ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

Last Updated 20 ಫೆಬ್ರುವರಿ 2017, 20:08 IST
ಅಕ್ಷರ ಗಾತ್ರ

ಬೆಂಗಳೂರು:  ವರ್ಗಾವಣೆ ಮಾಡಿಸುವುದಾಗಿ ಹೇಳಿ ಕಾಂಗ್ರೆಸ್‌ ಮುಖಂಡ ಪಿ.ರಮೇಶ್‌ ಎಂಬುವರು  ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯೊಬ್ಬರನ್ನು ಹೋಟೆಲ್‌ಗೆ ಕರೆದೊಯ್ದು  ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಠಾಣೆಗೆ ದೂರು ಕೊಟ್ಟಿರುವುದಾಗಿ ಹೇಳಿರುವ ಸಂತ್ರಸ್ತ ಶಿಕ್ಷಕಿಯು, ‘ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಇದನ್ನು ಅಲ್ಲಗೆಳೆದಿರುವ ಡಿಸಿಪಿ ಅಜಯ್‌ ಹಿಲೋರಿ, ‘ಲೈಂಗಿಕ ದೌರ್ಜನ್ಯ ಸಂಬಂಧ ಯಾರೊಬ್ಬರೂ ಠಾಣೆಗೆ ದೂರು ಕೊಟ್ಟಿಲ್ಲ.  ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು. 

‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಊರು ದೊಮ್ಮಲೂರಿಗೆ ಬರಲು ಇಚ್ಛಿಸಿದ್ದೆ. ಹೀಗಾಗಿ ವರ್ಗಾವಣೆ ಮಾಡಿಸಿಕೊಳ್ಳಲು ಸಿ.ವಿ.ರಾಮನ್ ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಮೇಶ್ ಅವರನ್ನು ಸಂಪರ್ಕಿಸಿದ್ದೆ’ ಎಂದು ಶಿಕ್ಷಕಿಯು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಹೇಳಲಾಗಿದೆ.

‘ನನಗೆ ಸಹಾಯ ಮಾಡುವುದಾಗಿ ಹೇಳಿದ್ದ ರಮೇಶ್‌, ಪಂಚತಾರಾ ಹೋಟೆಲ್‌ವೊಂದಕ್ಕೆ  ಕರೆದೊಯ್ದಿದ್ದರು. ಅಲ್ಲಿನ ಕೊಠಡಿಯಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು. ಹೀಗೆ  ಹಲವು ಬಾರಿ ನನ್ನೊಂದಿಗೆ ಅವರು ಅನುಚಿತವಾಗಿ ವರ್ತಿಸಿದ್ದಾರೆ.’

‘ಜತೆಗೆ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ದೂರು ನೀಡುವುದು ತಡವಾಯಿತು. ಈಗ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶಿಕ್ಷಕಿಯು ಒತ್ತಾಯಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಪರಿಚಯ: ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ತಿಂಗಳು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು.

ಆ ಮೇಳದ ಉಸ್ತುವಾರಿಯನ್ನು ಪಿ.ರಮೇಶ್‌ ವಹಿಸಿಕೊಂಡಿದ್ದರು. ಅದೇ ಮೇಳದಲ್ಲಿ ರಮೇಶ್‌ ಹಾಗೂ ಶಿಕ್ಷಕಿಗೆ ಪರಿಚಯವಾಗಿತ್ತು. ಬಳಿಕ ಮೊಬೈಲ್‌ ನಂಬರ್‌ ಬದಲಾಯಿಸಿಕೊಂಡು ಮಾತುಕತೆ ಸಹ ನಡೆಸಿದ್ದರು ಎಂದು ಗೊತ್ತಾಗಿದೆ.

‘ಉದ್ಯೋಗ ಮೇಳದಲ್ಲಿ ವರ್ಗಾವಣೆ ವಿಷಯ ಪ್ರಸ್ತಾಪಿಸಿದ್ದೆ. ಆಗ ರಮೇಶ್‌ ಅವರು, ಕಚೇರಿಗೆ ಬಂದು ಭೇಟಿ ಆಗುವಂತೆ ಹೇಳಿದ್ದರು. ಅದರಂತೆ ಅಲ್ಲಿಗೆ ಹೋದಾಗ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದರು’ ಎಂದು ಶಿಕ್ಷಕಿಯು ದೂರಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ರಮೇಶ್‌ ಅವರು 2013ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸಿ.ವಿ.ರಾಮನ್ ನಗರ  ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆಂದು ಸಹ ಹೇಳಲಾಗುತ್ತಿದೆ.

ಸುಳ್ಳು ಆರೋಪ
‘ನನಗೆ ಯಾವುದೇ ಶಿಕ್ಷಕಿಯು ಗೊತ್ತಿಲ್ಲ. ನನ್ನ ಮೇಲೆ ಕೇಳಿಬಂದಿರುವ ಆರೋಪವೂ ಸುಳ್ಳು’ ಎಂದು ಪಿ.ರಮೇಶ್‌ ಹೇಳಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಆರೋಪದ ಬಗ್ಗೆ ಎಲ್ಲಿಯೂ ದೂರು ದಾಖಲಾಗಿಲ್ಲ. ಮಾಧ್ಯಮಗಳಲ್ಲಿ ಮಾತ್ರ ವರದಿಯಾಗುತ್ತಿದೆ. ಇದು ಏಕೆ ಎಂಬುದು ನನಗೂ ಗೊತ್ತಿಲ್ಲ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT