ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನವಾಸಿ ಕಾನೂನು ತಿದ್ದುಪಡಿಯಾಗಲಿ

ಶಿರಸಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ವನವಾಸಿ ಕಲ್ಯಾಣದ ಪ್ರಮುಖ ಗಿರೀಶ ಕುಬೇರ್ ಅಭಿಮತ
Last Updated 21 ಫೆಬ್ರುವರಿ 2017, 4:58 IST
ಅಕ್ಷರ ಗಾತ್ರ
ಶಿರಸಿ: ವನವಾಸಿಗಳ ಕಲ್ಯಾಣಕ್ಕಾಗಿ ಪ್ರಸ್ತುತ ಇರುವ ಕಾನೂನಿನಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾನೂನಿಗೆ ತಿದ್ದುಪಡಿ ತರಬೇಕು ಅಥವಾ ಹೊಸ ಕಾನೂನು ರಚಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕು ಎಂದು ವನವಾಸಿ ಕಲ್ಯಾಣದ ಅಖಿಲ ಭಾರತ ಹಿತರಕ್ಷಾ ಪ್ರಮುಖ ಗಿರೀಶ ಕುಬೇರ್ ಹೇಳಿದರು.
 
ವನವಾಸಿ ಕಲ್ಯಾಣ ಸಂಘಟನೆ ಹಾಗೂ ವೃಕ್ಷಲಕ್ಷ ಆಂದೋಲನ ಜಂಟಿಯಾಗಿ ಸೋಮವಾರ ಇಲ್ಲಿ ಆಯೋಜಿಸಿದ್ದ ವನವಾಸಿಗಳ ಸಮಸ್ಯೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 
 
ಅರಣ್ಯವನ್ನೇ ಅವಲಂಬಿಸಿರುವ ಮತ್ತು ಪರಂಪರಾಗತ ಜ್ಞಾನದಿಂದ ಅರಣ್ಯಕ್ಕೆ ಧಕ್ಕೆಯಾಗದಂತೆ ಬದುಕು ನಡೆಸುತ್ತಿರುವ ವನವಾಸಿಗರನ್ನು ಯೋಜನೆಗಳ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗುತ್ತಿದೆ. ಅವರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಕೆಲವು ಹಿತಾಸಕ್ತಿಗಳ ಪಾಲಾಗುತ್ತಿದೆ. ಶಿಕ್ಷಣ, ಸ್ವಾತಂತ್ರ್ಯಾ ನಂತರ ವನವಾಸಿಗಳ ಕಲ್ಯಾಣಕ್ಕಾಗಿ ಹಲವು ಕಾನೂನುಗಳು ಜಾರಿಗೆ ಬಂದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಅವರ ಏಳಿಗೆ ನಿಂತ ನೀರಾಗಿದೆ ಎಂದರು.
 
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಇದ್ದರೂ ವನವಾಸಿಗಳ ಹಿತದೃಷ್ಟಿಯಿಂದ ಮಾನವೀಯ ನೆಲೆಯಲ್ಲಿ ಅವು ಅನುಷ್ಠಾನ ಆಗಬೇಕು. ಯೋಜನೆಯಿಂದ ನಿರಾಶ್ರಿತರಾಗುವ ವನವಾಸಿಗಳಿಗೆ ಸಿಗಬೇಕಾದ ಪರಿಹಾರದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ವನವಾಸಿಗಳಲ್ಲಿ ಅರಿವು ಮೂಡಿಸುವ ದಿಕ್ಕಿನಲ್ಲಿ ವನವಾಸಿ ಕಲ್ಯಾಣ ಸಂಘಟನೆ ಕೆಲಸ ಮಾಡುತ್ತಿದೆ ಎಂದರು. 
 
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಅಧ್ಯಕ್ಷತೆ ವಹಿಸಿದ್ದರು. ಪರಿಸರವಾದಿಗಳನ್ನು ಅಭಿವೃದ್ಧಿ ವಿರೋಧಿಗಳೆಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬಿಂಬಿಸುತ್ತಿವೆ. ಆದರೆ ಜಿಲ್ಲೆ ಮತ್ತು ರಾಜ್ಯದಲ್ಲಿ ನಡೆದ ಪರಿಸರ ಹೋರಾಟದಿಂದ ಪರಿಸರ ಮತ್ತು ವನವಾಸಿ ಸಮುದಾಯ ಉಳಿದಿದೆ. ಪರಿಸರ ಹೋರಾಟದಲ್ಲಿ ವನವಾಸಿಗಳ ರಕ್ಷಣೆಯೂ ಅಡಗಿದೆ. ಅರಣ್ಯ ನಾಶವಾಗುವ ಯೋಜನೆಗಳ ವಿರುದ್ಧ ಹೋರಾಟ ನಡೆಯದಿದ್ದರೆ ಇಷ್ಟೊತ್ತಿಗೆ ಸಹಸ್ರಾರು ವನವಾಸಿಗಳು ನಿರಾಶ್ರಿತರಾಗುತ್ತಿದ್ದರು. ಏಕಗವಾಕ್ಷಿ ವ್ಯವಸ್ಥೆಯಡಿ ವನವಾಸಿಗಳಿಗೆ ಸೌಲಭ್ಯ ನೀಡುವಂತಾಗಬೇಕು. ಜಿಲ್ಲಾ ಕೇಂದ್ರದಲ್ಲಿ ವನವಾಸಿ ಅಭಿವೃದ್ಧಿ ಅಧಿಕಾರಿ ನೇಮಕವಾಗಬೇಕು. ಎಂದು ಆಗ್ರಹಿಸಿದರು. 
 
ಕಾರವಾರದ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಂಗಮೇಶ್ವರ ಎಂ.ಎಸ್ ಅವರು ವನವಾಸಿಗರಿಗೆ ಸಿಗುವ ಸವಲತ್ತು, ಯೋಜನೆಗಳ ಮಾಹಿತಿ ನೀಡಿದರು.
 
***
ಬ್ರಿಟಿಷರ ಕಾಲದಿಂದ ಇಂದಿನವರೆಗೂ ವನವಾಸಿಗರಿಗೆ ಅನ್ಯಾಯವಾಗುತ್ತಿದೆ. ಇದು ಐತಿಹಾಸಿಕ ಅನ್ಯಾಯವಾಗಿದೆ
–ಗಿರೀಶ ಕುಬೇರ್
ವನವಾಸಿ ಕಲ್ಯಾಣದ ಪ್ರಮುಖ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT