ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕಾನೂನು, ಅರ್ಥೈಸುವಿಕೆ ಬೇರೆ?

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಪ್ರಕರಣವು ನಾಲ್ಕೂ ಜನ (ಜಯಾ, ವಿ.ಕೆ. ಶಶಿಕಲಾ, ಸುಧಾಕರನ್ ಮತ್ತು ಇಳವರಸಿ) ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಶಿಕ್ಷೆ ವಿಧಿಸುವುದರೊಂದಿಗೆ ಅಂತ್ಯ ಕಂಡಿದೆ.

ಈ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ ಪುನರ್‌ ಪರಿಶೀಲನೆಗೆ ಒಳಪಡಿಸುವ ಸಾಧ್ಯತೆ ಇಲ್ಲದಿಲ್ಲ. ಆದರೂ ಆ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬೇಕಾಗುತ್ತದೆ. ಜಯಾ ಮೃತಪಟ್ಟಿರುವ ಕಾರಣ ಅವರಿಗೆ ಜೈಲುಶಿಕ್ಷೆ ಇಲ್ಲ. ಹೀಗಿದ್ದರೂ, ಅವರಿಗೆ ಈಗ ಒಂದು ಕಳಂಕ ಅಂಟಿಕೊಂಡಂತೆ ಆಗಿದೆ.

ಕ್ರಿಮಿನಲ್ ಕಾನೂನುಗಳ ಅಡಿ ನೀಡುವ ಪ್ರತಿ ಆದೇಶದಲ್ಲೂ ಎರಡು ಭಾಗಗಳಿರುತ್ತವೆ: ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸುವ ನಿರ್ಧಾರ ಹಾಗೂ ಆತನನ್ನು ಶಿಕ್ಷೆಗೆ ಗುರಿಪಡಿಸುವ ನಿರ್ಧಾರ. ಮೃತ ವ್ಯಕ್ತಿಯನ್ನು ಕಾನೂನಿನ ಅಡಿ ‘ತಪ್ಪಿತಸ್ಥ’ ಎಂದು ಘೋಷಿಸಬಹುದಾದರೂ, ಆತನನ್ನು ‘ಶಿಕ್ಷೆಗೆ’ ಗುರಿಪಡಿಸುವುದು ಅಸಾಧ್ಯ. ಹಾಗಾಗಿ ಮೃತ ವ್ಯಕ್ತಿಗಳ ವಿಚಾರದಲ್ಲಿ ಎರಡನೆಯ ಭಾಗವನ್ನು ಕೈಬಿಡಲಾಗುತ್ತದೆ.

ತಪ್ಪು ಮಾಡಿದ್ದಕ್ಕೆ ಅನುಭವಿಸಬೇಕಿರುವುದನ್ನು ಕಾನೂನುಬದ್ಧ ಉತ್ತರಾಧಿಕಾರಿಗೆ ವರ್ಗಾವಣೆ ಮಾಡಲು ಕ್ರಿಮಿನಲ್ ಕಾನೂನುಗಳ ಅಡಿ ಅವಕಾಶವಿಲ್ಲ.  ಆದರೆ ಸಿವಿಲ್ ಕಾನೂನುಗಳ ಅಡಿ, ತಪ್ಪು ಮಾಡಿರುವ ವ್ಯಕ್ತಿ ಮೃತಪಟ್ಟರೂ, ತಪ್ಪಿಗೆ ಪ್ರತಿಯಾಗಿ ಬರುವ ದಂಡವನ್ನು ಆತನ ಕಾನೂನುಬದ್ಧ ಹಕ್ಕುದಾರರು ಭರಿಸಬೇಕಾಗುತ್ತದೆ.

ಆದರೆ, ಜಯಾ ಪ್ರಕರಣದಲ್ಲಿ ನಾಲ್ಕೂ ಜನ ಅಪರಾಧಿಗಳಿಗೆ ವಿಧಿಸಿರುವ ದಂಡವನ್ನು ಪಾವತಿಸಲೇಬೇಕಾಗುತ್ತದೆ. ಈ ಕ್ರಿಮಿನಲ್ ಪ್ರಕರಣದಲ್ಲಿ ಪರಿಗಣನೆಗೆ ತೆಗೆದುಕೊಂಡಿದ್ದ ಅಕ್ರಮ ಆಸ್ತಿಯಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಿರುವ ಪ್ರಮಾಣಕ್ಕೆ ತಡೆ ಇಲ್ಲ.

ಈ ಪ್ರಕರಣದ ವಿಚಾರಣೆಗೆ ತಾನು ಮಾಡಿರುವ ವೆಚ್ಚ ಎಂದು ತಮಿಳುನಾಡು ಸರ್ಕಾರಕ್ಕೆ ಕರ್ನಾಟಕ ಸರ್ಕಾರ ₹ 12 ಕೋಟಿ ಮೊತ್ತದ ಬಿಲ್‌ ಕಳುಹಿಸಿದೆ. ವಿಶೇಷ ನ್ಯಾಯಾಲಯದಲ್ಲಿ, ಹೈಕೋರ್ಟ್‌ನಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ಪ್ರಾಸಿಕ್ಯೂಟರ್‌ ಆಗಿ ವಾದ ಮಂಡಿಸಲು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಕೆಲವು ಕೆಲಸ ನಿರ್ವಹಿಸಲು ಕರ್ನಾಟಕ ಹಣ ವೆಚ್ಚ ಮಾಡಬೇಕಾಗಿ ಬಂತು.

ಈ ಪ್ರಕರಣದ ಮರಣೋತ್ತರ ಪರೀಕ್ಷೆಗಳನ್ನು ಒಮ್ಮೆ ಪಕ್ಕಕ್ಕೆ ಇಡೋಣ. ಜನಸಾಮಾನ್ಯರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳುತ್ತಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ವಕೀಲಿ ವೃತ್ತಿಯಲ್ಲಿರುವ ನನಗೂ ಕಷ್ಟವಾಗುತ್ತಿದೆ.

ಅತಿಗಣ್ಯ ವ್ಯಕ್ತಿಗೆ ಸಂಬಂಧಿಸಿದ ಇಂತಹ ಪ್ರಕರಣಗಳನ್ನು ಜನಸಾಮಾನ್ಯನ ಪ್ರಕರಣಕ್ಕಿಂತ ಪ್ರತ್ಯೇಕವಾಗಿ ಕಾಣಬೇಕಾದ ಪರಿಸ್ಥಿತಿ ನಮ್ಮ ನ್ಯಾಯದಾನ ವ್ಯವಸ್ಥೆಗೆ ಬಂದೊದಗಿದೆಯೇ? ಈ ಪ್ರಕರಣದಲ್ಲಿ ಅದೆಷ್ಟು ಬಾರಿ ವಿಚಾರಣೆ ಮುಂದೂಡಲಾಯಿತು? ಆರೋಪಿಗಳಾಗಿದ್ದವರು, ಪ್ರಾಸಿಕ್ಯೂಷನ್ ಮತ್ತು ಇವರಿಬ್ಬರನ್ನು ಪ್ರತಿನಿಧಿಸುತ್ತಿದ್ದ ವಕೀಲರು ಮಾತ್ರವೇ ಇದಕ್ಕೆ ಹೊಣೆಗಾರರೇ?

ನಾವು ಅನುಸರಿಸುವುದು ಒಂದೇ ಕಾನೂನು. ಕಾನೂನನ್ನು ಅರ್ಥೈಸಲು ಇರುವುದು ಒಂದೇ ಮಾನದಂಡ. ಹೀಗಿದ್ದರೂ ಆದಾಯ ಮತ್ತು ಆಸ್ತಿಗೆ ಸಂಬಂಧಿಸಿದ ಲೆಕ್ಕಾಚಾರಗಳಲ್ಲಿ ಹೈಕೋರ್ಟ್‌ನಲ್ಲಿ ಹಾಗೂ ವಿಶೇಷ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಬರಲು ಕಾರಣವೇನು?

ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಪ್ರಕರಣಗಳು ಕ್ರಿಮಿನಲ್ ಕಾನೂನುಗಳಲ್ಲೇ ಪ್ರತ್ಯೇಕ ಸ್ಥಾನ ಹೊಂದಿವೆ. ಇಲ್ಲಿ ಆದಾಯ, ವೆಚ್ಚ ಮತ್ತು ಆಸ್ತಿಗಳ ಕೂಡುವ–ಕಳೆಯುವ ಲೆಕ್ಕಾಚಾರ ವ್ಯಕ್ತಿಯೊಬ್ಬ ಅಪರಾಧಿ ಹೌದೋ ಅಲ್ಲವೋ ಎಂಬುದನ್ನು ತೀರ್ಮಾನಿಸಬಲ್ಲವು.

ಈ ಪ್ರಕರಣದಲ್ಲಿ ಆದಂತೆ ವಿರೋಧಾಭಾಸದ ಆದೇಶಗಳು ಬರುತ್ತವೆ ಎಂದಾದರೆ ನಾವು ಒಪ್ಪಿಕೊಂಡಿರುವ, ಪ್ರಶ್ನೆಗೆ ಒಳಪಡಿಸಿಲ್ಲದ ಕಾನೂನುಗಳ ವಿಚಾರದಲ್ಲೂ ನ್ಯಾಯಾಂಗದಲ್ಲಿ ವಿಭಿನ್ನ ದನಿಗಳಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಕಾನೂನಿನ ಇಂಥ ಅನಿಶ್ಚಿತತೆಗಳು ಕಾನೂನು ವ್ಯವಸ್ಥೆಯ ಮೇಲಿರುವ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವುದಿಲ್ಲವೇ?

ವಾದಿ, ಪ್ರತಿವಾದಿಗಳು ತಮ್ಮ ವಾದ ಮಂಡನೆಯನ್ನು ಪೂರ್ಣಗೊಳಿಸಿದ ನಂತರವೂ ಆದೇಶ ಹೊರಬರಲು ತೀರಾ ವಿಳಂಬ ಆಗುವುದು ಏಕೆ?
ಒಂದೇ ಪ್ರಕರಣಕ್ಕೆ ಒಬ್ಬ ವಿಶೇಷ ನ್ಯಾಯಾಧೀಶರನ್ನು ಹದಿನೆಂಟು ವರ್ಷಗಳ ಅವಧಿಗೆ ನೇಮಿಸುವುದರ ಹಿಂದಿನ ತರ್ಕ ಏನು? ಇದು, ಇಂಥ ಪ್ರಕರಣಗಳಲ್ಲಿ ಹಿರಿಯ ಜಿಲ್ಲಾ ನ್ಯಾಯಾಧೀಶರಿಗೆ ಮಾಡುವ ವೆಚ್ಚದ ಪ್ರಶ್ನೆ ಮಾತ್ರವೇ ಅಲ್ಲ. ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ದೊಡ್ಡ ಪ್ರಮಾಣದಲ್ಲಿ ಉಳಿದುಕೊಂಡಿರುವ, ಸಾಮಾನ್ಯ ನಾಗರಿಕರ ಪ್ರಕರಣಗಳ ಪ್ರಶ್ನೆಯೂ ಇಲ್ಲಿದೆ.

ವಿಶೇಷ ನ್ಯಾಯಾಧೀಶರನ್ನು ನೇಮಿಸಿಯೂ ಜಯಾ ಪ್ರಕರಣ ಹದಿನೆಂಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದಾದರೆ, ಪ್ರಜೆಗಳಿಗೆ ತ್ವರಿತ ನ್ಯಾಯದಾನ ಎಂಬ ಸಾಂವಿಧಾನಿಕ ಹೊಣೆ ಹೊತ್ತಿರುವ ನ್ಯಾಯಾಂಗ ಈ ಪ್ರಕರಣವನ್ನು ಆತ್ಮಾವಲೋಕನಕ್ಕೆ ಬಳಸಿಕೊಳ್ಳಲಿದೆಯೇ?

ಬಹುತೇಕ ಪ್ರಕರಣಗಳಲ್ಲಿ ತಕರಾರುಗಳನ್ನು ಬಗೆಹರಿಸಿಕೊಳ್ಳಲು ಇರುವ ಶಾಂತಿಯುತ ಹಾಗೂ ವ್ಯವಸ್ಥಿತ ಮಾರ್ಗವೆಂದರೆ ನ್ಯಾಯಾಂಗದ ಮೊರೆ ಹೋಗುವುದು ಮಾತ್ರ. ದೇಶದಲ್ಲಿ ಇನ್ನೆಂದೂ ಜಯಾ ಪ್ರಕರಣದಂಥವು ಪುನರಾವರ್ತನೆ ಆಗದಿರಲಿ ಎಂದು ಆಶಿಸೋಣ.
ಲೇಖಕ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT