ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರೇ ಮಾತನಾಡಿದಾಗ...

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಹರೀಶ್ ಬಿ ಎಸ್.
 
‘ಮಾದಪ್ಪನವ್ರೆ ಟಿಲ್ಲರ್‌ನಲ್ಲಿ ಅರಿಶಿಣ ಕೀಳ್ತಿದ್ದೀರಲ್ಲಾ? ಖರ್ಚು ಜಾಸ್ತಿ ಬರೋಲ್ವ, ಗಡ್ಡೆಗೆ ಹಾನಿ ಆಗೋಲ್ವ...?’ 
 
‘ನೋಡಿ ರಾಜಶೇಖರ್, ಟಿಲ್ಲರಿಗೆ ಜೋಡಿಸಿರೋ ಅಟ್ಯಾಚ್‌ಮೆಂಟ್ ನಾನು ಇಲ್ಲೇ ಮಾಡಿಸಿಕೊಂಡಿದ್ದು. ಯೂನಿವರ್ಸಿಟಿಯವರನ್ನ ಕೇಳಿದ್ದಕ್ಕೆ ಈ ಕೆಲಸ ಮಾಡೋ ಅಟ್ಯಾಚ್‌ಮೆಂಟನ್ನು ಕೊಯಮತ್ತೂರಿನಿಂದ ತರಿಸ್ಕೊಳ್ಳಬೇಕು ಅಂದ್ರು. ಅದಕ್ಕೆ ಒಂದು ಲಕ್ಷ ರೂಪಾಯಿ ಅಂತ ಹೇಳಿದ್ರು. ಅದ್ರ ಉಸಾಬರೀನೇ ಬೇಡಾ ಅಂತ ನಾವೇ ಸುಲಭದಲ್ಲಿ ಮಾಡಿಕೊಂಡಿದ್ದೀವಿ. ತಗಲಿದ್ದು ಕೇವಲ ಐನೂರು ರೂಪಾಯಿ. ನಾಲ್ಕು ಗಂಟೇಲಿ ಒಂದೆಕರೆಯ ಅರಿಶಿಣ ಕೀಳಬಹುದು. ಹೋದ ವರ್ಷ ಎಕರೆಗೆ ಹನ್ನೆರಡು ಸಾವಿರ ಖರ್ಚಾಗಿತ್ತು. ಈ ಸಲ ಐದೇ ಸಾವಿರ ಸಾಕಾಗಿದೆ. ಇನ್ನು ಹಾನಿ ವಿಚಾರ. ನೀವೇ ನೋಡಿ ಏನಾದರೂ ಹಾನಿ ಆಗಿದ್ಯಾಂತ’... 
 
ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ ಇತ್ತೀಚೆಗೆ ಆಯೋಜಿಸಿದ್ದ ‘ಸಾಧಕ ಕೃಷಿಕರ ಕೇಳ ಬನ್ನಿ; ಹೊಲ ನೋಡಿ ಕಲಿಯಬನ್ನಿ’ ಎಂಬ ವಿಭಿನ್ನ ಕಾರ್ಯಕ್ರಮದ ಇಣುಕುನೋಟವಿದು. ಶಿಬಿರಾರ್ಥಿಗಳು ಕ್ಷೇತ್ರಭೇಟಿಗೆ ಮೈಸೂರು ತಾಲ್ಲೂಕಿನ ಆಯರಹಳ್ಳಿಗೆ ಭೇಟಿ ನೀಡಿದಾಗ ನಡೆದ ಸಂಭಾಷಣೆ ಇದು. 
ವಿಜ್ಞಾನಿಗಳು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಾಧಕ ರೈತರೇ ಸಂಪನ್ಮೂಲ ವ್ಯಕ್ತಿಗಳಾಗಿದ್ದರು, ಆಸಕ್ತ ಕೃಷಿಕರು ಶಿಬಿರಾರ್ಥಿಗಳಾಗಿದ್ದರು. ಇದೇ ಕಾರ್ಯಕ್ರಮದ ವಿಶೇಷ. ಕೃಷಿಕರ ನೂರಾರು ಪ್ರಶ್ನೆಗಳಿಗೆ, ಸಂದೇಹಗಳಿಗೆ ಕೃಷಿಕರಿಂದಲೇ ಉತ್ತರ ಸಿಕ್ಕಿತು. ಅವರದ್ದೇ ಭಾಷೆಯಲ್ಲಿ ಕ್ಷಣ ಮಾತ್ರದಲ್ಲಿ ಉತ್ತರ ಮತ್ತು ಪರಿಹಾರ ಸಿಕ್ಕಿದ್ದು ಕಾರ್ಯಕ್ರಮದ ಹೆಗ್ಗಳಿಕೆ. 
 
‘ನಾಸಿರ್‌ಜಿ ನೀವೇನೋ ಪ್ರತಿಭಾ ತಳಿ ಅರಿಶಿಣ ಬೆಳೆದಿದ್ದೀರಾ. ಈ ಸಲ ನಂಗೂ ಬಿತ್ತನೆ ಬೇಕಲ್ಲ ಏನ್ಮಾಡ್ಲಿ...?’ ಎಂದು ಗುರುಸ್ವಾಮಿ ಕೇಳಿದರೆ, ಅದಕ್ಕೆ ನಾಸಿರ್‌ ಅವರು, ‘ಅಯ್ಯೋ ಚಿಂತೆ ಬುಟ್ಬುಡಿ ಗುರುಸ್ವಾಮಿ; ರತ್ನಪುರಿ ಇಸ್ಮಾಯಿಲ್‌ಜಿ ಅವರತ್ರ ನೂರು ಕ್ವಿಂಟಲ್ ಬಿತ್ತನೆಯಿದೆ. ಎಷ್ಟು ಬೇಕಾದ್ರು ತಗೊಳ್ಳಿ’ ಎಂಬ ಉತ್ತರ.
 
‘ಕಲ್ಲಿಕೋಟೆಯ ಸಂಬಾರ ಸಂಶೋಧನಾ ಸಂಸ್ಥೆಯಲ್ಲಿ ಕಿಲೋ ಅರಿಶಿಣದ ಬಿತ್ತನೆಗೆ 60 ರೂಪಾಯಿಯಂತೆ. ಇಲ್ಲೇ ಬೆಳೆದವರತ್ರ ಅದೇ ಒಂದು ಕಿಲೋಗೆ ಮೂವತ್ರುಪಾಯಿ. ಅರ್ಧಕ್ಕರ್ಧ ಕಾಸು ಉಳೀತು ನೋಡಿ’ ಎಂದು ಹುಣಸೂರಿನ ಕೃಷಿಕನ ನಗು.
 
‘ಮೈಸೂರಿನಲ್ಲೂ ದಾಳಿಂಬೆ ಬೆಳೆಯಬಹುದಾ...?’ ಕೃಷಿಕ ನಾಗಭೂಷಣ ಅವರಿಗೆ ನೀಲಸೋಗೆಯ ಮುರಳೀಧರರ ಪ್ರಶ್ನೆ. ಈ ಪ್ರಶ್ನೆಗೆ ತೋಟಗಾರಿಕೆ ಇಲಾಖೆಯವರು ಸ್ಪಷ್ಟ ಉತ್ತರ ಕೊಟ್ಟಿರಲಿಲ್ಲ ಎಂದು ಅವರು ಹೇಳಿದಾಗ, ನಾಗಭೂಷಣರೂ ತುಟಿ ಪಿಟಕ್ಕೆನ್ನಲಿಲ್ಲ. ಅತ್ತ ಬೊಟ್ಟು ಮಾಡಿ ತೋರಿಸಿದರು ಅಷ್ಟೇ. ಎದುರಿದ್ದ ಅವರ ನಳನಳಿಸುವ ದಾಳಿಂಬೆ ತೋಟವೇ ಅವರ ಉತ್ತರವಾಗಿತ್ತು! . ನಂಜನಗೂಡಿನ ಮಹೇಶ್ ಪ್ರಸಾದ್‌ ಅವರದ್ದು ಹೋದಲ್ಲೆಲ್ಲಾ ಒಂದೇ ಪ್ರಶ್ನೆ. ‘ನಾವ್ ಬೆಳೆದಿರೋದನ್ನ ನಾವೇ ಮಾರಬಹುದಾ...?’
 
ಅದಕ್ಕೆ ದೇವಗಳ್ಳಿಯ ಸಾವಯವ ಕೃಷಿಕ ಶಂಕರೇಗೌಡ ನಗುನಗುತ್ತಾ, ‘ನೋಡಿ ಸ್ವಾಮಿ, ನಾಲ್ಕೈದು ವರ್ಷದಿಂದ ಮೈಸೂರಲ್ಲಿ ಗ್ರಾಹಕರಿಗೇ ನೇರ ಮಾರ್ತಿದ್ದೀನಿ. ಅವರೇ ನನಗಾಗಿ ಕಾಯ್ತಾರೆ. ನನ್ನ ಜೊತೆ ಬನ್ನಿ. ಹೆಂಗೆ ಮಾರ್ತೀನಿ, ಯಾವ ಥರಾ ರೇಟ್ ಫಿಕ್ಸ್ ಮಾಡ್ತೀನಿ, ನೋಡಿ. ಒಸಿ ತರಕಾರಿ ನೀವೂ ಒಯ್ರೀ...’ ಎಂಬ ಉತ್ತರ. ಈ ವಿಶಿಷ್ಟ ಕಾರ್ಯಕ್ರಮ ಭಾಗವಹಿಸಿದ ರೈತರಿಗೆ ಮಾತ್ರವಲ್ಲ, ನಮಗೂ ಮರೆಯಲಾರದ ಪಾಠ! ಶಿಬಿರಾರ್ಥಿ ರೈತರು ಕೇಳಿ ತಿಳಿದ, ನೋಡಿ ಕಲಿತ ಪರಿ ಅನುಕರಣೀಯ. ಆಸಕ್ತ ಶಿಬಿರಾರ್ಥಿಗಳಿಗೆ ಸಾಧಕ ಕೃಷಿಕರ ನೇರ ಪರಿಚಯ ಆಯಿತು. ಮುಕ್ತ ಚರ್ಚೆ ನಡೆಯಿತು. ಕ್ಷೇತ್ರ ಭೇಟಿಯಲ್ಲಿ ಹೊಸ ಬೆಳೆ, ತಳಿ, ಕೃಷಿ ಪದ್ಧತಿ, ಶ್ರಮ ಉಳಿಸುವ ಉಪಕರಣಗಳ ಪರಿಚಯ ಆಯಿತು. ಅವರವರ ಕ್ಷೇತ್ರದಲ್ಲಿ ಮಾಡುತ್ತಿರುವ ತಪ್ಪು-ಸರಿಗಳ ವಿಮರ್ಶೆಗೂ ಅವಕಾಶವಾಯಿತು. 
 
ಕೃಷಿಯಿಂದ ನಷ್ಟವಾದ್ರೆ ಅನ್ನೋ ಆತಂಕ ಕೆಲವು ಶಿಬಿರಾರ್ಥಿಗಳದು. ಹೋದಲ್ಲೆಲ್ಲಾ ‘ನಿಮಗೆಲ್ಲ ನಷ್ಟ ಆಗಿಲ್ವಾ ?’ ಎಂಬ ಚೋದ್ಯ. ‘ನೊಡ್ರೀ ನಾನು ಒಂದೇ ಬೆಳೆ ಬೆಳೆಯೋಲ್ಲ; ಬಾಳೆ, ಅರಿಶಿಣ, ಕಲ್ಲಂಗಡಿ, ಸಪೋಟ, ತೆಂಗು, ಮೀಟರ್ ಅಲಸಂದೆ, ಚಪ್ಪರದವರೆ ಮುಂತಾದ ಅನೇಕ ಬೆಳೆಗಳನ್ನ ಬೆಳಿತಿದ್ದೀನಿ; ಒಂದೋ ಎರಡೋ ಬೆಳೆ ಕೈ ಕೊಡ್ಬಹುದು, ಉಳಿದವು ಕೈಹಿಡಿದೇ ಹಿಡಿತವೆ’- ಆಯರಳ್ಳಿ ಮಾದಪ್ಪನವರ ಉತ್ತರ.
 
ಇದೇ ಪ್ರಶ್ನೆಗೆ ನಾಗವಳ್ಳಿಯ ನಾಸಿರ್ ಉತ್ತರಿಸಲಿಲ್ಲ. ಬದಲಿಗೆ ಪ್ರಶ್ನೆ ಕೇಳಿದರು: ‘ಮೊದಲು ಬೆಳೆ ನೋಡಿ, ಬೆಳೆಯೋದ್ ನೋಡಿ, ಬೆಲೆ ವಿಚಾರ ಆಮೇಲೆ; ಬೆಲೆ ನಮ್ ಕೈನಲ್ಲಿ ಇಲ್ಲ, ಬೆಳೆ ನಮ್ಮ ಕೈಯಲ್ಲಿದೆ. ನೋಡಿ, ಹತ್ತೆಕರೆನಲ್ಲಿ ಸುವರ್ಣಗಡ್ಡೆ ಬೆಳೆದಿದ್ದೀನಿ. ಎಕರೆಗೆ ಇಪ್ಪತ್ತು ಟನ್ ಬಂದಿದೆ. ಕೇರಳದವರಿಗೆ ಟನ್ನಿಗೆ ಹದಿನೈದು ಸಾವಿರ ದರದಲ್ಲಿ ಮಾರ್ತಿದ್ದೀನಿ. ನೀವ್‌ ಕೇಳೋ ಹಾಗೆ ಭವಿಷ್ಯ ಹೆಂಗೋ ಏನೋ ಅಂತ ಆತಂಕದಲ್ಲೇ ಕುಂತಿದ್ರೆ, ಎಕರೆಗೆ ಎರಡು ಲಕ್ಷ ಲಾಭ ಮಾಡೋಕೆ ಆಗ್ತಿತ್ತಾ? ಪ್ರಶ್ನೆ ಕೇಳಿದವರು ಪೇಚಿಗೆ!
 
ಕೀಟ–ರೋಗ ನಿರ್ವಹಣೆ ಎಲ್ಲಾ ನೀವೇ ಮಾಡ್ತೀರಾ ಎಂಬ ಪ್ರಶ್ನೆಗೆ ಪುಟ್ಟೇಗೌಡನ ಹುಂಡಿಯ ಸಂಪನ್ಮೂಲ ಕೃಷಿಕ ರಾಜಬುದ್ಧಿ, ‘ವಿಜ್ಞಾನ, ವಿಜ್ಞಾನಿಗಳು ಬೇಡವೇ ಬೇಡಾಂತ ಅಂದ್ಕೋಬೇಡಿ; ನನ್ನ ಬೆಳೆಗಳಿಗೆ ಬರುವ ಕೀಟ-ರೋಗಗಳನ್ನ ಸರಿಯಾಗಿ ಪತ್ತೆ ಹಚ್ಚಿ ಸೂಕ್ತ ನಿರ್ವಹಣೆ ತಿಳಿಸೋದು ಅವರೇ’ ಅಂದರು. ಆದರೆ ಅಷ್ಟಕ್ಕೇ ಸುಮ್ಮನಾಗದ ಅವರು, ‘ಹಾಗಂತ ನಿಮ್ಗೆ ಬೇಕಾಗಿರೋ ಎಲ್ಲ ವಿಷಯಾನೂ ವಿಜ್ಞಾನಿಗಳತ್ರನೇ ಇದೆ ಅಂದ್ಕೊಂಡ್ರೆ ಮಾತ್ರ ಕೆಟ್ರಿ’ ಎಂದು ಟಾಂಗ್‌  ನೀಡಿದರು!
 
ಒಟ್ಟಿನಲ್ಲಿ, ಈ ಕಾರ್ಯಕ್ರಮ ಅಭೂತಪೂರ್ವ ಅನುಭವ ನೀಡಿತು. ವಿಶ್ವವಿದ್ಯಾಲಯಗಳು, ಕೃಷಿ, ತೋಟಗಾರಿಕೆ ಮೊದಲಾದ ಅಭಿವೃದ್ಧಿ ಇಲಾಖೆಗಳ ಕೃಷಿ ವಿಸ್ತರಣಾ ಸೇವೆಗೂ ಕೃಷಿಕ-ಕೃಷಿಕರ ನಡುವೆ ನಡೆಯುವ ಮಾಹಿತಿ ವಿನಿಮಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಸತ್ಯ ಇಲ್ಲಿ ನಮಗೆ ಕಾಣಿಸಿತು.
 
ವಿಶ್ವವಿದ್ಯಾಲಯಗಳು, ಅಭಿವೃದ್ಧಿ ಇಲಾಖೆಗಳು ಕೃಷಿ ವಿಸ್ತರಣೆ ರೀತಿರಿವಾಜುಗಳನ್ನು ಕೃಷಿಕರ ಉಪಯೋಗಕ್ಕೆ ಆಗುವಂತೆ ಮಾರ್ಪಾಡು ಮಾಡಬೇಕಿದೆ ಎಂಬ ಅರಿವು ಈ ಕಾರ್ಯಕ್ರಮದಿಂದ ಆಯಿತು. ಹೀಗೆ ಮಾಡಲು ನಮ್ಮೆದುರು ಏನು ಮಾದರಿಗಳಿವೆ? ಇದೆ. ಮಾದರಿಗಾಗಿ ಅಲ್ಲಿಲ್ಲಿ ಹುಡುಕಬೇಕಿಲ್ಲ. ಬೇರೆಬೇರೆ ಪ್ರದೇಶಗಳಲ್ಲಿ ಪ್ರಯೋಗ ಮಾಡುವವರನ್ನೇ ಮಾತಾಡಬಿಟ್ಟು, ಅವರೇ ತಮ್ಮ ಹೊಲ ತೋರಿಸಲು ಅನುವು ಮಾಡಿಕೊಟ್ಟು, ನಾವು ತೆರೆದ ಮನಸ್ಸಿನ ಅಧ್ಯಯನಕಾರರಾದರೆ ಅಲ್ಲೇ ಕಾಣಸಿಗುತ್ತವೆ ಮಾದರಿಗಳು!
 -ಲೇಖಕರು ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT