ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಪರಿಹಾರಕ್ಕೆ ದಲಿತರ ಆಗ್ರಹ

ಬಹಿಷ್ಕಾರ: ಯಕಲಾಸಪುರಕ್ಕೆ ಅಧಿಕಾರಿಗಳ ಭೇಟಿ
Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಡಂಬಳ (ಗದಗ ಜಿಲ್ಲೆ): ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿಯ ಯಕಲಾಸಪುರ ಗ್ರಾಮದ ದಲಿತರಿಗೆ ಬಹಿಷ್ಕಾರ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ತಹಶೀಲ್ದಾರ್ ಭ್ರಮಾರಾಂಬಾ ಗುಬ್ಬಿಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೋಮವಾರ ಗ್ರಾಮದ ದಲಿತ ಕಾಲೊನಿಗೆ ಭೇಟಿ ನೀಡಿ, ಮುಖಂಡರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ‘ನಾವು ಹುಟ್ಟಿದಾಗಿನಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದೇವೆ. ನಮಗೆ  ಶಾಶ್ವತ ಪರಿಹಾರ ಕಲ್ಪಿಸಬೇಕು. ನಮಗೆ ಪ್ರತ್ಯೇಕವಾದ ಪಡಿತರ ಅಂಗಡಿ, ಕ್ಷೌರದ ಅಂಗಡಿ, ಗಿರಣಿ ಸೌಲಭ್ಯ ಕಲ್ಪಿಸಬೇಕು. ನಮ್ಮ ಓಣಿಯಲ್ಲಿ ಹಲವರು ವಿದ್ಯಾವಂತರಿದ್ದು ಸ್ವಂತ ಉದ್ಯೋಗ ಮಾಡಲು ಆರ್ಥಿಕ ಸಹಾಯ ಒದಗಿಸಬೇಕು’ ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.

‘ಸಾರ್ವಜನಿಕ ಸ್ಥಳಗಳು ಎಲ್ಲರ ಸೊತ್ತು. ಅವರು ಯಾಕೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ? ವ್ಯವಸ್ಥಿತವಾಗಿ ದಲಿತ ಸಮುದಾಯವನ್ನು ತುಳಿಯುವ ಪ್ರಯತ್ನ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಮುಖಂಡರಾದ ಲಕ್ಷ್ಮಣ ತಗಡಿನಮನಿ, ಲಕ್ಷ್ಮಣ ಮುಂಡವಾಡ ಒತ್ತಾಯಿಸಿದರು.

ಗ್ರಾಮದಲ್ಲಿ ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಡುವಂತೆ ಹೇಳಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್‌ ಮುಧೋಳ, ಅಗತ್ಯ ನೆರವಿನ ಭರವಸೆ ನೀಡಿದರು. ಗ್ರಾಮದ ಇತರ ಮುಖಂಡರೊಂದಿಗೂ ಚರ್ಚಿಸಿ, ಮಂಗಳವಾರ ಉಭಯ ಸಮುದಾಯದ ನಡುವೆ ಶಾಂತಿ ಸಭೆ ನಡೆಸುವುದಾಗಿ ಹೇಳಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಉಂಟಾದ ಭಿನ್ನಾಭಿಮತದಿಂದಾಗಿ ಗ್ರಾಮದ ಸವರ್ಣೀಯರು ದಲಿತರಿಗೆ ಬಹಿಷ್ಕಾರ ಹಾಕಿದ್ದು, ಈ ಬಗ್ಗೆ  ‘ಪ್ರಜಾವಾಣಿ’ ಸೋಮವಾರ ವರದಿ ಪ್ರಕಟಿಸಿತ್ತು.

ಮುಂಡರಗಿಯಲ್ಲಿ ಪ್ರತಿಭಟನೆ: ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮದ ದಲಿತರು ಬೆಳಿಗ್ಗೆಯೇ ಮುಂಡರಗಿಯಲ್ಲಿ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್‌ ಭ್ರಮರಾಂಬಾ ಗದುಗಿಗೆ ತೆರಳಿದ್ದರಿಂದ ಮಧ್ಯಾಹ್ನದವರೆಗೂ ಅವರ ಭೇಟಿ ಸಾಧ್ಯವಾಗಲಿಲ್ಲ. ಆನಂತರ ಅಧಿಕಾರಿಗಳೆಲ್ಲರೂ ಗ್ರಾಮಕ್ಕೆ ಭೇಟಿ ನೀಡಿದ್ದರಿಂದ ದಲಿತರೆಲ್ಲ ಧರಣಿ ಕೈಬಿಟ್ಟು ಗ್ರಾಮಕ್ಕೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT