ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್–ಬಿಜೆಪಿ ಘರ್ಷಣೆ: ಪೊಲೀಸರ ಲಾಠಿ ಪ್ರಹಾರ

ಚುನಾವಣೆ ಮುಂದೂಡಿಕೆ
Last Updated 21 ಫೆಬ್ರುವರಿ 2017, 6:15 IST
ಅಕ್ಷರ ಗಾತ್ರ
ಬಂಗಾರಪೇಟೆ: ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಿದ ಕಾರಣ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದು, ಗಲಾಟೆ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಸೋಮವಾರ ಇಲ್ಲಿ ನಡೆಯಿತು.
 
ಕಾಂಗ್ರೆಸ್‌ ಬೆಂಬಲಿತ ಸದಸ್ಯರನ್ನು ವಿರೋಧ ಪಕ್ಷದವರು ಅಪಹರಿಸಿದ್ದು ಚುನಾವಣೆ ಮುಂದೂಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
 
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ನಾವು ಯಾರನ್ನೂ ಅಪಹರಿಸಿಲ್ಲ. ಸಲ್ಲದ ಆರೋಪ ಹೊರಿಸಿ, ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣೆ ಪ್ರಕ್ರಿಯೆಯಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೂ ಪ್ರತಿಭಟನೆಗೆ ಇಳಿದರು. ಇದರಿಂದ ಚುನಾವಣೆ ನಡೆಯುವ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಯಿತು.
 
ಗೊಂದಲದ ಕಾರಣ: ಸರ್ಕಾರದ ನಾಮ ನಿರ್ದೇಶಿತ 3 ಸದಸ್ಯರು ಸೇರಿ ಎಪಿಎಂಸಿಯಲ್ಲಿ ಒಟ್ಟು 16 ಸದಸ್ಯರಿದ್ದರು.  ಕಾಂಗ್ರೆಸ್‌ ಬೆಂಬಲಿತ 10 ಸದಸ್ಯರಿದ್ದು, ಕಳೆದ ಎರಡು ದಿನದಿಂದ ಪಕ್ಷದಲ್ಲಿ ನಡೆದ ಆಂತರಿಕ ಬದಲಾವಣೆಗಳಿಂದ ಸೋಮವಾರ ಕಾಂಗ್ರೆಸ್‌ ಬೆಂಬಲಿತ ಮಾರಿಕುಪ್ಪಂ ಕ್ಷೇತ್ರದ ಚಂಗಾರೆಡ್ಡಿ, ಬೇತಮಂಗಲ ಕ್ಷೇತ್ರದ ರಾಮಚಂದ್ರಪ್ಪ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡರು. ಅಲ್ಲದೆ ಬಿಜೆಪಿ ಬೆಂಬಲಿತರಾಗಿ ಚಂಗಾರೆಡ್ಡಿ ಅಧ್ಯಕ್ಷ ಸ್ಥಾನ, ರಾಮಚಂದ್ರಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ಸಮಯದಲ್ಲಿ ಬಿಜೆಪಿ ಬೆಂಬಲಿತ 8 ಸದಸ್ಯರು ಹಾಜರಿದ್ದರು. ಚುನಾವಣೆ ಮುಂದೂಡಬಾರದು ಎಂದು ಒತ್ತಾಯಿಸಿದರು.
 
ಇದೇ ಸಂದರ್ಭ ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದ ಚುನಾವಣಾಧಿಕಾರಿ ಎಲ್‌.ಸತ್ಯ ಪ್ರಕಾಶ್‌ ಚುನಾವಣೆ ದಿನಾಂಕವನ್ನು 23 ಕ್ಕೆ ಮುಂದೂಡ ಲಾಗಿದೆ ಎಂದು ಪ್ರಕಟಿಸಿ ಸಭಾಂಗಣದ ಹಿಂದಿನ ಬಾಗಿಲಿಂದ ಹೊರನಡೆದರು. ಚುನಾವಣೆ ಅಧಿಕಾರಿಗಳ ಈ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಸಮ್ಮುಖದಲ್ಲಿಯೇ ಮಾರಾಮಾರಿ, ಎಳೆದಾಟ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. 
 
ಬಿಜೆಪಿ ಮಾಜಿ ಶಾಸಕರಾದ ಬಿ.ಪಿ,ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಾರ್ಕಂಡೇಗೌಡ, ಕಾಂಗ್ರೆಸ್‌ ಘಟಕ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಘಟನೆಗೆ ಸಾಕ್ಷಿಯಾದರು.
 
**
ತಹಶೀಲ್ದಾರ್ ಅಮಾನತುಗೊಳಿಸಿ, ಜಿಲ್ಲಾಧಿಕಾರಿ ಚುನಾವಣೆ ನಡೆಸಿ
ಬಂಗಾರಪೇಟೆ: ಚುನಾವಣಾಧಿಕಾರಿ ತಹಶೀಲ್ದಾರ್‌ ಎಲ್‌.ಸತ್ಯಪ್ರಕಾಶ್‌ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಿರ್ಣಯ ಕೈಗೊಂಡಿ ದ್ದಾರೆ. ಅವರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ಮಾಜಿ ಶಾಸಕರು ಒತ್ತಾಯಿಸಿದರು.
 
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ‘ಸತ್ಯಪ್ರಕಾಶ್‌ ಅವರು ಕಾಂಗ್ರೆಸ್‌ ಏಜೆಂಟರಂತೆ ವರ್ತಿಸಿದ್ದಾರೆ. ಎರಡು ಗಂಟೆಗೆ ಚುನಾವಣೆ ನಿಗದಿಯಾಗಿದ್ದರೂ 1 ಗಂಟೆ ತಡವಾಗಿ ಬಂದರು. ಬಿಜೆಪಿ ಬೆಂಬಲಿತ ಸದಸ್ಯರು ಹಾಜರಿದ್ದರೂ ಸೂಕ್ತ ಕಾರಣವಿಲ್ಲದೆ ಶಾಸಕರ ಆಣತಿಯಂತೆ ಚುನಾವಣೆ ಮುಂದೂಡಿ, ಹಿಂದಿನ ಬಾಗಿಲಿಂದ ಓಡಿಹೋಗಿರುವ ಹೇಡಿ’ ಎಂದು ತೀವ್ರವಾಗಿ ಟೀಕಿಸಿದರು. 
 
‘ರಾಜಕಾರಣದಲ್ಲಿ ಚುನಾವಣೆ ತಂತ್ರಗಾರಿಕೆ ಸಹಜ. ಯಾವುದೇ ಪಕ್ಷದ ಬೆಂಬಲದಿಂದ ಎಪಿಎಂಸಿ ಸದಸ್ಯರು ಆಯ್ಕೆಯಾಗಿಲ್ಲ. ಮುಕ್ತ ಮನಸ್ಸಿನಿಂದ ಕೆಲವರು ಬಿಜೆಪಿಗೆ ಬಂದಿದ್ದಾರೆ. ಕಳೆದ ತಾಲ್ಲೂಕು ಪಂಚಾಯಿತಿ ಹಾಗೂ ಈಗಿನ ಎಪಿಎಂಸಿ ಚುನಾವಣೆ ಎರಡರಲ್ಲೂ ಅನ್ಯಾಯ ಎಸಗಿರುವ ತಹಶೀಲ್ದಾರರು ಆ ಹುದ್ದೆಗೆ ನಾಲಾಯಕ್‌’ ಎಂದು ಮಾಜಿ ಶಾಸಕ ಬಿ.ಪಿ.ವೆಂಕಟ ಮುನಿಯಪ್ಪ ಕಿಡಿಕಾರಿದರು.
 
‘23ರಂದು ತಹಶೀಲ್ದಾರ್‌ ಹೊರತುಪಡಿಸಿ ಜಿಲ್ಲಾಧಿಕಾರಿ ನೇತೃತ್ವದಲ್ಲೇ ಚುನಾವಣೆ ನಡೆಸಲು ಒತ್ತಾಯಿಸಲಾಗುವುದು. ಈ ಬಗ್ಗೆ ಪಕ್ಷದ ರಾಜ್ಯ ಘಟಕ ಅಧ್ಯಕ್ಷರ ಜೊತೆ ಚರ್ಚಿಸಿದ್ದು, ತಹಶೀಲ್ದಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.
 
ಕೆಜಿಎಫ್‌ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ‘ಸೋಲುವ ಭೀತಿಯಿಂದ ಕಾಂಗ್ರೆಸ್‌ ಕುತಂತ್ರ ನಡೆಸಿದೆ. ಅವರು ಯಾವುದೇ ತಂತ್ರ ಮಾಡಿದರೂ ಗೆಲ್ಲುವುದು ಬಿಜೆಪಿ ಬೆಂಬಲಿತರು ಎನ್ನುವ ಅರಿವು ಅವರಿಗಿಲ್ಲ. ಅಧಿಕಾರಿಗಳನ್ನು ಬಳಸಿಕೊಂಡು ತಮ್ಮ ಇಷ್ಟದಂತೆ ನಡೆಯುತ್ತಿರುವ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಕಾನೂನು ಉಲ್ಲಂಘಿಸಿ, ಚುನಾವಣೆ ಮುಂದೂಡಿದ ತಹಶೀ ಲ್ದಾರ್‌ ಅವರನ್ನು ಅಮಾನತ್ತು ಮಾಡ ಬೇಕು’ ಎಂದು ಒತ್ತಾಯಿಸಿದರು. ನೂರಾರು ಕಾರ್ಯಕರ್ತರು ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT