ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವತೆಗಳ ಊರು ದೇವಿಕೇರಿಯಲ್ಲಿ ಹಲವು ಸಮಸ್ಯೆ

ದೇವತೆಗಳ ವಾಸಸ್ಥಾನವಾಗಿರುವ ದೇವಿಕೇರಿ ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ
Last Updated 21 ಫೆಬ್ರುವರಿ 2017, 5:59 IST
ಅಕ್ಷರ ಗಾತ್ರ

ಸುರಪುರ: ಸುರಪುರದಿಂದ ಕೇವಲ 5 ಕಿಮೀ ಅಂತರದಲ್ಲಿರುವ ದೇವಿಕೇರಿ ಗ್ರಾಮವು ಯಾವುದೇ ಮೂಲ ಸೌಲಭ್ಯ ಕಾಣದೇ ನರಳುತ್ತಿದೆ. ಸ್ವಾತಂತ್ರ್ಯ ದೊರೆತು ಏಳು ಶತಮಾನ ಕಳೆದರೂ ಇದುವರೆಗೂ ಸಾರಿಗೆ ಬಸ್‌ ಈ ಗ್ರಾಮಕ್ಕೆ ಕಾಲಿಟ್ಟಿಲ್ಲ ಎಂದರೆ ಈ ಗ್ರಾಮಕ್ಕೆ ಒದಗುತ್ತಿರುವ ಮಲತಾಯಿ ಧೋರಣೆ ಎಂತವರಿಗೂ ಅರ್ಥವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದ ಕೆರೆಯಲ್ಲಿ ಯಲ್ಲಮ್ಮದೇವಿ, ಗುಡ್ಡದ ಮೇಲೆ ಕಾಳಿಕಾದೇವಿ, ಅನತಿದೂರದಲ್ಲಿ ನೆಲಮನೆ ತಿಮ್ಮಪ್ಪ ದೇವಸ್ಥಾನಗಳು ಇವೆ. ಈ ಮೂರು ದೇವಸ್ಥಾನಗಳು ಖ್ಯಾತಿ ಪಡೆದಿವೆ. ಅಂತೆಯೇ ಈ ಗ್ರಾಮ ದೇವಿಕೇರಿ ಎಂಬ ಹೆಸರು ಹೊಂದಿದೆ.

ಗ್ರಾಮದ ಜನಸಂಖ್ಯೆ 3 ಸಾವಿರಕ್ಕೂ ಅಧಿಕ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಈ ಗ್ರಾಮದಲ್ಲಿ ಆರು ಮಂದಿ ಗ್ರಾ.ಪಂ. ಸದಸ್ಯರಿದ್ದಾರೆ. ಗ್ರಾಮದ ಬಹುತೇಕರು ಬಡವರು. ಕೂಲಿ ನಾಲಿ ಇವರ ಜೀವನೋಪಾಯ. ಬಹಳಷ್ಟು ಜನ ಕೂಲಿ ಅರಸಿ ಗುಳೆ ಹೋಗುತ್ತಾರೆ.ಈ ಗ್ರಾಮಕ್ಕೆ ಯಾವುದೇ ಮೂಲ ಸೌಕರ್ಯಗಳು ಕಾಲಿಟ್ಟಿಲ್ಲ.

ಅಲ್ಲಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ನೈರ್ಮಲ್ಯ, ಚರಂಡಿಯಿಂದ ವಂಚಿತವಾಗಿದೆ. ಗ್ರಾಮ ಪ್ರವೇಶಿಸುವ ರಸ್ತೆಯ ಎರಡು ಬದಿ ಗ್ರಾಮಸ್ಥರಿಗೆ ಶೌಚಾಲಯ. ಊರು ಪ್ರವೇಶಿಸುತ್ತಲೇ ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. ಎಲ್ಲೆಡೆ ಕೆಸರು ಸಾಮಾನ್ಯ. ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಇಲ್ಲ. ಗ್ರಾಮದ ರಸ್ತೆಗಳೆಲ್ಲ ಮುಳ್ಳು ಕಂಟಿಗಳಿಂದ ತುಂಬಿ ಹೋಗಿವೆ.

ಮಹಿಳಾ ಶೌಚಾಲಯಗಳು ಇಲ್ಲದಿರುವುದರಿಂದ ಮಹಿಳೆಯರ ಪಾಡು ದೇವರೇ ಬಲ್ಲ. ಕಾಲುವೆ ಕೊನೆ ಭಾಗವಾದ ಗ್ರಾಮದ ಜಮೀನುಗಳಿಗೆ ನೀರು ಸಮರ್ಪಕವಾಗಿ ದೊರಕುತ್ತಿಲ್ಲ. ಆರೋಗ್ಯ ಕೇಂದ್ರ ಇಲ್ಲ. ಪಶು ಚಿಕಿತ್ಸಾಲಯ ಇಲ್ಲ. 

ಕಿರು ನೀರು ಸರಬರಾಜು ಯೋಜನೆ ಸಮರ್ಪಕವಾಗಿಲ್ಲ. ನೀರಿನ ಟ್ಯಾಂಕ್‌ ನಿರುಪಯುಕ್ತವಾಗಿದೆ. ಗ್ರಾಮದಲ್ಲಿರುವ ಕೊಳವೆಬಾವಿಗಳಲ್ಲಿ ಉಪ್ಪು ನೀರು ಇದೆ. ಆರ್ಸೇನಿಕ್ ಅಂಶ ಹೇರಳವಾಗಿದೆ. ಕುಡಿಯುವ ನೀರಿನ ಘಟಕ ಆರಂಭಗೊಂಡು ಜನರಲ್ಲಿ ಸ್ವಲ್ಪ ನೆಮ್ಮದಿ ಮೂಡಿಸಿದೆ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ.

ತಗ್ಗು ಪ್ರದೇಶದಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುತ್ತಿದೆ. ಸೊಳ್ಳೆಗಳ ಹಾವಳಿ ಅತಿಯಾಗಿದೆ. ಜಾನುವಾರುಗಳು ಸೊಳ್ಳೆಕಾಟದಿಂದ ನರಳುವಂತಾಗಿದೆ. ಅನೈರ್ಮಲ್ಯದಿಂದಾಗಿ ಆಗಾಗ್ಗೆ ಗ್ರಾಮದಲ್ಲಿ ಕಾಣಿಸಿಕೊಳ್ಳುವ ವಾಂತಿಭೇದಿ ಜನರ ಜೀವ ಹಿಂಡುತ್ತಿದೆ.

ಗ್ರಾಮದಲ್ಲಿರುವ ಏಕೈಕ ಅಂಗನವಾಡಿ ಕಟ್ಟಡ ಶಿಥಿಲಗೊಂಡಿರುವುದರಿಂದ ಕೇಂದ್ರ ನಡೆಯುತ್ತಿಲ್ಲ. ಹೊಸ ಕಟ್ಟಡ ಮಂಜೂರು ಆಗಿದ್ದರೂ ಕಾಮಗಾರಿ ಕಳೆದ ಒಂದು ವರ್ಷದಿಂದ ಕುಂಟುತ್ತಾ ಸಾಗಿದೆ. ಹೀಗಾಗಿ ಅಂಗನವಾಡಿ ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. 

ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೆ. ಮಕ್ಕಳ ಹಾಜರಾತಿ ಚೆನ್ನಾಗಿದೆ. ಸಮರ್ಪಕ ಶಿಕ್ಷಕರು ಇದ್ದಾರೆ. ಗ್ರಾಮದಲ್ಲಿ ವಿವಿಧ ಜಾತಿ ಜನಾಂಗದವರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿರುವ ದಾವಲ ಮಲಿಕ ದರ್ಗಾ ಭಾವೈಕ್ಯತೆಯ ತಾಣವಾಗಿದೆ.

‘ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ಎಷ್ಟೆ ಪ್ರಯತ್ನ ಪಟ್ಟರೂ ಅಭಿವೃದ್ಧಿ ಕಾಣುತ್ತಿಲ್ಲ. ಹೀಗಾಗಿ ದೇವತೆಗಳ ವಾಸಸ್ಥಾನವಾಗಿರುವ ನಮ್ಮ ಗ್ರಾಮದಲ್ಲಿ ದೆವ್ವಗಳು ವಾಸಿಸಲು ಹಿಂಜರಿಯುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT