ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಗೆದ್ದ ಪಳನಿಸ್ವಾಮಿ

ತಮಿಳುನಾಡು ವಿಧಾನಸಭೆಯಲ್ಲಿ ಮಾರಾಮಾರಿ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಚೆನ್ನೈ: ಗೋಪ್ಯ ಮತದಾನಕ್ಕೆ ಅವಕಾಶ ನೀಡಬೇಕು ಎಂದು ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಭಾರಿ ಗದ್ದಲ ಎಬ್ಬಿಸಿದರು. ಡಿಎಂಕೆ ಸದಸ್ಯರನ್ನು ಸದನದಿಂದ ಹೊರಹಾಕಿದ ನಂತರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಬಹುಮತ ಸಾಬೀತುಪಡಿಸಿದರು.
 
‘ಗುಪ್ತ ಮತದಾನಕ್ಕೆ ಅವಕಾಶ ಕೊಡಬೇಕು’ ಎಂಬ ಬೇಡಿಕೆ ಮುಂದಿಟ್ಟ ವಿರೋಧಪಕ್ಷ ಡಿಎಂಕೆ ಸದಸ್ಯರು, ಶನಿವಾರ ಸದನವನ್ನು ಕದನದ ಕಣವಾಗಿಸಿದರು. ಸದನದಲ್ಲಿ ನಡೆದ ಗಲಾಟೆಯ ವೇಳೆ ಸ್ಪೀಕರ್ ಪಿ. ಧನಪಾಲ್ ಅವರ ಅಂಗಿ ಹರಿಯಲಾಯಿತು,  ಅವರತ್ತ ಚಪ್ಪಲಿ ಎಸೆಯಲಾಯಿತು. ಧನಪಾಲ್ ಅವರು ಸದನದಿಂದ ಹೊರಹೋಗಲು ಭದ್ರತಾ ಸಿಬ್ಬಂದಿ ಸಹಾಯ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಯಿತು.
 
ಧನಪಾಲ್ ಅವರು ಹೊರ ನಡೆದ ನಂತರ, ಡಿಎಂಕೆ ಸದಸ್ಯ ಕೆ.ಕೆ. ಸೆಲ್ವಂ ಅವರು ಸ್ಪೀಕರ್‌ಗೆ ಮೀಸಲಾದ ಆಸನದಲ್ಲಿ ಕುಳಿತ ದೃಶ್ಯವೂ ಕಂಡುಬಂತು.
 
ಧ್ವನಿಮತಕ್ಕೂ ಮೊದಲು: ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸಲು ತೀರ್ಮಾನಿಸಿದ್ದ ಡಿಎಂಕೆ ಸದಸ್ಯರು ಸದನದಲ್ಲಿ ಭಾರಿ ಗದ್ದಲ ಎಬ್ಬಿಸಿದರು. ವಿಧಾನಸಭೆಯ ಕಾರ್ಯದರ್ಶಿಯ ಕುರ್ಚಿ ಹಾಳುಗೆಡವಿದರು, ಸದನದ ಕಾರ್ಯಕಲಾಪಗಳ ಪಟ್ಟಿಯನ್ನು ಹರಿದು ತೂರಿದರು.
 
ಸ್ಪೀಕರ್‌ ಆಸನವನ್ನೂ ಹಾಳು ಮಾಡಿದ ಡಿಎಂಕೆ ಸದಸ್ಯರಲ್ಲಿ ಕೆಲವರು ಧನಪಾಲ್ ಅವರತ್ತ ಚಪ್ಪಲಿ ಎಸೆದರು. ಆದರೆ ಅದು ಧನಪಾಲ್ ಅವರಿಗೆ ತಾಗಲಿಲ್ಲ.
ಗಲಾಟೆಯ ವೇಳೆ ತಮ್ಮ ಅಂಗಿ ಹರಿದಿದೆ ಎಂದು ಧನಪಾಲ್ ಅವರು ಸದಸ್ಯರಿಗೆ ತೋರಿಸಿದರು. ‘ನನಗೆ ನೋವಾಗಿದೆ. ಅವರು (ಡಿಎಂಕೆ ಸದಸ್ಯರು) ಒರಟು ವರ್ತನೆಯ ಮೂಲಕ ನನಗೆ ಅವಮಾನ ಮಾಡಿದ್ದಾರೆ. ಸದನದಲ್ಲಿ ಸ್ಪೀಕರ್ ಜೊತೆ ಈ ರೀತಿ ವರ್ತಿಸುವುದು ಸರಿಯೇ’ ಎಂದು ಪ್ರಶ್ನಿಸಿದರು.
 
ಸದನವನ್ನು ಒಂದು ವಾರ ಮುಂದೂಡಿ, ನಂತರ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡಬೇಕು ಎಂಬ ಬೇಡಿಕೆಯನ್ನು ಸ್ಪೀಕರ್ ಮನ್ನಿಸಿಲ್ಲ ಎನ್ನುವ ಕಾರಣ ನೀಡಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.
 
ಗೋಪ್ಯ ಮತದಾನಕ್ಕೆ ಆಗ್ರಹ: ಸದನದ ಕಲಾಪ ಬೆಳಿಗ್ಗೆ ಆರಂಭವಾದಾಗ ‘ಗೋಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಅಥವಾ ಕ್ಷೇತ್ರದ ಜನರ ಅಭಿಪ್ರಾಯ ಏನು ಎಂಬುದನ್ನು ತಿಳಿದುಕೊಳ್ಳಲು ಶಾಸಕರಿಗೆ ಒಂದು ವಾರ ಸಮಯ ನೀಡಬೇಕು. ಸದನವನ್ನು ಒಂದು ವಾರ ಮುಂದೂಡಬೇಕು’ ಎಂದು ಒ. ಪನ್ನೀರ್‌ಸೆಲ್ವಂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮತ್ತು ಕಾಂಗ್ರೆಸ್ಸಿನ ರಾಮಸ್ವಾಮಿ, ಸ್ಪೀಕರ್‌ ಅವರನ್ನು ಒತ್ತಾಯಿಸಿದರು.
 
‘ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು 15 ದಿನಗಳ ಸಮಯ ನೀಡಿದ್ದಾರೆ. ಹೀಗಿರುವಾಗ ತುರ್ತಾಗಿ ಸದನ ಕರೆಯುವ ಅಗತ್ಯ ಏನಿದೆ’ ಎಂದು ಎಐಎಡಿಎಂಕೆ ಪಕ್ಷದ ಭಿನ್ನಮತೀಯರ ಗುಂಪಿನ ನಾಯಕ ಪನ್ನೀರ್‌ಸೆಲ್ವಂ ಪ್ರಶ್ನಿಸಿದರು. ಗೋಪ್ಯ ಮತದಾನಕ್ಕೆ ಸ್ಪೀಕರ್‌ ಅವಕಾಶ ನಿಡದಿದ್ದುದು ಗಲಾಟೆಗೆ ಕಾರಣವಾಯಿತು.
 
ಡಿಎಂಕೆ ಸದಸ್ಯರು ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ವಿರುದ್ಧ ಸದನದಲ್ಲಿ ಘೋಷಣೆ ಕೂಗುತ್ತಿದ್ದರು. ಆದರೆ ಪಳನಿಸ್ವಾಮಿ ಬಣದ ಯಾವುದೇ ಸದಸ್ಯ ಈ ಘೋಷಣೆಗಳಿಗೆ ಪ್ರತ್ಯುತ್ತರ ನೀಡಲಿಲ್ಲ.
 
ಕಲಾಪವನ್ನು ಎರಡು ಬಾರಿ ಮಂದೂಡಿದರೂ ಪ್ರತಿಪಕ್ಷಗಳ ಬೇಡಿಕೆ ಬದಲಾಗಲಿಲ್ಲ. ಸ್ಪೀಕರ್ ಎದುರಿನ ಅಂಗಳಕ್ಕೆ ನುಗ್ಗಿದ ಡಿಎಂಕೆ ಸದಸ್ಯರು ಕಲಾಪಕ್ಕೆ ಅಡ್ಡಿಮಾಡಿದರು.
 
ಸ್ಪೀಕರ್‌ ಸುತ್ತ ಜಮಾಯಿಸಿದ ಪ್ರತಿ ಪಕ್ಷಗಳ ಸದಸ್ಯರು, ಸದನದ ನಿಯಮಗಳ ಪುಸ್ತಕಗಳನ್ನು ಎತ್ತಿ ಎಸೆದರು. ಆಗ ಡಿಎಂಕೆ ಶಾಸಕರನ್ನು ಸದನದಿಂದ ಹೊರಹಾಕುವಂತೆ ಸ್ಪೀಕರ್‌ ಆದೇಶಿಸಿದರು. ಈ ಆದೇಶ ಪಾಲಿಸಲು ಮಾರ್ಷಲ್‌ಗಳು ಮುಂದಾದರು. ಮಾರ್ಷಲ್‌ಗಳ ಜೊತೆ ನಡೆದ ಹೊಡೆದಾಟದಲ್ಲಿ ಡಿಎಂಕೆಯ ಕೆಲವು ಶಾಸಕರು ಗಾಯಗೊಂಡರು.
 
***
ಸದನದಲ್ಲಿ ನಡೆದಿದ್ದು
* ಬೆಳಿಗ್ಗೆ 11 ಗಂಟೆ: ಸದನದ ಕಲಾಪ ಆರಂಭ
* 11.15: ಸದನ ಮುಂದೂಡುವಂತೆ ವಿರೋಧ ಪಕ್ಷಗಳಿಂದ ಒತ್ತಾಯ
* ಮಧ್ಯಾಹ್ನ 12.10: ಡಿಎಂಕೆ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದ ಕಾರಣ ಸದನ ಮುಂದೂಡಿದ ಸ್ಪೀಕರ್
* 1 ಗಂಟೆ: ಮತ್ತೆ ಆರಂಭವಾದ ಕಲಾಪ. ವಿಶ್ವಾಸಮತ ಯಾಚನೆಗೆ ಅವಕಾಶ ಕಲ್ಪಿಸಲು ಮುಂದಾದ ಸ್ಪೀಕರ್
* 1.10: ಮುಂದುವರಿದ ಪ್ರತಿಪಕ್ಷಗಳ ಗದ್ದಲ. ಸ್ಪೀಕರ್‌ ಆಸನವನ್ನು ಹಾಳುಗೆಡವಿದ ಡಿಎಂಕೆ ಸದಸ್ಯರು
* 1.13: ಡಿಎಂಕೆ ಸದಸ್ಯರನ್ನು ಸದನದಿಂದ ಹೊರಗೆ ಕಳುಹಿಸುವಂತೆ ಮಾರ್ಷಲ್‌ಗಳಿಗೆ ಆದೇಶಿಸಿದ ಸ್ಪೀಕರ್
* 3 ಗಂಟೆ: ಮತ್ತೆ ಆರಂಭವಾದ ಕಲಾಪ.
* 3.15: ವಿಶ್ವಾಸ ಮತ ಯಾಚನೆ ಮೇಲೆ ಮತದಾನ ಆರಂಭ.
* 3.21: ಪಳನಿಸ್ವಾಮಿ ಬಹುಮತ ಸಾಬೀತು ಮಾಡಿದ್ದಾರೆ ಎಂದು ಘೋಷಿಸಿದ ಸ್ಪೀಕರ್
 
**
ಪರ 122, ವಿರುದ್ಧ 11
ಪಳನಿಸ್ವಾಮಿ ಅವರು ಮಂಡಿಸಿದ ವಿಶ್ವಾಸಮತ ಯಾಚನೆಯ ಪ್ರಸ್ತಾವನೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
 
ಆ ವೇಳೆ ಡಿಎಂಕೆ ಸದಸ್ಯರನ್ನು ಸದನದಿಂದ ಹೊರಗೆ ಕಳುಹಿಸಲಾಗಿತ್ತು. ವಿಶ್ವಾಸಮತದ ಪರವಾಗಿ 122 ಸದಸ್ಯರು, ವಿರುದ್ಧವಾಗಿ 11 ಶಾಸಕರು ಮತ ಚಲಾಯಿಸಿದರು.
 
**
ಜಯಾ ಸರ್ಕಾರವನ್ನು ಮುಂದುವರಿಸುವುದಾಗಿ ಶಶಿಕಲಾ ಅವರು ಮಾಡಿದ್ದ ಶಪಥವನ್ನು ಪೂರೈಸಿದಂತಾಗಿದೆ.
-ಎಡಪ್ಪಾಡಿ ಕೆ. ಪಳನಿಸ್ವಾಮಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT