ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯಲ್ಲಿ ಹೊಡೆದಾಟ ಪ್ರಜಾಸತ್ತೆಗೆ ಮತ್ತೊಂದು ಕಳಂಕ

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ನಡೆದ ಮಾರಾಮಾರಿ, ಗದ್ದಲದ ಘಟನೆಗಳಿಂದ ಸಂಸದೀಯ ಪ್ರಜಾಸತ್ತೆಗೆ ಮತ್ತೊಂದು ಕಳಂಕ ಅಂಟಿದಂತಾಗಿದೆ. ಅದೇನು ವಿಧಾನಸಭೆಯೋ ಅಥವಾ ಕುಸ್ತಿ ಅಖಾಡವೋ ಎಂದು ಅನುಮಾನ ಬರುವ ರೀತಿಯಲ್ಲಿ ಸದಸ್ಯರು ವರ್ತಿಸಿದ್ದಾರೆ. ಸದನದ ನಿಯಮಗಳ ಪುಸ್ತಕವನ್ನು ನೆಲಕ್ಕೆ ಎಸೆದಿದ್ದಾರೆ. ಸ್ಪೀಕರ್‌ ತೊಟ್ಟಿದ್ದ ಉಡುಪುಗಳನ್ನು ಹರಿದು, ಚಪ್ಪಲಿ ತೂರಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಸದನದ ಘನತೆ– ಗೌರವಕ್ಕೆ ಮಸಿ ಬಳಿದಿದ್ದಾರೆ. ಆ ಮೂಲಕ ತಮ್ಮ ಮರ್ಯಾದೆಯನ್ನೂ ಕೆಡಿಸಿಕೊಂಡಿದ್ದಾರೆ. ತಾವು ಎಂತಹ ಪ್ರತಿನಿಧಿಗಳನ್ನು ಆಯ್ಕೆ ಮಾಡಿದೆವು ಎಂದು ತಮಿಳುನಾಡಿನ ಪ್ರಜೆಗಳು ಹಳಹಳಿಸುವಂತಾಗಿದೆ. ಇವೆಲ್ಲ ಗಂಭೀರವಾಗಿ ಪರಿಗಣಿಸಬೇಕಾದ ವಿದ್ಯಮಾನಗಳು.

ಇವೆಲ್ಲಕ್ಕೂ ಮುಖ್ಯ ಕಾರಣ ಡಿಎಂಕೆ ಶಾಸಕರು. ಅವರದು ಸಂಯಮ ಮೀರಿದ ಮತ್ತು ಯಾರೂ ಸಮರ್ಥಿಸಲು ಸಾಧ್ಯವೇ ಇಲ್ಲದಂತಹ ವರ್ತನೆ. ತಮ್ಮದು ಈ ಹಿಂದೆ ಅಧಿಕಾರ ನಡೆಸಿದ ಪಕ್ಷ ಎಂಬುದು ಅವರ ಗಮನದಲ್ಲಿ ಇರಬೇಕಾಗಿತ್ತು. ಪ್ರತಿಪಕ್ಷ ಮುಖಂಡ ಎಂ.ಕೆ. ಸ್ಟಾಲಿನ್‌ ಅವರಾದರೂ ತಮ್ಮ ಪಕ್ಷದ ಸದಸ್ಯರನ್ನು ನಿಯಂತ್ರಿಸಬೇಕಾಗಿತ್ತು.

ಶನಿವಾರ ಸದನ ಕರೆದದ್ದು ಅತ್ಯಂತ ಮಹತ್ವದ ತೀರ್ಮಾನ ತೆಗೆದುಕೊಳ್ಳಲು. ಅಂದರೆ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ  ಸರ್ಕಾರಕ್ಕೆ ಬಹುಮತ ಇದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಲು.  ಈ ಸರ್ಕಾರ ರಚನೆಯಾದ ಬಗ್ಗೆ ಅಸಮಾಧಾನ ಇದ್ದರೆ ಅದನ್ನು ತೋರ್ಪಡಿಸಲು ಜನತಂತ್ರದಲ್ಲಿ ಬೇಕಾದಷ್ಟು ವಿಧಾನಗಳಿವೆ, ಅವಕಾಶಗಳಿವೆ.

ಅವನ್ನೆಲ್ಲ ಬಳಸಿಕೊಳ್ಳುವುದನ್ನು ಬಿಟ್ಟು ತೋಳೇರಿಸಿ ಸದನದಲ್ಲಿ ಕೋಲಾಹಲ ಎಬ್ಬಿಸುವ, ಗಲಾಟೆಗೆ ಇಳಿಯುವ ಅಗತ್ಯ ಇರಲಿಲ್ಲ. ಅದು ಜನತಂತ್ರದ ಲಕ್ಷಣವೂ ಅಲ್ಲ. ನಿಯಮಗಳನ್ನು ಅನುಸರಿಸದೇ ಇರುವುದು, ತಾವು ಹೇಳಿದಂತೆಯೇ ಸದನ ನಡೆಯಬೇಕು ಎಂದು ಹಟ ಹಿಡಿಯುವುದು ಜವಾಬ್ದಾರಿಯುತ ಪಕ್ಷವೊಂದಕ್ಕೆ ಭೂಷಣವೂ ಅಲ್ಲ.

ಸಾಮಾನ್ಯವಾಗಿ ಸರ್ಕಾರದ ಬಹುಮತ ಸಾಬೀತು ಅಥವಾ ವಿಶ್ವಾಸಮತ ಯಾಚನೆ ಮತ್ತು ಅವಿಶ್ವಾಸ ನಿರ್ಣಯಗಳ ಮೇಲೆ ಗುಪ್ತ ಮತದಾನ ನಡೆಯುವುದಿಲ್ಲ. ಅದು ಬಹಿರಂಗ ಪ್ರಕ್ರಿಯೆಯಾಗಿಯೇ ನಡೆಯುತ್ತ ಬಂದಿದೆ. ವಿರೋಧ ಪಕ್ಷಗಳ ಸದಸ್ಯರು ಅಂತಹ ಬೇಡಿಕೆ ಇಟ್ಟರೂ ಅವಕ್ಕೆ ಮನ್ನಣೆ ಸಿಕ್ಕ ನಿದರ್ಶನಗಳು ಇಲ್ಲ. ಹೀಗಿರುವಾಗ ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ಕೂಡ ಈ ಬೇಡಿಕೆ ತಿರಸ್ಕರಿಸಿದ್ದರಲ್ಲಿ ಅಸಹಜವೇನಿಲ್ಲ.

ಇಂತಹ ಸನ್ನಿವೇಶದಲ್ಲಿ ವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕುವ ಮೂಲಕ ತಮ್ಮ ಬಲ ಪ್ರದರ್ಶಿಸುವ ಅವಕಾಶ ಡಿಎಂಕೆ ಸದಸ್ಯರಿಗೆ ಇತ್ತು. ಆದರೆ ಆಡಳಿತ ಪಕ್ಷದ ಒಳಗಿನ ತೀವ್ರ ಭಿನ್ನಾಭಿಪ್ರಾಯವನ್ನು ತಮ್ಮ ರಾಜಕೀಯ ಬೇಳೆ  ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಉದ್ದೇಶದಿಂದ ಗುಪ್ತ ಮತದಾನಕ್ಕೆ ಪಟ್ಟು ಹಿಡಿದು ರಾದ್ಧಾಂತ ಎಬ್ಬಿಸಿದರು ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.

ಸ್ಪೀಕರ್‌ ಮತ್ತು ಆಡಳಿತ ಪಕ್ಷದವರು ಕೂಡ ಒಂದಿಷ್ಟು ಉದಾರವಾಗಿ ನಡೆದುಕೊಳ್ಳಬೇಕಾಗಿತ್ತು. ಅತಿ ದೊಡ್ಡ ವಿರೋಧ ಪಕ್ಷದ ಸದಸ್ಯರನ್ನು ಮಾರ್ಷಲ್‌ಗಳ ಮೂಲಕ ಸಾರಾಸಗಟಾಗಿ ಹೊರಹಾಕಿ, ಬಹುಮತ ಸಾಬೀತುಪಡಿಸುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಅದರಿಂದ ಸಂವಿಧಾನಾತ್ಮಕ ಅನಿವಾರ್ಯ ಮತ್ತು ರಾಜ್ಯಪಾಲರ ಷರತ್ತಿನ ಶಾಸ್ತ್ರ  ಪೂರೈಸಿರಬಹುದು.

ಕಾನೂನಿನ ದೃಷ್ಟಿಯಲ್ಲಿ ಗೆದ್ದಿರಬಹುದು. ಆದರೆ ಅದು ರಾಜಕೀಯವಾಗಿ ಮಾದರಿಯ ನಡೆ ಅಲ್ಲ. ಅಷ್ಟಕ್ಕೂ ತಮಿಳುನಾಡು ವಿಧಾನಸಭೆಯಲ್ಲಿ ಇಂತಹ ವಾತಾವರಣ ಹೊಸದೇನಲ್ಲ. ದಿವಂಗತ ಜಯಲಲಿತಾ ಮುಖ್ಯಮಂತ್ರಿ ಹುದ್ದೆಗೆ ಏರುವುದಕ್ಕೂ ಮುನ್ನ ವಿರೋಧ ಪಕ್ಷದಲ್ಲಿದ್ದಾಗ 1989ರ ಮಾರ್ಚ್‌ನಲ್ಲಿ ಸದನದ ಒಳಗೇ ಅವರ ಮೇಲೆ ಹಲ್ಲೆ ಮಾಡಲಾಗಿತ್ತು, ಸೀರೆ ಎಳೆಯುವ ಪ್ರಯತ್ನ ನಡೆದಿತ್ತು.

ಆಗ ಅಧಿಕಾರದಲ್ಲಿ ಇದ್ದದ್ದು ಕರುಣಾನಿಧಿಯವರ ಡಿಎಂಕೆ. ಈಗ ಸ್ಥಾನ ಅದಲುಬದಲಾಗಿದೆ ಅಷ್ಟೇ. ಇವನ್ನೆಲ್ಲ ನೋಡಿದರೆ, ಎರಡೂ ಮುಕ್ಕಾಲು ದಶಕ ಕಳೆದರೂ ತಮಿಳುನಾಡು ವಿಧಾನಸಭೆಯ ಕಲಾಪಗಳ ಗುಣಮಟ್ಟ, ಸದಸ್ಯರ ನಡವಳಿಕೆ ಏನೂ ಸುಧಾರಿಸಿಲ್ಲ. 

ಗಲಾಟೆ, ಗದ್ದಲಗಳಿಲ್ಲದೆ ಕಲಾಪ ನಡೆಯಲು ಸಾಧ್ಯವೇ ಇಲ್ಲವೇನೋ ಎಂಬಂತಹ ವಾತಾವರಣ ಸೃಷ್ಟಿಸುವುದರ ಹಿಂದೆ ಪ್ರಚಾರದ ವ್ಯಾಮೋಹ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಸಂಸತ್ತು ಮತ್ತು ರಾಜ್ಯಗಳ ವಿಧಾನ ಮಂಡಲಗಳಲ್ಲಿ ಕೋಲಾಹಲ, ಕಲಾಪಕ್ಕೆ ಅಡ್ಡಿ  ಮಾಮೂಲು ಎನ್ನುವಂತಾಗಿದೆ.

ಆದರೆ ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ನಡೆದದ್ದು ಇವೆಲ್ಲವನ್ನೂ ಮೀರಿದ್ದು. ಅದರಿಂದ ಜನತಂತ್ರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಬದಲಾಗಿ ಸಂಸದೀಯ ವ್ಯವಸ್ಥೆ ಬಗ್ಗೆ ಇರುವ ವಿಶ್ವಾಸ, ಗೌರವ ಮತ್ತಷ್ಟು ಕುಗ್ಗುತ್ತದೆ. ಅದನ್ನು ಜನಪ್ರತಿನಿಧಿಗಳು ಅರಿತುಕೊಂಡರೆ ಅವರಿಗೇ ಕ್ಷೇಮ. ಇನ್ನಾದರೂ ಇಂತಹ ಘಟನೆಗಳು ಮರುಕಳಿಸದೇ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT