ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಆಗೊಂದು ನಿಲುವು; ಈಗೊಂದು ಒಲವು!

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ
Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ 2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ವಿಷಯವನ್ನು ಸಚಿವ ಸಂಪುಟದ ಮುಂದೆ ತಕ್ಷಣವೇ ತರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್‌)ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

362 ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಭಾರಿ ಅಕ್ರಮ, ಸ್ವಜನಪಕ್ಷಪಾತ ನಡೆದಿದೆ ಎಂದು ಸಿಐಡಿ ಬೊಟ್ಟು ಮಾಡಿತ್ತು. ಅದನ್ನು ಆಧರಿಸಿ, 2014ರ ಆ. 7ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2011ರ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಸರ್ಕಾರ ರದ್ದುಪಡಿಸಿತ್ತು. ಆದರೆ, ಸರ್ಕಾರದ ಈ ಕ್ರಮವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ವಜಾ ಮಾಡಿತ್ತು. ಸಿಐಡಿ ವರದಿ ಮತ್ತು ಸಚಿವ ಸಂಪುಟದ  ನಿರ್ಧಾರವನ್ನು ಸಮರ್ಥಿಸಿಕೊಂಡು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ  ಇದೀಗ ನಿಲುವು ಬದಲಿಸಿದ್ದಾರೆ.

* 362 ಅಭ್ಯರ್ಥಿಗಳ ನೇಮಕಾತಿ
* 2014ರ  ಆಗಸ್ಟ್‌ 7 ಸಚಿವ ಸಂಪುಟ ಸಭೆಯಲ್ಲಿ ಆಯ್ಕೆ ಪಟ್ಟಿ ರದ್ದು

* ಪ್ರಕರಣವನ್ನು ಸಿಐಡಿ ತನಿಖೆ ವಹಿಸುವ ಮೊದಲು ಮುಖ್ಯಮಂತ್ರಿ ಹೇಳಿದ್ದೇನು?
ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ರಕ್ಷಣೆ ಮಾಡಲು ಬಿಡುವುದಿಲ್ಲ. ಪ್ರತಿಭಾವಂತರಿಗೆ ಅನ್ಯಾಯ ಆಗಬಾರದೆಂಬ ಕಾರಣಕ್ಕಾಗಿ ತನಿಖೆಗೆ ಸೂಚಿಸಲಾಗಿದೆ. ತನಿಖಾ ವರದಿ ಬರುವವರೆಗೂ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲಾಗಿದೆ. ಕಾನೂನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಭ್ರಷ್ಟಾಚಾರ ಸೋಂಕಿನಿಂದ ಕೆಪಿಎಸ್‌ಸಿಯನ್ನು ಮುಕ್ತಿಗೊಳಿಸುವುದು ನಮ್ಮ ಗುರಿ.

* ಆಯ್ಕೆ ಪಟ್ಟಿ ರದ್ದುಪಡಿಸಿದ್ದನ್ನು ವಿರೋಧಿಸಿ ವಿರೋಧ ಪಕ್ಷಗಳು ಧ್ವನಿ ಎತ್ತಿದಾಗ ಮುಖ್ಯಮಂತ್ರಿ ಹೇಳಿದ್ದು
ವಿರೋಧ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ನೇಮಕಾತಿಯಲ್ಲಿ ಅಕ್ರಮ ನಡೆದ ವಿಚಾರವನ್ನು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳೇ ಪ್ರಸ್ತಾಪಿಸಿದ್ದವು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಒಂದೆಡೆ ಆಗ್ರಹ ಮಾಡುತ್ತೀರಿ. ಮತ್ತೊಂದೆಡೆ, ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡಾಗ ನಿರ್ಧಾರ ಸರಿ ಇಲ್ಲ ಎಂದು ಟೀಕಿಸುತ್ತೀರಿ. ಇದು ಯಾವ ಬಗೆಯ ರಾಜಕಾರಣ? ಆಯ್ಕೆ ಪಟ್ಟಿ ರದ್ದುಗೊಳಿಸಿರುವುದನ್ನು ಪುನರ್‌ ಪರಿಶೀಲಿಸುವ ಪ್ರಶ್ನೆಯೇ ಇಲ್ಲ. ಈ ನಿರ್ಧಾರ ಅಚಲ.

* ಸಿಐಡಿ ತನಿಖೆ ವರದಿ ಬಂದ ಬಳಿಕ ಮುಖ್ಯಮಂತ್ರಿ ನೀಡಿದ ಪ್ರತಿಕ್ರಿಯೆ
ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ 2011ನೇ ಸಾಲಿನ ಅಧಿಸೂಚನೆಯನ್ನೇ ತಿರಸ್ಕರಿಸಿದ್ದೇವೆ. ಭ್ರಷ್ಟಾಚಾರ ವ್ಯಾಪಕವಾಗಿ ನಡೆದಿದೆ ಎಂದು ಸಿಐಡಿ ವರದಿ ಹೇಳಿರುವಾಗ ಆಯ್ಕೆ ಪಟ್ಟಿ ಒಪ್ಪಿಕೊಳ್ಳುವುದು ಹೇಗೆ? ಕೆಪಿಎಸ್‌ಸಿ ಸದಸ್ಯರು ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ಹಣ ಕೇಳಿದ್ದಾರೆ. ಆಯ್ಕೆ ಪಟ್ಟಿ ತಿರಸ್ಕರಿಸಬೇಕು ಎಂದು ಅಡ್ವೊ­ಕೇಟ್‌ ಜನರಲ್‌ ಕಾನೂನು ಅಭಿಪ್ರಾಯ ನೀಡಿದ್ದಾರೆ. ಎಲ್ಲ ಆಯಾಮಗಳನ್ನೂ ಕೂಲಂಕಷವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದರಿಂದ ಕೆಲವರಿಗೆ ಅನ್ಯಾಯವಾಗಿದೆ ನಿಜ. ಇನ್ನೂ 703 ಜನರು ಮೌಖಿಕ ಪರೀಕ್ಷೆಗೆ ಆಯ್ಕೆಯಾಗಿದ್ದರು. ಅವರಿಗೂ ಅನ್ಯಾಯವಾಗಿದೆಯಲ್ಲಾ. ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ್ದ ಡಾ. ಮೈತ್ರಿ ಅವರು ಕೆಪಿಎಸ್‌ಸಿ ಟಾಪರ್. ಅವರನ್ನು ಬಿಟ್ಟು ಕಡಿಮೆ ಅಂಕ ಪಡೆದವರನ್ನು ಆಯ್ಕೆ ಮಾಡಿದ್ದಾರೆ. ಕುಮಾರಸ್ವಾಮಿ ಹೇಳ್ತಾರೆ ಅಂತ ಹೇಳಿ ಭ್ರಷ್ಟಾಚಾರ ನಡೆದಿರುವ ಪ್ರಸಂಗದಲ್ಲಿ ಆಯ್ಕೆ  ಮಾಡಲು ಸಾಧ್ಯವಿಲ್ಲ. ಸಿಐಡಿ ವರದಿಯಲ್ಲಿ ಭ್ರಷ್ಟಾಚಾರ ನಡೆದಿರುವ ವರದಿ ಬಂದ ನಂತರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸರ್ಕಾರ ಭ್ರಷ್ಟರನ್ನು ಸಹಿಸಿಕೊಂಡು ಸುಮ್ಮನಿರಬೇಕೆ? ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವು­ದಾಗಿ ನಾವು ಹೇಳಿ, ಭ್ರಷ್ಟಾಚಾರ ಒಪ್ಪಿಕೊಳ್ಳುವುದು ವಿರೋ­ಧಾ­ಭಾಸ ಆಗುವುದಿಲ್ಲವೇ? ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ ಕೆಲವರಿಗೆ ಈ ನಿರ್ಧಾರದಿಂದ ಅನ್ಯಾಯ ಆಗಿರಬಹುದು. ಆದರೆ, ಆಯ್ಕೆಯಾಗದ ಕೆಲವರು ತಮಗೂ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದಾರೆ. ನಾವು ಕಾನೂನಿಗೆ ಅನುಗುಣವಾಗಿ ನಿರ್ಧಾರ ಕೈಗೊಂಡಿದ್ದೇವೆ.

* ಮುಖ್ಯಮಂತ್ರಿ ಈಗ ಏನು ಹೇಳುತ್ತಿದ್ದಾರೆ?
ಕೆಪಿಎಸ್‌ಸಿ ಅಂದಿನ ಅಧ್ಯಕ್ಷ, ಸದಸ್ಯರು ಹಾಗೂ ಇತರರ ವಿರುದ್ಧ ಸಿಐಡಿ ವರದಿಯಲ್ಲಿ ಆರೋಪ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರು ಹಾಗೂ ಇತರರನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಹೊರತುಪಡಿಸಿ ಅವರ ವಿರುದ್ಧ ಯಾವುದೇ ವ್ಯಕ್ತಿಗತ ಆರೋಪಗಳಿಲ್ಲ. ವಾಸ್ತವಿಕ ಸಾಕ್ಷ್ಯಗಳಿಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳು ಕೇವಲ ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳನ್ನು ಸಂಪರ್ಕ ಮಾಡಿದ ಮಾತ್ರಕ್ಕೆ ಅಪರಾಧ ಎಸಗಿದ್ದಾರೆ ಎಂದು ಹೇಳಲಾಗದು.

ಕೆಪಿಎಸ್‌ಸಿ ಜೊತೆ ದೂರವಾಣಿಯಲ್ಲಿ ಸಂಪರ್ಕಿಸಿದ್ದರು ಎಂಬ ಅಂಶ ಸಿಐಡಿ ವರದಿಯಲ್ಲಿದೆ. ಆದರೆ ಈ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸುವುದು ಸೂಕ್ತವಲ್ಲ. ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ ಎನ್ನುವುದನ್ನು ಹೊರತುಪಡಿಸಿದರೆ ಯಾವ ವಿಷಯದ ಬಗ್ಗೆ ಮಾತನಾಡಿದರು, ದೂರವಾಣಿ ಕರೆ ಅಭ್ಯರ್ಥಿಗಳು ಮಾಡಿದ್ದಾರೊ ಕೆಪಿಎಸ್‌ಸಿ ಕಚೇರಿಯಿಂದ ಮಾಡಲಾಗಿತ್ತೆ? ಎಂಬ ಬಗ್ಗೆ ಖಚಿತ ಪುರಾವೆಗಳಿಲ್ಲ. ಈ ಬಗ್ಗೆ ಸಿಐಡಿ ವರದಿಯಲ್ಲೂ ಯಾವುದೇ ಪುರಾವೆ ಇಲ್ಲ. ಈ ಹಂತದಲ್ಲಿ ನಿಯಮ 2ರಡಿ ತನಿಖೆ ಮಾಡುವುದರಿಂದ ಗೊಂದಲ ಸೃಷ್ಟಿಯಾಗುವ ಸಂಭವ ಇದೆಯೇ ಹೊರತು ಉತ್ತಮ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ಅಭ್ಯರ್ಥಿಗಳು ನೇಮಕಾತಿ ಆದ ನಂತರವೂ ಅವರು ಪರೀಕ್ಷಾರ್ಥ (ಪ್ರೊಬೇಷನರಿ) ಅವಧಿ ಮುಗಿಯುವರೆಗೆ ದುರ್ನಡತೆ ಎಸಗಿರುವುದು ಗಮನಕ್ಕೆ ಬಂದರೆ ವಿಚಾರಣೆ ನಡೆಸಿ, ಸಾಬೀತಾದರೆ ಅಂಥವರನ್ನು ಸೇವೆಯಿಂದ ವಜಾ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ.

* ಕೆಎಟಿ ಆದೇಶದಲ್ಲಿ ಏನಿದೆ?
ಅಧಿಸೂಚನೆ ರದ್ದುಗೊಳಿಸುವ ಮೊದಲು ರಾಜ್ಯ ಸರ್ಕಾರ ಕಳಂಕಿತರನ್ನು ಬೇರ್ಪಡಿಸುವ ಪ್ರಯತ್ನ ಮಾಡಿಲ್ಲ. ಮೆರಿಟ್‌ ಆಧಾರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮತ್ತು ಕಳಂಕಿತರನ್ನು ಪ್ರತ್ಯೇಕಿಸಬೇಕಿತ್ತು. ಆದರೆ, ಇಡೀ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿರುವುದು ಕಾನೂನುಬಾಹಿರ. ಹೀಗಾಗಿ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಬೇಕು. ದೂರುಗಳನ್ನು ಆಧರಿಸಿ 1997ರ ನಿಯಮ 2 ಹಾಗೂ ಉಪ ನಿಯಮ 3ರ ಅನುಸಾರ ಸರ್ಕಾರ  ಸೂಕ್ತ ವಿಚಾರಣೆ ನಡೆಸಿಲ್ಲ. ಹೀಗಾಗಿ ಸಿಐಡಿ ವರದಿ ಪರಿಗಣಿಸಿ ಅಧಿಸೂಚನೆ ರದ್ದುಪಡಿಸಿರುವುದು ತಪ್ಪು. ಸರ್ಕಾರದ ಈ ನಿರ್ಧಾರ ಅಭ್ಯರ್ಥಿಗಳ ಪಾಲಿನ ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇಡೀ ಆಯ್ಕೆ ಪಟ್ಟಿ ರದ್ದುಗೊಳಿಸಲು ಸರ್ಕಾರ ಸಕಾರಣ ನೀಡಬೇಕಿತ್ತು. ಈ ಕಾರಣಗಳನ್ನು ಸದನದ ಮುಂದೆ ಮಂಡಿಸಿ ಚರ್ಚಿಸಬೇಕಿತ್ತು. ಕೆಪಿಎಸ್‌ಸಿಗೆ ನೀಡಲಾಗಿರುವ ಸಾಂವಿಧಾನಿಕ ಸ್ವಾತಂತ್ರ್ಯವನ್ನು ಈ ಮೂಲಕ ರಾಜ್ಯ ಸರ್ಕಾರ ಮುಕ್ಕು ಮಾಡಿದೆ. ಇದು ಸಂವಿಧಾನದ 320ನೇ ವಿಧಿಗೆ  ವಿರುದ್ಧ. ಆಯ್ಕೆ ಪಟ್ಟಿಯನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ನೇಮಕಾತಿ ಆದೇಶ ನೀಡಬೇಕಿತ್ತು. ಒಂದು ವೇಳೆ ಅತೃಪ್ತಿ ಇದ್ದಲ್ಲಿ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬಹುದಿತ್ತು. ತನಿಖೆಯ ಅಂತಿಮ ಫಲಿತಾಂಶದ ಅನುಸಾರ ಕಳಂಕಿತರನ್ನು ಪ್ರತ್ಯೇಕಿಸಬಹುದಿತ್ತು. ಕಳಂಕಿತರಲ್ಲದವರಿಗೆ ನೇಮಕದ ಆದೇಶ ನೀಡಬೇಕಿತ್ತು. ಆದರೆ, ಸರ್ಕಾರ ಈ ಪ್ರಕರಣದಲ್ಲಿ ಇಂಥ ನಡೆ ಅನುಸರಿಸಿಲ್ಲ.

* ಅಡ್ವೊಕೇಟ್‌ ಜನರಲ್‌ ಮಧುಸೂದನ್‌ ಆರ್‌. ನಾಯಕ್‌ ಏನು ಹೇಳುತ್ತಾರೆ?
362 ಅಭ್ಯರ್ಥಿಗಳ ಪೈಕಿ 46 ಮಂದಿ ಕೆಪಿಎಸ್‌ಸಿ ಜೊತೆ ಸಂಪರ್ಕಿಸಿದ ಬಗ್ಗೆ ಸಿಐಡಿ ವರದಿಯಲ್ಲಿದೆ. ರಾಜ್ಯ ಸರ್ಕಾರದ ಒಬ್ಬ ಉನ್ನತಮಟ್ಟದ ಅಧಿಕಾರಿಯನ್ನು ನೇಮಿಸಿ ಅವರ ಮೂಲಕ ಕರ್ನಾಟಕ ಸಿವಿಲ್‌ ಸರ್ವೀಸಸ್‌ ( ಪ್ರೊಬೇಷನ್‌) ರೂಲ್ಸ್‌ 1977ರ ನಿಯಮ 2ರಡಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಕೆಪಿಎಸ್‌ಸಿಯೊಂದಿಗೆ ಸಂಪರ್ಕಿಸಿದ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕೊಟ್ಟು ವಿಚಾರಣೆ ಮಾಡಿ, ಅವರು ನೇಮಕಾತಿ ಹೊಂದಲು ಅರ್ಹರೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ಧರಿಸಿ ನಂತರ ಅವರ ನೇಮಕಾತಿ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಹಾಗೂ ಉಳಿದ ಅಭ್ಯರ್ಥಿಗಳನ್ನು ಕೂಡಲೇ ನೇಮಕಾತಿ ಮಾಡಬಹುದು.

* ಡಿಪಿಎಆರ್‌ ಕಾನೂನು ಮುಖ್ಯಸ್ಥರು ಮತ್ತು ಸರ್ಕಾರಿ ವಕೀಲರ ಅಭಿಪ್ರಾಯ ಏನಿತ್ತು?
ಕೆಎಟಿ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಹ ಪ್ರಕರಣ

ಕೆಪಿಎಸ್‌ಸಿ ಅಧ್ಯಕ್ಷ– ಸದಸ್ಯರ ವಿರುದ್ಧ ಕ್ರಮ
ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ನೀಡಿದ ವರದಿ ಆಧರಿಸಿ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಳ್ಳಲಾಗಿತ್ತು. ಸದಸ್ಯೆ ಮಂಗಳಾ ಶ್ರೀಧರ್‌ ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ, ಕೆಪಿಎಸ್‌ಸಿಯ ಇತರ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT