ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೊ ಬೆಡ್‌ ಆಫ್‌ ರೋಸಸ್‌’ಗೆ ನಿಷೇಧ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ : ಭಾರತದ ನಟ ಇರ್ಫಾನ್ ಖಾನ್ ಅಭಿನಯಿಸಿರುವ ಮತ್ತು ಸಹ ನಿರ್ಮಾಪಕರಾಗಿರುವ ‘ನೊ ಬೆಡ್ ಆಫ್ ರೋಸಸ್’ ಸಿನಿಮಾವನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿದೆ.

ಬಾಂಗ್ಲಾದೇಶದ ಸಿನಿಮಾ ನಿರ್ಮಾಪಕ ಮುಸ್ತಫಾ ಸರ್‌ವಾರ್ ಫಾರೂಕಿ ಈ ಚಲನಚಿತ್ರದ ನಿರ್ಮಾಪಕರಾಗಿದ್ದಾರೆ.

ಈ ಚಲನಚಿತ್ರ, ಬಾಂಗ್ಲಾದೇಶದ ದಿವಂಗತ ಲೇಖಕ ಮತ್ತು ಸಿನಿಮಾ ನಿರ್ಮಾಪಕ ಹುಮಾಯುನ್ ಅಹಮದ್ ಅವರ ಜೀವನಚರಿತ್ರೆ ಆಧಾರಿತವಾದದ್ದು ಎನ್ನುವ ಸುದ್ದಿಗಳು ಬಾಂಗ್ಲಾದೇಶ ಮತ್ತು ಭಾರತದ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ವಿವಾಹವಾದ 27 ವರ್ಷಗಳ ಬಳಿಕ ಪತ್ನಿಗೆ ವಿಚ್ಛೇದನ ನೀಡಿದ್ದ ಹುಮಾಯುನ್ ಅವರು 33 ವರ್ಷದ ಕಿರಿಯ ನಟಿಯನ್ನು ವಿವಾಹವಾಗಿದ್ದರು.

ಈ ಚಲನಚಿತ್ರ  ಹುಮಾಯುನ್ ಅಹಮದ್ ಅವರ ಜೀವನಚರಿತ್ರೆ ಆಧಾರಿತವಾದದ್ದು ಎಂಬುದುನ್ನು ಫಾರೂಕಿ ಅಲ್ಲಗಳೆದಿದ್ದಾರೆ.

ಸಿನಿಮಾದಲ್ಲಿ ಇರ್ಫಾನ್ ಅವರು ಜಾವೇದ್ ಹಸನ್ ಎಂಬ ಹೆಸರಿನ ನಿರ್ಮಾಪಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಆತ ಪತ್ನಿಯನ್ನು ತ್ಯಜಿಸಿ ಮಗಳ ಸಹಪಾಠಿಯಾಗಿರುವ  ನಟಿಯೊಬ್ಬಳನ್ನು ವಿವಾಹವಾಗುವ ಕಥೆಯನ್ನೊಳಗೊಂಡ ಸಿನಿಮಾ ಇದಾಗಿದೆ.

‘ಬಾಂಗ್ಲಾದೇಶ ಸರ್ಕಾರ ಸಿನಿಮಾವನ್ನು ನಿಷೇಧಿಸಿರುವುದು ನಿಜಕ್ಕೂ ಅಚ್ಚರಿಯುಂಟುಮಾಡಿದೆ. ಇದೊಂದು ಮಾನವೀಯ ಕಥೆಯುಳ್ಳ, ಪುರುಷ ಮತ್ತು ಸ್ತ್ರೀಯ ನಡುವಣ ಸಂಕೀರ್ಣ ಸಂಬಂಧವನ್ನು ಸಮತೋಲನದಿಂದ ಹಾಗೂ ಸೂಕ್ಷ್ಕವಾಗಿ ಬಿಂಬಿಸಿದ ಸಿನಿಮಾವಾಗಿದೆ’ ಎಂದು ಇರ್ಫಾನ್ ಹೇಳಿದ್ದಾರೆ.
ಬಾಂಗ್ಲಾದೇಶದ ಜಾಝ್ ಮಲ್ಟಿಮೀಡಿಯಾ, ಭಾರತದ ಎಸ್ಕೇ ಮೂವೀಸ್ ಮತ್ತು ಖಾನ್ ಅವರ ಐಕೆ ಕಂಪೆನಿ ಜತೆಯಾಗಿ ಸಿನಿಮಾ ನಿರ್ಮಿಸಿವೆ.

ನಿರ್ಮಾಣಕ್ಕೆ ಸಿಕ್ಕಿತ್ತು ಅನುಮತಿ:  ಸಿನಿಮಾದ ಕಥೆಗೆ ‘ಬಾಂಗ್ಲಾದೇಶ ಚಲನಚಿತ್ರ ಅಭಿವೃದ್ಧಿ ನಿಗಮದ (ಬಿಎಫ್‌ಡಿಸಿ) ಜಂಟಿ ಪರಾಮರ್ಶೆ ಸಮಿತಿ 2016ರ ಮಾರ್ಚ್ 8ರಂದು ಅನುಮತಿ ನೀಡಿತ್ತು.

2017ರ ಫೆಬ್ರುವರಿ 12ರಂದು ಸಿನಿಮಾವನ್ನು ವೀಕ್ಷಿಸಿದ್ದ ಬಿಎಫ್‌ಡಿಸಿ ಫೆಬ್ರುವರಿ 15ರಂದು ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿತ್ತು. ಆದರೆ,
ಬಾಂಗ್ಲಾದೇಶದ ಮಾಹಿತಿ ಸಚಿವಾಲಯದ ಪತ್ರದ ಮೇರೆಗೆ ಪ್ರಮಾಣಪತ್ರವನ್ನು ರದ್ದು ಮಾಡಿರುವುದಾಗಿ ಫೆಬ್ರುವರಿ 16ರಂದು ತಿಳಿಸಿತ್ತು.
ಈ ಕುರಿತು ಬಿಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ತಪನ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಪ್ರಮಾಣಪತ್ರ ನೀಡುವುದು ಬಾಂಗ್ಲಾದೇಶದ ಚಲನಚಿತ್ರ ಸೆನ್ಸಾರ್ ಮಂಡಳಿಗೆ ಸಂಬಂಧಿಸಿದ ವಿಷಯ ಎಂದಿದ್ದಾರೆ.

ಆದರೆ, ಸಿನಿಮಾ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಎಲ್ಲ ಪತ್ರಗಳಲ್ಲೂ ಬಿಎಫ್‌ಡಿಸಿ ಮುದ್ರೆ ಇದೆ. ಅಲ್ಲದೆ, ಅಂತರರಾಷ್ಟ್ರೀಯ ಸಹಯೋಗದಲ್ಲಿ ನಿರ್ಮಿಸುವ ಸಿನಿಮಾಗಳಿಗೆ ಅನುಮತಿ ಪಡೆಯಲು ಬಿಎಫ್‌ಡಿಸಿ ಪ್ರಮಾಣ ಪಡೆಯದೆ ಚಲನಚಿತ್ರ ಸೆನ್ಸಾರ್ ಮಂಡಳಿಗೆ ಮನವಿ ಸಲ್ಲಿಸುವಂತಿಲ್ಲ.

ಸಿನಿಮಾ ನಿಷೇಧ ಆದೇಶದಲ್ಲಿ ಯಾವುದೇ ಕಾರಣ ನೀಡಿಲ್ಲ. ಸಿನಿಮಾ ನಿಷೇಧಿಸಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದದ್ದು.
ಮುಸ್ತಫಾ ಸರ್‌ವಾರ್ ಫಾರೂಕಿ
ನಿರ್ಮಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT