ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಬಿಜೆಪಿಗೆ ಬೆಂಬಲ ನೀಡದಿರಲು ಎನ್‌ಸಿಪಿ ನಿರ್ಧಾರ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿನ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಶಿವಸೇನಾ ಹಿಂಪಡೆದರೆ ಬಿಜೆಪಿಗೆ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)  ಬೆಂಬಲ ನೀಡುವುದಿಲ್ಲ ಎಂದು ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

‘ಬಿಜೆಪಿಗೆ ಬೆಂಬಲ ನೀಡದಿರುವ ನಿರ್ಧಾರವನ್ನು  ರಾಜ್ಯಪಾಲರಿಗೆ ಲಿಖಿತ ರೂಪದಲ್ಲಿ ನೀಡಲು ಎನ್‌ಸಿಪಿ ಸಿದ್ಧ. ಆದರೆ, ಶಿವಸೇನಾ ಕೂಡ ತನ್ನ ನಿರ್ಧಾರವನ್ನು ಸರ್ಕಾರಕ್ಕೆ ಬರೆದು ಕಳಿಸಬೇಕು’ ಎಂದು ಪವಾರ್‌ ಮಾಧ್ಯಮಗಳಿಗೆ ಹೇಳಿದ್ದಾರೆ.

ಬಿಜೆಪಿ ಮತ್ತು ಶಿವಸೇನಾ ನಡುವಿನ ಜಗಳದ ಹಿನ್ನೆಲೆಯಲ್ಲಿ ಪವಾರ್‌ ಅವರ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.  ಎರಡು ಪಕ್ಷಗಳ ಮಧ್ಯೆ ಕಳೆದ ಕೆಲವು ದಿನಗಳಿಂದ ಬಿಕ್ಕಟ್ಟು ಹೆಚ್ಚಿದ್ದು  ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ಶಿವಸೇನಾದ ಅನೇಕರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ.
ಶಿವಸೇನಾ ತನ್ನ ಮುಖವಾಣಿಯಾದ ‘ಸಾಮ್ನಾ’ ದಲ್ಲಿ ಬಿಜೆಪಿ ಪಕ್ಷ, ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಮೇಲೆ ನಿರಂತರ ಟೀಕೆ ಮಾಡುತ್ತಿದೆ.

ಬಿಜೆಪಿ ‘ಹೆಡೆ ಎತ್ತಿದ ಸರ್ಪ’: ಉದ್ಧವ್‌

ಠಾಣೆ (ಪಿಟಿಐ): ಮಹಾರಾಷ್ಟ್ರದಲ್ಲಿ ಸ್ಥಳೀಯಾಡಳಿತ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ಪಕ್ಷದ ವಿರುದ್ಧ ಶಿವಸೇನಾ ತನ್ನ ಟೀಕೆಯನ್ನು  ತೀವ್ರಗೊಳಿಸಿದೆ. ಬಿಜೆಪಿಯನ್ನು ಶಿವಸೇನಾ ಸರ್ಪಕ್ಕೆ ಹೋಲಿಸಿದೆ.
ಶುಕ್ರವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಉದ್ಧವ್‌ ಠಾಕ್ರೆ  ‘ಕಳೆದ 25 ವರ್ಷಗಳಿಂದ ‘ಸರ್ಪ’ದೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. ಆದರೆ ಸರ್ಪ ಈಗ ಹೆಡೆ ಎತ್ತಿದೆ.  ಆದರೆ ಅದರ ಹೆಡೆಮುರಿಕಟ್ಟುವುದು ನಮಗೆ ಗೊತ್ತು’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಫಡಣವೀಸ್‌ ಅವರು ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ  ಅವರು ಆರೋಪಿಸಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT