ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಮೇವು ಪೂರೈಕೆಗೆ ಸೂಚನೆ

ಬಾದಾಮಿ ತಾ.ಪಂ. ಸಭೆ: ತಾಲ್ಲೂಕಿನಲ್ಲಿ 1.6 ಲಕ್ಷ ಮಕ್ಕಳಿಗೆ ರುಬೆಲ್ಲಾ ಲಸಿಕೆ ಹಾಕುವ ಗುರಿ
Last Updated 21 ಫೆಬ್ರುವರಿ 2017, 4:44 IST
ಅಕ್ಷರ ಗಾತ್ರ
ಬಾದಾಮಿ: ತಾಲ್ಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಸಾರಿದೆ. ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರು, ಪಶುಗಳಿಗೆ ಮೇವು ಮತ್ತು ದುಡಿಯುವ ಕೈಗಳಿಗೆ ಕೃಷಿ ಕಾರ್ಮಿಕರಿಗೆ ಉದ್ಯೋಗ ಕೊಡುವುದರ ಬಗ್ಗೆ  ಅಧಿಕಾರಿಗಳು ಮುತುವರ್ಜಿ ವಹಿಸಿಬೇಕು ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.
 
ಇಲ್ಲಿನ ತಾಲ್ಲೂಕು ಪಂಚಾಯ್ತಿಯಲ್ಲಿ ಸೋಮವಾರ ಜರುಗಿದ ತ್ರೈಮಾಸಿಕ ಸಭೆಯಲ್ಲಿ  ಸರಿಯಾಗಿ ಬರ ನಿರ್ವಹಣೆ ಕಾರ್ಯ ಮಾಡಿದ್ದರೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. 
 
ಬರ ನಿರ್ವಹಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿ ಸಿದ್ಧತೆ ಕೈಗೊಂಡಿದೆ. ಬರ ನಿರ್ವಹಣೆಯಲ್ಲಿ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕರು ಹೇಳಿದರು. 
 
ಮಲಪ್ರಭಾ ನದಿ ದಂಡೆಯ ಮೇಲಿನ ಪ್ರದೇಶದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಗಾಗಿ ನವಿಲುತೀರ್ಥ ಜಲಾಶಯದಿಂದ 0.75 ಟಿಎಂಸಿ ನೀರನ್ನು ಬಿಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಲಾಶಯದಿಂದ ಸೋಮವಾರ ಸಂಜೆ ನೀರು ಬಿಡಬಹುದು.
ಕುಡಿಯುವ ನೀರನ್ನು ರೈತರು ತಮ್ಮ ಹೊಲಗಳಿಗೆ ಹರಿಸದಂತೆ ಸಂಬಂಧಿಸಿದ ವಿದ್ಯುತ್‌ ಇಲಾಖೆ, ನೀರಾವರಿ ಇಲಾಖೆ ಮತ್ತು ಪೊಲೀಸ್‌ ಇಲಾಖೆ ನಿಗಾ ವಹಿಸಬೇಕು ಎಂದು ಸಭೆಯಲ್ಲಿ ಶಾಸಕರು ಹೇಳಿದರು.
 
ತಾಲ್ಲೂಕಿನಲ್ಲಿ ಸದ್ಯಕ್ಕೆ ಮೇವಿನ ತೊಂದರೆ ಇಲ್ಲ. ಮುಂದೆ ಅಗತ್ಯಬಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಮೇವು ಬ್ಯಾಂಕ್‌ ಮತ್ತು ಗೋಶಾಲೆ ಆರಂಭಿಸುವುದಾಗಿ ಯೋಜಿಸಲಾಗಿದೆ ಎಂದು ಪಶು ಸಂಗೋಪನೆ ಇಲಾಖೆ ವೈದ್ಯರು ಸಭೆಯಲ್ಲಿ ಹೇಳಿದರು.
 
ಗ್ರಾಮೀಣ ಪ್ರದೇಶದಲ್ಲಿ ಸಧ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಶಾಸಕರ ₹ 68 ಲಕ್ಷ ಅನುದಾನದಲ್ಲಿ 28 ಕಾಮಗಾರಿ ಕೈಗೊಂಡು 25  ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಕ್ರಮವನ್ನು ಕೈಗೊಂಡಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಎಂಜಿನಿಯರ್‌ ಪಿ.ಎಚ್‌. ಮ್ಯಾಗಿನಮನಿ ಹೇಳಿದರು.
 
ಮಕ್ಕಳ ಆರೋಗ್ಯಕ್ಕೆ ತಾಲ್ಲೂಕಿನಲ್ಲಿ ಎಲ್ಲ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಕಡ್ಡಾಯವಾಗಿ ಹಾಕಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಹೇಳಿದರು.
 
ತಾಲ್ಲೂಕಿನಲ್ಲಿ 1.6 ಲಕ್ಷ ಮಕ್ಕಳಿಗೆ ಲಸಿಕೆ ಹಾಕಬೇಕು. ಇದುವರೆಗೆ  59 ಸಾವಿರ ಮಕ್ಕಳಿಗೆ ಲಸಿಕೆ ಹಾಕಿದೆ. ಫೆ. 28ರ ಒಳಗೆ ಇನ್ನೂ 47 ಸಾವಿರ ಮಕ್ಕಳಿಗೆ ಲಸಿಕೆ ಹಾಕಬೇಕು ಎಂದು ತಾಲ್ಲೂಕು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಕವಿತಾ ಶಿವನಾಯ್ಕರ್‌ ಹೇಳಿದರು.
 
ನಾಗರಾಳ ಎಸ್‌ಪಿ. ಗ್ರಾಮದಲ್ಲಿ ಲಸಿಕೆ ಹಾಕಿಸಲು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮನವೊಲಿಸಿ ಲಸಿಕೆ ಹಾಕಿಸಬೇಕು . ತಾಲ್ಲೂಕಿನಲ್ಲಿ 10 ಸಾವಿರ ಶಾಲೆ ಬಿಟ್ಟ ಮಕ್ಕಳು ಇದ್ದು ಆಯಾ ಗ್ರಾಮದ ಶಿಕ್ಷಕರು ಶಾಲೆ ಬಿಟ್ಟ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ  ಹಾಕಿಸಬೇಕು ಎಂದರು.
 
ಸೌದತ್ತಿ–ಬಾದಾಮಿ ರಾಜ್ಯ ಹೆದ್ದಾರಿ ಕಾಮಗಾರಿ ಆಮೆಗತಿಯಂತೆ ಸಾಗಿದೆ. ಕೆಶಿಪ್‌ ಎಂಜಿನಿಯರ್‌ ಸಭೆಗೆ ಬಾರದ ಕಾರಣ ನೋಟಿಸ್‌ ಕೊಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮೂರು ತಿಂಗಳ ಒಳಗೆ ರಸ್ತೆ ಕಾಮಗಾರಿ ಮುಗಿಯಬೇಕು ಕೆಶಿಪ್‌ ಸಹಾಯಕ ಎಂಜಿನಿಯರಿಗೆ ಶಾಸಕರು ಹೇಳಿದಾಗ  ಜೂನ್‌ ಒಳಗೆ ಮುಗಿಸುವುದಾಗಿ ಎಂಜಿನಿಯರ್‌ ತಿಳಿಸಿದರು. ಆದರೆ ಶಾಸಕರು ಮೂರು ತಿಂಗಳಲ್ಲಿ  ಮುಗಿಯಲೇಬೇಕು ಎಂದು ಎಚ್ಚರಿಕೆ ನೀಡಿದರು. 
 
ಬೆಳೆಹಾನಿ ಪರಿಹಾರ ವಿತರಿಸಲು ಸರ್ಕಾರ ತಾಲ್ಲೂಕಿಗೆ ₹ 25 ರಿಂದ  ₹  28 ಕೋಟಿ ಹಣ ಮಂಜೂರು ಮಾಡುವುದಿದೆ. ರೈತರು ಆಧಾರ ಕಾರ್ಡ್  ಮತ್ತು ಬ್ಯಾಂಕ್‌ ಪಾಸ್‌ ಬೇಗ ಕೊಡಬೇಕು ಎಂದು ತಹಶೀಲ್ದಾರ್‌ ಎಸ್‌. ರವಿಚಂದ್ರ ಹೇಳಿದರು.
 
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಜಯಕುಮಾರ ಬೇಟಗಾರ, ತಾಲ್ಲೂಕು ಪಂಚಾಯ್ತಿ ಇಓ ಸಿ.ಬಿ. ಮ್ಯಾಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT