ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ–ಮಲೇಷ್ಯಾ ಸಂಘರ್ಷ

ಕಿಮ್‌ ಜಾಂಗ್‌ ನಮ್‌ ಹತ್ಯೆ ಪ್ರಕರಣ: ಮೃತದೇಹ ಹಸ್ತಾಂತರಿಸಲು ನಿರಾಕರಣೆ
Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲಸಹೋದರ ಕಿಮ್ ಜಾಂಗ್‌ ನಮ್ ಅವರ ಹತ್ಯೆ ಪ್ರಕರಣವು ಮಲೇಷ್ಯಾ ಮತ್ತು ಉತ್ತರ ಕೊರಿಯಾ ದೇಶಗಳ ನಡುವೆ ರಾಜತಾಂತ್ರಿಕ ಸಂಘರ್ಷದ ಕಿಡಿ ಹೊತ್ತಿಸಿದೆ.

ನಮ್ ಮೃತದೇಹವನ್ನು ತ್ವರಿತವಾಗಿ ಹಸ್ತಾಂತರಿಸುವಂತೆ ಉತ್ತರ ಕೊರಿಯಾ ಮಾಡಿದ ಮನವಿಯನ್ನು ಮಲೇಷ್ಯಾ ತಿರಸ್ಕರಿಸಿದ್ದು, ಉಭಯ ದೇಶಗಳ ನಡುವಣ ಬಿಕ್ಕಟ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಮಲೇಷ್ಯಾ ನೀಡುವ ಮರಣೋತ್ತರ ಪರೀಕ್ಷೆಯ ವರದಿಯನ್ನು ತಿರಸ್ಕರಿಸುವುದಾಗಿ ಹೇಳಿರುವ ಉತ್ತರ ಕೊರಿಯಾ, ಬಾಹ್ಯ ಶಕ್ತಿಗಳೊಂದಿಗೆ ಸೇರಿಕೊಂಡು ಮಲೇಷ್ಯಾ ವಂಚನೆ ಮಾಡುತ್ತಿದೆ ಎಂದು ದಕ್ಷಿಣ ಕೊರಿಯಾದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಆರೋಪಿಸಿದೆ.

‘ನಮ್ಮ ಅನುಮತಿ ಇಲ್ಲದೆ ಮತ್ತು ಸಮಕ್ಷಮವಿಲ್ಲದೆ ಮಲೇಷ್ಯಾ ಬಲವಂತವಾಗಿ ಮರಣೋತ್ತರ ಪರೀಕ್ಷೆ ನಡೆಸಿದೆ’ ಎಂದು ಉತ್ತರ ಕೊರಿಯಾದ ರಾಯ
ಭಾರಿ ಕಾಂಗ್‌ ಚೊಲ್‌ ದೂರಿದ್ದಾರೆ.

ಈ ಘಟನೆ, ಉತ್ತರ ಕೊರಿಯಾ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾದ ಮಲೇಷ್ಯಾದೊಂದಿಗಿನ ನಂಟನ್ನು ದುರ್ಬಲಗೊಳಿಸಿದೆ.

ನಮ್‌ ಅವರ ಕುಟುಂಬದ ಸದಸ್ಯರ ಡಿಎನ್‌ಎ ಮಾದರಿಗಾಗಿ ಮಲೇಷ್ಯಾ ಪಟ್ಟು ಹಿಡಿದಿದೆ. ತನಿಖೆಗೆ ನೆರವು ಪಡೆಯುವ ಸಲುವಾಗಿ ನಮ್ ಅವರ ಹತ್ತಿರದ ಸಂಬಂಧಿಯ ಪತ್ತೆಗೆ ತೀವ್ರ ಹುಡುಕಾಟ ನಡೆಸಲಾಗಿದೆ. ಇದವರೆಗೂ ಅವರ ಕುಟುಂಬದ ಯಾರೂ ಸಂಪರ್ಕಿಸಲು ಮುಂದೆ ಬಂದಿಲ್ಲ. ನಮ್‌ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು ಪೊಲೀಸ್‌ ಉಪ ಮಹಾನಿರ್ದೇಶಕ ನೂರ್‌ ರಷೀದ್‌ ಇಬ್ರಾಹಿಂ ಹೇಳಿದ್ದಾರೆ.

ಐವರು ಅದೇ ದೇಶದವರು: ನಮ್ ಅವರ ಹತ್ಯೆಯಲ್ಲಿ ಉತ್ತರ ಕೊರಿಯಾದ ಐವರು ಭಾಗಿಯಾಗಿದ್ದು, ಅವರಲ್ಲಿ ನಾಲ್ವರು ಕೊಲೆ ನಡೆದ ದಿನವೇ ದೇಶ ತೊರೆದಿದ್ದಾರೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಈ ನಾಲ್ವರೂ ಆರೋಪಿಗಳು ಪುರುಷರಾಗಿದ್ದು, 33 ರಿಂದ 57 ವರ್ಷದ ಒಳಗಿನವರಾಗಿದ್ದಾರೆ. ಅವರನ್ನು ರಿ ಜಿ ಹ್ಯುವಾನ್‌, ಒ ಜಾಂಗ್‌ ಗಿಲ್‌, ರಿ ಜೇ ನಮ್‌ ಮತ್ತು ಹೊಂಗ್‌ ಸಾಂಗ್ ಸಾಕ್‌ ಎಂದು ಗುರುತಿಸಿರುವುದಾಗಿ  ಅವರು ಹೇಳಿದ್ದಾರೆ.

ಕ್ವಾಲಾಲಂಪುರದಲ್ಲಿ ಐಟಿ ಎಂಜಿನಿಯರ್‌ ಆಗಿರುವ ಉತ್ತರ ಕೊರಿಯಾದ ರಿ ಜಾಂಗ್‌ ಚೊಲ್‌ (46) ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇವರಲ್ಲದೆ ಇನ್ನೂ ಮೂವರನ್ನು ವಿಚಾರಣೆಗೆ ಒಳಪಡಿಸಬೇಕಿದೆ ಎಂದಿದ್ದಾರೆ.

ನಮ್‌ ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಶಂಕೆಯಲ್ಲಿ ವಿಯೆಟ್ನಾಂ ಮತ್ತು ಇಂಡೊನೇಷ್ಯಾದ ಇಬ್ಬರು ಯುವತಿಯರನ್ನು ಘಟನೆ ನಡೆದ ಮರುದಿನ ಬಂಧಿಸಲಾಗಿತ್ತು.

ಮುಚ್ಚಿದ ರೆಸ್ಟೊರೆಂಟ್‌: ಮಲೇಷ್ಯಾದಲ್ಲಿರುವ ಉತ್ತರ ಕೊರಿಯಾದ ಏಕೈಕ ಹಾಗೂ ಪ್ರಸಿದ್ಧ ರೆಸ್ಟೊರೆಂಟ್‌ ಅನ್ನು ಘಟನೆ ನಡೆದ ಮರುದಿನದಿಂದಲೇ ಮುಚ್ಚಲಾಗಿದ್ದು, ಅಲ್ಲಿಗೆ ಬರುತ್ತಿರುವ ಗ್ರಾಹಕರನ್ನು ಮರಳಿಕಳುಹಿಸಲಾಗುತ್ತಿದೆ.

ಮಲೇಷ್ಯಾದಲ್ಲಿ ನೆಲೆಸಿರುವ ಉತ್ತರ ಕೊರಿಯಾದ ಸುಮಾರು ಒಂದು ಸಾವಿರ ನಾಗರಿಕರು ಸ್ಥಳೀಯರ ಸಂಪರ್ಕದಿಂದ ದೂರವುಳಿಯುತ್ತಿದ್ದಾರೆ. ಜನರು  ಅವರನ್ನು ಅನುಮಾನದಿಂದ ನೋಡುತ್ತಿರುವುದರಿಂದ ಎಲ್ಲರೊಂದಿಗೆ ಬೆರೆಯಲು ಅವರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

‘ಉತ್ತರ ಕೊರಿಯಾ ಕೈವಾಡ ದೃಢ’
ಸೋಲ್‌(ಎಎಫ್‌ಪಿ):
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲಸಹೋದರ ಕಿಮ್ ಜಾಂಗ್‌ ನಮ್ ಅವರ ಹತ್ಯೆ ಹಿಂದೆ ಅಲ್ಲಿನ ಸರ್ಕಾರದ್ದೇ ಕೈವಾಡವಿರುವುದು ಮಲೇಷ್ಯಾ ಪೊಲೀಸರ ತನಿಖೆಯಿಂದ ಬಹಿರಂಗವಾಗಿರುವುದಾಗಿ ದಕ್ಷಿಣ ಕೊರಿಯಾ ಭಾನುವಾರ ಹೇಳಿದೆ.

‘ಕ್ವಾಲಾಲಂಪುರದ ವಿಮಾನ ನಿಲ್ದಾಣದಲ್ಲಿ ಕೊಲೆಯಾಗಿರುವುದು ನಮ್‌ ಅವರೇ ಎನ್ನವುದು ವಿವಿಧ ಅಂಶಗಳಿಂದ ನಮಗೆ ಖಚಿತವಾಗಿದೆ. ಈ ಪ್ರಕರಣದ ಐವರು ಶಂಕಿತರು ಉತ್ತರ ಕೊರಿಯಾ ಪ್ರಜೆಗಳು. ಹೀಗಾಗಿ ಈ ಹತ್ಯೆ ಹಿಂದೆ ಅಲ್ಲಿನ ಸರ್ಕಾರದ ಕೈವಾಡ ಇರುವುದ ನಿಚ್ಚಳ’ ಎಂದು ಸೋಲ್‌ನ ಏಕೀಕರಣ ಸಚಿವಾಲಯದ ವಕ್ತಾರ ಜಿಯಾಂಗ್‌ ಜೂನ್‌ ಹೀ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT