ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಸ್ಲಿಂ ಸಂತತಿ ನಿಯಂತ್ರಣಕ್ಕೆ ಕೇಂದ್ರ ಹುನ್ನಾರ’

ಲಸಿಕೆಗೆ ಮುಸ್ಲಿಂ ಪಾಲಕರ ವಿರೋಧ; ವೈದ್ಯರು, ಶಿಕ್ಷಕರ ಮೇಲೆ ಹಲ್ಲೆಗೆ ಯತ್ನ
Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಭಟ್ಕಳ (ಉತ್ತರ ಕನ್ನಡ): ತಮ್ಮ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪಾಲಕರು ಭಾನುವಾರ ಆರೋಗ್ಯ ಇಲಾಖೆ ಹಾಗೂ ಶಾಲಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದರಿಂದ, ತಾಲ್ಲೂಕಿನ ಹೆಬಳೆಯಲ್ಲಿ ಸೋಮವಾರ ಕೂಡ ಲಸಿಕಾ ಕಾರ್ಯಕ್ರಮ ಸ್ಥಗಿತಗೊಂಡಿತ್ತು.

ಇಲ್ಲಿನ ಜಾಮಿಯಾಬಾದ್‌ನ ಶಮ್ಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಲಸಿಕಾ ಕೇಂದ್ರಕ್ಕೆ ನುಗ್ಗಿದ್ದ ಪಾಲಕರು, ತಮ್ಮ ಅನುಮತಿ ಇಲ್ಲದೇ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಂದು ಹಂತದಲ್ಲಿ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಾಲಾ ಮುಖ್ಯಸ್ಥರು ತಹಶೀಲ್ದಾರ್‌ ವಿ.ಎನ್‌. ಬಾಡಕರ್‌ ಅವರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಶಾಲೆಗೆ ಬಂದ ತಹಶೀಲ್ದಾರ್, ಪಾಲಕರ ಮನವೊಲಿಸಲು ನಡೆಸಿದ ಪ್ರಯತ್ನ ಫಲ ಸಿಗಲಿಲ್ಲ. ಬದಲಾಗಿ, ಪ್ರತಿಭಟನಾಕಾರರು ಅವರ ವಿರುದ್ಧವೇ ತಿರುಗಿಬಿದ್ದು ವಾಗ್ವಾದ ನಡೆಸಿದ್ದರು.

ಮುಸ್ಲಿಮರನ್ನು ಗುರಿಯಾಗಿಸಿ ಈ ಲಸಿಕೆ ನೀಡಲಾಗುತ್ತಿದೆ. ಇದು ತಮ್ಮ ಸಂತತಿಯನ್ನು ನಿಯಂತ್ರಿಸಲು  ಕೇಂದ್ರ ಸರ್ಕಾರ ಹೆಣೆದ ತಂತ್ರವಾಗಿದ್ದು, ತಮ್ಮ ಮಕ್ಕಳಿಗೆ ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದರು. ಪುರಸಭೆ ಅಧ್ಯಕ್ಷ ಸಾದಿಕ್‌ ಮಟ್ಟಾ, ತಂಝೀಮ್‌ ಉಪಾಧ್ಯಕ್ಷ ಇನಾಯತ್‌ ಉಲ್ಲಾ ಶಾಬಂದ್ರಿ, ಪ್ರಮುಖರಾದ ಇಮ್ತಿಯಾಜ್‌ ಉದ್ಯಾವರ್‌, ನಿಸಾರ್‌ ಅಹಮ್ಮದ್‌ ರುಕ್ನುದ್ದೀನ್‌ ಅವರು ಪಾಲಕರ ಮನವೊಲಿಸಲು ಮಾಡಿದ ಪ್ರಯತ್ನವೂ ವ್ಯರ್ಥವಾದಾಗ ಮಧ್ಯಾಹ್ನದ ವೇಳೆಗೆ ಲಸಿಕೆ ಹಾಕುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣದಿಂದ ಸೋಮವಾರ ಕೂಡ ಲಸಿಕಾ ಕಾರ್ಯಕ್ರಮ ನಡೆಯಲಿಲ್ಲ.

ಸೋಮವಾರ ಶಾಲೆಗೆ ಭೇಟಿ ನೀಡಿದ ತಹಶೀಲ್ದಾರ್‌ ಬಾಡಕರ್‌, ಪಾಲಕರ ಮನವೊಲಿಸುವಂತೆ ಶಾಲೆಗೆ ಭೇಟಿ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದರು. ಅಲ್ಲದೆ ಮಂಗಳವಾರ ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ತಿಳಿವಳಿಕೆ ನೀಡುವುದಾಗಿಯೂ ಹೇಳಿದರು.
ಪಾಲಕರು ಹಲ್ಲೆಗೆ ಮುಂದಾದ ಘಟನೆಯ ಕುರಿತು ಸೋಮವಾರದವರೆಗೆ ಯಾವುದೇ ದೂರು ದಾಖಲಾಗಿಲ್ಲ.

ತಪ್ಪು ತಿಳಿವಳಿಕೆ, ಮನವೊಲಿಕೆ ಯತ್ನ
ಭಟ್ಕಳದಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿಗಳಿಗೆ ಈ ಲಸಿಕೆ ನೀಡಲಾಗಿದೆ. ತಪ್ಪು ತಿಳಿವಳಿಕೆಯಿಂದಾಗಿ  ಮುಸ್ಲಿಮರು ವಿರೋಧಿಸುತ್ತಿದ್ದು, ಅವರ ಮನವೊಲಿಸಲಾಗುವುದು.ಈ ಅಭಿಯಾನದಲ್ಲಿ ಪಾಲ್ಗೊಂಡಿರುವ ಶಾಲಾ ಸಿಬ್ಬಂದಿ,  ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆ ನೀಡಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಲಸಿಕೆ ಬಗ್ಗೆ ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸುತ್ತಿರುವ ಮೊಬೈಲ್ ಸಂಖ್ಯೆಗಳ ಹಾಗೂ ಗ್ರೂಪ್‌ಗಳ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ತಹಶೀಲ್ದಾರ್ ಬಾಡಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT