ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಸಮಾಜಕ್ಕೆ ವೈಚಾರಿಕ ಶಿಕ್ಷಣ ಬೇಕು’

ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಸುವರ್ಣ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 21 ಫೆಬ್ರುವರಿ 2017, 5:34 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ ಮತ್ತು ಸಮಾಜಮುಖಿ ಶಿಕ್ಷಣ ನೀಡಿದರೆ ಉತ್ತಮ ಸಮಾಜಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
 
ತಾಲ್ಲೂಕಿನ ನೂಲ್ವಿಯ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಂವಿಧಾನದ ಆಶಯ ಈಡೇರಲು ಉತ್ತಮ ಶಿಕ್ಷಣವೇ ಬುನಾದಿ ಎಂದರು.
 
‘ರಾಜ್ಯದ ಸಾಕ್ಷರತೆ ಪ್ರಮಾಣ ಶೇ 76. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಪ್ರಮಾಣ ಶೇ 90 ಇದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರು­ವುದ­ರಿಂದ ಅಲ್ಲಿ ಸಾಮಾಜಿಕ ಬದಲಾ­ವಣೆಯೂ ಆಗಿದೆ. ಶಿಕ್ಷಣ ಇಲ್ಲದಿದ್ದರೆ ಸಾಮಾಜಿಕ ಬದಲಾವಣೆ ಅಸಾಧ್ಯ ಎಂಬುದನ್ನು ಇದು ಸಾಬೀತು ಮಾಡಿದೆ’ ಎಂದು ಅವರು ಹೇಳಿದರು.
 
‘ಹಿಂದೆ ಸಮಾಜದಲ್ಲಿ ಅನೇಕ ವರ್ಗದವರು ಶಿಕ್ಷಣದಿಂದ ವಂಚಿತರಾಗಿ­ದ್ದರು. ಆಗ ಸಮಾಜ ಚಲನಶೀಲ ಆಗಿರಲಿಲ್ಲ. ಆದ್ದರಿಂದ ಬದಲಾ­ವಣೆಯೂ ಇರಲಿಲ್ಲ. ಎಲ್ಲರಿಗೂ ಶಿಕ್ಷಣ ಸಿಗಲು ಆರಂಭವಾದ ನಂತರ ಸ್ವಾಭಿಮಾನದಿಂದ ಕೂಡಿದ, ಕ್ರಿಯಾ­ಶೀಲ ಮತ್ತು ವಿಚಾರವಂತ ಸಮಾಜ ನಿರ್ಮಾಣವಾಗಲು ಆರಂಭವಾಯಿತು’ ಎಂದು ಸಿದ್ದರಾಮಯ್ಯ ಹೇಳಿದರು.
 
ಸೊಸೈಟಿಯ ನೂತನ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ‘ಶಿಕ್ಷಣ ನಗರ ಪ್ರದೇಶಗಳಲ್ಲಿ ವ್ಯವಹಾರ ಆಗಿ ಪರಿವರ್ತನೆಗೊಂಡಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಸೇವೆಯಾಗಿಯೇ ಉಳಿದುಕೊಂಡಿದೆ’ ಎಂದರು.
 
ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಬಸವರಾಜ ಹೊರಟ್ಟಿ, ಸಿ.ಎಸ್.ಶಿವಳ್ಳಿ, ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಮಾಜಿ ಸಚಿವ­ರಾದ ಎಚ್.ಎಂ.ರೇವಣ್ಣ, ಎಸ್.ಜೆ.ಆರ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಪಿ.ಸಿ.ಸಿದ್ದನಗೌಡ್ರ ಇದ್ದರು. 
 
ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಮುಖ್ಯಮಂತ್ರಿ ರಾಜ್ಯ ಒಲಿಂಪಿಕ್ಸ್‌ನಲ್ಲಿ ಅವ್ಯವಹಾರ ಆಗಿದೆ ಎಂಬ ಸಂಸದ ಪ್ರಹ್ಲಾದ ಜೋಶಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ‘ಬಿಜೆಪಿಯ­ವರಿಗೆ ಸುಳ್ಳು ಹೇಳುವುದರಲ್ಲಿ ತರಬೇತಿ ಸಿಕ್ಕಿದೆ, ಆದ್ದರಿಂದ ಸಂಸದರು ಕೂಡ ಸುಳ್ಳು ಹೇಳಿದ್ದಾರೆ ಅಷ್ಟೆ’ ಎಂದರು.
 
**
‘ಸೋಲು ರಾಜಕೀಯದ ಕೊನೆಯಲ್ಲ’
ಒಮ್ಮೆ ಅಥವಾ ನಿರಂತರ ಸೋಲುಂಡರೆ ರಾಜಕೀಯ ಮುಗಿ­ಯಿತು ಎಂದುಕೊಳ್ಳಬಾರದು. ದೊಡ್ಡ ವ್ಯಕ್ತಿಗಳು ಕೂಡ ರಾಜಕೀ­ಯ­ದಲ್ಲಿ ಸೋಲುಂಡಿದ್ದಾರೆ...
 
ಮಾಜಿ ಸಚಿವ ಪಿ.ಸಿ.ಸಿದ್ದನಗೌಡ್ರ ಅವರಿಗೆ ಮುಖ್ಯಮಂತ್ರಿ ಹೇಳಿದ ಕವಿ ಮಾತು ಇದು. ಸಿದ್ದನಗೌಡ್ರ ಮತ್ತು ತಮ್ಮ ಒಡನಾಟದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ‘ಗೌಡ ಚುನಾವಣೆಯಲ್ಲಿ ಸೋಲುಂಡ ನಂತರ ಸುಮ್ಮನಾಗಿದ್ದಾನೆ. ಇದು ಸರಿಯಲ್ಲ’ ಎಂದರು.
 
‘ಇಂದಿರಾಗಾಂಧಿ ಸೋಲುಂಡಿದ್ದಾರೆ. ಅಂಬೇಡ್ಕರ್ ಸೋತಿದ್ದಾರೆ. ನಾನು ನಾಲ್ಕು ಬಾರಿ ಸೋತಿದ್ದೇನೆ’ ಎಂದು ಹೇಳಿದ ಅವರು ವೇದಿಕೆಯಲ್ಲಿದ್ದ ಜಗದೀಶ ಶೆಟ್ಟರ್‌್ ಮತ್ತು ಬಸವರಾಜ ಹೊರಟ್ಟಿ ಅವರತ್ತ ನೋಡಿ ‘ಸೋಲದವರು ಶೆಟ್ಟರ್ ಮತ್ತು ಹೊರಟ್ಟಿ ಮಾತ್ರ’ ಎಂದು ಹೇಳಿ ನಗೆಯುಕ್ಕಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT