ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಕಟ್ಟಿದ ಬಿಳಿ ಉಡುಪಿನ ಕಾಯಕ ತಪಸ್ವಿ

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅದು 1953ನೇ ಇಸವಿ, ಆಗಲೇ ಗೋಹತ್ಯೆ ನಿಷೇಧಿಸಬೇಕೆಂದು ಆಗ್ರಹಿಸಿ ದೇಶದಾದ್ಯಂತ ಸಹಿ ಸಂಗ್ರಹ ಆಂದೋಲನ  ನಡೆದಿತ್ತು. ಕೊನೆಗೆ ಸಾವಿರಾರು ಹಳ್ಳಿಗಳ ಲಕ್ಷಾಂತರ ಜನರು ಸಹಿ ಹಾಕಿದ ಪತ್ರಗಳನ್ನು ಎತ್ತಿನಗಾಡಿಯಲ್ಲಿ ಒಯ್ದು ರಾಷ್ಟ್ರಪತಿಗಳಿಗೆ ಒಪ್ಪಿಸಲಾಗಿತ್ತು.

ಹಾಗೆ ಎತ್ತಿನಗಾಡಿ ಹತ್ತಿದ ಪತ್ರಗಳಲ್ಲಿ ಮೈಸೂರಿನ ಸಣ್ಣದೊಂದು ಕಥೆಯೂ ಅಡಗಿದೆ.

ಅದೇ ಸಂದರ್ಭದಲ್ಲಿ ಮೈಸೂರು ಸಮೀಪದ ತಿರುಮಕೂಡಲುನಲ್ಲಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ. ಆ ಮೇಳದಲ್ಲಿ ಟೇಬಲ್ಲು ಹಾಕಿ ಕೂತರೆ ಸಾವಿರಾರು ಜನರನ್ನು ಸಹಿ ಸಂಗ್ರಹದಲ್ಲಿ ಆಕರ್ಷಿಸಬಹುದೆಂದು ಮೈಸೂರಿನ ಆರೆಸ್ಸೆಸ್ ಶಾಖೆಯ 8–10 ಹುಡುಗರು ಯೋಚಿಸಿದರು.

ಸೈಕಲ್ ಹತ್ತಿ ಹೊರಟೇ ಬಿಟ್ಟರು. ಸಹಿ ಸಂಗ್ರಹವೇನೋ ಜೋರಾಗಿಯೇ ಆಯಿತು. ಆದರೆ ಮಧ್ಯಾಹ್ನ ಕಳೆದರೂ ಊಟದ ದಾರಿ ಸಿಗಲಿಲ್ಲ.

ತಿರುಮಕೂಡಲಿನ ಧರ್ಮ ಛತ್ರಗಳಲ್ಲಿ ಊಟವಿತ್ತು. ಆದರೆ ಅದು ಸ್ವ-ಜಾತಿಯವರಿಗಷ್ಟೇ ಸೀಮಿತವಾಗಿತ್ತು. ಮೈಸೂರಿನಿಂದ ಒಟ್ಟಾಗಿ ಬಂದ ಗೋಭಕ್ತರಿಗೆ ಊಟಕ್ಕೆಂದು ಜಾತಿವಾರು ಛತ್ರಗಳಿಗೆ ಹರಿದು ಹಂಚಿಹೋಗುವುದು ಒಪ್ಪಿಗೆಯಾಗಲಿಲ್ಲ. ತಡರಾತ್ರಿಯವರೆಗೆ ಹಸಿದುಕೊಂಡೇ ಗೋರಕ್ಷಣೆಗಾಗಿ ಸಹಿಸಂಗ್ರಹ ನಡೆಸಿದರು. ಕೊನೆಗೆ ಕಲ್ಲಿನ ಒಲೆಯಲ್ಲಿ ಹೇಗೋ ಗಿಟ್ಟಿಸಿದ ಅಕ್ಕಿಯಲ್ಲಿ ಗಂಜಿ ಬೇಯಿಸಿ ಉಂಡರು. ಆ ಗೋಭಕ್ತರ ಗುಂಪಿನಲ್ಲಿ ಒಬ್ಬರಾಗಿದ್ದವರು ಮೈ.ಚ.ಜಯದೇವ್.

ಮೈಸೂರು ಚನ್ನಬಸಪ್ಪ ಜಯದೇವ್ ಹುಟ್ಟಿದ್ದು 1932 ರ ಫೆ.18 ರಂದು. ಬಾಲ್ಯದಲ್ಲಿಯೇ ಅವರು ಆರೆಸ್ಸೆಸ್ ಶಾಖೆಗೆ ಆಕರ್ಷಿತರಾದರು.

ವಿದ್ಯಾಭ್ಯಾಸಕ್ಕಾಗಿ ತುಮಕೂರಿನ ಸಿದ್ಧಗಂಗಾ ಮಠದ ವಿದ್ಯಾರ್ಥಿನಿಲಯ ಸೇರಿದರೂ ಅವರು ಆರೆಸ್ಸೆಸ್ ಬಿಟ್ಟಿರಲಿಲ್ಲ. ನವಕರ್ನಾಟಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರಾದ ಡಾ. ಜಿ. ರಾಮಕೃಷ್ಣರವರಿಗೆ ಕೆಲವರ್ಷಗಳ ಹಿಂದೆ 75 ವರ್ಷಗಳು ತುಂಬಿದಾಗ ಹೊರತರಲಾದ ಸಂಗಾತಿ ಸ್ಮರಣ ಗ್ರಂಥದಲ್ಲಿ ಜಯದೇವ್‌ರವರು ನಡೆಸುತ್ತಿದ್ದ ಆರೆಸ್ಸೆಸ್ ಶಾಖೆಯ ಉಲ್ಲೇಖ ಬರುತ್ತದೆ. ಆ ಶಾಖೆಗೆ ದೇಸಿ ಆಟದ ವಯೋಸಹಜ ಆಕರ್ಷಣೆಯಿಂದ ನಾನೂ ಹೋಗುತ್ತಿದ್ದೆ ಎಂದು ಜಿ.ರಾಮಕೃಷ್ಣ ನೆನಪಿಸಿಕೊಂಡಿದ್ದಾರೆ.

ಬಿ.ಎಸ್ಸಿ. ಎಲ್‌ಎಲ್‌ಬಿ ಶಿಕ್ಷಣದ ತರುವಾಯ ಆರೆಸ್ಸೆಸ್ ಮೂಲಕ ಸರಳ, ಸಮರ್ಪಿತ ಬದುಕನ್ನು ಅರಸಿಕೊಂಡವರು ಜಯದೇವ್. ಇವತ್ತು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ಬಹುಮಹಡಿ ಕಟ್ಟಡದಲ್ಲಿ ಪುಸ್ತಕಪ್ರಕಟಣೆ, ಸಂಶೋಧನೆ, ಯೋಗ, ಸ್ಲಂ ಮಕ್ಕಳಿಗೆ ಉಚಿತ ಪಾಠ, ರಕ್ತನಿಧಿ, ತಲೆಸಿಮಿಯಾ ಮಕ್ಕಳಿಗೆ ಡೇ ಕೇರ್ ಸೆಂಟರ್. . . . . . ಹೀಗೆ ಹತ್ತಾರು ಚಟುವಟಿಕೆಗಳು. 60 ರ ದಶಕದಲ್ಲಿ ಜಯದೇವ್ ಆ ಜಾಗಕ್ಕೆ ಕಾಲಿಟ್ಟಾಗ ಅದೊಂದು ಪಾಳುಬಿದ್ದ ಬಟ್ಟೆ ಮಿಲ್ಲಾಗಿತ್ತು. ಕೆಲಸ ಕಟ್ಟುವುದರಲ್ಲಿ ಜಯದೇವ್ ನಿಸ್ಸೀಮರು.

ಬೆಂಗಳೂರಿನ ಐತಿಹಾಸಿಕ ಮಿಥಿಕ್ ಸೊಸೈಟಿ ನಿರ್ಲಕ್ಷ್ಯಕ್ಕೆ ಒಳಗಾಗಿ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಶವಾಗಾರವೇನೋ ಎಂಬತಾಗಿತ್ತು. ಜಯದೇವ್‌ರವರು ಅಲ್ಲಿಗೆ ಕಾಲಿಟ್ಟರು. ಅದರ ರೂಪ ಸ್ವರೂಪವೇ ಬದಲಾಯಿತೆಂದು ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್ ನೆನಪಿಸಿಕೊಳ್ಳುತ್ತಿದ್ದರು. ಬಸವನಗುಡಿಯ ಗೋಖಲೆ ಸಾರ್ವಜನಿಕ ಸಂಸ್ಥೆ, ಗಾಂಧಿಬಜಾರಿನ ಅಬಲಾಶ್ರಮ, ಅನಾಥ ಶಿಶುನಿವಾಸದ ಫೇಸ್ ಲಿಫ್ಟ್ ನಲ್ಲಿ ಜಯದೇವರ ದೂರದೃಷ್ಟಿ ಕೆಲಸ ಮಾಡಿವೆ.

ನಾಡಿನ ಅನೇಕ ಮಠಾಧೀಶರೊಡನೆ ಅವರದ್ದು ನಿಕಟ ಒಡನಾಟ. ಹಿಂದು ಸಮಾಜಕ್ಕೆ ಸವಾಲಾಗಿರುವ ಮತಾಂತರ ಮತ್ತು ಅಸ್ಪೃಶ್ಯತೆ ಬಗ್ಗೆ ಮಠಾಧೀಶರು ಕಾರ್ಯಪ್ರವೃತ್ತರಾಗುವಂತೆ ಮಾಡುವ ನಿರಂತರ ಪ್ರಯತ್ನ ಅವರದ್ದಾಗಿತ್ತು.

2008–2013ರ ನಡುವೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ. ಅನೇಕ ಗೊಂದಲ ವಿವಾದಗಳಿಗೆ ಪರಿಹಾರ ಕೊಡುವ ಕೇಂದ್ರವೆಂದು ಭಾವಿಸಲಾದ ಕೇಶವಕೃಪಾ ಆಗಾಗ ಸುದ್ದಿಗೂ ಬರುತ್ತಿತ್ತು. ಆದರೆ ಜಯದೇವ್‌ರವರದ್ದು ಪಕ್ಷ ರಾಜಕಾರಣ ಮೀರಿದ ವ್ಯಕ್ತಿತ್ವ. 2013 ರ ಚುನಾವಣೆಗೆ ಮೊದಲು ಅಲ್ಪ ಅಸ್ವಸ್ಥತೆಯಿಂದ ಸಿದ್ದರಾಮಯ್ಯನವರು ಆಸ್ಪತ್ರೆಗೆ ದಾಖಲಾದಾಗ ಹೋಗಿ ಭೇಟಿಯಾಗಿ ಶುಭ ಹಾರೈಸಿದವರು ಜಯದೇವ್.

ಜಯದೇವ್ ಪ್ರಜಾಪ್ರಭುತ್ವ, ಸಮಾನತೆ, ಸಂವೇದನೆ ಇತ್ಯಾದಿ ಮೌಲ್ಯಗಳ ಬಗ್ಗೆ ಮಾತನಾಡಲಿಲ್ಲ. ಒಂದು ಸಾಲೂ ಬರೆಯಲಿಲ್ಲ. ಆದರೆ 1975 ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲಿಗೆ ಹೋದರಷ್ಟೆ!

ಹಾರ, ತುರಾಯಿ, ಹೊಗಳಿಕೆ, ವೇದಿಕೆ ಯಾವುದನ್ನೂ ಬಯಸದೆ ದೂರನಿಂತು ಸಮಾಜ ಕಟ್ಟುವ ಕೆಲಸವನ್ನು 5 ದಶಕಗಳ ಕಾಲ ಮಾಡಿದ ಅವರೊಬ್ಬ ಬಿಳಿ ಉಡುಪಿನ ತಪಸ್ವಿ.

ಆರ್ ಎಸ್ ಎಸ್ ಪ್ರಚಾರಕ  ಮೈ.ಚ. ಜಯದೇವ್ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ಪ್ರಚಾರಕ ಮೈ.ಚ.ಜಯದೇವ್ (85) ಸೋಮವಾರ ಬೆಳಿಗ್ಗೆ 9 ಗಂಟೆಗೆ ನಿಧನರಾದರು.

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಗರದ ಸಾಗರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಗೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ‘ಕೇಶವಕೃಪಾ’ದಲ್ಲಿ ಅಂತಿಮದರ್ಶನಕ್ಕೆ ಇರಿಸಲಾಗಿತ್ತು.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಮೈಸೂರು ಚನ್ನಬಸಪ್ಪ ಜಯದೇವ್‌ (ಮೈ.ಚ. ಜಯದೇವ್) ಅವರು 1932ರ ಫೆಬ್ರುವರಿ 18ರಂದು ಜನಿಸಿದರು. ಬಿ.ಎಸ್ಸಿ ಪದವಿ ಪೂರೈಸಿದ ಬಳಿಕ ಕಾನೂನು ಪದವಿ ವ್ಯಾಸಂಗ ಮಾಡಿದ್ದರು.

1950ರ ದಶಕದಲ್ಲಿ ಆರ್‌ಎಸ್‌ಎಸ್‌ ವಿಚಾರಧಾರೆಯತ್ತ ಆಕರ್ಷಿತರಾದ ಅವರು, ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡರು. ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಬೆಂಗಳೂರಿನಲ್ಲಿರುವ ಎಚ್‌ಎಂಟಿ– ಹಿಂದೂಸ್ತಾನ್‌ ಗ್ಯಾರೇಜ್‌ ಮೋಟಾರ್ಸ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲ ವರ್ಷಗಳವರೆಗೆ ಕಾರ್ಯ ನಿರ್ವಹಿಸಿದರು.

1960ರಲ್ಲಿ ಆರ್‌ಎಸ್‌ಎಸ್‌ ಬೆಂಗಳೂರು ಮಹಾನಗರ ಕಾರ್ಯವಾಹ ಜವಾಬ್ದಾರಿ ವಹಿಸಿಕೊಂಡಿದ್ದರು. 1965ರಿಂದ 1995ರವರೆಗೆ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ವ್ಯವಸ್ಥಾಪಕರಾಗಿದ್ದರು. ‘ರಾಷ್ಟ್ರೋತ್ಥಾನ ಸಾಹಿತ್ಯ’ದ ಮೂಲಕ ರಾಷ್ಟ್ರೀಯ ವಿಚಾರಧಾರೆಗಳನ್ನು ಕನ್ನಡ ನಾಡಿನಲ್ಲಿ ಪಸರಿಸುವಂತೆ ಮಾಡಿದ್ದರು. ಮುದ್ರಣ ಸೌಲಭ್ಯಗಳೇ ದುಸ್ತರವಾಗಿದ್ದ ಕಾಲದಲ್ಲಿ ‘ಭಾರತ-ಭಾರತಿ ಪುಸ್ತಕ ಮಾಲಿಕೆ’ ಎಂಬ ನೂತನ ಯೋಜನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸಪ್ರಯೋಗ ಮಾಡಿದ್ದರು.

ಅವರು ಸಂಘದ ಪ್ರಚಾರಕರಾಗಿ, ಅಖಿಲ ಭಾರತೀಯ ಕಾರ್ಯಕಾರಿಣಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸತ್ಯಾಗ್ರಹ ಮಾಡಿದ್ದ ಅವರು, 1975ರ ನವೆಂಬರ್‌ನಲ್ಲಿ ಬಂಧಿತರಾಗಿ ಜೈಲುವಾಸ ಅನುಭವಿಸಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜತೆ ನಿಕಟ ಸಂಪರ್ಕ ಹೊಂದಿದ್ದರು.
(ಲೇಖಕ ಆರ್‌ಎಸ್‌ಎಸ್‌ ಪ್ರಚಾರಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT