ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರೆಗಣ್ಣು

ಈ ಭಾನುವಾರ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸಿ.ಎಂ ಕುರ್ಚಿಗೆ ಕೈಮುಗಿದರು...
ಬೆಂಗಳೂರು:
ನಿಗದಿತ ಸಮಯದಲ್ಲಿ ಕಲಾಪಕ್ಕೆ ಹಾಜರಾಗುವ ರೂಢಿ ಇಟ್ಟುಕೊಂಡಿರುವ 84 ವರ್ಷ ವಯಸ್ಸಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಅಧಿವೇಶನದ ಕೊನೆಯ ದಿನ (ಫೆ. 14) ಬೆಳಿಗ್ಗೆ 10.30ಕ್ಕೆ ಸದನಕ್ಕೆ ಬಂದು ಕುಳಿತಿದ್ದರು. ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಮುಖ್ಯಸಚೇತಕ ವಿ.ಸುನೀಲ ಕುಮಾರ್ ಸದನಕ್ಕೆ ಬಂದರು. 

ಬಗರ್‌ಹುಕುಂ ಹಾಗೂ ಅರಣ್ಯ ಹಕ್ಕು ಕಾಯ್ದೆ ಅಡಿ ಭೂಮಿ ಕೊಡಿಸುವ ವಿಷಯ ಅನೌಪಚಾರಿಕವಾಗಿ ಚರ್ಚೆಗೆ ಬಂದಿತು. ಶೆಟ್ಟರ್‌ ಕಡೆ ನೋಡಿದ ಕಾಗೋಡು, ‘ಎಲ್ಲಾ ನೀವು ಮಾಡಿಟ್ಟು ಹೋಗಿದ್ದು ಮಾರಾಯ್ರೇ...’ ಎಂದರು.
 
‘ಸರಿ ಮಾಡ್ರೀ ಎಂದು ನಿಮ್ಮನ್ನು ಅಧಿಕಾರದಲ್ಲಿ ಕುಂದಿರಿಸ್ಸಿವ್ರೀ’ ಎಂದು ಶೆಟ್ಟರ್‌ ಪ್ರತಿಕ್ರಿಯಿಸಿದರು. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಳಿತುಕೊಳ್ಳುವ ಜಾಗದ ಕಡೆ ಕೈಮುಗಿದ ಕಾಗೋಡು,‘ ಈ ಮನುಷ್ಯ ಇದ್ದಾನಲ್ಲಾ ಮಾರಾಯ್ರೆ... ಏನಾದ್ರೂ ಹೇಳಿದ್ರೆ ಆತಂಗೆ ಅರ್ಥಾನೇ ಆಗೋಲ್ಲ. ಎಷ್ಟೂಂತ ತಲೆ ಚಚ್ಚಿಕೊಂಡ್‌ ಸಾಯ್ಲಿ...’ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.
-ವೈ.ಗ.ಜಗದೀಶ್‌
 
**
ಅವರು ಶಿರಾಗೆ ಮಾತ್ರ ಸಚಿವರು!
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಜಿಲ್ಲೆಗೆ ಉಸ್ತುವಾರಿ ಸಚಿವರೋ ಇಲ್ಲ ಸ್ವಕ್ಷೇತ್ರ ಶಿರಾಕ್ಕೆ ಮಾತ್ರ ಮೀಸಲಾದ ಸಚಿವರೋ–  ಹೀಗೊಂದು ಪ್ರಸಂಗ ಚರ್ಚೆಗೆ ಬಂದಿದ್ದು ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ. 
 
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ ಗೌಡ ಅವರು ಸಮಾರಂಭದಲ್ಲಿ, ‘ಗ್ರಾಮಾಂತರದಲ್ಲಿ ಬಾಲಕಿಯರ ವಿದ್ಯಾಭ್ಯಾಸಕ್ಕೆ ಅನಾನುಕೂಲವಿದೆ. ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ಮಹಿಳಾ ಪದವಿ ಕಾಲೇಜು ಪ್ರಾರಂಭಿಸಬೇಕು. ವಿಶ್ವವಿದ್ಯಾಲಯಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರು ಒದಗಿಸಬೇಕು, ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ವೇದಿಕೆಯಲ್ಲಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಮಾಡಿದರು.   
 
ಆಗ ರಾಯರಡ್ಡಿ, ‘ರಸ್ತೆ, ಕುಡಿಯುವ ನೀರು ನನ್ನ ಖಾತೆಗೆ ಬರುವುದಿಲ್ಲ. ಆ ಖಾತೆ ಸಚಿವರು ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರೇ ಆಗಿದ್ದಾರೆ. ಅವರನ್ನೇ ಕೇಳಿ’ ಎಂದು ಸುರೇಶ್ ಗೌಡ ಅವರ ಪಕ್ಕದಲ್ಲಿ ಕುಳಿತಿದ್ದ ಟಿ.ಬಿ.ಜಯಚಂದ್ರ ಅವರತ್ತ ನೋಟ ಬೀರಿದರು. 
 
ತಕ್ಷಣವೇ, ‘ಅವರಿಗೆ ಜಿಲ್ಲೆ ಅಂದರೆ ಶಿರಾ ಮಾತ್ರ. ಅವರು ಶಿರಾ ಉಸ್ತುವಾರಿ’ ಎಂದು ಸುರೇಶ್ ಗೌಡ ಅವರು ಹೇಳಿದಾಗ, ಜಯಚಂದ್ರರಾದಿಯಾಗಿ ಎಲ್ಲರೂ   ಮುಗುಳ್ನಕ್ಕರು.
-ಪ್ರಸನ್ನಕುಮಾರ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT