ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಯರ್‌ ಬದಲು ವಿಸ್ಕಿ ಕುಡಿಸಲು ಮುಂದಾದ ಸರ್ಕಾರ

ಆದಾಯ ಹೆಚ್ಚಿಸಲು ಅಬಕಾರಿ ಇಲಾಖೆಯಿಂದ ಸೂಚನೆ
Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಬಕಾರಿ ಮೂಲದಿಂದ ಸಂಗ್ರಹವಾಗುವ ಆದಾಯ  ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಿಯರ್‌ ಬದಲು ವಿಸ್ಕಿ (ಭಾರತೀಯ ಮದ್ಯ– ಐಎಂಎಲ್)  ಮಾರಾಟಕ್ಕೆ ಒತ್ತು ಕೊಡುವಂತೆ ಎಲ್ಲ ಜಿಲ್ಲೆಗಳ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಬಕಾರಿ ಆಯುಕ್ತರ ಮೌಖಿಕ ಆದೇಶ ಜಾರಿಗೆ ತರಲು ಮುಂದಾಗಿರುವ ಕೆಳಹಂತದ ಸಿಬ್ಬಂದಿ, ಮದ್ಯದ ಅಂಗಡಿ, ಬಾರ್‌ ಅಂಡ್‌ ರೆಸ್ಟೊರೆಂಟ್‌ ಮಾಲೀಕರ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಬಿಯರ್‌ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆ.ವಿಸ್ಕಿಗೆ  ಕರ್ನಾಟಕದಲ್ಲಿ ಹೆಚ್ಚಿನ ತೆರಿಗೆ ದರ ಇರುವುದರಿಂದ ಅದರ ಮಾರಾಟ ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. 

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಅಬಕಾರಿ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಬಿಯರ್‌ ಬದಲಿಗೆ ವಿಸ್ಕಿ ಮಾರಾಟ ಮಾಡುವಂತೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಿ.ಎಂ ಸಿದ್ದರಾಮಯ್ಯ ಇತ್ತೀಚೆಗೆ ನಡೆಸಿದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆದಾಯ ಸಂಗ್ರಹದಲ್ಲಿ ಹಿನ್ನಡೆಯಾಗಿರುವ ಬಗ್ಗೆ ಚರ್ಚೆಯಾಗಿತ್ತು. ನೋಟು ರದ್ದತಿಯಿಂದಾಗಿ ಡಿಸೆಂಬರ್‌ ಅಂತ್ಯದ ವೇಳೆಗೆ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದರು.
ಗುರಿ ಮೀರಿ ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಸಂಗ್ರಹದಲ್ಲಿ ಹಿನ್ನಡೆಯಾದರೆ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂದೂ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದರು.

‘2016–17ನೇ ಸಾಲಿಗೆ ಅಬಕಾರಿ ಇಲಾಖೆ ಆದಾಯ ಸಂಗ್ರಹ ಗುರಿ ₹ 16,510 ಕೋಟಿಯಷ್ಟಿದೆ. ಜ.31ರ ವರೆಗೆ ₹13,420 ಕೋಟಿ ಮಾತ್ರ ಸಂಗ್ರಹ ಆಗಿದೆ. ಆದಾಯ ಹೆಚ್ಚಿಸಲು ಕೆಲವು ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ. ಹಾಗೆಂದು, ಬಾರ್‌ ಅಂಡ್‌ ರೆಸ್ಟೊರೆಂಟ್‌ ಮಾಲೀಕರಿಗೆ ಯಾವುದೇ ಷರತ್ತು ವಿಧಿಸಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ಈ ಮಧ್ಯೆ, ಉತ್ತರ ಕರ್ನಾಟಕ ಭಾಗದಲ್ಲಿ ಬಿಯರ್‌ ಕೊರತೆ ಉಂಟಾಗಿದೆ. ಇಲಾಖೆ ಬೇಡಿಕೆಗೆ ಪೂರಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಬಾರ್‌ ಮಾಲೀಕರು ಆರೋಪಿಸಿದ್ದಾರೆ.

ಬಿಯರ್‌ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುವುದಿಲ್ಲ. ವಿಸ್ಕಿ ಮತ್ತು ರಮ್‌ ಮತ್ತಿತರ ಐಎಂಎಲ್‌ ಮದ್ಯಗಳಿಂದ ಹೆಚ್ಚು ತೆರಿಗೆ ಸಂಗ್ರಹವಾಗಲಿದೆ ಎನ್ನುವುದು ಮದ್ಯ ವ್ಯಾಪಾರಿಗಳ ಅಭಿಪ್ರಾಯ. ಮಾರ್ಚ್‌ ಅಂತ್ಯದೊಳಗೆ ಸರ್ಕಾರ ನಿಗದಿ ಮಾಡಿರುವ ತೆರಿಗೆ ಸಂಗ್ರಹದ ಗುರಿ ಮುಟ್ಟಬೇಕಿದೆ. ಪ್ರತಿ ಅಂಗಡಿ, ಬಾರ್‌ಗಳಿಗೂ ಮಾರಾಟದ ಗುರಿ ನಿಗದಿ ಮಾಡಲಾಗಿದೆ. ನಿಗದಿತ ಗುರಿ ಮುಟ್ಟದ ಅಂಗಡಿಗಳಿಗೆ ನೋಟಿಸ್‌ ಕೊಡಲಾಗುತ್ತಿದೆ ಎಂದು ಮದ್ಯದ ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT