ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ಹೊಸ ದಾಖಲೆ

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಎಷ್ಟು ಗೋಲು ಗಳಿಸಿದೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ದಾಖಲೆಗಳ ಪಟ್ಟಿಯನ್ನು ಇಟ್ಟುಕೊಳ್ಳುವ ಅಭ್ಯಾಸವೂ ನನಗಿಲ್ಲ. ದೇಶಕ್ಕಾಗಿ ಆಡುವುದಷ್ಟೇ ನನ್ನ ಗುರಿ' 
–  ಭಾರತದ ಫುಟ್‌ಬಾಲ್‌ನಲ್ಲಿ ಪ್ರಸ್ತುತ ಅತ್ಯಂತ ಜನಪ್ರಿಯ ಆಟಗಾರ ಮತ್ತು ‘ಸ್ಟಾರ್ ಸ್ಟ್ರೈಕರ್‌’ ಎನಿಸಿರುವ ಸುನಿಲ್‌ ಚೆಟ್ರಿ ಕೆಲ ಸಮಯದ ಹಿಂದೆ ಈ ಮಾತುಗಳನ್ನಾಡಿದ್ದರು.
 
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 50 ಗೋಲುಗಳನ್ನು ಹೊಡೆದ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದರು. ಇದೀಗ ಚೆಟ್ರಿ ಅವರ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ರಾಷ್ಟ್ರೀಯ ಫುಟ್‌ಬಾಲ್‌ ಲೀಗ್‌ನಲ್ಲಿ (ಎನ್ಎಫ್ಎಲ್/ ಐ-ಲೀಗ್‌) ಅತಿಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಗೌರವ ಅವರಿಗೆ ಒಲಿದಿದೆ. 
 
ಭಾರತದ ಫುಟ್‌ಬಾಲ್‌ ದಂತಕತೆ ಬೈಚುಂಗ್ ಭುಟಿಯಾ ಹೆಸರಿನಲ್ಲಿದ್ದ ದಾಖಲೆಯನ್ನು ಚೆಟ್ರಿ ಮುರಿದಿದ್ದಾರೆ. ಭುಟಿಯಾ ತಮ್ಮ ವೃತ್ತಿಜೀವನದಲ್ಲಿ 89 ಗೋಲುಗಳನ್ನು ಗಳಿಸಿದ್ದರು. 
 
ಐ-ಲೀಗ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವನ್ನು ಪ್ರತಿನಿಧಿಸುತ್ತಿರುವ ಚೆಟ್ರಿ,  ಐಜ್ವಾಲ್ ಎಫ್‌ಸಿ ವಿರುದ್ಧ ಹೋದ ವಾರ ನಡೆದ ಪಂದ್ಯದಲ್ಲಿ 90ನೇ ಗೋಲು ಗಳಿಸಿ ಹೊಸ ದಾಖಲೆಗೆ ಭಾಜನರಾದರು. ಭುಟಿಯಾ ರಾಷ್ಟ್ರೀಯ ಲೀಗ್‌ನಲ್ಲಿ 17 ಋತುಗಳಲ್ಲಿ ಆಡಿದ್ದರೆ, ಚೆಟ್ರಿ ತಮ್ಮ 14ನೇ ಋತುವಿನಲ್ಲಿ ಅವರನ್ನು ಹಿಂದಿಕ್ಕಿದ್ದಾರೆ. 
 
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತ್ಯಧಿಕ ಗೋಲು ಗಳಿಸಿದ ಗೌರವ ಕೂಡಾ ಚೆಟ್ರಿ ಹೆಸರಿನಲ್ಲಿದೆ. ಅವರು 91 ಪಂದ್ಯಗಳಿಂದ 51 ಗೋಲು ಗಳಿಸಿದ್ದಾರೆ. 
 
ಐದು ಅಡಿ ಏಳು ಇಂಚು ಎತ್ತರದ ಚೆಟ್ರಿ ಅಂಗಳದಲ್ಲಿ ಇತರ ಆಟಗಾರರ ಎದುರು ‘ಕುಬ್ಜ’ರಂತೆ ಕಂಡುಬಂದರೂ, ಅವರ ಕಾಲ್ಚಳದ ಮೋಡಿಗೆ ಎಲ್ಲರೂ ಬೆರಗಾಗುವರು. 
 
ಚೆಟ್ರಿ ಅವರಿಗೆ ಫುಟ್‌ಬಾಲ್‌ ಮೇಲಿನ ಆಸಕ್ತಿ ರಕ್ತಗತವಾಗಿ ಬಂದಿದೆ. ತಂದೆ ಕೆ.ಬಿ. ಚೆಟ್ರಿ ಅವರು ಆರ್ಮಿ ತಂಡಕ್ಕೆ ಆಡಿದ್ದರೆ, ತಾಯಿ ಸುಶೀಲಾ ಚೆಟ್ರಿ ಹಾಗೂ ಅವಳಿ ಸಹೋದರಿಯರು ನೇಪಾಳ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಎಳೆಯದರಲ್ಲೇ ಫುಟ್‌ಬಾಲ್‌ನ ತಂತ್ರ ಹಾಗೂ ಕೌಶಲಗಳನ್ನು ಕರಗತಮಾಡಿಕೊಂಡ ಅವರು ಬಹಳ ಬೇಗನೇ ಯಶಸ್ಸಿನ ಹಾದಿ ಹಿಡಿದರು. 
 
2002 ರಲ್ಲಿ ಕೋಲ್ಕತ್ತದ ಮೋಹನ್ ಬಾಗನ್ ಪರ ಆಡುವ ಮೂಲಕ ವೃತ್ತಿಪರ ಫುಟ್‌ಬಾಲ್‌ ಜೀವನ ಆರಂಭಿಸಿದ್ದ ಅವರು ಜೆಸಿಟಿ, ಈಸ್ಟ್‌ ಬೆಂಗಾಲ್‌ ಮತ್ತು ಡೆಂಪೊ ಸೇರಿದಂತೆ ಹಲವು ಪ್ರಮುಖ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ. ರಾಷ್ಟ್ರೀಯ ಫುಟ್‌ಬಾಲ್‌ ಲೀಗ್‌ನಲ್ಲಿ ಅತಿಹೆಚ್ಚು ಗೋಲುಗಳನ್ನು ಜೆಸಿಟಿ ಪರ ದಾಖಲಿಸಿದ್ದಾರೆ. 48 ಪಂದ್ಯಗಳಲ್ಲಿ 21 ಸಲ ಚೆಂಡನ್ನು ಗುರಿ ಸೇರಿಸಿದ್ದಾರೆ. 
 
2007, 2009 ಮತ್ತು 2012ರ ನೆಹರೂ ಕಪ್ ಟೂರ್ನಿ ಮತ್ತು 2011ರ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.  
 
ಚೆಟ್ರಿ ವಿದೇಶದ ಕ್ಲಬ್‌ಗಳಲ್ಲೂ ಛಾಪು ಮೂಡಿಸಲು ಪ್ರಯತ್ನಿಸಿದ್ದರು.  ಅಮೆರಿಕದ ಮೇಜರ್ ಲೀಗ್ ಸಾಕರ್‌ನಲ್ಲಿ ಆಡುವ ಕಾನ್ಸಾಸ್ ಸಿಟಿ ವಿಜಾರ್ಡ್ಸ್‌ ಪರ (2010 ರಲ್ಲಿ) ಮತ್ತು ಪೋರ್ಚುಗಲ್‌ನ ಸ್ಪೋರ್ಟಿಂಗ್‌ ಕ್ಲಬ್ ಡಿ ಪೋರ್ಚುಗಲ್‌   ಪರ (2012 ರಲ್ಲಿ) ಅವರು ಸಹಿ ಹಾಕಿದ್ದರು. ಆದರೆ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ದೊರೆಯದ ಕಾರಣ ಭಾರತಕ್ಕೆ ವಾಪಸಾಗಿದ್ದರು. 
 
ಚೆಟ್ರಿ 2009 ರಲ್ಲಿ ಇಂಗ್ಲಿಷ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಕ್ವೀನ್ಸ್ ಪಾರ್ಕ್‌ ರೇಂಜರ್ಸ್ ಪರ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿತ್ತು. ಆದರೆ ಬ್ರಿಟನ್ ಸರ್ಕಾರದ ಒಪ್ಪಿಗೆ ದೊರೆಯದ ಕಾರಣ ಅವಕಾಶ ಕಳೆದುಕೊಂಡಿದ್ದರು. ಫಿಫಾ ರ್‍್ಯಾಂಕಿಂಗ್‌ನಲ್ಲಿ ಭಾರತ 70 ರ ಒಳಗಿನ ಸ್ಥಾನದಲ್ಲಿಲ್ಲ ಎಂಬ ಕಾರಣ ಅವರಿಗೆ ಆಡಲು ಅನುಮತಿ ನಿರಾಕರಿಸಲಾಗಿತ್ತು.
 
ಇದರಿಂದ ನಿರಾಸೆಗೆ ಒಳಗಾಗಿದ್ದರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ‘ಜಗತ್ತು ಇಲ್ಲಿಗೆ ಕೊನೆಗೊಳ್ಳುವುದಿಲ್ಲ' ಎಂದು ಹೇಳಿ ಕಠಿಣ ಪ್ರಯತ್ನ ಮುಂದುವರಿಸಿದ್ದರು. 
ಚೆಟ್ರಿ ಅವರು ಕೌಶಲ ಮತ್ತು ತಂತ್ರಗಾರಿಕೆಯಲ್ಲಿ ಸಮಕಾಲೀನ ಆಟಗಾರರಿಗಿಂತ ತುಂಬಾ  ಮುಂದಿದ್ದಾರೆ. ಅದನ್ನು ಹಲವು ಸಲ ಅಂಗಳದಲ್ಲಿ ತೋರಿಸಿದ್ದಾರೆ. ಎಡ ಮತ್ತು ಬಲಗಾಲಿನಲ್ಲಿ ಚೆಂಡಿನ ಮೇಲೆ ಅದ್ಭುತ ನಿಯಂತ್ರಣ ಸಾಧಿಸಬಲ್ಲ ಸಾಮರ್ಥ್ಯ ಅವರಿಗಿದೆ. ಆಕರ್ಷಕ ಡ್ರಿಬ್ಲಿಂಗ್‌ ಮತ್ತು ಮಿಂಚಿನ ಪಾಸ್‌ಗಳ ಮೂಲಕ 90 ನಿಮಿಷಗಳ ಕಾಲವೂ ಅಂಗಳದಲ್ಲಿ ಮಿಂಚು ಹರಿಸಬಲ್ಲ ಶಕ್ತಿ ಅವರ ಕಾಲುಗಳಲ್ಲಿವೆ. 
 
ಚೆಟ್ರಿಗೆ ಈಗ 32 ರ ಹರೆಯ. ಇನ್ನೂ ಕೆಲ ವರ್ಷಗಳ ಆಟ ಅವರಲ್ಲಿ ಬಾಕಿಯಿದೆ. ಆದ್ದರಿಂದ ನಿವೃತ್ತಿಗೆ ಮುನ್ನ ಇನ್ನೊಂದಿಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
         
ಚೆಟ್ರಿ ಬಗ್ಗೆ ಒಂದಷ್ಟು ಮಾಹಿತಿ

- ನೇಪಾಳ ಮೂಲದ ದಂಪತಿಗೆ ಸಿಕಂದರಾಬಾದ್‌ನಲ್ಲಿ 1984 ರಲ್ಲಿ ಜನನ
- 2002–2003ರ ಋತುವಿನಲ್ಲಿ ಮೋಹನ್ ಬಾಗನ್‌ ಕ್ಲಬ್ ಪರ ಆಡುವ ಮೂಲಕ ದೇಶೀಯ ಲೀಗ್‌ನಲ್ಲಿ ಪದಾರ್ಪಣೆ
- 2005 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಫುಟ್‌ಬಾಲ್‌ ಜೀವನ ಆರಂಭ. ಅದೇ ಪಂದ್ಯದಲ್ಲಿ ಮೊದಲ ಗೋಲು
- 2007, 2011, 2013 ಮತ್ತು 2014 ರಲ್ಲಿ ಎಐಎಫ್ಎಫ್ ವರ್ಷದ ಆಟಗಾರ ಪ್ರಶಸ್ತಿ ಗೌರವ

90 - ರಾಷ್ಟ್ರೀಯ ಫುಟ್‌ಬಾಲ್‌ ಲೀಗ್‌ನಲ್ಲಿ ಚೆಟ್ರಿ ಗಳಿಸಿರುವ ಗೋಲುಗಳು

51 - ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗಳಿಸಿರುವ ಗೋಲುಗಳು

91 - ಚೆಟ್ರಿ ಆಡಿರುವ ಅಂತರರಾಷ್ಟ್ರೀಯ ಪಂದ್ಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT