ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಡ್‌ ಸಜೀವ ದಹನಕ್ಕೆ ಯಾರು ಹೊಣೆ?: ಸಿ.ಎಂ

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಫಾರೆಸ್ಟ್‌ ಗಾರ್ಡ್‌ ಸಜೀವ ದಹನಕ್ಕೆ ಯಾರನ್ನು ಹೊಣೆ ಮಾಡಬೇಕ್ರಿ’? –ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಬೆಂಕಿಯುಗುಳಿದಾಗ  ತಲೆ ತಗ್ಗಿಸುವ ಸರದಿ ಹಿರಿಯ ಅರಣ್ಯ ಅಧಿಕಾರಿಗಳದ್ದು.

ಸೋಮವಾರ ಅಧಿಕೃತ ನಿವಾಸ ಕೃಷ್ಣಾದಲ್ಲಿ ವನ್ಯಜೀವಿ ಮಂಡಳಿಯ 9ನೇ ಸಭೆಗೆ ಬರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಟ್ಟಿನಿಂದ ಕುದಿಯುತ್ತಿದ್ದರು. ಕಾರ್ಯಕಲಾಪ ಪಟ್ಟಿಯಲ್ಲಿ ಬಂಡೀಪುರ ಅರಣ್ಯದಲ್ಲಿ ಅರಣ್ಯ ರಕ್ಷಕ ಮುರುಗಪ್ಪ ಅವರ ಸಜೀವ ದಹನ ವಿಷಯ ಮೊದಲನೆಯದಾಗಿತ್ತು.

ಅರಣ್ಯದಲ್ಲಿ ನಾಲ್ಕು ಕಡೆಯಿಂದ ಕಿಡಿಗೇಡಿಗಳು ಹೇಗೆ ಬೆಂಕಿ ಹಚ್ಚಿದರು. ಬೆಂಕಿ ಎಷ್ಟು ಪ್ರಖರವಾಗಿತ್ತು ಮತ್ತು ಸಿಕ್ಕಿ ಹಾಕಿಕೊಂಡ ಅರಣ್ಯ ರಕ್ಷಕನನ್ನು ಬಿಡಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದನ್ನು ಅಧಿಕಾರಿಯೊಬ್ಬರು  ವಿವರಿಸುತ್ತಿದ್ದರು. ತಕ್ಷಣ ಸಿಟ್ಟಿಗೆದ್ದ ಮುಖ್ಯಮಂತ್ರಿಯವರು, ‘ವಾಚರ್‌ಗಳು ಟವರ್‌ನಲ್ಲಿ ಬೆಂಕಿ ಹತ್ತುವುದನ್ನು ಗಮನಿಸುವುದಿಲ್ಲವೆ? ಅರಣ್ಯದ ನಾಲ್ಕೂ ಭಾಗಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವಾಗ ಇತರರು ಏನು ಮಾಡುತ್ತಿದ್ದರು. ಇದರಲ್ಲಿ ಇಡೀ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಹರಿಹಾಯ್ದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕಳೆದ ವರ್ಷ ಅರಣ್ಯಕ್ಕೆ ಬೆಂಕಿ ಬಿದ್ದ ಘಟನೆ ಕುರಿತ ಸಿಐಡಿ ತನಿಖೆ ಇನ್ನೂ ಮುಗಿದಿಲ್ಲ’  ಎಂದು ಅರಣ್ಯ ಸಚಿವ ರಮಾನಾಥ ರೈ ಅವರು ಮುಖ್ಯಮಂತ್ರಿಯವರ ಕಿವಿಯಲ್ಲಿ ಉಸುರಿದರು.

‘ಇಂತಹದ್ದಕ್ಕೆ ಇಲಾಖೆಯನ್ನು  ಕ್ಷಮಿಸುವ ಪ್ರಶ್ನೆಯೇ ಇಲ್ಲ’ ಎಂದ ಸಿದ್ದರಾಮಯ್ಯ ಅವರು, ‘ಇದು ನಿಮ್ಮ ವೈಫಲ್ಯ ಅಲ್ವೇನ್ರಿ’ ಎಂದು ಮುಖ್ಯ ವನ್ಯಜೀವಿ ಸಂರಕ್ಷಕರನ್ನು ಪ್ರಶ್ನಿಸಿದಾಗ ‘ಎಸ್‌  ಸರ್‌’ ಎಂದು ಅವರು ಉತ್ತರಿಸಿದರು.

‘ಹಾಗಿದ್ರೆ, ಗಾರ್ಡ್‌ ಸಾವಿಗೆ ಹೊಣೆ ಯಾರು ಹೊರುತ್ತೀರಿ’ ಎಂದು ಪ್ರಶ್ನಿಸಿದಾಗ, ಅಧಿಕಾರಿಗಳು ನಿರುತ್ತರರಾದರು.

‘ನೀವ್ಯಾರೂ ಅರಣ್ಯಕ್ಕೆ ಹೋಗುವುದಿಲ್ಲ. ಬೆಂಗಳೂರಿನಲ್ಲೇ ಇರುತ್ತೀರಿ. ಗಾರ್ಡ್‌, ರೇಂಜರ್‌ಗಳೇ ಅರಣ್ಯ ನೋಡಿಕೊಳ್ಳಬೇಕು. ಶೇ 90 ರಷ್ಟು  ಮರಗಳ್ಳತನ ಅರಣ್ಯಾಧಿಕಾರಿಗಳ ಸಹಕಾರದಿಂದಲೇ ನಡೆಯುತ್ತಿದೆ. ಇದು ಅರಣ್ಯ ಇಲಾಖೆ ವೈಫಲ್ಯ.  ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ವೆ’ ಎಂದು ಹಿಗ್ಗಾಮುಗ್ಗ ಜಾಡಿಸಿದರು.

₹ 25 ಲಕ್ಷ ಪರಿಹಾರ
ಅರಣ್ಯ ರಕ್ಷಕ ಮುರುಗಪ್ಪ ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಬಂಡಿಪುರದಲ್ಲಿ ಕಾಳ್ಗಿಚ್ಚಿಗೆ ಅರಣ್ಯ ರಕ್ಷಕ ಮುರಿಗೆಪ್ಪ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಪಿಸಿಸಿಎಫ್‌ ಅವರಿಂದ ಇಲಾಖಾ ಮಟ್ಟದ ತನಿಖೆ ನಡೆಸಿ 15 ದಿನದಲ್ಲಿ ವರದಿ ನೀಡುವಂತೆ ಆದೇಶಿಸಿದರು.

ವನಪಾಲಕನ ಅಂತ್ಯಕ್ರಿಯೆ
ಸಿಂದಗಿ (ವಿಜಯಪುರ): ಕಾಳ್ಗಿಚ್ಚು ಆರಿಸುವ ಸಂದರ್ಭದಲ್ಲಿ ಸಜೀವ ದಹನಗೊಂಡ ವನಪಾಲಕ ಮುರಗಪ್ಪ ಹಣಮಂತ ತಮ್ಮನಗೋಳ ಅಂತ್ಯಕ್ರಿಯೆ, ಸೋಮವಾರ ಹುಟ್ಟೂರು ಸಿಂದಗಿ ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT