ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಕ್ಕೆ ಸಾಕಾಗುವಷ್ಟು ಮಾತ್ರ ನೀರು!

ಆನದಿನ್ನಿ ಬ್ಯಾರೇಜ್: ಹೆಚ್ಚಿನ ನೀರು ಬಿಡುಗಡೆಗೆ ಪ್ರಾದೇಶಿಕ ಆಯುಕ್ತರಿಗೆ ಎ.ಡಿ.ಮೊಕಾಶಿ ಮೊರೆ
Last Updated 21 ಫೆಬ್ರುವರಿ 2017, 4:42 IST
ಅಕ್ಷರ ಗಾತ್ರ
ಬಾಗಲಕೋಟೆ: ನವನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಆನದಿನ್ನಿ ಬ್ಯಾರೇಜ್‌ನಲ್ಲಿ ನೀರಿನ ಶೇಖರಣೆ ಕಡಿಮೆ ಆಗಿದೆ. ಈಗ ಸಂಗ್ರಹ ಇರುವ ನೀರನ್ನು ಇನ್ನೊಂದು ವಾರ ಫೆಬ್ರುವರಿ ಅಂತ್ಯದವರೆಗೆ) ಮಾತ್ರ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಕಳೆದ ವರ್ಷದಂತೆ ಈ ವರ್ಷವೂ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗಲಿದೆಯೇ ಎಂಬ ಆತಂಕ ನವನಗರದ ನಿವಾಸಿಗಳಲ್ಲಿ ಮನೆಮಾಡಿದೆ.
 
ನವನಗರದ 64 ಸೆಕ್ಟರ್‌ಗಳ 55 ಸಾವಿರ ಜನಸಂಖ್ಯೆ ಇದ್ದು, ಪ್ರತಿ ನಿತ್ಯ 1.35 ಲಕ್ಷ ಲೀಟರ್‌ ನೀರಿನ ಬೇಡಿಕೆ ಇದೆ. ಸದ್ಯ ಈಗ ವಾರಕ್ಕೆ ಎರಡು ಬಾರಿ ನೀರು ಕೊಡಲಾಗುತ್ತಿದ್ದರೂ ರಾಜೀವ್‌ಗಾಂಧಿ ನಗರ, ವಾಂಬೆ ಕಾಲೊನಿ ಸೇರಿದಂತೆ ಕೆಲವೊಂದು ಸೆಕ್ಟರ್‌ಗಳಲ್ಲಿ ಬೇಡಿಕೆ ಪ್ರಮಾಣದಷ್ಟು ನೀರು ಸಿಗುತ್ತಿಲ್ಲ. 
 
ಬ್ಯಾರೇಜ್‌ಗೆ ನೀರು ಮುಟ್ಟುತ್ತಿಲ್ಲ: ಬ್ಯಾರೇಜ್‌ನಲ್ಲಿ ಈಗ ಶೇಖರಣೆಯಾಗಿರುವ ನೀರು ಇನ್ನೊಂದು ವಾರದ ಬಳಕೆಗೆ ಮಾತ್ರ ಸಾಕಾಗುವುದರಿಂದ ಹಿಡಕಲ್ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿಸುವಂತೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಮೊರೆ ಹೋಗಿತ್ತು. ಅದರಂತೆ ನದಿಗೆ ನೀರು ಹರಿಸಿದ್ದರೂ ಈಗ ಹರಿವಿನ ಪ್ರಮಾಣ ನೋಡಿದರೆ ಅದು ಬ್ಯಾರೇಜ್ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ.
 
ಸದ್ಯ ಹಿಡಕಲ್ ಜಲಾಶಯದಿಂದ ನದಿಗೆ 1500 ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಿದೆ. ಮುಧೋಳ ನಗರ ಹಾಗೂ ಘಟಪ್ರಭಾ ದಂಡೆಯ ಹಳ್ಳಿಗಳ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಬಳಕೆಯ ಜೊತೆಗೆ ರೈತರು ಆ ನೀರನ್ನು ಬ್ಯಾರೇಜ್‌ಗಳಲ್ಲಿ ಸಂಗ್ರಹಿಸಿ ನೀರಾವರಿ ಪಂಪ್‌ಸೆಟ್‌ಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅದು ಆನದಿನ್ನಿ ಬ್ಯಾರೇಜ್ ತಲುಪುವುದು ಕಷ್ಟ ಎಂದು ಸ್ವತಃ ಬಿಟಿಡಿಎ ಅಧಿಕಾರಿಗಳೇ ಅನುಮಾನ ವ್ಯಕ್ತಪಡಿಸುತ್ತಾರೆ.
 
‘ಜಲಾಶಯದಿಂದ ಬಿಟ್ಟಿರುವ ನೀರು ಸೋಮವಾರ ಇಂಗಳಗಿ ತಲುಪಿದೆ ಎಂಬ ಮಾಹಿತಿ ಇದೆ. ಆನದಿನ್ನಿ ಬ್ಯಾರೇಜ್‌ ತಲುಪಬೇಕಾದರೆ ಇನ್ನೂ ಎಂಟು ಬ್ಯಾರೇಜ್‌ಗಳನ್ನು ದಾಟಿ 65 ಕಿ.ಮೀನಷ್ಟು ದೂರ ಹರಿದುಬರಬೇಕಿದೆ. ರೈತರ ಸಹಕಾರ ನೀಡಿ ಬ್ಯಾರೇಜ್‌ಗಳ ಗೇಟ್‌ ತೆಗೆದರೆ ಅನುಕೂಲ ಇಲ್ಲಿದಿದ್ದರೆ ಅದು ನಮ್ಮ ಬಳಕೆಗೆ ಸಿಗುತ್ತದೆ ಎಂಬ ನಿರೀಕ್ಷೆ ಕಷ್ಟ’ ಎಂದು ಬಿಟಿಡಿಎ ಕುಡಿಯುವ ನೀರು ಪೂರೈಕೆ ವಿಭಾಗದ ಎಂಜಿನಿಯರ್ ಎನ್.ಸಿ. ಹಲಗತ್ತಿ ಹೇಳುತ್ತಾರೆ. ಆನದಿನ್ನಿ ಬ್ಯಾರೇಜ್‌ನಿಂದ ನೀರು ಕೊಡುವ ಜೊತೆಗೆ ನವನಗರ ಭಾಗದಲ್ಲಿ ಇರುವ 52 ಕೊಳವೆಬಾವಿಗಳನ್ನೂ ಬಳಕೆ ಮಾಡಿಕೊಂಡು ನೀರಿನ ಬೇಡಿಕೆ ಈಡೇರಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
 
ಹೆಚ್ಚಿನ ನೀರಿಗೆ ಮನವಿ: ‘ಬಾಗಲಕೋಟೆಯ ನವನಗರ, ಕಲಾದಗಿಯ ಕುಡಿಯುವ ನೀರು ಪೂರೈಕೆಗೆ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಈಗ ಹರಿಸುತ್ತಿರುವ ನೀರಿನ ಪ್ರಮಾಣ ಸಾಕಾಗುವುದಿಲ್ಲ. ಇನ್ನಷ್ಟು ಹೆಚ್ಚಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ ಹೇಳುತ್ತಾರೆ.
 
**
ನೀರಿನ  ಘಟಕಕ್ಕೂ  ಬಾಯಾರಿಕೆ!
ನವನಗರದ 13ನೇ ಸೆಕ್ಟರ್‌ನಲ್ಲಿರುವ ಖಾಸಗಿ ಶುದ್ಧ ನೀರಿನ ಘಟಕಕ್ಕೂ ನೀರಿನ ಕೊರತೆಯಾಗಿದೆ. ಜಿಲ್ಲಾ ಆಸ್ಪತ್ರೆ ಸಮೀಪದ ಸರ್ಕಾರಿ ಉರ್ದು ಶಾಲೆಯ ಬಳಿ ಇರುವ ಈ ಘಟಕಕ್ಕೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಯಲ್ಲಿ ನೀರು ಇಲ್ಲ. ಬಿಟಿಡಿಎ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಿದ್ದರೂ ಪೈಪ್‌ಲೈನ್ ತೊಂದರೆಯಿಂದ ನೀರು ಹರಿಯುತ್ತಿಲ್ಲ. ಇದರಿಂದ ಸ್ಥಳೀಯರು ವಿದ್ಯಾಗಿರಿ ಇಲ್ಲವೇ ಅಂಬೇಡ್ಕರ್ ಭವನದ ಬಳಿ ಇರುವ ಶುದ್ಧ ನೀರಿನ ಘಟಕಗಳ ಮೊರೆ ಹೋಗಬೇಕಿದೆ. 
 
‘ಬಿಟಿಡಿಎ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಪೈಪ್‌ಲೈನ್ ದುರಸ್ತಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಶೀಘ್ರವೇ ನಿರಂತರವಾಗಿ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಘಟಕದ ಮೇಲ್ವಿಚಾರಕ ಮಂಜು ಜಾಲಗಾರ ಹೇಳುತ್ತಾರೆ.
 
**
ವಾರಕ್ಕೆ ಎರಡು ಬಾರಿ ನೀರು ಕೊಟ್ಟರೂ ನಮಗೆ ಅಗತ್ಯಕ್ಕೆ ತಕ್ಕಷ್ಟು ನೀರು ಸಿಗುತ್ತಿಲ್ಲ. ಬಿಟಿಡಿಎ ಆಡಳಿತ ಈಗಲೇ ಮುಂಜಾಗರೂಕತೆ ವಹಿಸಲಿ
-ಪರಸಪ್ಪ ಭಜಂತ್ರಿ,
38ನೇ ಸೆಕ್ಟರ್ ನಿವಾಸಿ
 
**
ಜಿಲ್ಲಾಡಳಿತದ ನೆರವು ಪಡೆದು ಹೆಸ್ಕಾಂ ನೆರವಿನಿಂದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಕಡಿತಗೊಳಿಸಿ ಆನದಿನ್ನಿ ಬ್ಯಾರೇಜ್‌ಗೆ ನೀರು ತರಲಾಗುವುದು
-ಎ.ಡಿ.ಮೊಕಾಶಿ,
ಬಿಟಿಡಿಎ ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT