ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮೂರನೇ ಹಂತದ ಮತದಾನ

ಉತ್ತರ ಪ್ರದೇಶ: 25,603 ಮತಗಟ್ಟೆಗಳು
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಲಖನೌ:  ಉತ್ತರ ಪ್ರದೇಶದಲ್ಲಿ  ಮೂರನೇ ಹಂತದ ವಿಧಾನಸಭಾ ಚುನಾವಣೆ ಭಾನುವಾರ ನಡೆಯಲಿದೆ. ಮತದಾನಕ್ಕಾಗಿ ಚುನಾವಣಾ ಆಯೋಗವು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

12 ಜಿಲ್ಲೆಗಳಲ್ಲಿ ಹರಡಿರುವ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲಖನೌ, ಸಮಾಜವಾದಿ ಪಕ್ಷದ  (ಎಸ್‌ಪಿ) ಪ್ರಾಬಲ್ಯವಿರುವ ಕನ್ನೌಜ್‌, ಮೇನ್‌ಪುರಿ ಮತ್ತು ಇಟಾವಾಗಳಲ್ಲಿ ಮತದಾನ ನಡೆಯಲಿದೆ. ಇಟಾವಾ, ಎಸ್‌ಪಿ ಸಂಸ್ಥಾಪಕ ಮಲಾಯಂ ಸಿಂಗ್‌ ಯಾದವ್‌ ಅವರ ತವರು ನೆಲ.

2012ರ ಚುನಾವಣೆಯಲ್ಲಿ ಈ 69 ಕ್ಷೇತ್ರಗಳ ಪೈಕಿ 55 ಕ್ಷೇತ್ರಗಳಲ್ಲಿ ಎಸ್‌ಪಿ ಜಯಗಳಿಸಿತ್ತು. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಬಿಜೆಪಿ ಮತ್ತು ಕಾಂಗ್ರೆಸ್‌ ಕ್ರಮವಾಗಿ ಆರು, ಐದು ಮತ್ತು ಎರಡು ಸ್ಥಾನಗಳನ್ನು ಗಳಿಸಿದ್ದವು.

ಭಾನುವಾರ 25,603 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ಇಲ್ಲಿದ್ದಾರೆ.

ಎಸ್‌ಪಿ ಮುಖಂಡ ನರೇಶ್‌ ಅಗರ್‌ವಾಲ್‌ ಮಗ ನಿತಿನ್‌ ಅಗರ್‌ವಾಲ್‌, ಬಿಎಸ್‌ಪಿ ತೊರೆದು ಬಿಜೆಪಿ ಸೇರಿರುವ ಬ್ರಿಜೇಶ್‌ ಪಾಠಕ್‌, ಕಾಂಗ್ರೆಸ್‌ ತ್ಯಜಿಸಿದ್ದ ರೀಟಾ ಬಹುಗುಣ ಜೋಶಿ (ಮುಲಾಯಂ ಸೊಸೆ ಅಪರ್ಣಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ), ಎಸ್‌ಪಿ ಮುಖಂಡ ಶಿವಪಾಲ್‌, ಕಾಂಗ್ರೆಸ್‌ ಮುಖಂಡ ಪಿ.ಎಲ್‌. ಪುನಿಯಾ ಮಗ ತನುಜ್‌ ಪುನಿಯಾ ಕಣದಲ್ಲಿರುವ ಪ್ರಮುಖರು.

‘ಅತ್ಯಾಚಾರ ಆರೋಪಿಗಳ ಪರ  ಪ್ರಿಯಾಂಕಾ ಮತಯಾಚಿಸುತ್ತಿರುವುದು ದುರದೃಷ್ಟಕರ’
ನವದೆಹಲಿ: 
ಅತ್ಯಾಚಾರ ಮತ್ತು ಕೊಲೆಯಂತಹ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರ ಪರವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮತ ಯಾಚಿಸುತ್ತಿರುವುದು ದುರದೃಷ್ಟಕರ ಎಂದು ಬಿಜೆಪಿ ಟೀಕಿಸಿದೆ.

ಅತ್ಯಾಚಾರ ಆರೋಪ ಎದುರಿಸುತ್ತಿರುವ ಸಚಿವ ಗಾಯತ್ರಿ ಪ್ರಜಾಪತಿ ಅವರು ಅಮೇಠಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಮತ್ತೊಬ್ಬ ಅಭ್ಯರ್ಥಿ  ಅರುಣ್‌ ವರ್ಮಾ ಅವರು ಕೊಲೆ ಆರೋಪ ಎದುರಿಸುತ್ತಿದ್ದಾರೆ.

ಇದನ್ನು ಉಲ್ಲೇಖಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮಾ ಅವರು ‘ಪ್ರಿಯಾಂಕಾ ಈ ಆರೋಪಗಳ ಕುರಿತು ಮೌನವಾಗಿದ್ದಾರೆ. ಪ್ರಿಯಾಂಕಾ ಹಾಗೂ ರಾಹುಲ್‌ ಗಾಂಧಿ ಉತ್ತರ ಪ್ರದೇಶದ ಜನರ ಜತೆಯಲ್ಲಿ ಇಲ್ಲ. ಅವರು ಅತ್ಯಾಚಾರಿಗಳು, ಕೊಲೆಗಾರರು ಹಾಗೂ ಅವರನ್ನು ರಕ್ಷಿಸುವವರ ಜತೆಗೆ ಇದ್ದಾರೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT