನಲ್ಲಿ ಕೂತು ಡ್ರೈವರನ ನಂಬರಿಗೆ ಮತ್ತೆ ಕರೆಮಾಡಲು ಕಾಲ್‌ಲಾಗ್ ಬಿಡಿಸಿದ. ವೆಂಕಟರಾಯ ಆಗಲೆ ಅವನು ಡ್ರೈವರಿಗೆಂದು ಕರೆ ಮಾಡಿದ ನಂಬರು ಅವನದೇ ಆಗಿತ್ತು.

***
ವೆಂಕಟರಾಯನಿಗೆ ಎಚ್ಚರವಾದಾಗ ಅವನು ಕಾರಿನಲ್ಲೆ ಮಲಗಿದ್ದ. ಕಾರು ಮರಕ್ಕೆ ಆತುಕೊಂಡಿತ್ತು. ಕತ್ತಲು ಆವರಿಸಲು ಶುರುವಾಗಿತ್ತು. ಕಣ್ಣುಜ್ಜಿಕೊಂಡು ಮೊಬೈಲ್ ನೋಡಿದ. ಮೂವತ್ತು ಮಿಸ್ಡ್ ಕಾಲುಗಳಿದ್ದವು. ಎದುರು ತನ್ನ ಸೀಟಿನಲ್ಲಿ ಡ್ರೈವರ್ ಕುಸಿದಿದ್ದ. ಸುತ್ತ ಕಾರು ಬೈಕುಗಳಿದ್ದವು. ಜನರಿದ್ದರು. ಕಾರಿನಲ್ಲಿ ಹಸಿ ನೆತ್ತರ ವಾಸನೆ. ಬಾಗಿಲು ಜಡಿದುಕೊಂಡಿತ್ತು. ಗ್ಲಾಸ್ ಇಳಿಸಿದ.

ಡ್ರೈವರ್ ಹೇಳಿದ ಸಾವು ಸವರಿಕೊಂಡು ಹೋಗಿತ್ತು ಎನ್ನುವುದು ನೆನಪಾಗಿ ಹೃದಯ ಬಾಯಿಗೆ ಬಂತು. ಏನಾಗಿದೆ ಎನ್ನುವುದು ಅರಿವಾಗುವ ವೇಳೆಗೆ ಒಂದು ಜೀಪಿನ ಸದ್ದು ಹತ್ತಿರವಾಗತೊಡಗಿತು. ಅದು ನಿಂತ ಒಡನೆ ಅದನ್ನು ಹಿಂಬಾಲಿಸಿ ಬಂದು ಮುಂದೆ ಹೋದ ಆಂಬುಲೆನ್ಸಿನ ಸದ್ದು.

ವೆಂಕಟರಾಯ ಜೀಪಿನಲ್ಲಿ ಆಸ್ಪತ್ರೆಯನ್ನು ತಲುಪುವ ವೇಳೆಗೆ ಆಂಬುಲೆನ್ಸಿಂದ ಅವನ ಹೆಂಡತಿಯ ಮತ್ತು ಗೆಳೆಯನ ಚಿಂದಿಯಾದ ಶವಗಳು ಕೆಳಗಿಳಿಯುತ್ತಿದ್ದವು. ಆ ಬೈಕು, ಡಿಕ್ಕಿ ಹೊಡೆದ ಕಾರು ತಾನು ಹೋದ ಕಾರೇ ಎಂಬುದು ಅರಿವಾಗಲು ವೆಂಕಟರಾಯನಿಗೆ ಬಹಳ ಸಮಯ ಹಿಡಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT