ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

250 ಎಕರೆ ಅರಣ್ಯ ಬೆಂಕಿಗಾಹುತಿ

ಬೂದಿಮುಚ್ಚಿದ ಕೆಂಡದಂತಾಗಿರುವ ಬಂಡೀಪುರ ಅರಣ್ಯ
Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮೈಸೂರು: ಬಂಡೀಪುರ ಹುಲಿ ರಕ್ಷಿತಾರಣ್ಯದ ಮೊಳೆಯೂರು ಅರಣ್ಯ ವಲಯದಲ್ಲಿ ಸುಮಾರು 250 ಎಕರೆಯಷ್ಟು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಕಾಳ್ಗಿಚ್ಚನ್ನು ನಂದಿಸುವ ಕಾರ್ಯಾಚರಣೆಯಲ್ಲಿ ಭಾನುವಾರ 300ಕ್ಕೂ ಹೆಚ್ಚಿನ ಸಿಬ್ಬಂದಿ ಹಾಗೂ ಎಚ್.ಡಿ.ಕೋಟೆ ಅಗ್ನಿಶಾಮಕ ಸಿಬ್ಬಂದಿ ಭಾಗಿಯಾಗಿ ಬೆಂಕಿ ಹರಡದಂತೆ ತಡೆಯಲು ಹರಸಾಹಸಪಟ್ಟರು.

ನೀರಿನ ಕೊರತೆ: ಸ್ಥಳಕ್ಕೆ ಬಂದಿದ್ದ 2 ಅಗ್ನಿಶಾಮಕ ವಾಹನದಲ್ಲಿದ್ದ ನೀರು ಖಾಲಿಯಾಗುತ್ತಿದ್ದಂತೆ, ಮತ್ತೆ ಬೆಂಕಿ ವ್ಯಾಪಿಸತೊಡಗಿತು. ಅಷ್ಟೊತ್ತಿಗೆ ಗಾಳಿಯೂ ವೇಗವಾಗಿ ಬೀಸತೊಡಗಿತು. ಇದರಿಂದ ಬೆಂಕಿಯ ಕಿಡಿಗಳು ಕ್ಷಣಾರ್ಧದಲ್ಲಿ ದೂರಕ್ಕೆ ಹಾರಿ, ಅಲ್ಲೂ ಬೆಂಕಿಯನ್ನು ಹರಡಿದವು. ಕೊನೆಗೆ, ಟ್ಯಾಂಕರ್‌ ಮೂಲಕ ನೀರು ತುಂಬಿಸಿಕೊಂಡು ಬಂದು ಅಗ್ನಿಶಾಮಕ ವಾಹನಗಳಿಗೆ ಪೂರೈಸಲಾಯಿತು. ಅರಣ್ಯದೊಳಗೆ ವಾಹನಗಳು ಹೋಗಲಾರದಂತಹ ಪ್ರದೇಶದಲ್ಲಿದ್ದ ಬೆಂಕಿಯನ್ನು ನಂದಿಸಲು, ಸಿಬ್ಬಂದಿ ಬೆನ್ನಿಗೆ ನೀರಿನ ಸಣ್ಣ ಸಣ್ಣ ಟ್ಯಾಂಕ್‌ಗಳನ್ನು ಕಟ್ಟಿಕೊಂಡು ಯತ್ನಿಸಿದರು.

ಬೆಂಕಿಗೆ ಯಾರು ಕಾರಣ?: ಸಮೀಪದಲ್ಲಿರುವ ಕೆಬ್ಬೇಪುರಹಾಡಿಯ ಕೆಲವು ಕಿಡಿಗೇಡಿಗಳು ಅರಣ್ಯ ಇಲಾಖೆ ಸಿಬ್ಬಂದಿ ಮೇಲಿನ ದ್ವೇಷದಿಂದ ಬೆಂಕಿ ಇಟ್ಟಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಸಂಶಯ ವ್ಯಕ್ತಪಡಿಸಿದ್ದಾರೆ. ಇಲ್ಲದಿದ್ದರೆ, ತಾನೇ ತಾನಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇಲ್ಲ. ಯಾರೊ ಒಂದಿಷ್ಟು ಒಣಗಿದ ಲಂಟಾನ ಗಿಡಗಳಿಗೆ ಬೆಂಕಿ ಇಟ್ಟಿದ್ದಾರೆ. ನಂತರ, ಅದು ವ್ಯಾಪಿಸಿದೆ ಎಂದು ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಯೊಬ್ಬರು ತಿಳಿಸಿದರು.

ಬೂದಿಮುಚ್ಚಿದ ಕೆಂಡ!: ಕೆಲವೆಡೆ ಮೇಲ್ನೋಟಕ್ಕೆ ಬೆಂಕಿ ಆರಿದಂತೆ ಕಂಡು ಬರುತ್ತಿದ್ದರೂ ಕುರುಚಲು ಗಿಡಗಳು ಉರಿದಿರುವ ಕಡೆ ಇನ್ನೂ ಬೆಂಕಿಯ ಕಿಡಿಗಳು ಇರುವ ಸಾಧ್ಯತೆ ಇದೆ. ಗಾಳಿ ಜೋರಾಗಿ ಬೀಸುತ್ತಿರುವುದರಿಂದ ಬೆಂಕಿ ಮತ್ತೆ ಯಾವಾಗ ಹೊತ್ತಿಕೊಳ್ಳತ್ತದೊ ಗೊತ್ತಿಲ್ಲ. ಹೀಗಾಗಿ, ಸ್ಥಳದಲ್ಲೇ ಸಿಬ್ಬಂದಿ ಇದ್ದಾರೆ. ಕೆಲವೆಡೆ ಬೆಂಕಿ ಇನ್ನೂ ಹೊಗೆಯಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT