ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕಲಾಸಪುರ: ದಲಿತರಿಗೆ ಬಹಿಷ್ಕಾರ

ದೇವಾಲಯ, ಕ್ಷೌರದಂಗಡಿಗೆ ಈ ಮೊದಲೂ ಪ್ರವೇಶ ಇರಲಿಲ್ಲ!
Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಡಂಬಳ (ಗದಗ ಜಿಲ್ಲೆ): ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಉಂಟಾದ ಭಿನ್ನಮತದಿಂದ ಇಲ್ಲಿಗೆ ಸಮೀಪದ ಯಕಲಾಸಪೂರ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

‘ಎರಡು ವಾರಗಳ ಹಿಂದೆ ಗ್ರಾಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸಭೆ ನಡೆದಿತ್ತು. ಈ ಸಭೆಯಲ್ಲಿ, ಈ ಸ್ಥಾನಕ್ಕೆ ದಲಿತರಿಗೆ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ಇದನ್ನು ಒಪ್ಪದ ಸವರ್ಣೀಯರು, ಸಭೆಯ ನಂತರ ನಮಗೆ ಸಂಪೂರ್ಣ ಬಹಿಷ್ಕಾರ ಹಾಕಿದ್ದಾರೆ’ ಎಂದು ಗ್ರಾಮದ ದಲಿತ ಸಮುದಾಯದವರು ಕೆಲವರು ಭಾನುವಾರ ಪ್ರಜಾವಾಣಿ ಎದುರು ಅಳಲು ತೋಡಿಕೊಂಡರು.

‘ಗ್ರಾಮದಲ್ಲಿ  45 ದಲಿತ ಕುಟುಂಬಗಳಿದ್ದು, 250ಕ್ಕೂ ಹೆಚ್ಚೂ ಜನರಿದ್ದೇವೆ. ಮೊದಲಿನಿಂದಲೂ ಗ್ರಾಮದಲ್ಲಿ ದೇವಸ್ಥಾನ ಮತ್ತು  ಕ್ಷೌರದ ಅಂಗಡಿಗೆ ನಮಗೆ ಪ್ರವೇಶ ಇರಲಿಲ್ಲ. ಚಹಾ ಅಂಗಡಿಗಳಲ್ಲಿ ಪ್ರತ್ಯೇಕ ಪ್ಲಾಸ್ಟಿಕ್‌ ಲೋಟದಲ್ಲಿ ಚಹಾ ನೀಡಲಾಗುತ್ತಿತ್ತು. ಈ ಘಟನೆಯ ನಂತರ ಗ್ರಾಮದಲ್ಲಿನ ಚಹಾ ಅಂಗಡಿ, ಹಿಟ್ಟಿನ ಗಿರಣಿಯನ್ನೂ ಬಲವಂತವಾಗಿ ಮುಚ್ಚಿಸಿರುವ ಸವರ್ಣೀಯರು ಸಂಪೂರ್ಣ ನಿಷೇಧ ಹೇರಿದ್ದಾರೆ. ಈಗ ಜಮೀನಿನ ಕೆಲಸಕ್ಕೂ ನಮ್ಮನ್ನು ಕರೆಯುತ್ತಿಲ್ಲ. ನಮ್ಮ ಮನೆಗಳಲ್ಲಿನ ಶುಭ ಕಾರ್ಯಗಳಿಗೂ ಹೋಗಬಾರದು ಎಂದು  ಪುರೋಹಿತರಿಗೂ ಕಟ್ಟಪ್ಪಣೆ ವಿಧಿಸಲಾಗಿದೆ. ಗ್ರಾಮದಲ್ಲಿ ಬದುಕುವುದೇ ಕಷ್ಟವಾಗಿದೆ’ ದೂರಿದರು.

‘ಅವರು ಯಾಕೆ ನಮ್ಮನ್ನು ಈ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ದಲಿತ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡದೆ ಯಾವುದೇ ಸಂಧಾನಕ್ಕೂ ನಾವು ಸಿದ್ಧರಿಲ್ಲ ಎಂದು ಹೇಳಿದ್ದಕ್ಕೆ ಈ ರೀತಿಯ ಘೋರ ಶಿಕ್ಷೆ ಅನುಭವಿಸುವಂತಾಗಿದೆ’ ಎಂದು ಚಂದ್ರಪ್ಪ ಹರಿಜನ, ರೇಣವ್ವ ಮಾದರ, ಮಲ್ಲೇಶ ಪೂಜಾರ ಹೇಳಿದರು.

‘ದಲಿತ ಅಭ್ಯರ್ಥಿಯನ್ನು ನಾವು ವಿರೋಧಿಸಿಲ್ಲ. ಕಾನೂನಿನಲ್ಲಿ ಅವರಿಗೂ ಅವಕಾಶವಿದೆ. ನಾಲ್ಕು ಜನ ಕೂಡಿ ಮಾತುಕತೆ ನಡೆಸಿದ್ದರೆ ಈ ಸಮಸ್ಯೆ ಬಗೆಹರಿಯುತ್ತದೆ. ಇನ್ನು ಚಹಾ ಅಂಗಡಿ, ಹಿಟ್ಟಿನ ಗಿರಣಿ ಬಂದ್‌ ಮಾಡುವಂತೆ ನಾವು ಯಾರ ಮೇಲೂ ಒತ್ತಡ ಹೇರಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮದ ಸವರ್ಣೀಯರೊಬ್ಬರು ಪತ್ರಿಕೆಗೆ ತಿಳಿಸಿದರು.

* ಸೋಮವಾರ (ಫೆ. 20) ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತೇನೆ. ಬಳಿಕ ಎರಡೂ ಸಮುದಾಯದ ಮುಖಂಡರು, ಗ್ರಾಮಸ್ಥರೊಂದಿಗೆ ಚರ್ಚಿಸಿ, ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇನೆ.
-ಭ್ರಮರಾಂಬಾ ಗುಬ್ಬಿಶೆಟ್ಟಿ, ತಹಶೀಲ್ದಾರ್, ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT