ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಧಾರಿತ ಶಿಕ್ಷಣದಿಂದ ದೇಶದ ಅಭಿವೃದ್ಧಿ

ನ್ಯಾಯಮೂರ್ತಿ ಎ.ಎಸ್.ಬೆಳ್ಳುಂಕೆ ಅಭಿಮತ
Last Updated 21 ಫೆಬ್ರುವರಿ 2017, 6:25 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣ ಪಡೆದಾಗ ದೇಶ ಅಭಿವೃದ್ಧಿಯಾಗುತ್ತದೆ. ಇದರಿಂದ ಬಡತನ ಮತ್ತು ನಿರುದ್ಯೋಗದ ಸಮಸ್ಯೆ ದೇಶವನ್ನು ಕಾಡುವುದಿಲ್ಲ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಅಭಿಪ್ರಾಯಪಟ್ಟರು.
 
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಚಿಕ್ಕಬಳ್ಳಾಪುರ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಸಾಮಾಜಿಕ ನ್ಯಾಯ’ ದಿನಾಚರಣೆಯಲ್ಲಿ ಅವರು ಮಾತನಾಡಿದರು.
 
‘ಮೌಲ್ಯಯುತ ಶಿಕ್ಷಣ ಪಡೆಯುವುದರಿಂದ ದೇಶದ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳುವ ವಿಧಾನ ಕಲಿಯುತ್ತಾರೆ. ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಸೂಕ್ತವಾಗಿ ನೆರವೇರಿಸುತ್ತಾ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ದೇಶದಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಉತ್ತಮ ಪರಿಹಾರವಾಗುತ್ತದೆ’ ಎಂದು ತಿಳಿಸಿದರು. 
 
‘ದೇಶದ ಪ್ರಜೆಗಳಿಗಿರುವ ಪ್ರಮುಖವಾದ ಹಕ್ಕು ಮತದಾನದ ಹಕ್ಕು. ಉತ್ತಮ ದೇಶವನ್ನು ಕಟ್ಟುವ ಶಕ್ತಿ ಮತದಾನಕ್ಕಿದೆ. ಅಂತಹ ಮತವನ್ನು ಚಲಾವಣೆ ಮಾಡುವಾಗ ಯಾವುದೇ ರೀತಿಯ ಅಮಿಷಗಳಿಗೆ ಒಳಗಾಗದೆ ಮತದ ಮಹತ್ವವನ್ನು ಉಳಿಸಬೇಕಿದೆ. ದೇಶದಲ್ಲಿರುವ ಬಡಜನತೆಯ ಅಸಹಾಯಕ ಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಮಣೆ ಹಾಕದೆ, ಮತದಾನಕ್ಕಿರುವ ಶಕ್ತಿಯನ್ನು ತೋರಿಸಬೇಕಿದೆ. ದೇಶದ ಪರಿಸ್ಥಿತಿಯನ್ನು ಬದಲಿಸುವ ಶಕ್ತಿ ಮತದಾರನಿಗೆ ಇದೆ. ಐದು ವರ್ಷಗಳ ಕಾಲ ನಮ್ಮ ಮತ ಪಡೆದು ಮೆರೆದಾಡುವ ವ್ಯಕ್ತಿಗಳಿಗಿಂತ ನಮ್ಮ ಮತದಾನಕ್ಕರಿವ ಮೌಲ್ಯವನ್ನು ಅರಿತು ನಮ್ಮನ್ನು ಗೌರವಿಸುವವರಿಗೆ ನಾವು ಮತನೀಡಬೆಕಿದೆ’ ಎಂದರು.
 
‘ದೇಶದಲ್ಲಿರುವ ಎಲ್ಲರೂ ಒಂದೇ ಎನ್ನುವ ಸತ್ಯವನ್ನು ಅಡಿಪಾಯವಾಗಿ ಹೊಂದಿರುವ ಸಂವಿಧಾನಕ್ಕೆ ವಿರುದ್ಧವಾಗಿ ಸಮಾಜದಲ್ಲಿ ಚಲಾವಣೆಯಾಗುತ್ತಿರುವ ಜಾತೀಯತೆ, ಧರ್ಮಾಂಧತೆ, ಬಡತನ ಮುಂತಾದ ಸಾಮಾಜಿಕ ಪಡುಗುಗಳನ್ನು ಹೊಡೆದೋಡಿಸುವ ಕೆಲಸವನ್ನು ಎಲ್ಲರೂ ಒಕ್ಕೂರಲಿನಿಂದ ಮಾಡಬೇಕಿದೆ’ ಎಂದು ತಿಳಿಸಿದರು.
 
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್. ಶೋಭಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ. ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ. ಮುನಿರಾಜ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಗದೀಶ್ ಗಂಗಣ್ಣನವರ್, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT