ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಶಿಕ್ಷಣಕ್ಕೆ ಹತ್ತು ಹಲವು ಆಯ್ಕೆಗಳು

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಪರೀಕ್ಷಾ ಸಿದ್ಧತೆಯಲ್ಲಿರುವ ಬಹುತೇಕ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಕಾಡುತ್ತಿರುವ ಒಂದು ಪ್ರಮುಖ ಪ್ರಶ್ನೆಯೆಂದರೆ: ಮುಂದೆ ಯಾವ ವೃತ್ತಿಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವುದು ಎಂಬುದು.
 
ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕಾಲೇಜಿನಲ್ಲಿ ಓದಿ, ಹೆಚ್ಚಿನ ಅಂಕ ಗಳಿಸಿ, ವೃತ್ತಿಪರವಾದ ಯಾವುದಾದರೊಂದು ಕೋರ್ಸನ್ನು ಸೇರುವ ಆಸೆ ಸಹಜವಾಗಿ ಇರುತ್ತದೆ. ಮುಂದೆ ಪ್ರಸಿದ್ಧವಾದ ಸಂಸ್ಥೆಯೊಂದಕ್ಕೆ ಸೇರಿ, ಗೌರವಾನ್ವಿತ ಹುದ್ದೆಯನ್ನು ಅಲಂಕರಿಸುವ ಕನಸನ್ನು ನಿಮ್ಮಲ್ಲಿ ಅನೇಕರು ಕಾಣುತ್ತಿದ್ದೀರಿ. ಈ ನಿಟ್ಟಿನಲ್ಲಿ ಯಾವ ವೃತ್ತಿಗೆ ಸೇರಬೇಕು, ಅದಕ್ಕೆ ಯಾವ ರೀತಿಯ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹತ್ತನೆಯ ತರಗತಿಯಲ್ಲಿ ಇರುವಾಗಲೇ ಯೋಚಿಸುವುದು ಒಳಿತು. ಇದಕ್ಕೆ ಪೂರಕವಾದ ಕೆಲವು ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ.
 
ಯಾವುದೇ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ಕೆಳಗಿನ ಕೆಲವು ಅಂಶಗಳ ಕಡೆಗೆ ಗಮನ ಹರಿಸುವುದು ಅತ್ಯವಶ್ಯ.
 
1. ಪೂರಕವಾದ ಶಿಕ್ಷಣ: ಪ್ರತಿಯೊಂದು ವೃತ್ತಿಗೂ ಒಂದು ನಿರ್ದಿಷ್ಟವಾದ ಕನಿಷ್ಠ ಶೈಕ್ಷಣಿಕ ಅರ್ಹತೆ ಇರುತ್ತದೆ. ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ. ಅದು ಹತ್ತನೇ ತರಗತಿ ಅಥವಾ ಪದವಿಪೂರ್ವ ತರಗತಿ ಇರಬಹುದು, ಇಲ್ಲವೇ ಪದವಿ ಇರಬಹುದು.
 
2. ಆಸಕ್ತಿಗಳು: ಈ ಹಂತದಲ್ಲಿಯೇ ನಿಮ್ಮ ಆಸಕ್ತಿಯ ವೃತ್ತಿಗಳನ್ನು ಪಟ್ಟಿ ಮಾಡಿ ಇಟ್ಟುಕೊಂಡಿರುವುದು ಒಳ್ಳೆಯದು. ಮುಂದೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ನೆರವಾಗುತ್ತದೆ.
 
3. ದೂರದೃಷ್ಟಿ: ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಿಮಗೆ ದೂರದೃಷ್ಟಿ ಇರಬೇಕು. ಇದು ಸಂಬಂಧಿಸಿದ ವೃತ್ತಿಗೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ನಿಮಗೆ ಪ್ರೇರಣೆ ನೀಡುತ್ತದೆ.
 
4. ಗುರಿಗಳು: ನಿಮ್ಮ ಕನಸಿನ ವೃತ್ತಿಗೆ ನೀವು ಸೇರಬೇಕಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಹಲವಾರು ನಿರ್ದಿಷ್ಟ ಗುರಿಗಳನ್ನು ಹಾಕಿಕೊಳ್ಳಬೇಕು. ಆ ಗುರಿಗಳ ಸಾಧನೆಗೆ ಬೇಕಾದ ನೆಲೆಗಟ್ಟನ್ನು ಈಗಿನಿಂದಲೇ ರೂಪಿಸಿಕೊಳ್ಳಬೇಕು.
 
5. ಕೌಶಲಗಳು: ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಕೌಶಲಗಳಿವೆ. ಆ ಕೌಶಲಗಳ ಮಾಹಿತಿ ನಿಮಗಿದ್ದರೆ, ನಿಮ್ಮ ಕೌಶಲಗಳ ಜೊತೆಗೆ ನೀವು ಇಷ್ಟಪಟ್ಟಿರುವ ವೃತ್ತಿಯ ಕೌಶಲಗಳನ್ನು ಹೋಲಿಸಿ, ನೀವು ಆ ವೃತ್ತಿಗೆ ಸಿದ್ಧರೇ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.
 
6. ಮೌಲ್ಯಗಳು: ಎಲ್ಲ ವೃತ್ತಿಗಳಿಗೂ ವೃತ್ತಿಧರ್ಮ ಹಾಗೂ ಮೌಲ್ಯಗಳಿರುತ್ತವೆ. ಅವುಗಳನ್ನು ಪಾಲಿಸುವ ಮನೋಭಾವವನ್ನು ರೂಢಿಸಿಕೊಳ್ಳುವುದೂ ಮುಖ್ಯವಾಗುತ್ತದೆ.
 
ಈಗ ನೀವೆಲ್ಲ ಹತ್ತನೆಯ ತರಗತಿಯ ಅಂತಿಮ ಪರೀಕ್ಷೆಯನ್ನು ಬರೆಯುವ ಸಿದ್ಧತೆಯಲ್ಲಿದ್ದೀರಿ. ಪರೀಕ್ಷೆ ಮುಗಿದ ಮೇಲೆ ಪದವಿಪೂರ್ವ ಶಿಕ್ಷಣ ಪಡೆಯುವ ಹಾದಿಯಲ್ಲಿ ಸಾಗಲಿದ್ದೀರಿ. ಅದಕ್ಕೆ ಮುನ್ನ, ನಿಮ್ಮ ಮುಂದಿರುವ ವೃತ್ತಿ ಅವಕಾಶಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನೀವೇನು ಮಾಡಬಹುದು? ಇಲ್ಲಿ ಸೂಚಿಸಿರುವ ಕೆಲವು ಅಂಶಗಳು ನಿಮಗೆ ನೆರವಾಗಬಹುದು. ಪರೀಕ್ಷೆಯ ನಂತರದ ರಜೆಯ ಅವಧಿಯಲ್ಲಿ ಈ ಅಂಶಗಳ ಕಡೆಗೆ ಗಮನ ಹರಿಸಿ, ಯೋಜಿಸಿದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸುಲಭವಾಗುತ್ತದೆ. 
 
ಯಾವ ವಿಷಯ ನಿಮ್ಮಲ್ಲಿ ಆಸಕ್ತಿಯನ್ನು ಮೂಡಿಸಿದೆ?
ನೀವು ಈಗ ಅಧ್ಯಯನ ಮಾಡುತ್ತಿರುವ ವಿಷಯಗಳಲ್ಲಿ ಯಾವುದಾದರೊಂದು ವಿಷಯದಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇರುವುದು ಸಹಜ. ಕೆಲವರಿಗೆ ಗಣಿತದಲ್ಲಿ ಆಸಕ್ತಿ ಇದ್ದರೆ, ಕೆಲವರಿಗೆ ವಿಜ್ಞಾನದಲ್ಲಿ ಆಸಕ್ತಿ ಇರುತ್ತದೆ. ಅದಕ್ಕೆ ಅನುಗುಣವಾಗಿ ವೃತ್ತಿಪರ ಶಿಕ್ಷಣವನ್ನು ಅಯ್ಕೆಮಾಡಿಕೊಳ್ಳುವುದು ಜಾಣತನ. ಗಣಿತ ಹಾಗೂ ಭೌತಶಾಸ್ತ್ರಗಳು ನಿಮ್ಮ ಆಸಕ್ತಿಯ ವಿಷಯಗಳಾಗಿದ್ದರೆ ನಿಮಗೆ ಎಂಜಿನಿಯರಿಂಗ್ ಅಥವಾ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿಪುಲವಾದ ಆಯ್ಕೆಗಳಿವೆ. ಜೀವಶಾಸ್ತ್ರ ನಿಮ್ಮ ಆಸಕ್ತಿಯ ವಿಷಯವಾಗಿದ್ದರೆ, ಅದಕ್ಕೆ ಸಂಬಂಧಿಸಿದಂತೆಯೂ ಬಹಳಷ್ಟು ಅವಕಾಶಗಳು ಮುಕ್ತವಾಗಿವೆ. ವಾಣಿಜ್ಯ ವಿಷಯಗಳಲ್ಲೂ ಇಂದು ಸಾಕಷ್ಟು ವೃತ್ತಿ ಅವಕಾಶಗಳಿವೆ. ಹೀಗಾಗಿ, ಮೊದಲು ನಿಮ್ಮ ಆಸಕ್ತಿಯ ವಿಷಯವನ್ನು ಗುರುತಿಸಿಕೊಳ್ಳುವುದು ಅತಿ ಮುಖ್ಯ.
 
ವಿವಿಧ ವೃತ್ತಿಯಲ್ಲಿರುವವರನ್ನು ಭೇಟಿ ಮಾಡಿ
ನಿಮ್ಮ ಕುಟುಂಬದ ಬಂಧು–ಮಿತ್ರರಲ್ಲಿ ವಿವಿಧ ವೃತ್ತಿಯಲ್ಲಿರುವವರನ್ನು ಭೇಟಿ ಮಾಡಿ. ಅವರು ವೈದ್ಯರಿರಬಹುದು, ಎಂಜಿನಿಯರ್ ಇರಬಹುದು, ಶಿಕ್ಷಕರಿರಬಹುದು ಅಥವಾ ಇನ್ನಾವುದೇ ಉದ್ಯೋಗದಲ್ಲಿರಬಹುದು. ಅವರ ಅನುಭವಗಳನ್ನು ಟಿಪ್ಪಣಿ ಮಾಡಿಕೊಳ್ಳಿ. ನಿಮ್ಮ ಆಸಕ್ತಿಯ ವೃತ್ತಿಮಾರ್ಗದಲ್ಲಿ ದೃಢವಾದ ಹೆಜ್ಜೆಗಳನ್ನು ಇಡಲು ಇದು ನಿಮಗೆ ನೆರವಾಗುತ್ತದೆ. ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
 
ಬೇರೆ ಬೇರೆ ವೃತ್ತಿಗಳನ್ನು ಹೋಲಿಸಿ ನೋಡಿ
ನೀವು ಕಲೆ ಹಾಕಿದ ಮಾಹಿತಿಯ ಆಧಾರದ ಮೇಲೆ ವೈದ್ಯಕೀಯ, ಎಂಜಿನಿಯರಿಂಗ್, ವಾಣಿಜ್ಯ ಮುಂತಾದ ಕ್ಷೇತ್ರಗಳಲ್ಲಿರುವ ಬೇರೆ ಬೇರೆ ವೃತ್ತಿಗಳನ್ನು ಹೋಲಿಸಿ ನೋಡಿ. ನಿಮ್ಮ ಮನೋಭಾವಕ್ಕೆ ಹಾಗೂ ನಿಮ್ಮ ಸಾಮರ್ಥ್ಯಕ್ಕೆ ಸರಿ ಹೊಂದುವ ವೃತ್ತಿಯನ್ನು ಆಯ್ಕೆಯನ್ನು ಮಾಡಿಕೊಳ್ಳುವುದು ನಿಮಗೆ ಸುಲಭವಾಗುತ್ತದೆ.
 
ನಿಮ್ಮ ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳಿ
ನಿಮ್ಮ ಆಯ್ಕೆಯ ವೃತ್ತಿಯಲ್ಲಿ ಮುಂದೆ ನೀವು ಯಶಸ್ಸು ಗಳಿಸಬೇಕಾದರೆ ಹಲವಾರು ಸಾಮರ್ಥ್ಯಗಳನ್ನು ಬೆಳಸಿಕೊಳ್ಳಬೇಕಾಗುತ್ತದೆ. ವೈದ್ಯನಾಗಲು ಬಯಸುವ ಅಥವಾ ಎಂಜಿನಿಯರ್ ಆಗ ಬಯಸುವ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗ ಬಯಸುವ ವಿದ್ಯಾರ್ಥಿಗಳಲ್ಲಿರಬೇಕಾದ ಸಾಮರ್ಥ್ಯಗಳು ಬೇರೆ ಬೇರೆ ಇರುತ್ತವೆ. ನಿಮ್ಮ ಸಾಮರ್ಥ್ಯಗಳು ಯಾವ ವೃತ್ತಿಗೆ ಪೂರಕವಾಗಿವೆ ಎಂಬುದನ್ನು ಒರೆಗೆ ಹಚ್ಚಿ ನೋಡಿ. 
 
ನಿಮ್ಮ ಪೋಷಕರೊಂದಿಗೆ ಮುಕ್ತವಾಗಿ ಚರ್ಚಿಸಿ
ನಿಮ್ಮ ಆಸಕ್ತಿಯ ವಿಷಯದ ಬಗ್ಗೆ ನಿಮ್ಮ ಪೋಷಕರೊಂದಿಗೆ ಚರ್ಚಿಸಿ. ಅವರನ್ನು ನಿಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಿ. ನಿಮ್ಮ ಆಯ್ಕೆಯ ವೃತ್ತಿಯ ಬಗ್ಗೆ ನೀವು ಕಲೆ ಹಾಕಿರುವ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಿ. ಅವರ ಅಭಿಪ್ರಾಯವನ್ನೂ ಕೇಳಿ ತಿಳಿದುಕೊಳ್ಳಿ. ಎಲ್ಲ ಸಾಧಕ ಬಾಧಕಗಳನ್ನೂ ಪೂರ್ಣವಾಗಿ ವಿಷ್ಲೇಶಿಸಿ. ಒಮ್ಮತದ ತೀರ್ಮಾನಕ್ಕೆ ಬನ್ನಿ. 
 
ನಿಮ್ಮ ಸ್ನೇಹಿತರ ಪ್ರಭಾವಕ್ಕೆ ಒಳಗಾಗಬೇಡಿ
ನಿಮ್ಮ ಆತ್ಮೀಯ ಸ್ನೇಹಿತರ ಆಯ್ಕೆ ನಿಮ್ಮ ಆಯ್ಕೆಗಿಂತ ಭಿನ್ನವಾಗಿರಬಹುದು. ಅದರಿಂದ ನೀವು ಪ್ರಭಾವಿತರಾಗುವುದು ಬೇಡ. ಅವರವರ ಸಾಮರ್ಥ್ಯ, ಕೌಶಲಗಳಿಗೆ ಅನುಗುಣವಾಗಿ ಅವರು ನಿರ್ಧಾರಕ್ಕೆ ಬಂದಿರುತ್ತಾರೆ. ಅವರ ಆಯ್ಕೆ ನಿಮಗೆ ಸೂಕ್ತವಾಗದೇ ಹೋಗಬಹುದು. ನಿಮ್ಮ ವೃತ್ತಿ ಆಯ್ಕೆಯ ಬಗ್ಗೆ ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ.
 
ಸೂಕ್ತ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ
ನೀವು ಸಾಂಪ್ರದಾಯಿಕವಾದ ಪದವಿಪೂರ್ವ ಕೋರ್ಸಿಗೆ ಸೇರುವಾಗ ನಿಮ್ಮ ವೃತ್ತಿ ಆಯ್ಕೆಗೆ ಪೂರಕವಾದ ಸಂಯೋಜನೆ ಯಾವುದು ಎಂಬುದನ್ನು ನಿರ್ಧರಿಸಿಕೊಳ್ಳಿ. ವಿಜ್ಞಾನ ಅಥವಾ ವಾಣಿಜ್ಯ ಅಥವಾ ಕಲಾವಿಭಾಗದಲ್ಲಿ ನಿಮಗೆ ಹಲವಾರು ಸಂಯೋಜನೆಗಳ ಆಯ್ಕೆ ಇದೆ. ನಿಮ್ಮ ಆಸಕ್ತಿಗೆ ಅನುಗುಣವಾದ ವಿಭಾಗವನ್ನು ನಿರ್ಧರಿಸಿಕೊಳ್ಳಿ. ಅನಂತರ, ಸಂಯೋಜನೆಯ ಬಗ್ಗೆ ನಿರ್ಧಾರ ಮಾಡಬಹುದು.
 
ಪದವಿಪೂರ್ವ ಶಿಕ್ಷಣಕ್ಕೆ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ವಾಣಿಜ್ಯ ವಿಭಾಗದದಲ್ಲಿ ನೀವು ಯಾವುದೇ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡರೂ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ, ಪದವಿಪೂರ್ವ ಶಿಕ್ಷಣದ ನಂತರ ಬಿ. ಕಾಂ. ಅಥವಾ ಬಿ. ಬಿ. ಎಂ. ಪದವಿ ಮಾಡಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಬಿ. ಕಾಂ. ಪದವಿಗೆ ಸೇರಿದರೆ, ಜೊತೆಯಲ್ಲಿಯೇ ಚಾರ್ಟರ್ಡ್ ಅಕೌಂಟೆಂಟ್ ಆಗುವುದಕ್ಕೆ ಬೇಕಾದ ಪರೀಕ್ಷೆಗೂ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬಹುದು.
 
ವಿಜ್ಞಾನಕ್ಕೆ ವಿಭಾಗದ ಸಂಯೋಜನೆಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತದ ಜೊತೆಯಲ್ಲಿ ಜೀವಶಾಸ್ತ್ರವನ್ನು ನಾಲ್ಕನೆಯ ವಿಷಯವಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ, ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳಿಗಷ್ಟೇ ಅಲ್ಲ, ಫಾರ್ಮಸಿ, ಅಗ್ರಿಕಲ್ಚರ್, ಬಯೋಟೆಕ್ನಾಲಜಿ, ಜೆನೆಟಿಕ್ಸ್, ಮೈಕ್ರೋಬಯಾಲಜಿ ಮುಂತಾದ ಹತ್ತು ಹಲವು ಕೋರ್ಸ್‌ಗಳಿಗೆ ಸೇರುವ ಅವಕಾಶಗಳಿರುತ್ತವೆ.
 
ಹೀಗಾಗಿ, ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವುದೇ ಆತುರದ ನಿರ್ಧಾರಕ್ಕೆ ಬರುವುದು ಬೇಡ. ಕಲಾವಿಭಾಗದಲ್ಲಿಯೂ ಸಂಯೋಜನೆಯ ಆಯ್ಕೆಯಲ್ಲಿ ಸಾಕಷ್ಟು ಎಚ್ಚರ ವಹಿಸಿದಲ್ಲಿ, ವೃತ್ತಿಯ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು.
 
ಪದವಿಪೂರ್ವ ಶಿಕ್ಷಣದ ವಿಜ್ಞಾನ, ವಾಣಿಜ್ಯ ಹಾಗೂ ಕಲೆ – ಈ ಮೂರೂ ವಿಭಾಗಗಳಲ್ಲಿ ಇಂದು ಉದ್ಯೋಗದ ಅವಕಾಶಗಳು ಇರುವ ಹಾಗೆ, ಉನ್ನತ ವ್ಯಾಸಂಗದ ಅವಕಾಶಗಳೂ ಹೇರಳವಾಗಿವೆ. ಪದವಿಯಷ್ಟೇ ಅಲ್ಲ, ಸ್ನಾತಕೋತ್ತರ ಪದವಿ ಪಡೆದು ನಂತರ ಉದ್ಯೋಗಕ್ಕೆ ಸೇರುವ ಸಾಧ್ಯತೆಯನ್ನೂ ಪರಿಶೀಲಿಸಬಹುದು. ಇಲ್ಲವೇ, ಸಂಶೋಧನೆಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮುಂತಾದ ಶುದ್ಧ ವಿಜ್ಞಾನದ ಕ್ಷೇತ್ರಗಳಲ್ಲಿ ಇಂದು ಸಂಶೋಧನೆಗೆ ವಿಪುಲ ಅವಕಾಶಗಳಿವೆ. 
 
ಪದವಿಪೂರ್ವ ಶಿಕ್ಷಣ ಅತ್ಯವಶ್ಯವೆ?
ಒಂದು ವೇಳೆ ಕಾರಣಾಂತರಗಳಿಂದ ಪದವಿಪೂರ್ವ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದ್ದಲ್ಲಿ ನೀವು ಧೃತಿಗೆಡುವ ಅವಶ್ಯಕತೆ ಇಲ್ಲ. ಹತ್ತನೇ ತರಗತಿಯ ನಂತರ ಡಿಪ್ಲೊಮಾ ತರಗತಿಗಳಿಗೆ ಸೇರಿ ಅದನ್ನು ಪೂರೈಸಿದ ಮೇಲೆ ಉದ್ಯೋಗಕ್ಕೆ ಸೇರಬಹುದಾದಂಥ ಹಲವಾರು ಅವಕಾಶಗಳು ಇವೆ. ಇಲ್ಲವೇ ಡಿಪ್ಲೊಮಾ ಪಡೆದ ಮೇಲೆ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಂದುವರೆಸಬಹುದು.
 
ಸಾಂಪ್ರದಾಯಿಕವಲ್ಲದ ಹಲವಾರು ವೃತ್ತಿಶಿಕ್ಷಣ ಮಾರ್ಗಗಳೂ ಇವೆ. ಉದಾಹರಣೆಗೆ ವೈದ್ಯಕೀಯ ಕಾಲೇಜುಗಳಲ್ಲಿ ಹಲವು ಬಗೆಯ ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳಿವೆ. ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳಲ್ಲಿ ಉದ್ಯೋಗದ ಅವಕಾಶಗಳನ್ನು ಇವು ಒದಗಿಸುತ್ತವೆ. ಇದೇ ಬಗೆಯ ಅವಕಾಶಗಳು ವಾಣಿಜ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಕಂಡುಬರುತ್ತವೆ.
 
ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟರೆ, ಮುಂದೆ ಸಮಸ್ಯೆಗಳನ್ನು ಎದುರಿಸುವ ಪ್ರಮೇಯ ಬರುವುದಿಲ್ಲ. ನಿಮ್ಮ ಆಸಕ್ತಿ ಹಾಗೂ ಮನೋಭಾವಗಳು ನಿಮ್ಮ ವೃತ್ತಿಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ನೆನಪಿಡಿ. ನಿಮ್ಮ ಪೋಷಕರನ್ನು, ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ಪಡೆದುಕೊಂದು ಯಶಸ್ಸಿನೆಡೆಗೆ ಸಾಗಿ.
(ಲೇಖಕರು ನಿವೃತ್ತ ಪ್ರಾಂಶುಪಾಲರು) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT