ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಯುದ್ಧದ ‘ಟೈಗರ್‌ ಮಾತ್‌’

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ವಿಂಟೇಜ್‌ ಯುದ್ಧ ವಿಮಾನ ‘ಟೈಗರ್‌ ಮಾತ್‌’ ಏರೊ ಇಂಡಿಯಾ 2017ರ ವೈಮಾನಿಕ ಪ್ರದರ್ಶನದಲ್ಲಿ ಹಾರಾಟ ನಡೆಸುವ ಮೂಲಕ ಗಮನ ಸೆಳೆಯಿತು.

1942ರಲ್ಲಿ ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಬಳಿಕ ವಸ್ತು ಸಂಗ್ರಹಾಲಯ ಸೇರಿದ್ದ ವಿಮಾನಕ್ಕೆ 2007ರಲ್ಲಿ ಮರುಜೀವ ನೀಡಲಾಯಿತು. ವಿಮಾನದಲ್ಲಿದ್ದ ದೋಷಗಳನ್ನು ಸರಿಪಡಿಸಿ ಹೊಸ ವಿನ್ಯಾಸ ನೀಡಲಾಗಿತ್ತು. ಹೊಸ ರೂಪ ಪಡೆದ ವಿಮಾನವು 2012ರಲ್ಲಿ ಹಾರಾಟ ನಡೆಸುವ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿತ್ತು.

ಈವರೆಗೆ ಮೂರು ವೈಮಾನಿಕ ಪ್ರದರ್ಶನಗಳಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಇದರ ಇಂಧನ ಟ್ಯಾಂಕ್‌ ಅನ್ನು ಮರ ಮತ್ತು ಫ್ಯಾಬ್ರಿಕ್‌ನಿಂದ ಮಾಡಲಾಗಿದೆ. ಗರಿಷ್ಠ 80 ಲೀಟರ್‌ ಇಂಧನ ಸಾಮರ್ಥ್ಯ ಹೊಂದಿದ್ದು, ಎರಡೂವರೆ ಗಂಟೆಗಳವರೆಗೆ ನಿರಂತರವಾಗಿ ಹಾರಾಟ ನಡೆಸಬಹುದು. ವಿಂಗ್‌ ಕಮಾಂಡರ್‌ ಪ್ರಶಾಂತ್‌ ನಾಯರ್‌ ಈ ವಿಮಾನದ ಪೈಲಟ್‌ ಆಗಿದ್ದಾರೆ.  ಅವರು ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಓದಿದವರು.

‘ಭಾರತೀಯ ವಾಯುಪಡೆಯ ಇತಿಹಾಸವನ್ನು ಟೈಗರ್‌ ಮಾತ್‌ ಹೇಳುತ್ತದೆ. ಇದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ಹಾರಾಟ ನಡೆಸಿತ್ತು’ ಎಂದು ಪ್ರಶಾಂತ್‌ ನಾಯರ್‌ ತಿಳಿಸಿದರು.

‘ನವದೆಹಲಿಯ ಪಾಲಂ ವಾಯುಪಡೆ ವಸ್ತುಸಂಗ್ರಹಾಲಯದಲ್ಲಿ ಮೊದಲ ಬಾರಿಗೆ ಈ ವಿಮಾನವನ್ನು ಇರಿಸಲಾಗಿತ್ತು. ಇಂಗ್ಲೆಂಡ್‌ನ ಕಂಪೆನಿಯೊಂದು ಈ ವಿಮಾನವನ್ನು 2007ರಲ್ಲಿ ದುರಸ್ತಿಗೊಳಿಸಿತು. ಈ ವಿಮಾನದ ನಿರ್ವಹಣೆ ಹಾಗೂ ದುರಸ್ತಿ ಮಾಡುವ ಬಗ್ಗೆ ನಮ್ಮ ಎಂಜಿನಿಯರ್‌ಗಳ ತಂಡವು ತರಬೇತಿ ಪಡೆದಿದೆ’ ಎಂದು ಹೇಳಿದರು.
‘ಈ ವಿಮಾನವನ್ನು ಹಾರಿಸಲು ವಿಶೇಷ ಕೌಶಲ ಅಗತ್ಯವಿದೆ. ಇಂಗ್ಲೆಂಡ್‌ನಲ್ಲಿ ಇದರ ತರಬೇತಿ ನೀಡಲಾಗುತ್ತದೆ. ಯುದ್ಧ ವಿಮಾನಗಳಿಗೆ ಮುಂಭಾಗದಲ್ಲಿ ಒಂದು ಚಕ್ರ, ಹಿಂಭಾಗದಲ್ಲಿ ಎರಡು ಚಕ್ರಗಳು ಇರುತ್ತವೆ. ಆದರೆ, ಟೈಗರ್‌ ಮಾತ್‌ ವಿಮಾನಕ್ಕೆ ಮುಂಭಾಗದಲ್ಲಿ ಎರಡು ಹಾಗೂ ಹಿಂಭಾಗದಲ್ಲಿ ಮೂರು ಚಕ್ರಗಳಿವೆ. ಹೀಗಾಗಿ ಇದನ್ನು ಹಾರಿಸುವುದು ಸವಾಲಿನ ಸಂಗತಿ’ ಎಂದು ತಿಳಿಸಿದರು.

ಎರಡರ ನಡುವೆ ಹೋಲಿಕೆ: ಪ್ರಶಾಂತ್‌ ಅವರು ಸುಖೋಯ್‌ ಯುದ್ಧ ವಿಮಾನದ ಪೈಲಟ್‌ ಸಹ ಆಗಿದ್ದಾರೆ. ಸುಖೋಯ್‌ ಶರವೇಗದಲ್ಲಿ ಸಂಚರಿಸುವ ಯುದ್ಧ ವಿಮಾನ. ವಿಂಟೇಜ್‌ ವಿಮಾನದ ವೇಗ ನಿಧಾನ. ಈ ಎರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆ ಮುಂದಿಟ್ಟರೆ, ಪ್ರಶಾಂತ್‌ ಅವರು, ‘ಆಧುನಿಕ ಜೆಟ್‌ ಹಾಗೂ ವಿಂಟೇಜ್‌ ವಿಮಾನಗಳ ಹಾರಾಟದ ಬಗ್ಗೆ ಒಂದೇ ರೀತಿಯ ಭಾವನೆ ಇದೆ. ಎರಡರಲ್ಲೂ ತನ್ನದೇ ಆದ ವೈಶಿಷ್ಟ್ಯಗಳು ಇರುವುದರಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಲು ಕಷ್ಟವಾಗುತ್ತದೆ.  ಸುಖೋಯ್‌ ಶರವೇಗದಲ್ಲಿ ಸಂಚರಿಸುವ ಯುದ್ಧ ವಿಮಾನ. ಹೆಚ್ಚು ಆರಾಮದಾಯಕ. ಆದರೆ, ವಿಂಟೇಜ್‌ ವಿಮಾನವನ್ನು ಹಾರಾಟ ನಡೆಸುವುದು ಸವಾಲಿನ ಕೆಲಸ. ಇದರ ಕಾಕ್‌ಪಿಟ್‌ ತೆರೆದಿರುತ್ತದೆ. ಗಾಳಿಯ ವೇಗವನ್ನು ನೋಡಿಕೊಂಡು ಹಾರಾಟ ನಡೆಸಬೇಕಿರುತ್ತದೆ’ ಎಂದರು.

‘ಸುಖೋಯ್‌ ವಿಮಾನದ ಶಬ್ದ ಒಳಗೆ ಬರುವುದಿಲ್ಲ. ಆದರೆ, ಟೈಗರ್‌ ಮಾತ್‌ನ ಒಳಗೆ ಕುಳಿತಾಗ ಎಂಜಿನ್‌ನ ಶಬ್ದ ಕೇಳುತ್ತದೆ. ಅದಲ್ಲದೆ, ಇದು ಕೆಳಗೆ ಹಾಗೂ ನಿಧಾನವಾಗಿ ಹಾರುತ್ತದೆ. ಹೀಗಾಗಿ ಈ ವಿಮಾನವನ್ನು ಹಾರಿಸಲು ಉತ್ಸುಕವಾಗಿರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT