ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಹೆಗ್ಗೇರಿ: ಹೆಚ್ಚಿದೆ ನೀರಿನ ಬವಣೆ

ಭದ್ರಾ ಜಲಾಶಯದಿಂದ ನದಿಗೆ ಬಿಡುವ ನೀರು ಮಾತ್ರ ನಗರಕ್ಕೆ ಮೂರು ತಿಂಗಳ ಆಸರೆ
Last Updated 20 ಫೆಬ್ರುವರಿ 2017, 6:38 IST
ಅಕ್ಷರ ಗಾತ್ರ

ಹಾವೇರಿ: ಬಸವೇಶ್ವರ ನಗರ, ವಿದ್ಯಾನಗರ, ಶಿವಾಜಿನಗರ, ಅಶ್ವಿನಿ ನಗರ, ನಾಗೇಂದ್ರನ ಮಟ್ಟಿ, ಶಿವಬಸವ ನಗರ... ಹೀಗೆ ನಗರದ ಯಾವುದೇ ಬಡಾವಣೆಗೆ ಹೋದರೂ ಒಂದೇ ದೂರು. ‘ನಮ್ಮ ಕೊಳವೆಬಾವಿ ಬತ್ತಿ ಹೋಗಿದೆ. ಫೆಬ್ರುವರಿಯಲ್ಲೇ ನೀರಿನ ಸಮಸ್ಯೆ ಉದ್ಭವಿಸಿದೆ. ಬೇಸಿಗೆಯ ಪಾಡೇನು?’. ಇದು, ವೈಯಕ್ತಿಕ ಕೊಳವೆಬಾವಿ ಹೊಂದಿದ, ನಗರಸಭೆಯ ನೀರು ಪೂರೈಕೆಯನ್ನು ಪೂರ್ಣ ಪ್ರಮಾಣದಲ್ಲಿ ಅವಲಂಬಿಸದ ಜನತೆಯ ಪರಿಸ್ಥಿತಿ. ಇನ್ನು ನಗರಸಭೆಯನ್ನೇ ನೇರವಾಗಿ ಅವಲಂಬಿಸಿದವರ ಪಾಡು ಹೇಳತೀರದು.

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ಹಾವೇರಿ ನಗರದ ಮನೆಯ ಕೊಳವೆಬಾವಿಯೂ ಬತ್ತಿ ಹೋಗಿದೆ. ‘ಮಳೆಗಾಲದಲ್ಲಿ ಹೆಗ್ಗೇರಿ ಕೆರೆಗೆ ನೀರು ಭರ್ತಿ ಮಾಡದಿರುವುದೇ ಇದಕ್ಕೆ ಕಾರಣ’ ಎಂದು ಜನತೆ ಆರೋಪಿಸುತ್ತಾರೆ. ಇದಕ್ಕೆಲ್ಲಾ ಕಾರಣರಾದ ನಗರಸಭೆ, ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಶಪಿಸುತ್ತಾರೆ.

ಸತತ ಮೂರನೇ ವರ್ಷ ಬರದ ಪರಿಣಾಮ ಹಾವೇರಿ ನಗರದ ಕುಡಿಯುವ ನೀರಿನ ಸ್ಥಿತಿ ತೀರಾ ಹದಗೆಟ್ಟಿದೆ. ನಗರಸಭೆಯ ಅಧೀನದ 320 ಕೊಳವೆಬಾವಿಗಳು ಸೇರಿದಂತೆ ನಗರದಲ್ಲಿರುವ ಅಂದಾಜು ಸಾವಿರಕ್ಕೂ ಅಧಿಕ ಕೊಳವೆಬಾವಿಗಳು ಒಂದೊಂದಾಗಿ ಬತ್ತಿ ಹೋಗುತ್ತಿವೆ. ಸದ್ಯ, ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಬಿಡುವ ನೀರು ಮಾತ್ರ ಮುಂದಿನ ಮೂರು ತಿಂಗಳ ಆಸರೆ. ಈ ನೀರು ಕೈಕೊಟ್ಟರೆ ಹನಿ ನೀರಿಗೂ ಹಾಹಾಕಾರ ಪಡುವ ಸ್ಥಿತಿ ಉದ್ಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಹೆಗ್ಗೇರಿ: ಹಿರಿದಾದ ಪಾತ್ರದಿಂದಲೇ ‘ಹೆಗ್ಗೇರಿ’ ಎಂದು ಹೆಸರು ಪಡೆಯಿತು ಎನ್ನುತ್ತಾರೆ ಸ್ಥಳೀಯರು. ‘ನಳ ಮಹಾರಾಜ  ಕ್ರಿ.ಶ. 1134ರಲ್ಲಿ ಕೆರೆಯನ್ನು ನಿರ್ಮಿಸಿದನು. ಸುಮಾರು 12 ಅಡಿ ಆಳದ ಈ ಕೆರೆಗೆ ಪಶ್ಚಿಮ ಭಾಗದ ಜಲಾನಯನ ಪ್ರದೇಶದಿಂದ ನೈಸರ್ಗಿಕ ನಾಲಾಗಳ ಮೂಲಕ ನೀರು ಹರಿದು ಬರುತ್ತದೆ’ ಎಂದು ಜಿ.ಎಚ್. ಕಾಲೇಜು ಪ್ರಾಧ್ಯಾಪಕ ಎನ್.ಆರ್. ಬಿರಸಾಲೆ ತಮ್ಮ ಅಧ್ಯಯನದಲ್ಲಿ ದಾಖಲಿಸಿದ್ದಾರೆ.

ಕೇವಲ ನೀರಿನ ಆಸರೆ ಮಾತ್ರವಲ್ಲ, ಜೀವ ವೈವಿಧ್ಯ, ಪಕ್ಷಿ ಸಂಕುಲಗಳ ತಾಣವಾದ ಈ ಕೆರೆಯಿಂದ ರಾಷ್ಟ್ರೀಯ ಹೆದ್ದಾರಿ–4ಕ್ಕೆ ಮಣ್ಣನ್ನು ತೆಗೆಯಲಾಗಿತ್ತು. ಮಣ್ಣ ತೆಗೆದ ಬಳಿಕ ಪಾತ್ರದ ಸಮಪಾತಳಿ ಹಾಗೂ ನಡುಗಡ್ಡೆಯನ್ನು ಉಳಿಸದ ಕಾರಣ ಇಲ್ಲಿ ಪಕ್ಷಿ ಸಂಕುಲ, ಜೀವವೈವಿಧ್ಯಕ್ಕೂ ಆತಂಕ ಎದುರಾಗಿದೆ. ಈಜಲು ಹೋದ ಹತ್ತಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ.

ಶತಮಾನಗಳ ಇತಿಹಾಸದ ಕೆರೆಯೇ ಹಾವೇರಿ ನೀರಿನ ಜೀವಸೆಲೆ. ಸುಮಾರು 682 ಎಕರೆ ವಿಸ್ತಾರ ಹೊಂದಿದ ಈ ಕೆರೆ ತುಂಬಿದರೆ ಕೇವಲ ನಗರದ ಕೊಳವೆಬಾವಿಗಳು ಹಾಗೂ ಇತರ ಐದು ಕೆರೆಗಳು ಮಾತ್ರವಲ್ಲ, ಸುತ್ತಲ ಕಬ್ಬೂರು, ಕೆರಿಮತ್ತಿಹಳ್ಳಿ, ಯತ್ನಳ್ಳಿ, ಆಲದಕಟ್ಟೆ, ಹೊಸಳ್ಳಿ, ಗೌರಾಪುರ, ಚಿಕ್ಕಲಿಂಗದಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳ ಕುಡಿಯುವ ನೀರು ಹಾಗೂ ಕೃಷಿ ನೀರಾವರಿಗೆ ನಿರಾತಂಕ. ಸಾವಿರಾರು ಎಕರೆಯ ಅಂತರ್ಜಲ ವೃದ್ಧಿಸುತ್ತದೆ. ಆದರೆ, ಪ್ರತಿ ಮಳೆಗಾಲದಲ್ಲೂ ಕೆರೆ ತುಂಬಿಸುವ ಯೋಜನೆ ನನೆಗುದಿಗೆ ಬೀಳುತ್ತಿದೆ.

ನೀರು ಪೂರೈಕೆ: ‘ವರದಾ ನದಿಯ ಕೆಂಚಾರಗಟ್ಟಿಯಿಂದ ನಗರಕ್ಕೆ ನೀರು ಪೂರೈಸುವ ವ್ಯವಸ್ಥೆ ಇದೆ. ಇದನ್ನು ಆಧರಿಸಿಕೊಂಡು ಹೆಗ್ಗೇರಿ ಕೆರೆಗೂ ನೀರು ಬಿಡಲಾಗುತ್ತದೆ. ಆದರೆ, ಕೆರೆ ತುಂಬಿಸುವ ಪ್ರಾಮಾಣಿಕ ಪ್ರಯತ್ನವನ್ನು ನಗರಸಭೆ ಮಾಡುವುದೇ ಇಲ್ಲ. ತುಂಗಭದ್ರಾ ನದಿಗೆ ಮರಳಿನ ತಡೆಗೋಡೆ ಕಟ್ಟುವುದು, ಟ್ಯಾಂಕರ್ ಮೂಲಕ ನೀರು ಪೂರೈಕೆ, ಆಲಮ್, ಬ್ಲೀಚಿಂಗ್ ಖರೀದಿ, ಪಂಪ್ ರೀಪೇರಿ, ಪೈಪ್‌ಲೈನ್ ದುರಸ್ತಿಯಲ್ಲೇ ನಗರಸಭೆ ಸದಸ್ಯರಿಗೆ ಆಸಕ್ತಿ. ಅವರಿಗೆ ಶಾಶ್ವತ ಪರಿಹಾರಗಳು ಬೇಕಾಗಿಲ್ಲ’ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಹೆಗ್ಗೇರಿ ಕೆರೆಯನ್ನು ಕ್ಲುಪ್ತ ಸಮಯದಲ್ಲಿ ತುಂಬಿಸದ ಕಾರಣ ಜಿಲ್ಲಾ ಕೇಂದ್ರದ ಜನತೆ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಿಸುವ ಆತಂಕ ಇದೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ.

ಹೆಗ್ಗೇರಿ ಅಭಿವೃದ್ಧಿ:
‘ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಹೆಗ್ಗೇರಿ ಕೆರೆಗೆ ತುಂಗಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಬಾರಿ ಹೂಳೆತ್ತುವ ಕಾಮಗಾರಿ ಆಂಭಿಸುತ್ತೇವೆ. ಮುಂದಿನ ವರ್ಷದೊಳಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳಿಸಿ, ಶಾಶ್ವತ ಪರಿಹಾರ ನೀಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ  ಭರವಸೆ ನೀಡಿದ್ದಾರೆ. ಆದರೆ, ಮಳೆಗಾಲದಲ್ಲೇ ಎಚ್ಚೆತ್ತುಕೊಂಡು ಕೆರೆಗೆ ನೀರು ತುಂಬಿಸಿ ಎಂಬುದು ಜನತೆಯ ಬೇಡಿಕೆ.

ಪ್ರವಾಸೋದ್ಯಮ ತಾಣ
ಕುಡಿಯವ ನೀರಿನ ಆಸರೆಯೊಂದಿಗೆ ಹೆಗ್ಗೇರಿಯಲ್ಲಿ ಬೋಟಿಂಗ್, ಮೀನುಗಾರಿಕೆ, ಕಾರಂಜಿ, ನಡುಗಡ್ಡೆ ದಡದಲ್ಲಿ ‘ಗ್ಲಾಸ್ ಹೌಸ್’ ನಿರ್ಮಾಣದ ಮೂಲಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸುವ ಯೋಜನೆಯನ್ನೂ ಸರ್ಕಾರ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT