ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಗಜಗಳ ಹಣಾಹಣಿ ಈ ಸರಣಿ

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ನಿನ್ನ ಇತಿಮಿತಿಯಲ್ಲಿ ಇರು..’
2014ರಲ್ಲಿ ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಆಡಿದ ಕಿಡಿನುಡಿಗಳಿಗೆ ದುರುಗುಟ್ಟಿ ನೋಡಿ ತನ್ನ ಆಟ ಮುಂದುವರಿಸಿದ್ದರು ಸ್ಟೀವ್ ಸ್ಮಿತ್.  ಆ ದಿನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣದ ಆ ಟೆಸ್ಟ್ ಇಬ್ಬರೂ ನಾಯಕರ  ವಾಕ್ಸಮರದಿಂದಾಗಿ ಬಿಸಿಯೇರಿತ್ತು. ಅಂದು ಬೌಲಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಅವರನ್ನು ಬ್ಯಾಟಿಂಗ್ ಮಾಡುತ್ತಿದ್ದ ಸ್ಮಿತ್ ಹೀಯಾಳಿಸಿದ್ದರು. ಅದಕ್ಕೆ ಕೊಹ್ಲಿ ಎಚ್ಚರಿಸಿದ್ದರು.
 
ಆ ಘಟನೆಯ ನಂತರದ ಮೂರು ವರ್ಷಗಳಲ್ಲಿ ಕ್ರಿಕೆಟ್ ಜಗತ್ತು ಸಾಕಷ್ಟು ಬದಲಾಗಿದೆ. ಆದರೆ ಆಸ್ಟ್ರೇಲಿಯಾ ತಂಡ ಮತ್ತು ಸ್ಟೀವ್ ಸ್ಮಿತ್ ಮನೋಭಾವ ಮಾತ್ರ ಬದಲಾದಂತೆ ಕಾಣುತ್ತಿಲ್ಲ. ಇದೀಗ ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲು ಬಂದಿಳಿದ ದಿನವೇ ಸ್ಮಿತ್ ಅವರು ‘ಕಟಕಿಯಾಡುವ ತಂತ್ರ’ (ಸ್ಲೆಡ್ಜಿಂಗ್) ಅನುಸರಿಸಲು ತಮ್ಮ ಆಟಗಾರರಿಗೆ ಹಸಿರು ನಿಶಾನೆ ತೋರಿದ್ದಾರೆ. 
 
ಸತತ ಆರು ಸರಣಿಗಳಲ್ಲಿ ಗೆದ್ದು ಬೀಗುತ್ತಿರುವ ವಿರಾಟ್ ಬಳಗವು ಆಸ್ಟ್ರೇಲಿಯಾ ಎದುರು ಆಟದ ಜೊತೆಗೆ ಬಿರುನುಡಿಗಳ ದಾಳಿಯನ್ನೂ ಎದುರಿಸುವ ಸವಾಲು ಇದೆ. ಆಸ್ಟ್ರೇಲಿಯಾ ತಂಡದ ಎದುರು ಆಡುವ ಯಾವುದೇ ತಂಡಕ್ಕೆ ಈ ಸವಾಲು ಇದ್ದೇ ಇರುತ್ತದೆ. ಆದ್ದರಿಂದ ಈ ಸರಣಿಯ ಸೋಲು ಗೆಲುವಿನ ಲೆಕ್ಕಾಚಾರದ ಜೊತೆಗೆ ಎಷ್ಟು ವಿವಾದಗಳು ಭುಗಿಲೇಳಬಹುದು ಎಂಬ ಚರ್ಚೆಗಳು ಈಗ ಆರಂಭವಾಗಿವೆ. ಕಳೆದ ಮೂರು ದಶಕಗಳಲ್ಲಿ ಆಸ್ಟ್ರೇಲಿಯಾ ತಂಡವು ಈ ತಂತ್ರವನ್ನು ತನ್ನ ಆಟದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದೆ. ಅದರಲ್ಲೂ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಭಾರತ ತಂಡಗಳ ಎದುರಿನ ಸರಣಿಗಳಲ್ಲಿ ಅವರ ಈ ತಂತ್ರ ಹೆಚ್ಚು ಬಿರುಸಾಗಿರುತ್ತದೆ.
 
ವಿರಾಟ್‌ ಮೇಲೆ ಕಣ್ಣು 
ರಿಕಿ ಪಾಂಟಿಂಗ್, ಆ್ಯಂಡ್ರೂ ಸೈಮಂಡ್ಸ್, ಮ್ಯಾಥ್ಯೂ ಹೇಡನ್ ಅವರು ತಂಡದಲ್ಲಿದ್ದ ಸಂದರ್ಭದಲ್ಲಿ ಈ ತಂತ್ರದ ಬಳಕೆ ತಾರಕಕ್ಕೇರಿತ್ತು. ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್,  ರಾಹುಲ್ ದ್ರಾವಿಡ್ ಅವರಂತಹ ಶಾಂತ ಸ್ವಭಾವದ ಬ್ಯಾಟ್ಸ್‌ಮನ್‌ಗಳನ್ನೇ ಕೆಣಕಿದ ಸಾಕಷ್ಟು ಪ್ರಸಂಗಗಳು ಇವೆ. ‘ಕೂಲ್ ಕ್ಯಾಪ್ಟನ್’ ಮಹೇಂದ್ರಸಿಂಗ್ ದೋನಿ ಕೂಡ ಆಸ್ಟ್ರೇಲಿಯಾದ ತಂತ್ರಕ್ಕೆ ತಲೆಬಾಗದೇ ದಿಟ್ಟ ಉತ್ತರ ನೀಡಿದವರೇ. ಆದರೆ ಈಗಿನ ನಾಯಕ ವಿರಾಟ್ ಅವರ ಮನೋಭಾವ ಇವರೆಲ್ಲರಿ ಗಿಂತಲೂ ಭಿನ್ನವಾದದ್ದು. ಆಕ್ರಮಣಕಾರಿ   ಸ್ವಭಾವ ಕೊಹ್ಲಿಯವರಲ್ಲಿ ಈಗಲೂ ಇದೆ. ಆದ್ದರಿಂದ ಅವರನ್ನು ಕೆಣಕಿ ಏಕಾಗ್ರತೆಯನ್ನು ಭಂಗಗೊಳಿಸಲು ಆಸ್ಟ್ರೇಲಿಯಾ ತಂಡ ಸಿದ್ಧವಾಗಿದೆ.
 
ಆರಂಭಿಕ ಜೋಡಿ ಮುರಳಿ ವಿಜಯ್ ಮತ್ತು ಕೆ.ಎಲ್. ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಐಅವರು ತಮ್ಮ ಆಟದಲ್ಲಿ ನಿರಂತರತೆ ಕಾಪಾಡಿಕೊಂಡಿಲ್ಲ. ಕಳೆದ ಒಂದು ವರ್ಷದಲ್ಲಿ ಈ ಜೋಡಿಯು ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಹಲವು ಬಾರಿ ಎಡವಿದೆ. ಆದರೆ, ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರು ಲಯ ಕಾಪಾಡಿಕೊಂಡಿರುವುದರಿಂದ ತಂಡವು ಸಂಕಷ್ಟದಿಂದ ಪಾರಾಗಿದ್ದು ಸುಳ್ಳಲ್ಲ.  
 
ಕಳೆದ ನಾಲ್ಕು ಸರಣಿಗಳಲ್ಲಿ ಸತತವಾಗಿ ದ್ವಿಶತಕಗಳನ್ನು ಹೊಡೆದು ವಿಶ್ವದಾಖಲೆ ಬರೆದಿರುವ ವಿರಾಟ್ ಅವರ ರನ್‌ ದಾಹ ಇನ್ನೂ ನೀಗಿಲ್ಲ. ಆದ್ದರಿಂದ ಮೊದಲು ಅವರನ್ನೇ ಕಟ್ಟಿಹಾಕಿಬಿಟ್ಟರೆ ಅರ್ಧ ಯುದ್ಧ ಗೆದ್ದಂತೆ ಎಂಬ ತಂತ್ರ ಸ್ಮಿತ್ ಬಳಗದ್ದು .
 
ಆದರೆ, ಮೂರು ವರ್ಷಗಳ ಹಿಂದೆ ಕಾಂಗರೂ ನಾಡಿನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ವಿರಾಟ್‌  ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರು ತಮ್ಮ ಆಟದಲ್ಲಿ ಪ್ರಬುದ್ಧರಾಗಿದ್ದಾರೆ. ತಂಡದ ಯುವ ಮತ್ತು ಅನುಭವಿ ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವಂತೆಯೂ ನೋಡಿಕೊಂಡಿದ್ದಾರೆ.  ರಹಾನೆ,   ಸಹಾ, ಆಲ್‌ರೌಂಡರ್ ರವೀಂದ್ರ ಜಡೇಜ, ಆರ್. ಅಶ್ವಿನ್ ಅವರೂ  ತಂಡಕ್ಕೆ ಆಸರೆಯಾಗಬಲ್ಲರು.
 
 ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾ  ತಂಡಗಳಿಗಿಂತಲೂ ಆಸ್ಟ್ರೇಲಿಯಾದ ಸವಾಲು ಕಠಿಣ  ಎಂಬುದು ಮನದಟ್ಟಾಗಿದೆ.   ಅದಕ್ಕೆ ತಕ್ಕ ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ.  ದಶಕಗಳ ಹಿಂದೆ ಆಸ್ಟ್ರೇಲಿಯಾಕ್ಕೆ ತಮ್ಮ ಬೌಲಿಂಗ್ ಮೂಲಕ ಕಾಡಿದ್ದ ಅನಿಲ್ ಕುಂಬ್ಳೆ ಈಗ  ಕೋಚ್ ಆಗಿರುವುದು ಕೊಹ್ಲಿ ಬಳಗದ ಬಲ ಹೆಚ್ಚಿಸಿದೆ. 
 
ವಿಕೆಟ್ ಯಂತ್ರ ಅಶ್ವಿನ್‌
‘ಅಶ್ವಿನ್ ಬೌಲಿಂಗ್‌ ಎದುರಿಸಲು ನಾನು ವಿಭಿನ್ನವಾದ ತಂತ್ರವನ್ನು ಸಿದ್ಧಗೊಳಿಸಿದ್ದೇನೆ’ – ಭಾರತಕ್ಕೆ ಬಂದಿಳಿದ ನಂತರ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೇಳಿದ ಮಾತಿದು.  45 ಟೆಸ್ಟ್‌ಗಳಲ್ಲಿ 250 ವಿಕೆಟ್ ಉರುಳಿಸಿ ವಿಶ್ವದಾಖಲೆ ಬರೆದಿರುವ ಅಶ್ವಿನ್ ಭಾರತದ ಪಿಚ್‌ಗಳಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್‌ ಎಂಬುದನ್ನು ಪ್ರವಾಸಿ ತಂಡ ಅರಿತಿದೆ. ಅದರಲ್ಲೂ ಐಪಿಎಲ್‌ ಟೂರ್ನಿಯ ಚಾಂಪಿಯನ್ ತಂಡ ಸನ್‌ರೈಸರ್ಸ್‌ ಹೈದರಾಬಾದಿನ ನಾಯಕ ವಾರ್ನರ್‌ಗೆ ಅಶ್ವಿನ್ ಸಾಮರ್ಥ್ಯದ ಅರಿವು ಚೆನ್ನಾಗಿದೆ.
 
ಆದ್ದರಿಂದಲೇ ಮೊದಲಿಗೆ ಅವರತ್ತ ಮಾತಿನ ಬಾಣ ಬಿಟ್ಟಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ತಂಡವು ತನ್ನ ತವರಿನಲ್ಲಿ ಪಾಕಿಸ್ತಾನ ತಂಡವನ್ನು 3–0ಯಿಂದ ಮಣಿಸಿತ್ತು. ಅದರಲ್ಲಿ ಮಿಂಚಿದ್ದ  ಸ್ಮಿತ್, ಗ್ಲೆನ್‌ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್ ಭಾರತದಲ್ಲಿಯೂ ಬಿರುಗಾಳಿ ಎಬ್ಬಿಸುವ ಉತ್ಸಾಹದಲ್ಲಿದ್ದಾರೆ.  ಅವರನ್ನು ಕಟ್ಟಿಹಾಕಲು ಅಶ್ವಿನ್ ಕೂಡ ಕಾತರದಿಂದ ಕಾದಿದ್ದಾರೆ. ಅಶ್ವಿನ್ ಜೊತೆಗೆ ಎಡಗೈ ಸ್ಪಿನ್ನರ್  ಜಡೇಜ ಕೂಡ ಮಿಂಚಲು ಕಾದಿದ್ದಾರೆ.
 
ಉಪಖಂಡದಲ್ಲಿ ಸ್ಪಿನ್ ಬೌಲಿಂಗ್ ಮಹತ್ವದ ಬಗ್ಗೆ ಗೊತ್ತಿರುವ ಆಸ್ಟ್ರೇಲಿಯಾ ತಂಡವು ತಮ್ಮ ಅನುಭವಿ ಸ್ಪಿನ್ನರ್ ನಥಾನ್ ಲಿಯಾನ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟಿದೆ. ಯುವ ಲೆಗ್‌ಸ್ಪಿನ್ನರ್ ಮಿಷೆಲ್ ಸ್ವಿಪ್ಸನ್ ಕೂಡ ತಂಡದೊಂದಿಗೆ ಬಂದಿದ್ದಾರೆ. ಭಾರತದಲ್ಲಿ ಪದಾರ್ಪಣೆ ಮಾಡುವ ತವಕದಲ್ಲಿ ಮಿಷೆಲ್ ಇದ್ದಾರೆ. ವೇಗಿ ಮಿಷೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಅವರು ರಿವರ್ಸ್‌ ಸ್ವಿಂಗ್ ಅಭ್ಯಾಸ ಆರಂಭಿಸಿದ್ದಾರೆ.
 
ಸಾಮರ್ಥ್ಯದ ವಿಷಯದಲ್ಲಿ ಉಭಯ ತಂಡಗಳು ಸಮಬಲಶಾಲಿಗಳು. ಆದರೂ ಆಸ್ಟ್ರೇಲಿಯಾ ತಂಡವು ಆತಿಥೇಯರನ್ನು ತನ್ನ ಬಿರುನುಡಿಗಳಿಂದ ಕಂಗೆಡಿಸಲು ನಿರ್ಧಾರ ಮಾಡಿದೆ.  ಆದ್ದರಿಂದ ಈ ಮಹತ್ವದ ಸರಣಿ ನೋಡಲು ಅಣಿಯಾಗಿರುವ ಪ್ರೇಕ್ಷಕರು ಬಿರುನುಡಿಗಳನ್ನು ಆಲಿಸಲು ಸಿದ್ಧರಾಗಿದ್ದಾರೆ. 
 
ಕಟಕಿಯಾಟದ ನೆನಪುಗಳು
ಮಂಕಿಗೇಟ್ ವಿವಾದ: ಸಿಡ್ನಿಯಲ್ಲಿ ನಡೆದಿದ್ದ 2007–08ರ ಬಾರ್ಡರ್–ಗಾವಸ್ಕರ್ ಟ್ರೋಫಿಯ ಪಂದ್ಯದ ವೇಳೆ ಹರಭಜನ್ ಸಿಂಗ್ ಅವರು ತಮ್ಮನ್ನು ‘ಮಂಕಿ’ ಎಂದು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾದ ಬೌಲರ್‌ ಆ್ಯಂಡ್ರ್ಯೂ ಸೈಮಂಡ್ಸ್ ಆರೋಪಿಸಿದ್ದರು. ನಂತರ ಈ ಪ್ರಕರಣವು ಕೋರ್ಟ್ ಮೆಟ್ಟಿಲೇರಿತ್ತು. ಸಚಿನ್ ತೆಂಡೂಲ್ಕರ್, ಮೈಕೆಲ್ ಕ್ಲರ್ಕ್, ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್  ಅವರು ಸಾಕ್ಷಿ ನೀಡಿದ್ದರು. ಆದರೆ ಬಲವಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಹರಭಜನ್‌ಗೆ ಶಿಕ್ಷೆಯಾಗಿರಲಿಲ್ಲ. ಆದರೆ ಈ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿರುಗಾಳಿಯೆಬ್ಬಿಸಿತ್ತು.

ಸ್ಟೀವ್‌ ವಾ ತಿರುಗೇಟು: 2004ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಅವರು ತಮ್ಮ ವೃತ್ತಿಜೀವನದ ವಿದಾಯದ ಪಂದ್ಯ ಆಡಿದ್ದರು. ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಿಕೆಟ್‌ಕೀಪಿಂಗ್ ಮಾಡುತ್ತಿದ್ದ ಪಾರ್ಥಿವ್ ಪಟೇಲ್ ಅವರು , ‘ಆಟ ಮುಗಿಸುವ ಮುನ್ನ ಕೊನೆಯ ಬಾರಿಗೆ ನಿಮ್ಮ ಸ್ಲಾಗ್‌ಸ್ವೀಪ್ ಆಡಿ’ ಎಂದು ಕೀಟಲೆ ಮಾಡಿದ್ದರು. ಅದಕ್ಕೆ ವಾ, ‘ನಾನು ಮೊದಲ ಪಂದ್ಯ ಆಡಿದ್ದಾಗ ನೀನು ಇನ್ನೂ  ನ್ಯಾಪಿ ಧರಿಸುತ್ತಿದ್ದೆ’ ಎಂದು ತಿರುಗೇಟು ನೀಡಿದ್ದರು.

ಸಚಿನ್ ಕೊಟ್ಟ ಪೆಟ್ಟು: 2000ನೇ ಇಸವಿಯ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಸಹನೆ ಕಳೆದುಕೊಳ್ಳುವಷ್ಟು ಬಿರುನುಡಿಗಳನ್ನು ಆಸ್ಟ್ರೇಲಿಯಾದ ಆಟಗಾರರು ಪ್ರಯೋಗಿಸಿದ್ದರು.  ಬೇಸತ್ತ ತೆಂಡೂಲ್ಕರ್, ‘ಇವತ್ತು ನಿಮ್ಮನ್ನು (ಎಸೆತಗಳನ್ನು)ಕ್ರೀಡಾಂಗಣದಿಂದ ಹೊರಗೆ ಹಾಕುತ್ತೇನೆ’ ಎಂದು ವೇಗಿ ಗ್ಲೆನ್‌ ಮೆಕ್‌ಗ್ರಾಗೆ ಹೇಳಿದ್ದರು. ಅದರಂತೆ ಮಾಡಿದ್ದ ಸಚಿನ್ ಅಬ್ಬರಕ್ಕೆ ಮೆಕ್‌ಗ್ರಾ 9 ಓವರ್‌ಗಳಲ್ಲಿ 61 ರನ್ ತೆತ್ತಿದ್ದರು. ಭಾರತ 20 ರನ್‌ಗಳಿಂದ ಗೆದ್ದಿತ್ತು.
 
ಮಿಲಿಯನ್ ಡಾಲರ್‌ ಯಾರಿಗೆ?
ಐಸಿಸಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಏಪ್ರಿಲ್ 1ರವರೆಗೆ ಮೊದಲ ಸ್ಥಾನ ಕಾಪಾಡಿಕೊಳ್ಳುವ ತಂಡಕ್ಕೆ ಐಸಿಸಿಯು₹ 7 ಕೋಟಿ (1 ಮಿಲಿಯನ್ ಡಾಲರ್) ಪುರಸ್ಕಾರ ನೀಡಲಿದೆ. ಅದರ ಮೇಲೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಣ್ಣಿಟ್ಟಿವೆ. ಸದ್ಯ ಮೊದಲ ಸ್ಥಾನದಲ್ಲಿರುವ ಭಾರತ ತಂಡವೇ ಈ ಮೊತ್ತವನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.
 
ನಾಲ್ಕು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ ಭಾರತಕ್ಕೆ ಈ ಮೊತ್ತ ಖಚಿತವಾಗಲಿದೆ. ಅದೇ ಆಸ್ಟ್ರೇಲಿಯಾ ತಂಡವು ಎಲ್ಲ ಪಂದ್ಯಗಳನ್ನೂ ಗೆದ್ದು ಕ್ಲೀನ್‌ಸ್ವೀಪ್ ಸಾಧನೆ ಮಾಡಬೇಕು. ಭಾರತ ತಂಡವು 121 ಶ್ರೇಯಾಂಕ ಹೊಂದಿದೆ.

ಆಸ್ಟ್ರೇಲಿಯಾ 109 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.  ಆದ್ದರಿಂದ ಪುಣೆಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ಗೆದ್ದುಬಿಟ್ಟರೆ ಆಸ್ಟ್ರೇಲಿಯಾದ ಕನಸು ಭಗ್ನವಾದಂತೆಯೇ ಲೆಕ್ಕ. ಸರಣಿಯಲ್ಲಿ ಒಂದೊಮ್ಮೆ ಆಸ್ಟ್ರೇಲಿಯಾ ತಂಡವು3–1ರಿಂದ ಗೆದ್ದರೆ ಎರಡೂ ತಂಡಗಳು ಮೊದಲ ಸ್ಥಾನವನ್ನು ಜಂಟಿಯಾಗಿ ಹಂಚಿಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT