ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳಿಗೆ ಪರಿಸರದ ಅರಿವು ಮೂಡಿಸಬೇಕು

ವಾರದ ಸಂದರ್ಶನ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಅರಣ್ಯದ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳುವಾಗ ತತ್‌ಕ್ಷಣದ ಲಾಭವನ್ನೇ ಮುಖ್ಯವಾಗಿ ಪರಿಗಣಿಸಿದರೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾದುದು ಅನಿವಾರ್ಯ’.
 
–ಪರಿಸರ ತಜ್ಞರೂ ಆಗಿರುವ ಸಿಕ್ಕಿಂ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಥಾಮಸ್‌ ಚಾಂಡಿ ಅವರ ಸ್ಪಷ್ಟವಾದ ಅಭಿಪ್ರಾಯ ಇದು.
 
‘ಪಶ್ಚಿಮಘಟ್ಟ ಶ್ರೇಣಿಯಲ್ಲಿ ಜೈವಿಕ ಸೂಕ್ಷ್ಮ ವಲಯದ ಪಟ್ಟಿಯಿಂದ ಹಲವು ಪ್ರದೇಶಗಳನ್ನು ಕೈಬಿಡುವಂತೆ ನಡೆಸಿದ ಪ್ರಯತ್ನವೇ ಇರಬಹುದು, ಯಾವುದೇ ಭೂಭಾಗವನ್ನು ಸಂರಕ್ಷಿತ ಮೀಸಲು ಅರಣ್ಯ ಪಟ್ಟಿಯಿಂದ ಹೊರಗಿಡುವ ಆದೇಶವೇ ಆಗಿರಬಹುದು, ರಸ್ತೆಗಳ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲು ನೀಡಿದ ಅನುಮತಿಯೇ ಇರಬಹುದು, ಎಲ್ಲ ನಿರ್ಧಾರಗಳಿಗೂ ಈ ಮಾತು ಅನ್ವಯ’ ಎಂದು ಹೇಳುತ್ತಾರೆ. ‘ನಾವು ಕೊಡಲಿ ಪೆಟ್ಟು ಹಾಕುವುದು ಮರಕ್ಕಲ್ಲ, ನಮ್ಮ ಭವಿಷ್ಯಕ್ಕೆ ಎಂಬುದನ್ನು ಮರೆಯಬಾರದು’ ಎಂದು ಅವರು ಎಚ್ಚರಿಸುತ್ತಾರೆ.
 
‘ನಮ್ಮ ಮುಖ್ಯಮಂತ್ರಿ ಪವನ್‌ ಕುಮಾರ್‌ ಚಾಮ್ಲಿಂಗ್‌ ಅರಣ್ಯದ ಮಹತ್ವವನ್ನು 20 ವರ್ಷಗಳಷ್ಟು ಹಿಂದೆಯೇ ಸರಿಯಾಗಿ ಗ್ರಹಿಸಿದ್ದಾರೆ. ಹೀಗಾಗಿ ನಮ್ಮ ಅರಣ್ಯ ಪ್ರದೇಶ ಈಗ ಶೇ 4ರಷ್ಟು ಹೆಚ್ಚಾಗಿದೆ’ ಎನ್ನುತ್ತಾರೆ ಚಾಂಡಿ. ಹವಾಮಾನ ಬದಲಾವಣೆ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ:
 
* ಅರಣ್ಯ ಸಂರಕ್ಷಣೆ ವಿಷಯದಲ್ಲಿ ಸಿಕ್ಕಿಂ ಮಾಡಿದ್ದೇನು? ಪರಿಸರಕ್ಕೆ ಸಂಬಂಧಪಟ್ಟಂತೆ ನಿಮ್ಮ ಮುಖ್ಯಮಂತ್ರಿಯವರ ನಿಲುವುಗಳು ಹೇಗೆ ಭಿನ್ನವಾಗಿವೆ?
ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ ಒಂದು ಕಾಲದಲ್ಲಿ ಟಿಂಬರ್‌ ಉದ್ಯಮಕ್ಕೆ ಹೆಸರಾಗಿತ್ತು. ಮರಗಳನ್ನು ಯಾವ ಪ್ರಮಾಣದಲ್ಲಿ ನಾಶ ಮಾಡಲಾಗಿತ್ತೆಂದರೆ, ಅರಣ್ಯದ ಮಧ್ಯದಲ್ಲಿ ಬಂಜರು ಭೂಮಿಯಂತಹ ದ್ವೀಪಗಳೇ ನಿರ್ಮಾಣವಾಗಿದ್ದವು. ಕೃಷಿ ಪ್ರಧಾನವಾಗಿರುವ ಗ್ರಾಮಾಂತರ ಭಾಗದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲೇ ದನಗಳನ್ನು ಮೇಯಿಸುವ ಪ್ರವೃತ್ತಿ ಹೆಚ್ಚಿತ್ತು. ಕಾಡಿನ ಖಾಲಿ ಪ್ರದೇಶದಲ್ಲಿ ನೆಟ್ಟ ಸಸಿಗಳನ್ನು ಅವುಗಳು ತಿಂದು ಬಿಡುತ್ತಿದ್ದವು. ಮೊದಲು, ಗೋಪಾಲಕರು ದನಗಳನ್ನು ಮೇಯಿಸಲು ಗ್ರಾಮಗಳಿಗೆ ಹೊಂದಿಕೊಂಡಿರುವ ‘ಗೋಚಾರಣ’ಗಳಿಗೆ (ಕರ್ನಾಟಕದ ಗೋಮಾಳಗಳಂತೆ) ಮರುಜೀವ ನೀಡಲಾಯಿತು. ಬಳಿಕ, ಮೀಸಲು ಅರಣ್ಯದಲ್ಲಿ ದನ ಮೇಯಿಸದಂತೆ ಸಂಪೂರ್ಣ ನಿರ್ಬಂಧ ವಿಧಿಸಲಾಯಿತು. ಪರಿಣಾಮ, 20 ವರ್ಷಗಳಲ್ಲಿ ಅರಣ್ಯ ಪ್ರದೇಶ ಶೇ 4ರಷ್ಟು ವೃದ್ಧಿಯಾಗಿದೆ. ಬತ್ತಿದ್ದ ಜಲಮೂಲಗಳಲ್ಲಿ ಮತ್ತೆ ನೀರಿನ ಸೆಲೆಗಳು ಚಿಮ್ಮಿವೆ. ಜೀವವೈವಿಧ್ಯವನ್ನು ಕಾಪಾಡಲು ಕೂಡ ಸಾಧ್ಯವಾಗಿದೆ.
 
ಕಾಡಿನ ರಕ್ಷಣೆಯಲ್ಲಿ ಪಂಚಾಯಿತಿಗಳ ಪಾತ್ರವೂ ಇದ್ದು, ಸಮುದಾಯದ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಮಟ್ಟದಲ್ಲಿ ರಚಿಸಿರುವ ಅರಣ್ಯ ನಿರ್ವಹಣಾ ಸಮಿತಿಗಳು ಕಾಡಿನ ಒಣಗಿದ ಮರಗಳನ್ನು ಗುರುತಿಸುವುದು, ಖಾಲಿ ಪ್ರದೇಶದಲ್ಲಿ ಯಾವ ಸಸಿಗಳನ್ನು ನೆಡಬೇಕು ಎಂಬುದನ್ನು ನಿರ್ಧರಿಸುವುದು, ‘ಗೋಚಾರಣ’ಗಳು ಹಸಿರಿನಿಂದ ಕೂಡಿರುವಂತೆ ನೋಡಿಕೊಳ್ಳುವುದು– ಹೀಗೆ ಎಲ್ಲ ಮಹತ್ವದ ಹೊಣೆಯನ್ನೂ ನಿಭಾಯಿಸುತ್ತವೆ. ಪ್ರತಿವರ್ಷ ಜೂನ್‌ 25ರಂದು ‘ಭೂಮಿಗಾಗಿ 10 ನಿಮಿಷ’ ಆಂದೋಲನ ನಡೆಯುತ್ತದೆ. ಅವತ್ತು ಗಡಿಯಾರದ ಮುಳ್ಳು 10.30 ತೋರಿಸುತ್ತಿದ್ದಂತೆ ರಾಜ್ಯದ ಪ್ರತಿಯೊಬ್ಬರೂ ಒಂದೊಂದು ಸಸಿ ನೆಡುತ್ತಾರೆ. ರಾಜ್ಯದಾದ್ಯಂತ ಪೋಖರಿ (ಕೆರೆ) ಸಂರಕ್ಷಣಾ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೆ, ಪ್ರತಿ ಶಾಲೆಯಲ್ಲೂ ನೇಚರ್‌ ಕ್ಲಬ್‌ ಸ್ಥಾಪಿಸಲಾಗಿದೆ. 
 
ನಮ್ಮ ರಾಜ್ಯದಲ್ಲಿ 20 ವರ್ಷಗಳ ಹಿಂದೆಯೇ ಪ್ಲಾಸ್ಟಿಕ್‌ ಚೀಲಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪಟಾಕಿ ಸಿಡಿತದ ಮೇಲೆ ಎರಡು ವರ್ಷಗಳ ಹಿಂದೆಯೇ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿದರೆ ಭಾರಿ ಪ್ರಮಾಣದ ದಂಡ ಹಾಕಲಾಗುತ್ತದೆ. ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಬಾಟಲಿ ನೀರನ್ನು ಬಳಸುವಂತಿಲ್ಲ. ಬಟ್ಟೆಯ ನೂಲಿನಂತೆ, ಸರ್ಕಾರದ ಪ್ರತಿ ನಡೆಯಲ್ಲೂ ಪರಿಸರದ ಕಾಳಜಿ ಹಾಸುಹೊಕ್ಕಾಗಿದೆ. ಈ ಎಲ್ಲ ನಿರ್ಧಾರಗಳಲ್ಲಿ ಮುಖ್ಯಮಂತ್ರಿಯವರ ಅರಣ್ಯ ಪ್ರೇಮದ ಪ್ರಭಾವ ಇದೆ.
* ನೀವು ಕೇರಳ ಮೂಲದವರು. ಪಶ್ಚಿಮಘಟ್ಟ ಗಿರಿಶ್ರೇಣಿಯ ಮಹತ್ವದ ಅರಿವು ನಿಮಗೂ ಇದೆ. ‘ಪರಿಸರ ಸೂಕ್ಷ್ಮ ವಲಯ’ದಲ್ಲಿ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವ ಕಾರಣಕ್ಕಾಗಿ ಆ ವಲಯದ ಪಟ್ಟಿಯಿಂದ ಹಲವು ಪ್ರದೇಶಗಳನ್ನು ಕೈಬಿಡುವಂತೆ ಘಟ್ಟ ಪ್ರದೇಶದ ಎಲ್ಲ ರಾಜ್ಯಗಳು ಒತ್ತಡ ಹಾಕುವುದು ಸರಿಯೇ?
ರಾಜಕೀಯ ನಾಯಕತ್ವಕ್ಕೆ ಯಾವಾಗಲೂ ತಕ್ಷಣದ ಲಾಭವೇ ಮುಖ್ಯ. ಇಂತಹ ಕ್ಷಣಿಕ ಲಾಭದ ಲೆಕ್ಕಾಚಾರದಲ್ಲಿ ಕೈಗೊಂಡ ನಿರ್ಧಾರಗಳಿಂದ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡು ಬರಲಾಗಿರುವ ಸೂಕ್ಷ್ಮ ಪರಿಸರವನ್ನು ಒಮ್ಮೆ ಕಳೆದುಕೊಂಡರೆ ಮರುಸೃಷ್ಟಿ ಸಾಧ್ಯವಿಲ್ಲ. ಅಭಿವೃದ್ಧಿಯ ಬೆನ್ನುಬಿದ್ದರೆ ಅದಕ್ಕೆ ಮಿತಿ ಎಲ್ಲಿದೆ? ಅಭಿವೃದ್ಧಿ ಚಟುವಟಿಕೆಗಳು ಅರಣ್ಯ ಪ್ರದೇಶವನ್ನು ವಿಘಟನೆ ಮಾಡುತ್ತವೆ. ದ್ವೀಪದಂತಾದ ಪರಿಸರದಲ್ಲಿ ಆನೆ, ಹುಲಿ, ಸಿಂಹದಂತಹ ದೊಡ್ಡ ಪ್ರಾಣಿಗಳು ಬದುಕಲಾಗದೆ ಆಚೆ ಬರುತ್ತವೆ. ಮಾನವ–ಪ್ರಾಣಿ ಸಂಘರ್ಷದ ಮೂಲವೇ ಇದು. ‘ಪರಿಸರ ಸೂಕ್ಷ್ಮ ವಲಯ’ದಲ್ಲಿ ಇರುವ ಗ್ರಾಮಗಳ ಜನ ಜೀವವೈವಿಧ್ಯದ ಸಂರಕ್ಷಣೆಗಾಗಿ ಸಣ್ಣ ತ್ಯಾಗಕ್ಕೆ ಸಿದ್ಧವಾಗಲೇಬೇಕು. ಏಕೆಂದರೆ, ಅವರಿಗೆ ಬೇರೆ ಭೂಮಿ ಇದೆ. ಪಶ್ಚಿಮಘಟ್ಟಕ್ಕೆ ಬೇರೆ ನೆಲೆ ಒದಗಿಸಲು ಸಾಧ್ಯವಿಲ್ಲ. ರಾಜಕಾರಣಿಗಳಿಗೆ ಪರಿಸರದ ಸೂಕ್ಷ್ಮಗಳ ಕುರಿತು ಅರಿವು ಮೂಡಿಸುವಂತಹ ಕಾರ್ಯಾಗಾರ ನಡೆಸುವ ಅಗತ್ಯವಿದೆ.
 
* ನೀವು ಅರಣ್ಯ ಸಂರಕ್ಷಣೆ ಮಾತುಗಳನ್ನು ಆಡುತ್ತಿದ್ದೀರಿ. ನಮ್ಮ ರಾಜ್ಯ ಸರ್ಕಾರ ಕಪ್ಪತಗುಡ್ಡ ಅರಣ್ಯವನ್ನು ಸಂರಕ್ಷಿತ ಮೀಸಲು ಪ್ರದೇಶದಿಂದ ಕೈಬಿಡುವ ನಿರ್ಧಾರ ತೆಗೆದುಕೊಂಡಿದೆಯಲ್ಲ?
ಅರಣ್ಯ ಪ್ರದೇಶವನ್ನು ಉಳಿಸುವುದು ಮಾತ್ರವಲ್ಲದೆ ಬೆಳೆಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಸರ್ಕಾರದ ನಿಲುವು. ನಮ್ಮ ರಾಜ್ಯದ ಒಟ್ಟು ಭೂಭಾಗದ ಶೇ 47.80ರಷ್ಟು ಅರಣ್ಯ ಪ್ರದೇಶವಿದೆ. ಶೀಘ್ರದಲ್ಲೇ ರಾಜ್ಯದ ಅರ್ಧ ಭೂಭಾಗದ ತುಂಬಾ ಅರಣ್ಯ ವಿಸ್ತರಣೆಗೊಳ್ಳಲಿದೆ. ಕಾಡು, ಕಾಡಾಗಿಯೇ ಉಳಿಯಬೇಕು. ಅನ್ಯ ಉದ್ದೇಶಕ್ಕೆ ಬಳಕೆಯಾಗಬಾರದು. ಪರಿಸರಕ್ಕೆ ವ್ಯತಿರಿಕ್ತವಾದ ನಿರ್ಧಾರ ಎಂದಿಗೂ ಒಳ್ಳೆಯದಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ. ನಿಮ್ಮ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಶ್ಲೇಷಿಸುವ ಗೋಜಿಗೆ ಹೋಗಲಾರೆ.
 
* ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ 812 ಮರಗಳನ್ನು ಕತ್ತರಿಸಲು ನಿರ್ಧರಿಸಲಾಗಿದೆ. ನಿಮ್ಮ ರಾಜ್ಯದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಹೇಗೆ ರಸ್ತೆ ನಿರ್ಮಾಣ ಮಾಡುತ್ತೀರಿ?
ರಸ್ತೆ ಮೂಲಸೌಕರ್ಯ ಹೆಚ್ಚಿಸಬೇಕೆಂಬ ಹಪಾಹಪಿಗೆ ಮುಖ್ಯವಾಗಿ ಎರಡು ಕಾರಣ. ಒಂದು, ಸಮೂಹ ಸಾರಿಗೆ ಸೌಲಭ್ಯ ಸಮರ್ಪಕವಾಗಿ ಇಲ್ಲದಿರುವುದು; ಮತ್ತೊಂದು, ರಸ್ತೆಜಾಲದ ಸ್ಥಿತಿ ಹದಗೆಟ್ಟಿರುವುದು. ನಮ್ಮ ರಾಜ್ಯದಲ್ಲಿ ಗುಡ್ಡಗಾಡು ಪ್ರದೇಶವೇ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿದು ಹೋಗುವುದು ಮಾಮೂಲಿ. ಪ್ರವಾಸೋದ್ಯಮ ಹಾಗೂ ಕೃಷಿಯೇ ನಮ್ಮ ಮುಖ್ಯ ಆರ್ಥಿಕ ಮೂಲ. ಎರಡೂ ವಲಯಗಳಿಗೆ ರಸ್ತೆಜಾಲ ಬೇಕೇಬೇಕು. 
 
ನಮ್ಮ ಮುಖ್ಯಮಂತ್ರಿಯವರಿಗೆ ಹೊಸ ರಸ್ತೆ ನಿರ್ಮಾಣದ ಮೇಲೆ ಆಸಕ್ತಿಯಿಲ್ಲ. ಇರುವ ರಸ್ತೆಗಳನ್ನೇ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವತ್ತ ಅವರ ಒಲವಿದೆ. ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ, ಗುಂಡಿಮುಕ್ತ ರಸ್ತೆಗಳ ಅಭಿವೃದ್ಧಿಯೇ ನಮ್ಮ ಆದ್ಯತೆ. ಈ ಕಾರ್ಯಗಳಿಗೂ ಒಮ್ಮೊಮ್ಮೆ ಮರ ಕಡಿಯಬೇಕಾಗುತ್ತದೆ. ಆದರೆ, ಒಂದು ಮರ ಕಡಿಯುವ ಮುಂಚೆ ನಾವು ಹತ್ತು ಸಸಿಗಳನ್ನು ನೆಟ್ಟು ಬೆಳೆಸಿರುತ್ತೇವೆ. ವಿರಳ ಎನ್ನುವಂತಹ ಮರಗಳನ್ನು ಬೇರುಸಹಿತ ಸ್ಥಳಾಂತರ ಮಾಡಿ ನೆಡುತ್ತೇವೆ. 
 
ಬೆಂಗಳೂರಿನ ಸ್ಥಿತಿ ಭಿನ್ನ. ದಟ್ಟಣೆಯಲ್ಲಿ ಲಕ್ಷಾಂತರ ವಾಹನಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಿರುವ ರಸ್ತೆಯಲ್ಲಿ ವಾಹನಗಳು ಉಗುಳುವ ಇಂಗಾಲದ ಪ್ರಮಾಣ ಹಾಗೂ ಸೇತುವೆಗಾಗಿ ಮರೆಯಾಗಲಿರುವ ಮರಗಳು ಹೀರುತ್ತಿದ್ದ ಇಂಗಾಲದ ಪ್ರಮಾಣ ಎರಡನ್ನೂ ತುಲನೆಮಾಡಿ ನಿರ್ಣಯ ಕೈಗೊಳ್ಳಬೇಕು. ಹಾಗೆಯೇ ಸೇತುವೆ ನಿರ್ಮಾಣದಿಂದ ಎಷ್ಟರಮಟ್ಟಿಗೆ ಇಂಗಾಲದ ಹೊರಸೂಸುವಿಕೆಯನ್ನು ತಪ್ಪಿಸಲಾಗುತ್ತದೆ ಎಂಬುದನ್ನೂ ಲೆಕ್ಕ ಹಾಕಬೇಕು. ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಯತ್ನ ಮಾಡಬೇಕು. ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಸಮೂಹ ಸಾರಿಗೆ ಸೌಲಭ್ಯವನ್ನು ಹೆಚ್ಚಿಸುವ ಮೂಲಕ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಲ್ಲವೆ?
* ಮಾನವ–ಪ್ರಾಣಿ ಸಂಘರ್ಷ ನಿಮ್ಮಲ್ಲೂ ಇದೆಯೇ? ಅದನ್ನು ಹೇಗೆ ನಿಭಾಯಿಸುತ್ತೀರಿ?
ಹೌದು, ನಮ್ಮಲ್ಲೂ ಮಾನವ–ಪ್ರಾಣಿ ಸಂಘರ್ಷದ ಸಮಸ್ಯೆ ಇದೆ. ಆದರೆ, ಯಾವುದೇ ಕಾರಣಕ್ಕೂ ಪ್ರಾಣಿಯನ್ನು ಕೊಲ್ಲುವಂತಿಲ್ಲ ಎಂಬ ಕಾನೂನು ಮಾಡಲಾಗಿದೆ. ಪ್ರಾಣಿಗಳಿಂದ ನಷ್ಟ ಅನುಭವಿಸಿದ ವ್ಯಕ್ತಿಗೆ ಸ್ಥಳೀಯ ಅಧಿಕಾರಿ, ಘಟನೆ ಸಂಭವಿಸಿದ 24 ಗಂಟೆಗಳಲ್ಲಿಯೇ ನಷ್ಟದ ಅಂದಾಜಿನ ಶೇಕಡ 25ರಷ್ಟು ಮೊತ್ತವನ್ನು ಪರಿಹಾರದ ರೂಪದಲ್ಲಿ ಕೊಡುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿ 48 ಗಂಟೆಗಳೊಳಗೆ ಸ್ಥಳಕ್ಕೆ ಭೇಟಿ ನೀಡಿ, ನಷ್ಟ ಪ್ರಮಾಣದ ನಿಖರ ಲೆಕ್ಕಾಚಾರ ಮಾಡಿ ಬಾಕಿ ಮೊತ್ತಕ್ಕೆ ಸ್ಥಳದಲ್ಲೇ ಚೆಕ್‌ ನೀಡುತ್ತಾರೆ. ಜೀವಹಾನಿಯಾಗಿದ್ದರೆ ಪರಿಹಾರದ ಮೊತ್ತ ದೊಡ್ಡದಾಗಿರುವ ಕಾರಣ ಗರಿಷ್ಠ ಮೂರು ದಿನಗಳಲ್ಲಿ ಚೆಕ್‌ ಕೊಡಲಾಗುತ್ತದೆ. ಮಾನವ–ಪ್ರಾಣಿ ಸಂಘರ್ಷ ತಪ್ಪಿಸಲು ಕಾಡಿನ ಕಡಿದುಹೋದ ಸಂಪರ್ಕದ ಪುನರ್‌ಸ್ಥಾಪನೆಗೆ ಕಾರಿಡಾರ್‌ ನಿರ್ಮಿಸುತ್ತಿದ್ದೇವೆ.
 
* ಸಿಕ್ಕಿಂ ಸಂಪೂರ್ಣ ಸಾವಯವ ರಾಜ್ಯವಾಗಿದ್ದು ನಿಜವೇ?
ನಿಮಗೇಕೆ ಸಂಶಯ? ನಮ್ಮ ಈ ಯಶಸ್ಸಿನ ಹಿಂದೆ ಹತ್ತು ವರ್ಷಗಳ ಶ್ರಮವಿದೆ. ಸಿಕ್ಕಿಂ ರಾಜ್ಯದಲ್ಲಿರುವುದು 77 ಸಾವಿರ ಹೆಕ್ಟೇರ್‌ ಕೃಷಿ ಭೂಮಿ. ಕರ್ನಾಟಕಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಕೃಷಿ ಪ್ರದೇಶವಿದು. ಇಷ್ಟು ಭೂಮಿಯನ್ನು ಸಾವಯವ ಕೃಷಿಗೆ ಒಗ್ಗಿಸಲು ನಮಗೆ ಹತ್ತು ವರ್ಷಗಳೇ ಬೇಕಾದವು. ಸರ್ಕಾರದಿಂದ ಸಾವಯವ ಗೊಬ್ಬರ ಪೂರೈಕೆ ಆರಂಭಿಸಿದ ಒಂದು ವರ್ಷದ ಬಳಿಕ ರಾಸಾಯನಿಕ ಗೊಬ್ಬರದ ಬಳಕೆಗೆ ನಿಷೇಧ ಹೇರಲಾಯಿತು. ರಾಜ್ಯದ ಎಲ್ಲೆಡೆ ಸಾವಯವ ಗೊಬ್ಬರ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಲಾಯಿತು. ಸಾವಯವ ಕೃಷಿ ಉತ್ಪನ್ನಗಳ ಪ್ರಮಾಣೀಕರಣಕ್ಕೂ ಸರ್ಕಾರದಿಂದಲೇ ವ್ಯವಸ್ಥೆ ಮಾಡಲಾಯಿತು. ಈಗ ರಾಜ್ಯಕ್ಕೆ ಬರುವ ಎಲ್ಲ ಪ್ರವಾಸಿಗರೂ ಇಲ್ಲಿನ ಕೃಷಿ ಉತ್ಪನ್ನ ಖರೀದಿಗೆ ಮುಗಿ ಬೀಳುತ್ತಾರೆ.
 
ಸಾವಯವ ಕೃಷಿ ಮೂಲಕ ಹುರುಳಿ, ಶುಂಠಿ, ಅರಿಷಿಣ ಹಾಗೂ ಏಲಕ್ಕಿ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಈ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆಯಿದೆ. ತರಕಾರಿ ಹಾಗೂ ಹೂವುಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ನಮ್ಮ ರೈತರ ಕಿಸೆ ತುಂಬುವಷ್ಟು ದುಡ್ಡು ಸಿಗುತ್ತದೆ. ಪರಿಸರದ ಸಂರಕ್ಷಣೆಯಲ್ಲೇ ಅವರು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT