ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲೇಶ್ವರ ದರ್ಶನಕ್ಕೆ ಹಿರಿಯರ ಚಾರಣ

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸಮಾನ ಮನಸ್ಕ ಹಿರಿಯ ನಾಗರಿಕರಾದ ನಾವು, ಒಮ್ಮೆ ಚಾರಣಕ್ಕೆ ಹೋಗುವ ಯೋಜನೆ ರೂಪಿಸಿದೆವು. ಬಹಳ ಚರ್ಚೆಯ ನಂತರ ಏಳು ಸುತ್ತಿನ ಕೋಟೆ ನಾರಾಯಣದುರ್ಗವನ್ನು ಏರುವ ತೀರ್ಮಾನಕ್ಕೆ ಬಂದು ಸಕಲ ಸಿದ್ಧತೆ ನಡೆಸಿದೆವು.
 
ಅಂದು ಬೆಳಿಗ್ಗೆ 62 ರಿಂದ 78 ವಯಸ್ಸಿನ 12 ಮಂದಿ, ಕೋಟೆಯ ದರ್ಶನಕ್ಕೆ ಹೊರಟೆವು. ಅಂತೂ ಕೋಟೆಯ ತಪ್ಪಲು ಬಂತು. ಅರಣ್ಯ ಇಲಾಖೆಯ ಸಿಬ್ಬಂದಿ ರವಿಶಂಕರ್ ಮಾರ್ಗದರ್ಶನದಲ್ಲಿ ಕೋಟೆ ಹತ್ತಲು ಶುರುವಿಟ್ಟುಕೊಂಡೆವು.ನಾರಾಯಣದುರ್ಗದ ಒಂದು ಪಾರ್ಶ್ವ ತೀರಾ ಕಡಿದಾಗಿದೆ. ಅಲ್ಲಿಂದ ಬೆಟ್ಟ ಏರಲು ಸಾಧ್ಯವಿಲ್ಲ. ಇಳಿಜಾರಾಗಿರುವಂತೆ ಇರುವ ಪಶ್ಚಿಮ ದಿಕ್ಕಿನ ಕಡೆಯಿಂದ ಬೆಟ್ಟ ಏರಲು ಪ್ರಾರಂಭಿಸಿದೆವು. ಆರಂಭದಲ್ಲೇ ಶಿಥಿಲಗೊಂಡಿದ್ದ ಮೊದಲ ಕೋಟೆಯ ದ್ವಾರ ಕಂಡುಬಂದಿತು.
 
ಅಡವಿಯ ನಡುವಿನ ಕಾಲುದಾರಿಯಲ್ಲಿ ಸಾಗುವಾಗ ಹೊಸಲೋಕಕ್ಕೆ ಹೋಗುವ ಅನುಭವ ಉಂಟಾಯಿತು. ನಾಡುಗಲ್ಲಿನ ಮೆಟ್ಟಿಲುಗಳನ್ನು ಹತ್ತಿ ಮುಂದೆ ಮುಂದೆ ಸಾಗಿದೆವು. ಕೋಟೆಯ ಸುತ್ತುಗಳನ್ನು ಒಂದೊಂದೇ ದಾಟುತ್ತಾ 4ನೇ ಕೋಟೆಗಳನ್ನು ಪ್ರವೇಶಿಸಿದೆವು. ಈ ದ್ವಾರಗಳೆಲ್ಲವೂ ಸಂಪೂರ್ಣ ಶಿಥಿಲಗೊಂಡಿವೆ. ಮುಂದೆ ಸಾಗಿದಂತೆ ಕಲ್ಲುದಾರಿ ಮೆಟ್ಟಿಲು ಸಹಾಯದಿಂದ ಬೆಟ್ಟ ಏರಿದಾಗ ನಮಗೆ ಈ ಬೆಟ್ಟ ಹತ್ತಲು ಸಾಧ್ಯವೇ? ಎಂದು ಅನುಮಾನ ಬಂತು. ಆದರೂ ಏರಿದೆವು. 5ನೇ ಕೋಟೆಯ ದ್ವಾರದ ಕೆಳಭಾಗದಲ್ಲಿ ಸುಸ್ತಾಗಿಹೋಯಿತು. 
 
ಸ್ವಲ್ಪ ವಿರಮಿಸಿ ಶಿವಣ್ಣಗೌಡರು ತಂದ ಕಜ್ಜಾಯ, ಚಕ್ಕುಲಿಗಳನ್ನು ತಿಂದು ನೀರು ಕುಡಿದು ಸುಧಾರಿಸಿಕೊಂಡೆವು. ಮತ್ತೆ ಬಂಡೆ ಹತ್ತಲು ಸಾಧ್ಯವಿಲ್ಲ ಎಂದು ಅನ್ನುತ್ತಿದ್ದಾಗಲೇ ಇಷ್ಟು ದೂರ ಬಂದು ಇನ್ನೆರಡು ಕೋಟೆ ಏರಿ ಕಲ್ಲೇಶ್ವರ ದರ್ಶನ ಮಾಡದೇ ಇದ್ದರೆ ಬಂದದ್ದು ಸಾರ್ಥಕವಾಗದೆಂದು ಕೋಟೆ ಏರಲು ಕೆಲವರು ಹಟ ಹಿಡಿದರು. ದೇವರ ಮೇಲೆ ಭಾರ ಹಾಕಿ ಎಲ್ಲರೂ ಸಾಗಿದೆವು. ಮೆಟ್ಟಿಲು ಇಲ್ಲದ ಬೃಹತ್ ಬಂಡೆ ಮೇಲೆ ಹೆಜ್ಜೆ ಹಾಕಬೇಕಾಯಿತು. ಕಷ್ಟವಾದರೂ ಛಲಬಿಡದ ವಿಕ್ರಮನಂತೆ (ಮಂಗನಂತೆ) ಕೈ-ಕಾಲುಗಳ ಸಹಾಯದಿಂದ ಬಂಡೆಯನ್ನು ಏರಿದೆವು! ಬಂಡೆಯನ್ನು ಏರುವಾಗ ಆಯತಪ್ಪಿದರೆ ಎಂಬ ಆತಂಕದಲ್ಲಿಯೇ ಒಬ್ಬರಿಗೊಬ್ಬರು ಧೈರ್ಯ ಹೇಳುತ್ತ ಬೆಟ್ಟ ಏರಿದೆವು.
 
ಏಳನೇ ಕೋಟೆಯ ದ್ವಾರದ ಮುಂಭಾಗ ಬಂದಾಗ ಖುಷಿಯೋ ಖುಷಿ. ನೆಮ್ಮದಿಯ ನಿಟ್ಟುಸಿರುಬಿಟ್ಟು ಒಂದು ಮರದ ನೆರಳಿನಲ್ಲಿ ಎಲ್ಲರೂ ವಿಶ್ರಾಂತಿ ಪಡೆದೆವು. ಅಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿರುವ ದೇವಾಲಯವು ಗೋಚರಿಸಿತು. ಜತೆಗೆ 2 ಶಿಲಾಕಟ್ಟಡಗಳು ಅಲ್ಲಿದ್ದವು. ಈ ದೇಗುಲ 4 ಶಿಲಾ ಕಂಬಗಳುಳ್ಳ ಮುಖ ಮಂಟಪಕ್ಕೆ ಪೂರ್ವ ಮತ್ತು ದಕ್ಷಿಣದ ಕಡೆ ಎರಡು ದ್ವಾರಗಳಿವೆ.
 
ಒಳಪ್ರವೇಶಿಸಿದಾಗ ಎರಡು ಶಿಲಾಕಂಬಗಳುಳ್ಳ ನವರಂಗ, ಸುಕನಾಸಿ ಹಾಗೂ ಗರ್ಭಗೃಹ ಕತ್ತಲೆಯಿಂದ ಕೂಡಿದೆ. ನವರಂಗದ ಪ್ರವೇಶದ್ವಾರದಲ್ಲಿ ಶೈವ ದ್ವಾರಪಾಲಕರ ಉಬ್ಬುಶಿಲ್ಪವನ್ನು ಸುಂದರವಾಗಿ ಕೆತ್ತಲಾಗಿದೆ. ಒಳಪ್ರವೇಶಿಸಿದಾಗ ಕತ್ತಲೆ ಆವರಿಸಿತ್ತು. ಮೊಬೈಲ್ ಫೋನಿನ ಬೆಳಕಿನಲ್ಲಿ ಹೋದೆವು. ನವರಂಗದಲ್ಲಿ ನಂದಿ ವಿಗ್ರಹ, ಗಣಪತಿ ಸೇರಿದಂತೆ ಕೆಲವು ಪರಿವಾರ ದೇವತೆಯ ಉಬ್ಬುಶಿಲ್ಪಗಳು ಕಂಡುಬಂದವು. ಜತೆಯಲ್ಲಿ ತಂದಿದ್ದ ಗಂಧದ ಕಡ್ಡಿ, ಕರ್ಪೂರವನ್ನು ಹೊತ್ತಿಸಿದಾಗ ಲಿಂಗದ ದರ್ಶನವಾಯಿತು. ಲಿಂಗದರ್ಶನ ಮಾಡಿದಾಗ ಬೆಟ್ಟದ ಮೇಲೇರಿ ಬಂದಂತಹ ಆಯಾಸ, ಸುಸ್ತೆಲ್ಲಾ ಮಂಗಮಾಯವಾದಂತೆ ಎಲ್ಲರೂ ಸಂತಸಪಟ್ಟೆವು. ಮತ್ತೊಮ್ಮೆ ಮಗದೊಮ್ಮೆ ಲಿಂಗ ದರ್ಶನ ಮಾಡಿದರು.  ತದನಂತರ ತಂದ ಮೊಸರನ್ನ ತಿಂದು ವಿಶ್ರಾಂತಿ ಪಡೆದೆವು. 
 
ಹೀಗಿದೆ ದುರ್ಗ...

ಕೋಟೆಯು ಪೂರ್ವದ ಕಡೆ ತುಂಬ ಕಡಿದಾಗಿದ್ದು, ಆ ದಿಕ್ಕಿನಲ್ಲಿ ಬೆಟ್ಟ ಹತ್ತಲು ಸಾಧ್ಯವಾಗುವುದಿಲ್ಲ. ಇದಕ್ಕೆ ಮಾರ್ಗವಿರುವುದು ಪಶ್ಚಿಮ ದಿಕ್ಕಿನಲ್ಲಿ. ಆ ಮಾರ್ಗದಲ್ಲಿ ಏಳು ಕೋಟೆಗಳಿವೆ. ಕೆಳಗಿನ ಆರು ಸುತ್ತು ಬೆಟ್ಟದ ಬಂಡೆಗಳ ನಡುವಣ ಬಯಲನ್ನು ಮುಚ್ಚಿಕೊಂಡಿರುವ ಕಲ್ಲಿನ ಅಡ್ಡಗೋಡೆಗಳಾದರೆ, ಏಳನೇ ಸುತ್ತಿನ ಕೋಟೆ ಪೂರ್ಣ ಕೋಟೆಯಾಗಿದ್ದು, ಇದಕ್ಕೆ ಪಶ್ಚಿಮ ಹಾಗೂ ಪೂರ್ವ ದಿಕ್ಕುಗಳಲ್ಲಿ ಕಲ್ಲುಮಂಟಪಗಳಿಂದ ಪ್ರವೇಶ ದ್ವಾರಗಳಿವೆ. ಒಂದೊಂದು ಕೋಟೆಗೂ ಇಟ್ಟಿಗೆಗಳಿಂದ ನಿರ್ಮಿಸಿರುವ ದ್ವಾರಗಳಿವೆ. ಆ ಕೋಟೆಗಳ ಹೆಬ್ಬಾಗಿಲುಗಳು ಶಿಥಿಲಾವಸ್ಥೆಯಲ್ಲಿವೆ. ಕೆಲವು ಕಲಾತ್ಮಕವಾಗಿ ಕಂಡುಬರುತ್ತವೆ.

ಈ ಕೋಟೆಯ ದ್ವಾರಗಳು ಅಂಕು-ಡೊಂಕಾಗಿ ಒಳನುಸುಳಿದವರನ್ನು ದಾರಿ ತಪ್ಪಿಸುವಂತೆ ನಿರ್ಮಿಸಲಾಗಿದೆ. 7ನೇ ಸುತ್ತಿನ ಕೋಟೆಯ ಆವರಣದಲ್ಲಿರುವ ದೇವಾಲಯವನ್ನು ಹಿಂದೆ ‘ಕೈವಲ್ಯೇಶ್ವರ’ ಎಂದು ಕರೆಯಲಾಗಿತ್ತು. ನಂತರದ ದಿನಗಳಲ್ಲಿ ‘ಕೈಲಾಸೇಶ್ವರ’ ಎಂದು, ಪ್ರಸ್ತುತ ‘ಕಲ್ಲೇಶ್ವರ’ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಆವರಣದಲ್ಲಿ ಮದ್ದಿನ ಮನೆ, ಕಣಜದ ಕಲ್ಲುಕಟ್ಟಡಗಳಿವೆ. ತಳಭಾಗದಿಂದ 6 ಕೋಟೆಗಳ ಪ್ರವೇಶ ದ್ವಾರಗಳನ್ನು ಇಟ್ಟಿಗೆಗಳಿಂದ ನಿರ್ಮಿಸಿದ್ದರೆ, ಕೋಟೆಯನ್ನು ನಾಡುಗಲ್ಲುಗಳಿಂದ ಗೋಡೆ ನಿರ್ಮಿಸಿದ್ದಾರೆ.

7ನೇ ಕೋಟೆ ಪ್ರವೇಶದ ಮುಂಭಾಗದ ಪರಿಸರದಲ್ಲಿ ಮೂರ್ನಾಲ್ಕು ನೈಸರ್ಗಿಕ ಕೊಳಗಳಿವೆ. ಇಲ್ಲಿನ ಬಂಡೆಯಲ್ಲಿ ವೃತ್ತಾಕಾರವಾಗಿ ಕೊರೆದಿರುವ ಬಾವಿಯೊಂದು ಇದೆ. ಈ ಬಾವಿಯನ್ನು ಭೀಮ ತನ್ನ ಮಂಡಿಯಿಂದ ನಿರ್ಮಿಸಿದನೆಂದು ಪ್ರತೀತಿ. ಹಾಗೆಯೇ, ನೀರಿನ ದೋಣಿಗಳನ್ನು ಅರ್ಜುನನು ಬಾಣಬಿಟ್ಟು ನಿರ್ಮಿಸಿದನೆಂದು ಪ್ರತೀತಿ ಇದೆ.ಈ ದುರ್ಗವನ್ನು ಕಟ್ಟಿಸಿದವನು ಹೊಳೆನರಸೀಪುರದ ಪಾಳೇಗಾರನೊಬ್ಬನಾದ ದೇವರಾಜ ಎಂಬ ವಿಷಯ ಮಂಡ್ಯ ಗೆಜೆಟೆರಿಯಲ್‌ನಲ್ಲಿ ಇದೆಯಾದರೂ ಅದಕ್ಕೆ ಇತಿಹಾಸದ ದಾಖಲೆಗಳಿಲ್ಲ.

ಹೊಳೇನರಸೀಪುರದ ಪಾಳೇಗಾರ ತನ್ನ ಸಂಪತ್ತನ್ನು ಇಲ್ಲಿ ಅಡಗಿಸಿಡಲು ಇದನ್ನು ನಿರ್ಮಿಸಿದನೆಂದು ಅಭಿಪ್ರಾಯವೂ ಇದೆ. ಇಲ್ಲಿ ಸುಲಭವಾಗಿ ಯಾವ ಶತ್ರುವೂ ಹತ್ತಿಬರಲು ಸಾಧ್ಯವಾಗುತ್ತಿರಲಿಲ್ಲ.ಪಾಳೇಗಾರರು ಅಪರಾಧಿಗಳನ್ನು ಹಾಗೂ ಶತ್ರುಗಳನ್ನು ಇಲ್ಲಿರುವ ವಕ್ಕರಸಿ ಕಲ್ಲುಮಂಟಪದ ಮೇಲಿಂದ ಆಳವಾದ ಪ್ರಪಾತಕ್ಕೆ ತಳ್ಳುತ್ತಿದ್ದಾನೆಂದು ತಿಳಿದುಬರುತ್ತದೆ. ಈ ಪರಿಸರ ಮತ್ತು ಕೆಳಭಾಗದ ದೃಶ್ಯವನ್ನು ನೋಡಿ ನಮಗೆ ಆನಂದ ಉಂಟಾಯಿತು. ಬೆಟ್ಟದ ಮೇಲಿನಿಂದ ಮೇಲುಕೋಟೆ ಬೆಟ್ಟ, ಶ್ರವಣಬೆಳಗೊಳದ ಬೆಟ್ಟ, ಜಲರೇಖೆಯಂತೆ ಕಾಣುವ ಕನ್ನಂಬಾಡಿ ಕಟ್ಟೆಗಳು ಕಾಣಿಸುತ್ತವೆ.

ಆದರೆ, ಕೆಳಗೆ ಇಳಿಯಬೇಕೆಂದಾಗ ಬೆಟ್ಟ ಏರಿದಷ್ಟು ಸುಲಭವಲ್ಲ ಎನಿಸಿತು. ಇಲ್ಲಿ ದೊಡ್ಡ ಮರಗಳಿಲ್ಲ, ವಿಶಾಲವಾದ ಬೋಳುಬೆಟ್ಟ ಇದಾಗಿದ್ದು, ಮೆಟ್ಟಿಲುಗಳು ಇಲ್ಲದಿದ್ದರಿಂದ ಇಳಿಯುವುದು ದುಸ್ತರವೇ. ಆದರೂ ಈ ಬಂಡೆಯಿಂದ ಕೆಳಗಿಳಿಯಬೇಕಾದರೆ ಕುಕ್ಕರಗಾಲು, ಕೈ-ಕಾಲಿನ ಸಹಾಯದಿಂದ ನಿಧಾನವಾಗಿ ಎಚ್ಚರಿಕೆಯಿಂದ ಇಳಿದುಬಂದೆವು. ಹತ್ತುವಾಗ, ಇಳಿಯುವಾಗ ನಮಗೆ ಉಂಟಾಗಿದ್ದ ಚಾರಣದ ಅನುಭವ ಕೆಳಗೆ ಇಳಿದ ನಂತರ  ಅಪಾಯವಿಲ್ಲದೆ ಬಂದದ್ದು ಆ ದೇವರ ಕೃಪೆಯೆಂದು ನಿಟ್ಟುಸಿರುಬಿಟ್ಟೆವು. ಕೆಳಭಾಗದಲ್ಲಿದ್ದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಸಂಜೆ 5 ಗಂಟೆ ಸಮಯದಲ್ಲಿ ನಾವು ಜತೆಯಲ್ಲೇ ತಂದಿದ್ದ ಮೇಲುಕೋಟೆಯ ಸಕ್ಕರೆ ಪೊಂಗಲು, ಪುಳಿಯೋಗರೆಯನ್ನು ತಿಂದು ಮಂಡ್ಯದ ಕಡೆ ಹೊರಟೆವು.

ನಾರಾಯಣದುರ್ಗವನ್ನು ಒಮ್ಮೆಯಾದರೂ ಏರಲೇಬೇಕಾದ ಬೆಟ್ಟ. ಆದರೆ, ವಯಸ್ಸಾದವರು ಏರುವುದು ಕಷ್ಟ. ಯುವಕರು, ಈ ಬೆಟ್ಟ ಏರಬಹುದು. ಚಾರಣಪ್ರಿಯರಿಗಂತೂ ನಾರಾಯಣದುರ್ಗ ಹೇಳಿಮಾಡಿಸಿದಂತಹ ಬೆಟ್ಟ. ಒಂದು ಎಚ್ಚರಿಕೆಯೆಂದರೆ ಒಬ್ಬರು-ಇಬ್ಬರು ಬೆಟ್ಟ ಏರುವುದು ಸೂಕ್ತವಲ್ಲ, ಹತ್ತಾರು ಮಂದಿ ಗುಂಪು ಸ್ಥಳೀಯ ಮಾರ್ಗದರ್ಶಕರ ಸಹಾಯದಿಂದ ಏರಿಬಂದರೆ ಚಾರಣದ ಅನುಭವ ಸದಾ ಕಾಲ ನೆನಪಿನಲ್ಲಿ ಉಳಿಯುತ್ತದೆ. ನಾರಾಯಣ ದುರ್ಗದ ಮೇಲಿರುವ ಕಲ್ಲೇಶ್ವರ ದೇವಾಲಯಕ್ಕೆ ಶಿವರಾತ್ರಿಯಂದು ಭಕ್ತರು ಬೆಟ್ಟವನ್ನೇರಿ ಕಲ್ಲೇಶ್ವರ ದೇವಾಲಯದಲ್ಲಿ ಪೂಜೆ ಮಾಡಿ, ಜಾಗರಣೆ ಮಾಡುವುದು ಉಂಟು.

ನಾರಾಯಣದುರ್ಗ, ಜಿಲ್ಲಾಕೇಂದ್ರ ಮಂಡ್ಯದಿಂದ 60  ಕಿ.ಮೀ. ದೂರದಲ್ಲಿರುವ ತಾಲ್ಲೂಕು ಕೇಂದ್ರ. ಕೆ.ಆರ್.ಪೇಟೆಯ ಶೀಳನೆರೆ ಹೋಬಳಿ ವ್ಯಾಪ್ತಿಯಲ್ಲಿದೆ. ಕೆ.ಆರ್.ಪೇಟೆಯಿಂದ ಎಂಟು ಕಿ.ಮೀ.ದೂರದಲ್ಲಿರುವ ಸಿಂಧಘಟ್ಟದ ಊರ ಕೆರೆಯ ಆಚೆಯ ಗಿರಿಶ್ರೇಣಿಯಲ್ಲಿ ಇದೆ. ಜಿಲ್ಲಾಕೇಂದ್ರ ಮಂಡ್ಯ-ಮೇಲುಕೋಟೆ ಮಾರ್ಗದಲ್ಲಿ ಹೋಗುವುದೇ ಹತ್ತಿರದ ಮಾರ್ಗ. ಮಂಡ್ಯದಿಂದ ಮೇಲುಕೋಟೆ 35 ಕಿ.ಮೀ.ದೂರದಲ್ಲಿದೆ. ಅಲ್ಲಿಂದ ಮೇಲುಕೋಟೆ-ಕೆ.ಆರ್.ಪೇಟೆ ಮಾರ್ಗ ಮಧ್ಯೆ 11 ಕಿ.ಮೀ. ದೂರದಲ್ಲಿ ನೀತಿಮಂಗಲ ಗ್ರಾಮ ಸಿಗುತ್ತದೆ. ಅಲ್ಲಿಯ ಬಲಗಡೆಯ ಕವಲುದಾರಿಯಲ್ಲಿ ಸುಮಾರು 5 ಕಿ.ಮೀ. ಕ್ರಮಿಸಿದರೆ ರಾಯಸಮುದ್ರ ಗ್ರಾಮ ಸಿಗುತ್ತದೆ. ಅಲ್ಲಿಂದ 2 ಕಿ.ಮೀ.ದೂರ ಕಲ್ಲು-ಮಣ್ಣಿನ ದಾರಿಯಲ್ಲೇ ಸಾಗಿದರೆ ನಾರಾಯಣದುರ್ಗದ ತಳಭಾಗದಲ್ಲಿ ಚೌಡೇಶ್ವರಿ ದೇಗುಲ ಸಿಗುತ್ತದೆ. ಆ ಪರಿಸರದಲ್ಲಿ ಗಿರಿಶ್ರೇಣಿಯೇ ಕಾಣುತ್ತವೆ. ಅಲ್ಲಿಂದ ಮುಂದೆ ವಾಹನ ಹೋಗಲು ಮಾರ್ಗವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT