ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಹಣ ವಸೂಲಿ: ಆರೋಪ

ಕೃಷಿ ಉಪಕರಣ ವಿತರಣೆಯಲ್ಲಿ ಅವ್ಯವಹಾರ
Last Updated 21 ಫೆಬ್ರುವರಿ 2017, 4:46 IST
ಅಕ್ಷರ ಗಾತ್ರ
ಜಮಖಂಡಿ: ಅರ್ಜಿ ಸಲ್ಲಿಸಿದ ರೈತರಿಗೆ ಸರತಿಯ ಮೇಲೆ ಕೃಷಿ ಉಪಕರಣಗಳನ್ನು ವಿತರಿಸುವ ಬದಲಾಗಿ, ರೈತರಿಂದ ಹಣ ಪಡೆದು ಕೃಷಿ ಉಪಕರಣಗಳನ್ನು ವಿತರಿಸಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪುಂಡಲೀಕ ಪಾಲಬಾವಿ ಕೃಷಿ ಇಲಾಖೆ ವಿರುದ್ಧ ಆರೋಪಿಸಿದರು.
 
ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಸಭಾ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಆರ್‌.ಎಚ್‌. ಪೀರಜಾದೆ ಅವರು ಇಲಾಖೆಯ ಪ್ರಗತಿ ವರದಿ ಸಾದರಪಡಿಸಿದಾಗ ಅವರು ಈ ಆರೋಪ ಮಾಡಿದರು.
 
ಕೃಷಿ ಉಪಕರಣಗಳಿಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಿದ ರೈತರ ಹೆಸರುಗಳು ಸರತಿಯಲ್ಲಿ ತನ್ನಿಂದ ತಾನೆ ಬರಬೇಕು. ಆದರೆ, ಹಣ ನೀಡಿದ ರೈತರ ಸರತಿ ಹೇಗೆ ಬರುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಸಪ್ಪ ಬಿರಾದಾರ ಖಾರವಾಗಿ ಪ್ರಶ್ನಿಸಿದರು. ನಾಲ್ವರು ರೈತರಿಗೆ ನೀಡಿದ ಶಿಫಾರಸು ಪತ್ರ ನೀಡಿದ್ದರೂ ಅವರಿಗೆ ಕೃಷಿ ಉಪಕರಣಗಳನ್ನು ವಿತರಿಸಿಲ್ಲ ಎಂದು ದೂರಿದರು.
 
ಹನಿ ನೀರಾವರಿ ಯೋಜನೆ ಅಡಿಯಲ್ಲಿ ಸಂಪೂರ್ಣ ಹಣ ಪಾವತಿಸಿದ ಫಲಾನುಭವಿ ರೈತರಿಗೆ ಸಿಗಬೇಕಾದ ರಿಯಾಯಿತಿ ಹಣವನ್ನು ಫಲಾನುಭವಿ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡದೆ ಏಜೆಂಟರ್‌ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸದಸ್ಯ ಶ್ರೀಮಂತ ಚೌರಿ ಆರೋಪಿಸಿದರು.
 
ಸಹಾಯಕ ಕೃಷಿ ಅಧಿಕಾರಿ ತಮ್ಮ ಇಲಾಖೆ ವಿರುದ್ಧ ಮಾಡಲಾದ ಆರೋಪ ಸಾಬೀತು ಪಡಿಸಿದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದರು. ಆಗ, ರೈತರಿಂದ ಬಿಳಿಹಾಳೆಯ ಮೇಲೆ ಮುಚ್ಚಳಿಕೆ ಬರೆಯಿಸಿಕೊಂಡು ಏಜೆಂಟರ ಖಾತೆಗೆ ಹಣ ಪಾವತಿಸಲಾಗುತ್ತದೆ. ಅದಕ್ಕೆ ತಮ್ಮ ಬಳಿ ಪುರಾವೆಗಳು ಇವೆ ಎಂದು ಸದಸ್ಯ ಶ್ರೀಮಂತ ಚೌರಿ ಹೇಳಿದರು. ಒಂದೆರಡು ಪ್ರಕರಣಗಳಲ್ಲಿ ಹಾಗೆ ಆಗಿರಬಹುದು ಎಂದು ಸಹಾಯಕ ಕೃಷಿ ಅಧಿಕಾರಿ ಒಪ್ಪಿಕೊಂಡ ಪ್ರಸಂಗ ನಡೆಯಿತು.
 
ಬೆಳೆಹಾನಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಕಮಿಶನ್‌ ಆಧಾರದ ಮೇಲೆ ಬೆಳೆಹಾನಿ ವರದಿಯನ್ನು ಸಿದ್ಧಪಡಿಸಲಾಗಿದೆ. ರೈತರಿಗೆ ವಿತರಿಸಿದ ಬೀಜವನ್ನು ರೈತರು ನುಚ್ಚು ಮಾಡಿಕೊಂಡು ತಿನ್ನುತ್ತಾರೆ ಎಂದು ಕೃಷಿ ಅಧಿಕಾರಿ ಹಿಂದಿನ ಸಭೆಯಲ್ಲಿ ಹೇಳಿದ್ದಾರೆ. ಬೀಜ ವಿತರಿಸುವಾಗ ಕಿವಿಯಲ್ಲಿ ಹೂವು ಇಟ್ಟುಕೊಂಡಿರುತ್ತೀರಾ ಎಂದು ಸದಸ್ಯ ಶ್ರೀಮಂತ ಚೌರಿ ತರಾಟೆಗೆ ತೆಗೆದುಕೊಂಡರು.
 
ಸಿಡಿಪಿಒ ಭೀಮಪ್ಪ ಲಮಾಣಿ ಮಾತೃ ಪೂರ್ಣ ಯೋಜನೆ ಕುರಿತು ಸಭೆಗೆ ವಿವರಿಸಿದರು. ಆಗ, ಸದಸ್ಯೆ ಕಾಸವ್ವ ಹೇಗಾಡಿ ಮಾತನಾಡಿ, ಮೂರು ತಿಂಗಳು ಕಾಲ ಬಾಣಂತಿಯರು ಮನೆಯಿಂದ ಹೊರಗೆ ಬರುವುದಿಲ್ಲ. ಅಂತಹದರಲ್ಲಿ ಮಧ್ಯಾಹ್ನದ ಊಟಕ್ಕೆ ಅಂಗನವಾಡಿ ಕೇಂದ್ರಗಳಿಗೆ ಬಾಣಂತಿಯರನ್ನು ಆಹ್ವಾನಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಇದೊಂದು ಪ್ರಾಯೋಗಿಕ ಯೋಜನೆ ಎಂದು ಟಿಪಿಇಒ ಎನ್‌.ವೈ. ಬಸರಿಗಿಡದ ಸಭೆಗೆ ಮಾಹಿತಿ ನೀಡಿದರು.
 
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಲು ಶಿವಾನಂದ ಪಾಟೀಲ ಬಿಇಒ ಎನ್‌.ವೈ. ಕುಂದರಗಿ ಅವರನ್ನು ಒತ್ತಾಯಿಸಿದರು. ಶಾಲಾ ಕಟ್ಟಡಗಳ ದುರಸ್ತಿಗಾಗಿ ₹ 5 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಅನುದಾನ ಬಿಡುಗಡೆ ಆಗಿಲ್ಲ. ಅನುದಾನ ಬಿಡುಗಡೆ ಆದ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಬಿಇಒ ಸಮಜಾಯಿಸಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT