ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಿಸಿದ ಒಂದೂವರೆ ತಾಸಿನಲ್ಲೇ ಬಂಧನ

ಅಪಹರಿಸಿದ ಒಂದೂವರೆ ತಾಸಿನಲ್ಲೇ ಬಂಧನ
Last Updated 18 ಫೆಬ್ರುವರಿ 2017, 20:06 IST
ಅಕ್ಷರ ಗಾತ್ರ
ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಜಗಳವಾಗಿ ಅಭಿಲಾಷ್ (23) ಎಂಬ ಕಾರು ಚಾಲಕನನ್ನು ಅಪಹರಿಸಿ ಕುಣಿಗಲ್‌ಗೆ ಕರೆದೊಯ್ಯುತ್ತಿದ್ದ ಎಂಟು  ಆರೋಪಿಗಳು ಮಹಾಲಕ್ಷ್ಮಿಲೇಔಟ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
 
‘ಚನ್ನಪಟ್ಟಣ ತಾಲ್ಲೂಕಿನ ಅಜಯ್, ಸಚಿನ್, ಮಾಯಣ್ಣ, ಮಂಜೇಗೌಡ, ದರ್ಶನ್, ಸ್ವಾಮಿ, ಆನಂದ್ ಹಾಗೂ ಕಿರಣ್ ಎಂಬುವರನ್ನು ಬಂಧಿಸಲಾಗಿದೆ. ಶುಕ್ರವಾರ ಸಂಜೆ ಮಹಾಲಕ್ಷ್ಮಿ ಲೇಔಟ್ ಸಮೀಪದ ಕೆಂಪೇಗೌಡ ಆರ್ಚ್ ಬಳಿ ನಿಂತಿದ್ದ ಅಭಿಲಾಷ್ ಅವರನ್ನು ಅಪಹರಿಸಿದ್ದ ಆರೋಪಿಗಳು, ಕುಣಿಗಲ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಅಪಹರಿಸಿದ್ದ ಒಂದೂವರೆ ತಾಸಿನಲ್ಲೇ ಅವರನ್ನು ಬಂಧಿಸಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
 
ಮಾಲೀಕನ ಕೃತ್ಯ: ಫಿರ್ಯಾದಿ ಹಾಗೂ ಆರೋಪಿಗಳೆಲ್ಲ ಒಂದೇ ಊರಿನವರು. ಎರಡು ವರ್ಷಗಳಿಂದ ಅಜಯ್ ಬಳಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ಅಭಿಲಾಷ್, ಲಗ್ಗೆರೆಯಲ್ಲಿ ನೆಲೆಸಿದ್ದರು. ಅಜಯ್ ಬಳಿ ₹ 15 ಸಾವಿರ ಸಾಲ ಪಡೆದಿದ್ದ ಅವರು, ಸಾಲ ವಾಪಸ್ ನೀಡದೆ ಸತಾಯಿಸುತ್ತಿದ್ದರು. ಇದೇ ವಿಚಾರಕ್ಕೆ ಕೆಲ ದಿನಗಳಿಂದ ಪರಸ್ಪರರ ನಡುವೆ ಕಿತ್ತಾಟ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದರು. 
 
ಶುಕ್ರವಾರ ಸಂಜೆ 5.30ರ ಸುಮಾರಿಗೆ ಅಭಿಲಾಷ್‌ಗೆ ಕರೆ ಮಾಡಿದ್ದ ಅಜಯ್, ‘ಹಣ ವಾಪಸ್ ಕೊಡದಿದ್ದ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಧಮಕಿ ಹಾಕಿದ್ದಾನೆ. ಆತನ ಮಾತಿನಿಂದ ಕೆರಳಿದ ಅಭಿಲಾಷ್, ‘ಹಣ ಕೊಡುವುದಿಲ್ಲ ಎಂದರೆ ಏನು ಮಾಡುತ್ತೀಯಾ. ಅದೆಷ್ಟು ಜನ ಹುಡುಗರನ್ನು ಬೇಕಾದರೂ ಕರೆದುಕೊಂಡು ಬಾ. ಕೆಂಪೇಗೌಡ ಆರ್ಚ್‌ ಬಳಿಯೇ ನಿಂತಿರುತ್ತೇನೆ’ ಎಂದಿದ್ದಾರೆ. 
 
ಕೂಡಲೇ ಅಜಯ್ ಹಾಗೂ ಆತನ ಸಹಚರರು ಎರಡು ಕಾರುಗಳಲ್ಲಿ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲೇ ನಿಂತಿದ್ದ ಅಭಿಲಾಷ್‌ಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಬಳಿಕ ಕಾರಿನಲ್ಲಿ ಹತ್ತಿಸಿಕೊಂಡು ಕುಣಿಗಲ್‌ ಕಡೆಗೆ ಹೊರಟಿದ್ದಾರೆ. ಹತ್ತಿರದ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ವಿಭಾಗದ ಕಾನ್‌ಸ್ಟೆಬಲ್‌, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೆ, ಕಾರುಗಳ ನೋಂದಣಿ ಸಂಖ್ಯೆಗಳನ್ನೂ ನೀಡಿದ್ದಾರೆ. 
 
‘ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಫಿರ್ಯಾದಿ ಹಾಗೂ ಆರೋಪಿಗಳ ಮೊಬೈಲ್‌ಗಳನ್ನು ಟ್ರ್ಯಾಕ್ ಮಾಡಿಕೊಂಡೇ, ಅವರನ್ನು ಮೂರು ಜೀಪುಗಳಲ್ಲಿ ಹಿಂಬಾಲಿಸಿದೆವು. ಕುಣಿಗಲ್‌ ತಲುಪಲು ಇನ್ನೂ ನಾಲ್ಕು  ಕಿ.ಮೀ ಇರುವಾಗಲೇ ಆರೋಪಿಗಳ ಕಾರನ್ನು ಅಡ್ಡಗಟ್ಟಿದೆವು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT